ಮೀನುಗಾರಿಕೆ ಅಕ್ರಮ ತಡೆಗೆ ಹೊಸ ಬಲೆ
ಬೆಂಗಳೂರು: ಅಕ್ರಮ ಮೀನುಗಾರಿಕೆ ತಡೆಯಲು ರಾಜ್ಯ ಸರ್ಕಾರ ಹೊಸ ಬಲೆ ಹೆಣೆದಿದೆ.
ಅಷ್ಟೇ ಅಲ್ಲ. ನಿಯಮ ಮೀರಿ ಮೀನುಗಾರಿಕೆ ಮಾಡುವ ರಾಜಕೀಯ ಪ್ರೇರಿತ ಸಹಕಾರ ಸಂಘಗಳಿಗೆ ಕಡಿವಾಣ ಹಾಕಲು ನಿರ್ಧರಿಸಿದೆ.
ಅಂದರೆ ಮೀನುಗಾರಿಕೆಗಾಗಿ ಸಹಕಾರ ಸಂಘ ಸ್ಥಾಪಿಸುವವರಿಗೆ ನಿಗದಿಗೊಳಿಸಿದ್ದ ಮಾನದಂಡಗಳನ್ನು ಹಿಂದೆಂದಿಗಿಂತಲೂ ಕಠಿಣಗೊಳಿಸಲಾಗಿದೆ.
ಹೊಸ ನಿಯಮದಂತೆ ಮೀನುಗಾರರ ಸಹಕಾರ ಸಂಘ ಸ್ಥಾಪಿಸಲು ಸಾಧ್ಯತಾ ಪ್ರಮಾಣ ಪತ್ರ ಪಡೆಯುವವರು ಮೀನುಗಾರಿಕೆಯಲ್ಲಿ ಕೌಶಲ್ಯ ಹೊಂದಿರಬೇಕು. ಮೀನು ಹಿಡಿಯುವ ಕಲೆಗಾರಿಕೆಯನ್ನು ಸ್ಥಳೀಯ ಗ್ರಾಮಪಂಚಾಯಿತಿ ಅಧ್ಯಕ್ಷ, ಉಪಾಧ್ಯಾಕ್ಷರ ಸಮ್ಮುಖದಲ್ಲಿ ಪ್ರದರ್ಶಿಸಿ, ಅದನ್ನು ವೀಡಿಯೋ ಚಿತ್ರೀಕರಣ ಮಾಡಿಸಬೇಕು. ಆ ವಿಡಿಯೋ ಟೇಪ್ ಅನ್ನು ಇಲಾಖೆಗೆ ಸಲ್ಲಿಸಬೇಕು. ಅಷ್ಟೇ ಅಲ್ಲ. ತನ್ನಂತೆಯೇ ಅರ್ಹ 20ಮಂದಿ ಮೀನುಗಾರರನ್ನು ಹೊಂದಿರಬೇಕು. ಅವರಿಗೆಲ್ಲಾ ಈಜು ಬರಬೇಕು. ಬಲೆ ಬೀಸುವುದೂ ತಿಳಿದಿರಬೇಕು. ಜತೆಗೆ ಸ್ಥಳೀಯರೂ ಆಗಿರಬೇಕು.
ಅಂಥವರಿಗೆ ಮಾತ್ರ ಇಲಾಖೆ ಮೀನುಗಾರರ ಸಹಕಾರ ಸಂಘ ಸ್ಥಾಪಿಸಲು ಅನುಮತಿ ನೀಡಲಿದೆ. ನಂತರ ಆ ಸಂಘಕ್ಕೆ ಮೀನುಗಾರಿಕೆ ನಡೆಸಲು ಕೆರೆ ನಿಗದಿ ಮಾಡಲಾಗುತ್ತದೆ. ಹೀಗೆ ಸಂಘ ಸ್ಥಾಪನೆಗೆ 10ಕ್ಕೂ ಹೆಚ್ಚಿನ ಹೊಸ ನಿಮಯಗಳನ್ನು ರೂಪಿಸಲಾಗಿದ್ದು, ಈ ಮೂಲಕ ಮೀನುಗಾರಿಕೆಯಾಗಲಿ, ಅದಕ್ಕಾಗಿ ಕೆರೆ ಗುತ್ತಿಗೆ ಪಡೆಯುವುದಾಗಲಿ ಇನ್ನು ಸುಲಭವಲ್ಲ.
