ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಐಎಂ ಕೈವಾಡ

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ದ ರ್ಯಾಲಿಯಲ್ಲಿ ಬಾಂಬ್ ಇರಿಸಿದ್ದು ಇಂಡಿಯನ್ ಮುಜಾಹಿದೀನ್. ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ...

Mainashree
Updated On : 29 Oct 2013, 11:51 am

ಪಿಟಿಐ  ಪಟನಾ/ರಾಂಚಿ/ನವದೆಹಲಿ  ಅ.28-
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ದ ರ್ಯಾಲಿಯಲ್ಲಿ ಬಾಂಬ್ ಇರಿಸಿದ್ದು ಇಂಡಿಯನ್ ಮುಜಾಹಿದೀನ್. ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಹೊಸತಾಗಿ ರಚನೆಯಾಗಿರುವ ಘಟಕವೇ ಘಟನೆಗೆ ಕಾರಣವಾಗಿರಬಹುದು ಎನ್ನುವುದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತರ್ಕ. ಭಾನುವಾರದ  ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿ ತನಿಖೆ ಚುರುಕುಗೊಂಡಿದ್ದು, ಬಿಹಾರ ಮತ್ತು ಜಾರ್ಖಂಡ್‌ನ ಹಲವು ಭಾಗಗಳಲ್ಲಿ ದಾಳಿ ನಡೆಸಲಾಗಿದೆ.

ಮುಜಾಹಿದೀನ್ ಪಾತ್ರ
ಭಾನುವಾರದ ರ್ಯಾಲಿ ವೇಳೆ ಸಂಭವಿಸಿದ ಏಳು ಅಲ್ಪ ಪ್ರಮಾಣದ ಸ್ಫೋಟ ಪ್ರಕರಣದಲ್ಲಿ ಭಟ್ಕಳ ಸಹೋದರರಿಂದ ಸ್ಥಾಪನೆಗೊಂಡ ಉಗ್ರ ಸಂಘಟನೆ ಇಂಡಿಯನ್ ಮುಜಾಹಿದೀನ್ (ಐಎಂ) ಪಾತ್ರವಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಈ ಅಂಶವನ್ನು ಖಚಿತಪಡಿಸಿದೆ. ಘಟನೆಯಲ್ಲಿ ಐಎಂನ ಪ್ರಮುಖ ನಾಯಕ ಎಂದೇ ಹೇಳಲಾಗುತ್ತಿರುವ ತಹ್ಸೀನ್ ಅಖ್ತರ್ ಪ್ರಮುಖ ಪಾತ್ರ ವಹಿಸಿದ್ದಾನೆ. ಈತನೇ ಬಾಂಬ್‌ಗಳನ್ನು ಮತ್ತು ಇತರ ಪ್ರಾಥಮಿಕ ಸೌಲಭ್ಯಗಳನ್ನು ಒದಗಿಸಿದ್ದ ಎಂದು ತನಿಖಾ ಸಂಸ್ಥೆಗಳು ಖಚಿತಪಡಿಸಿವೆ.

ಇಬ್ಬರ ಬಂಧನ
ಪ್ರಕರಣಕ್ಕೆ ಸಂಬಂಧಿಸಿದಂತೆ ಪಟನಾದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಅವರನ್ನು ಇಮ್ತಿಯಾಜ್ ಮತ್ತು ತೌಸಿಮ್ ಎಂದು ಗುರುತಿಸಲಾಗಿದೆ. ಈ ಪೈಕಿ ಬಂಧಿತನೊಬ್ಬ ರಾಂಚಿಯಲ್ಲಿನ ಇಂಡಿಯನ್ ಮುಜಾಹಿದೀನ್ ತಂಡಕ್ಕೆ ಸೇರಿದವನಾಗಿದ್ದಾನೆ ಎಂದು ಜಾರ್ಖಂಡ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಸುವ್ಯವಸ್ಥೆ) ಎಸ್.ಎನ್.ಪ್ರಧಾನ್ ತಿಳಿಸಿದ್ದಾರೆ. ಇದೇ ವೇಳೆ ತಾರೀಖ್ ಎಂಬಾತ ಸ್ಫೋಟಕಗಳನ್ನು ಇರಿಸುವ ಹೊತ್ತಿಗೆ ಸ್ಫೋಟಗೊಂಡು ಅಸುನೀಗಿದ್ದಿರಬಹುದು ಎಂದು ಪ್ರಧಾನ್ ತಿಳಿಸಿದ್ದಾರೆ. ಯಾಸೀನ್ ಭಟ್ಕಳ್ ಪೊಲೀಸರಿಂದ ಬಂಧಿತನಾದ ಬಳಿಕ ಇಂಡಿಯನ್ ಮುಜಾಹಿದೀನ್‌ನ ರಾಂಚಿ ಘಟಕ ಸ್ಥಾಪನೆಯಾಗಿದ್ದಿರಬಹುದೆಂದು ಅವರು ತಿಳಿಸಿದ್ದಾರೆ.

