ಇದು ಬಿಲ್ವಿದ್ಯೆ 'ಕಣ್ಣ'ಣ್ಣ...
ಕ.ಪ್ರ.ವಾರ್ತೆ, ಬೆಂಗಳೂರು, ಅ. 29-
ಎಲ್ಲಿಯ ದೆಹಲಿ, ಎಲ್ಲಿಯ ಶೃಂಗೇರಿ, ಬೀರೂರು. ಒಂದಕ್ಕೊಂದು ಸಂಬಂಧವೇ ಇಲ್ಲ. ಆದರೂ ಈ ಮೂರೂ ಕಡೆ ಒಂದೇ ದಿನದಲ್ಲಿ ಓಡಾಡುವವರಿದ್ದಾರೆಯೇ?
ಏಕಿಲ್ಲ ? ಒಬ್ಬ ವ್ಯಕ್ತಿ ಒಂದೇ ದಿನ ದೆಹಲಿಯಲ್ಲಿ ಸಭೆಯಲ್ಲಿ ಭಾಗವಹಿಸುತ್ತಾರೆ. ಅದೇ ವ್ಯಕ್ತಿ ಅದೇ ದಿನ ಶೃಂಗೇರಿಯಿಂದ ಕಾರಿನಲ್ಲಿ ಬೀರೂರಿಗೆ ಬಂದು 'ರೈಲು' ಹತ್ತುತ್ತಾರೆ!
ದೆಹಲಿ ವಿಮಾನ ನಿಲ್ದಾಣದಿಂದ ಮಾಧವಾಶ್ರಮಕ್ಕೆ ಇರುವ ದೂರ 125 ಕಿ.ಮೀ. ಅದರೆ, ಈ ವ್ಯಕ್ತಿಯ ಪ್ರಕಾರ ಎರಡು ವರ್ಷಗಳಲ್ಲಿ ಅದು ದೆಹಲಿಗೆ 25 ಕಿ.ಮೀ. ಹತ್ತಿರವಾಗಿಬಿಟ್ಟಿದೆಯಂತೆ!! ಹೀಗೂ ಉಂಟೇ! ಎಂದು ಅಚ್ಚರಿಪಡಬೇಡಿ. ಶೃಂಗೇರಿಯಲ್ಲಿರುವ ರಾಷ್ಟ್ರೀಯ ಸಂಸ್ಕತ ಸಂಸ್ಥಾನದ ಪ್ರಾಂಶುಪಾಲರು ಸಲ್ಲಿಸಿದ ಬಿಲ್ಗಳಲ್ಲಿ ಈ ಚಮತ್ಕಾರ ಅಡಗಿದೆ. ಇಂತಹ ಚಮತ್ಕಾರಿಕ ಸಂಗತಿಗಳನ್ನು ಸೃಷ್ಟಿಸಿದವರ ಹೆಸರು ಡಾ. ಎನ್.ಆರ್. ಕಣ್ಣನ್. ಅವರು ಶೃಂಗೇರಿಯ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ರಾಜೀವ ಗಾಂಧಿ ಸಂಸ್ಕೃತ ಸಂಸ್ಥಾನದ ಪ್ರಾಂಶುಪಾಲರಾಗಿದ್ದಾರೆ. ಸಂಸ್ಕೃತದ ಪಂಡಿತರು. ಆದರೆ ಬೇಕಾಬಿಟ್ಟಿ ಬಿಲ್ ಕೊಟ್ಟು, ಹಣ ಜೇಬಿಗಿಳಿಸುವುದು ಇವರ ಸಂಸ್ಕೃತಿ!!