ಮೀನಿಗಾಗಿ ಪಕ್ಷ ರಾಜಕೀಯ: ರಾಜ್ಯದಲ್ಲಿ ಒಳನಾಡಿನ ಮೀನುಗಾರಿಕೆಯನ್ನು ಒಂದು ಕೃಷಿ ಎಂದು ಪರಿಗಣಿಸಲಾಗಿದ್ದು, ರಾಜ್ಯಾದ್ಯಂತ ಒಟ್ಟು 3500 ಕೆರೆಗಳನ್ನು ಅದಕ್ಕಾಗಿ ಗುರುತಿಸಲಾಗಿದೆ. ಈ ಪೈಕಿ 3200 ಕೆರೆಗಳಲ್ಲಿ ಮೀನುಗಾರಿಕೆ ಪ್ರಗತಿಯಲ್ಲಿದೆ.
ಈ ಕೆರೆಗಳನ್ನು ಮೀನುಗಾರಿಕೆಗೆ ನೀಡುವಾಗ ಮೀನುಗಾರರ ಸಹಕಾರ ಸಂಘಕ್ಕೆ ಆದ್ಯತೆ ನೀಡಲಾಗುತ್ತದೆ. ಈ ಸಂಘಗಳು ಒಂದು ಹೆಕ್ಟೇರ್ ಜಲ ವಿಸ್ತೀರ್ಣದ ಕೆರೆಯನ್ನು ಕೇವಲ 150ರ ಮಾಸಿಕ ಬಾಡಿಗೆಯಂತೆ 5ವರ್ಷಗಳ ಅವಧಿಗೆ ಗುತ್ತಿಗೆ ಪಡೆಯುವುದುಂಟು.
ಹೀಗೆ ಅಲ್ಪ ಮೊತ್ತ ಪಾವತಿಸಿ ಕೋಟ್ಯಂತರ ರುಪಾಯಿ ಸಂಪಾದಿಸಲು ಇಲ್ಲಿ ಅವಕಾಶವಿರುವುದರಿಂದ ಪ್ರಭಾವಿ ವ್ಯಕ್ತಿಗಳು ಸಹಕಾರ ಸಂಘಗಳನ್ನು ಸ್ಥಾಪಿಸಿ ಕೆರೆಗಳನ್ನು ಗುತ್ತಿಗೆ ಪಡೆಯಲು ಪೈಪೋಟಿ ನಡೆಸುತ್ತಾರೆ. ಇದಕ್ಕಾಗಿ ರಾಜಕೀಯ ಲಾಬಿ ಬಳಸಿ ಅಧಿಕಾರಿಗಳನ್ನು ಬೆದರಿಸುವುದೂ ಉಂಟು.
ರಾಜ್ಯದಲ್ಲಿ 500ಕ್ಕೂ ಹೆಚ್ಚಿನ ಸಹಕಾರ ಸಂಘಗಳಿದ್ದು, ಇವುಗಳಲ್ಲಿ ಅನೇಕ ಸಂಘಗಳು ಒಂದೇ ಕೆರೆ ಬೇಕೆಂದು ಪೈಪೋಟಿ ನಡೆಸುತ್ತವೆ. ಅನೇಕ ವೇಳೆ ಒಂದೇ ಸಹಕಾರ ಸಂಘ ಐದಾರು ಕೆರೆಗಳನ್ನು ಗುತ್ತಿಗೆ ಪಡೆದು ಲಾಭ ಗಳಿಸುತ್ತವೆ. ಇದಕ್ಕಾಗಿ ಅಕ್ರಮವಾಗಿ ಸಂಘಗಳನ್ನು ಸ್ಥಾಪಿಸಿರುವ ಉದಾಹರಣೆಗಳೂ ಇವೆ. ಅದರಲ್ಲೂ ಸಂಘ ಸ್ಥಾಪಿಸಲು ಅನರ್ಹರನ್ನು ಸದಸ್ಯರನ್ನಾಗಿ ಮಾಡುವುದು, ಬೋಗಸ್ ಸಂಘಗಳನ್ನು ಹುಟ್ಟಿ ಹಾಕುವುದೂ ಉಂಟು.