ಸತತ ಸಂಪರ್ಕ
ಬಂಧಿತನಾಗಿರುವ ಇಮ್ತಿಯಾಜ್ ಅನ್ಸಾರಿ ಎಂಬಾತ ತಹ್ಸೀನ್ ಅಖ್ತರ್ ಎಂಬಾತನ  ಜತೆಗೆ ನಿಕಟ ಸಂಪರ್ಕ ಇರಿಸಿಕೊಂಡಿದ್ದ. ಅನ್ಸಾರಿಯ ಸಂಬಂಧಿ ತೌಫಿಕ್, ತಾರೀಖ್ ಅನ್ಸಾರಿ ಮತ್ತು ನೂಮನ್ ಅನ್ಸಾರಿ ಶನಿವಾರ ಪಟನಾಕ್ಕೆ ತೆರಳಿದ್ದರು. ಅಲ್ಲಿ ಮತ್ತೆ ಇಬ್ಬರು ಅವರನ್ನು ಸೇರಿಕೊಂಡಿದ್ದರು. ತಮ್ಮ ಸ್ನೇಹಿತರ ಜತೆ ತಾವು ಕೋಲ್ಕತಾಗೆ ತೆರಳುತ್ತಿರುವುದಾಗಿ ಅವರು ರಾಂಚಿಯಲ್ಲಿನ ಜನರಿಗೆ ತಿಳಿಸಿದ್ದಾಗಿ ತನಿಖೆಯಿಂದ ತಿಳಿದು ಬಂದಿದೆ. ಈ ಪೈಕಿ ತಾರೀಖ್ ಎಂಬಾತ ಸ್ಫೋಟಕಗಳನ್ನು ಇರಿಸುವ ಸಂದರ್ಭದಲ್ಲಿ ಅದು ಸ್ಫೋಟಗೊಂಡು ಅಸುನೀಗಿದ್ದಾನೆ.

ಮುಜಾಫರ್‌ನಗರ ಘಟನೆಗೆ ಪ್ರತೀಕಾರ?
ಉತ್ತರಪ್ರದೇಶದಲ್ಲಿನ ಮುಜಾಫರ್‌ನಗರ ಜಿಲ್ಲೆಯಲ್ಲಿ ನಡೆದ ಕೋಮುಗಲಭೆಗೆ ಪ್ರತೀಕಾರವಾಗಿ ಪಟನಾದಲ್ಲಿ ಸ್ಫೋಟ ನಡೆಸಲಾಗಿದೆ ಎಂದು ಪೊಲೀಸರು ವಶಕ್ಕೆ ಪಡೆದ ವ್ಯಕ್ತಿಯೊಬ್ಬ ತಿಳಿಸಿದ್ದಾನೆ ಎಂದು ಹೇಳಲಾಗಿದೆ.