ಇದು ಕಣ್ಣನ್ ಅವರಿಗೆ ಹೊಸದೇನಲ್ಲ. ಏಕೆಂದರೆ, ಇವರು 2002ರಿಂದ 2007ರವರೆಗೆ 'ಬಿಲ್'ವಿದ್ಯೆಯಿಂದ ಎರ್ರಾಬಿರ್ರಿ ಹಣ ಪಡೆದ ಪರಿಣಾಮ ತನಿಖೆ ನಡೆದಿತ್ತು. ತನಿಖಾ ವರದಿ ಆಧರಿಸಿ, ಇವರಿಂದ 1.80 ಲಕ್ಷ ವಸೂಲಿ ಕೂಡ ಮಾಡಲಾಗಿದೆ. ಆದರೆ ಕ್ರಮ ಕೈಗೊಳ್ಳುವ ಬದಲು, ಕೇವಲ ಎಚ್ಚರಿಕೆ ಕೊಟ್ಟು, ಪ್ರಾಂಶುಪಾಲ ಹುದ್ದೆಯಲ್ಲಿ ಮುಂದವರಿಸಲಾಗಿದೆ. ಇಷ್ಟಾದ ಮೇಲೂ ಕಣ್ಣನ್ ಬುದ್ದಿ ಕಲಿತಂತಿಲ್ಲ. ಕಾರಣ 2013ರ ಮೇನಲ್ಲಿ ದೆಹಲಿಯಲ್ಲಿ ನಡೆದ ಸಭೆಯೊಂದರಲ್ಲಿ ಪಾಲ್ಗೊಂಡಿದ್ದರು. ಅವರೇ ಸಲ್ಲಿಸಿದ ಅಧಿಕೃತ ಟಿಎ-ಡಿಎ ಬಿಲ್ ಪ್ರಕಾರ ಕಣ್ಣನ್ ಅವರು ಮೇ 26ರಂದು ಶೃಂಗೇರಿಯಿಂದ ಹೊರಟಿದ್ದಾರೆ.
ದೆಹಲಿಯಲ್ಲಿ ಸಭೆ ಇದ್ದಿದ್ದು ಮೇ 28ರಂದು ಬೆಳಗ್ಗೆ 11,00 ಗಂಟೆಗೆ. ಬಿಲ್ ಪ್ರಕಾರ ಅವರು ದೆಹಲಿಯಿಂದ ಹೊರಟು ಬೆಂಗಳೂರು ತಲುಪಿದ್ದು ಮೇ 28ರ ರಾತ್ರಿ 11.30ಕ್ಕೆ. ಇದೇ ಕಣ್ಣನ್ ಅವರು ಹೈದರಾಬಾದ್ನಲ್ಲಿ ನಡೆದ ಸಭೆಯೊಂದರಲ್ಲಿ ಭಾಗವಹಿಸಿದ್ದಕ್ಕಾಗಿಸಲ್ಲಿಸಿದ ಇನ್ನೊಂದು ಬಿಲ್ನಲ್ಲಿ ಮೇ 28ರಂದು ಬೆಳಗ್ಗೆ 11.30ಕ್ಕೆ ಶೃಂಗೇರಿಯಿಂದ ಕಾರಿನಲ್ಲಿ ಬೀರೂರಿಗೆ ಪ್ರಯಾಣ ಬೆಳೆಸಿ, ಅಲ್ಲಿಂದ ರೈಲಿನ ಎಸಿ ದರ್ಜೆಯಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ. ಒಬ್ಬನೇ ವ್ಯಕ್ತಿ ಎರಡೂ ಕಡೆ ಇರಲು ಸಾಧ್ಯವೇ?
ಇದಕ್ಕೆಲ್ಲ ಕಾರಣ ಬಿಲ್ ನೀಡಿ ಹಣ ನುಂಗುವ ಹವ್ಯಾಸ. ಕಣ್ಣನ್ ಅವರು ದೆಹಲಿಯಿಂದ ಬೆಂಗಳೂರಿಗೆ ಬಂದು, ಅಲ್ಲಿಂದ ಹೈದರಾಬಾದ್ಗೆ ತೆರಳಿದ್ದಾರೆ. ಆದರೆ ಹಣಕ್ಕಾಗಿ ಶೃಂಗೇರಿಯಿಂದ ಹೊರಟಂತೆ ಬಿಲ್ ಸೃಷ್ಟಿಸಿದ್ದಾರೆ. ಬೀರೂರಿನಿಂದ ಬೆಂಗಳೂರಿಗೆ ಮೇ 28ರಂದು ಎಸಿ ದರ್ಜೆ ಟಿಕೆಟ್ ಮಾಡಿಸಿ, ಅದರ ಪ್ರಿಂಟ್ಔಟ್ ತೆಗೆದುಕೊಂಡು, ತಕ್ಷಣ ಟಿಕೆಟ್ ರದ್ದುಪಡಿಸಿದ್ದಾರೆ! ಟಿಕೆಟ್ ಹಾಗೂ ರದ್ದುಪಡಿಸಿದ ಎರಡೂ ಪ್ರತಿಗಳು 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ.
ಸಚಿವ ಪಲ್ಲಂರಾಜು ಹೆಸರು
ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದ ಮತ್ತು ಈಗ ನೆಪಕ್ಕೆ ರಾಜಿನಾಮೆ ಪತ್ರ ಸಲ್ಲಿಸಿರುವ ಕಾಂಗ್ರೆಸ್ನ ಪಲ್ಲಂರಾಜು ಅವರೇ ಡಾ. ಕಣ್ಣನ್ ಅವರು ಶಿಕ್ಷೆಯಿಂದ ಬಚಾವ್ ಆಗಲು ಕಾರಣ ಎಂಬ ಆರೋಪ ಕೇಳಿಬಂದಿದೆ. ಕಣ್ಣನ್ ಅವರು ಕೂಡ 'ಸಚಿವರು, ಹಿರಿಯ ಅಧಿಕಾರಿಗಳ ಬೆಂಬಲವಿದೆ. ಯಾರೂ ಏನೂ ಮಾಡಲಾಗದು' ಎಂದು ಹೇಳಿಕೊಂಡಿದ್ದಾರೆ. 1.80 ಲಕ್ಷ ಸುಳ್ಳು ಹೇಳಿ ಗುಳುಂ ಮಾಡಿದ್ದಕ್ಕೆ, ಅದನ್ನು ಕೇವಲ ಅವರಿಂದ ವಸೂಲಿ ಮಾಡಿ, ಎಚ್ಚರಿಕೆ ಪತ್ರ ನೀಡಿ ಸರ್ಕಾರ ಸುಮ್ಮನಾಗಿರುವುದು ನೋಡಿದರೆ, ಸಚಿವರ ಬೆಂಬಲ ನಿಜವೇನೋ ಎಂಬ ಭಾವನೆ ಜನರಲ್ಲಿ ದೃಢವಾಗುತ್ತಿದೆ.
60ಕ್ಕೂ ಮೊದಲೇ ಷಷ್ಟ್ಯಬ್ದಿ !
ವ್ಯಕ್ತಿಗೆ 60 ವರ್ಷ ಪೂರ್ಣಗೊಂಡ ನಂತರ ಷಷ್ಟ್ಯಬ್ದಿ ಅಥವಾ ಷಷ್ಟಿಪೂರ್ತಿ ಕಾರ್ಯಕ್ರಮ ನಡೆಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕಣ್ಣನ್ ಅವರು ಸಂಸ್ಕೃತ ಪಂಡಿತರು. ಹಾಗಿದ್ದೂ ಅವರು 60 ವರ್ಷಕ್ಕೆ ಮೊದಲೇ ಷಷ್ಟ್ಯಬ್ದಿ ಆಚರಿಸಿಕೊಂಡರೋ ಅಥವಾ ಸರ್ಕಾರಕ್ಕೆ ನೀಡಿದ ದಾಖಲೆಯೇ ಸುಳ್ಳೋ ಎಂಬ ಅನುಮಾನ ಶೃಂಗೇರಿಯ ಜನರನ್ನು ಕಾಡುತ್ತಿದೆ. ಕಾರಣವೇನೆಂದರೆ, ಸರ್ಕಾರಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ಅವರು 1955ರ ಜು.29ರಂದು ಜನಿಸಿದ್ದು. ಇದರ ಪ್ರಕಾರ ಅವರಿಗೆ 2015ರಲ್ಲಿ 60 ವರ್ಷವಾಗುತ್ತದೆ. ಆದರೆ ಕಣ್ಣನ್ ಅವರು ಈಗಾಗಲೇ ಷಷ್ಟ್ಯಬ್ದಿ ಕಾರ್ಯಕ್ರಮ ನಡೆಸಿದ್ದಾರೆ!
- ವಿನಾಯಕ ಭಟ್ಟ ಮೂರೂರು