ನಿಯಮಗಳು ನೆರೆ ರಾಜ್ಯಕ್ಕಿಂತಲೂ ಭಿನ್ನ
ವಿಚಿತ್ರವೆಂದರೆ, ಜೆಡಿಎಸ್ ಪಕ್ಷಕ್ಕೆ ಸೇರಿದವರ ಸಹಕಾರ ಸಂಘವೊಂದು ಮೀನುಗಾರಿಕೆಗೆ ಕೆರೆ ಪಡೆದಿದ್ದರೆ, ಆ ಸಂಘವನ್ನು ಕಾಂಗ್ರೆಸ್ ಮುಖಂಡರು ಸೂಪರ್ಸಿಡ್ ಮಾಡಿಸುತ್ತಾರೆ. ಕೆಲವೊಮ್ಮೆ ಅಕ್ರಮಗಳ ಆರೋಪ ಹೊರಿಸಿ ಕೆರೆ ಗುತ್ತಿಗೆ ರದ್ದಾಗುವಂತೆ ಮಾಡಿರುವುದೂ ಇದೆ.ಇದರಿಂದ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸದಾ ರಾಜಕೀಯ ಒತ್ತಡದಲ್ಲಿ ಕಾರ್ಯ ನಿರ್ವಹಿಸಬೇಕಿತ್ತು. ಅಷ್ಟೇ ಅಲ್ಲ. ಇದರಿಂದ ಇಲಾಖೆಗೂ ನಷ್ಟ ಆಗುತ್ತಿತ್ತು. ಹೀಗಾಗಿ ಇಲಾಖೆ ಹಿರಿಯ ಅಧಿಕಾರಿ ರಾಮಕೃಷ್ಣ ಅವರು ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿ ನೆರೆ ರಾಜ್ಯಗಳಲ್ಲಿ ಅಧ್ಯಯನ ನಡೆಸಿ ಪ್ರತ್ಯೇಕ ನಿಯಮಗಳನ್ನು ರೂಪಿಸಿದ್ದಾರೆ. ಇದಕ್ಕೆ ಸರ್ಕಾರದ ಅನುಮೋದನೆಯೂ ಸಿಕ್ಕಿದ್ದು, ಪರಿಣಾಮಕಾರಿಯಾಗಿ ಜಾರಿಗೊಳಿಸುವುದಷ್ಟೇ ಬಾಕಿ.
ಹೊಸ ನಿಯಮಗಳೇನೇನು?
- ಒಂದು ಸಹಕಾರ ಸಂಘಕ್ಕೆ ಒಂದೇ ಕೆರೆ ಗುತ್ತಿಗೆ
- ಸಹಕಾರ ಸಂಘದಲ್ಲಿ 20 ವೃತ್ತಿಪರ ಮೀನುಗಾರರು ಇರಬೇಕು
- ಸ್ಥಳೀಯರಾಗಿರಬೇಕು. ಈ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು
- ಒಬ್ಬರು ಒಂದು ಸಂಘದಲ್ಲಿ ಮಾತ್ರ ಸದಸ್ಯರಾಗಿರಬೇಕು
- ಸಂಘದ ಸದಸ್ಯರು ಕನಿಷ್ಟ 25 ಮೀಟರ್ ಈಜುವಂತಿರಬೇಕು
- ತೆಪ್ಪ ಅಥವಾ ಹರಿಗೋಲು ಮೂಲಕ ಸಾಗಿ ನೇರವಾಗಿ ಬಲೆ ಬೀಸುವುದನ್ನು ಕಲಿತಿರಬೇಕು
- ಮೀನು ಮಾರಾಟ ಮಾಡುತ್ತಿರುವ ಫೋಟೋ ಹೊಂದಿರಬೇಕು
- ಈ ಎಲ್ಲಾ ಅರ್ಹತೆ ಹೊಂದಿರುವರು ಇಲಾಖೆಯಿಂದ ಸಾಧ್ಯತಾ ಪತ್ರ ಪಡೆದು ಸಂಘ ಸ್ಥಾಪಿಸಬಹುದು.
ಹಿಂದೆ ಮೀನುಗಾರಿಕೆ ಸಹಕಾರ ಸಂಘ ಸ್ಥಾಪನೆಗೆ ನಿಯಮ ಎನ್ನುವುದೇ ಇರಲ್ಲಿಲ. ಈಗ ಹೊಸ ನೀತಿ ಜಾರಿಗೊಳಿಸಲಾಗುತ್ತಿದ್ದು, ಇದರಿಂದ ರಾಜಕೀಯ ಒತ್ತಡಗಳು ಹಾಗೂ ಲಾಭದಾಯಕ ಕೆರೆಗಳಿಗೆ ಸಂಘಗಳು ಕಚ್ಚಾಡುವುದು ತಪ್ಪುತ್ತದೆ.
- ರಾಮಕೃಷ್ಣ, ಮೀನುಗಾರಿಕೆ ಇಲಾಖೆ ಜಂಟಿ ಆಯುಕ್ತ
- ಶಿವಕುಮಾರ್ ಬೆಳ್ಳಿತಟ್ಟೆ