6-7 ತಂಡದ ಸದಸ್ಯರಿಂದ ಕೃತ್ಯ
ಭಾನುವಾರದ ಘಟನೆ ಮತ್ತು 4 ತಿಂಗಳ ಹಿಂದೆ ಬೋಧ್‌ಗಯಾದಲ್ಲಿ ನಡೆದ ಸ್ಫೋಟದ ಪ್ರಕರಣಕ್ಕೂ ಸಾಮ್ಯತೆ ಇರುವುದನ್ನು ಬಿಹಾರ ಪೊಲೀಸರು ಕಂಡುಕೊಂಡಿದ್ದಾರೆ. 6-7 ಸದಸ್ಯರು ಇರುವ ತಂಡವೊಂದು ಗಾಂಧಿ ಮೈದಾನ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಬಾಂಬ್ ಇರಿಸಿರಬಹುದು ಎಂದು ಪಟನಾದ ಪೊಲೀಸ್ ವರಿಷ್ಠಾಧಿಕಾರಿ ಮನು ಮಹರಾಜ್ ತಿಳಿಸಿದ್ದಾರೆ.

ಹಲವು ವೇಷದ ತಹ್ಸೀನ್
ಮೋದಿ ರ್ಯಾಲಿಗೆ ಬಾಂಬ್ ಪೂರೈಕೆ ಮಾಡಿದ್ದಾನೆ ಎಂದು ಶಂಕಿಸಲಾಗಿರುವ ತಹ್ಸೀನ್ ಅಖ್ತರ್ ಕಂಪ್ಯೂಟರ್ ಬಳಕೆಯಲ್ಲಿ ಹೆಚ್ಚಿನ ಪ್ರಾವೀಣ್ಯತೆ ಹೊಂದಿದ್ದಾನೆ. 23 ವರ್ಷ ವಯಸ್ಸಿನ ಈ ವ್ಯಕ್ತಿ ವಾರಾಣಸಿ, 2011ರ ಮುಂಬೈ ಸರಣಿ ಸ್ಫೋಟ, ಹೈದರಾಬಾದ್‌ನ ದಿಲ್‌ಸುಖ್‌ನಗರ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈತನನ್ನು ಹಿಡಿದು ಕೊಟ್ಟವರು ಅಥವಾ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಿಸಲಾಗಿದೆ. ಈತ ಹಲವು ನಕಲಿ ಗುರುತಿನ ಚೀಟಿ ಹೊಂದಿದ್ದಾನೆ ಎಂದು ಎನ್‌ಐಎ ತಿಳಿಸಿದೆ. ಅಖ್ತರ್ ಕೋಮುಗಲಭೆ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಎನ್‌ಐಎ ಆರೋಪಿಸಿದೆ. ಈತ ಬಿಹಾರದ ಸಮಷ್ಟಿಪುರದ ನಿವಾಸಿ.

ವಿವಾದದಲ್ಲಿ ಶಿಂದೆ
ಭಾನುವಾರ ಕೇಂದ್ರ ಸಚಿವ ಸುಶೀಲ್‌ಕುಮಾರ್ ಶಿಂದೆ ಮುಂಬೈನಲ್ಲಿ ಸಿನಿಮಾವೊಂದರ ಸಿ.ಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜತೆಗೆ ನಟಿ ಕಂಗನಾ ರಾಣಾವತ್ ಮತ್ತು ನಿರ್ದೇಶಕ ವಿಶ್ವಾಸ್ ಪಟೇಲ್ ಜತೆಗೆ ಫೊಟೋ ತೆಗೆಸಿಕೊಂಡದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಪಟನಾದಲ್ಲಿ ನಡೆದ ಘಟನೆಯ ಹೊರತಾಗಿಯೂ ಶಿಂದೆ ಬಾಲಿವುಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರ ಔಚಿತ್ಯವೇನು ಎಂದು ಬಿಜೆಪಿ ಪ್ರಶ್ನಿಸಿದೆ. ಕೇಂದ್ರ ಸರ್ಕಾರದ ಸಚಿವರು ಸಾರ್ವಜನಿಕರ ರಕ್ಷಣೆ ಮತ್ತು ಕ್ಷೇಮದತ್ತ ಲಕ್ಷ್ಯ ವಹಿಸುವುದರ ಬದಲಾಗಿ ಚಲನಚಿತ್ರದ ಸಿ.ಡಿ. ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಪಕ್ಷದ ವಕ್ತಾರ ಸಿದ್ಧಾರ್ಥನಾಥ್ ಸಿಂಗ್ ಟೀಕಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments