ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬ್ಯಾಂಕ್ ದರದಲ್ಲಿ ಅಲ್ಪ ಬದಲು

ಹಣದುಬ್ಬರ ತಡೆಯಲು ಹೆಣಗುತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ರೆಪೋ ದರವನ್ನು 25 ಮೂಲ ಅಂಶದಷ್ಟು(ಶೇ.0.25) ಹೆಚ್ಚಿಸಿದೆ. ತತ್ಪರಿಣಾಮ...

Mainashree
Updated On : 30 Oct 2013, 11:54 am

ನವದೆಹಲಿ: ಹಣದುಬ್ಬರ ತಡೆಯಲು ಹೆಣಗುತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ರೆಪೋ ದರವನ್ನು 25 ಮೂಲ ಅಂಶದಷ್ಟು(ಶೇ.0.25) ಹೆಚ್ಚಿಸಿದೆ. ತತ್ಪರಿಣಾಮ ಬ್ಯಾಂಕ್‌ಗಳು ನೀಡುವ ಸಾಲದ ಮೇಲಿನ ಬಡ್ಡಿ ದರ ಹೆಚ್ಚಲಿದೆ. ಮುಖ್ಯವಾಗಿ ಗೃಹ ಸಾಲ, ವಾಹನ ಸಾಲ, ಸಂಬಳ ಸಾಲ ಮಾಡಿ ಮಾಸಿಕ ಸಮಾನ ಕಂತು(ಇಎಂಐ) ಪಾವತಿಸುತ್ತಿರುವವರಿಗೆ ಹೊರೆಯಾಗಲಿದೆ. ಜತೆಗೆ ಹೊಸದಾಗಿ ಸಾಲ ಮಾಡುವವರು ಹೆಚ್ಚಿನ ಬಡ್ಡಿದರ ತೆರಬೇಕಾಗುತ್ತದೆ.
ಆರ್‌ಬಿಇ ಬ್ಯಾಂಕ್‌ಗಳಿಗೆ ನೀಡುವ ತ್ವರಿತ ಸಾಲದ ಮೇಲಿನ ಬಡ್ಡಿದರವನ್ನು(ಎಂಎಸ್‌ಎಫ್) 25 ಮೂಲ ಅಂಶದಷ್ಟು ಇಳಿಸಿದೆ. ಆದರೆ, ನಗದು ಮೀಸಲು ಪ್ರಮಾಣದಲ್ಲಿ(ಸಿಆರ್‌ಆರ್) ಯಾವುದೇ ಬದಲಾವಣೆ ಮಾಡಿಲ್ಲ. ಇದರೊಂದಿಗೆ ರೆಪೋ ದರ(ಬ್ಯಾಂಕ್‌ಗಳು ರಿಸರ್ವ್ ಬ್ಯಾಂಕ್‌ನಿಂದ ಪಡೆಯವ ಸಾಲದ ಮೇಲಿನ ಬಡ್ಡಿ ದರ) ಶೇ.7.50ರಿಂದ ಶೇ.7.75ಕ್ಕೆ ಏರಿದೆ. ತ್ವರಿತ ಸಾಲದ ಮೇಲಿನ ಬಡ್ಡಿ ದರ ಶೇ.9ರಿಂದ ಶೇ.8.75ಕ್ಕೆ ಇಳಿದಿದೆ.  ರೆಪೋ ದರ ಮತ್ತು ಎಂಎಸ್‌ಎಫ್ ದರದ ನಡುವಿನ ಅಂತರ ಶೇ.1ಕ್ಕೆ ಇಳಿದಿದೆ. ನಗದು ಮೀಸಲು ಪ್ರಮಾಣವನ್ನು ಶೇ.4ರಷ್ಟು ಕಾಯ್ದುಕೊಳ್ಳಲಾಗಿದೆ.
ಪ್ರಸಕ್ತ ಸಾಲಿನ ಒಟ್ಟು ದೇಶಿಯ ಉತ್ಪನ್ನ(ಜಿಡಿಪಿ) ನಿರೀಕ್ಷಿತ ಅಭಿವೃದ್ಧಿ ಪ್ರಮಾಣದ ಅಂದಾಜನ್ನು ಆರ್‌ಬಿಐ ಶೇ.5.5ರಿಂದ ಶೇ.5ಕ್ಕೆ ಕುಗ್ಗಿಸಿದೆ.
ಸಗಟು ವಹಿವಾಟು ಹಣದುಬ್ಬರ ಏರಿಕೆ?: ಸಗಟು ವಹಿವಾಟು ಹಣದುಬ್ಬರ ಪ್ರಮಾಣ ಪ್ರಸಕ್ತ ವಿತ್ತೀಯ ವರ್ಷಾಂತ್ಯದಲ್ಲಿ ಈಗಿನ ಪ್ರಮಾಣಕ್ಕಿಂತ ಹೆಚ್ಚಲಿದೆ ಎಂಬ ಎಚ್ಚರಿಕೆಯನ್ನು ಆರ್‌ಬಿಐ ನೀಡಿದೆ. ಚಿಲ್ಲರೆ ವಹಿವಾಟು ಹಣದುಬ್ಬರ ಪ್ರಮಾಣ ಶೇ.9ರಷ್ಟು ಅಥವಾ ಅದಕ್ಕಿಂತ ಹೆಚ್ಚಲಿದೆ ಎಂದಿರುವ ಆರ್‌ಬಿಐ, ಸರ್ಕಾರ ಹಣದುಬ್ಬರ ತಗ್ಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದೆ. ಬೇಸಿಗೆ ಬೆಳೆ ಬಂದ ನಂತರ ಆಹಾರಧಾನ್ಯಗಳ ಬೆಲೆ ತಗ್ಗಿ ಆಹಾರವಲಯದ ಹಣದುಬ್ಬರ ಪ್ರಮಾಣ ಕೊಂಚ ಸುಧಾರಿಸುವುದೆಂಬ ಆಶಾಭಾವನೆ ರಿಸರ್ವ್ ಬ್ಯಾಂಕ್‌ಗೆ ಇದೆ.
ಸಮಗ್ರ ಸಗಟು ವಹಿವಾಟು ಹಣದುಬ್ಬರ ಈ ವಿತ್ತೀಯ ವರ್ಷಾಂತ್ಯದವರೆಗೂ ಈಗಿರುವ ಪ್ರಮಾಣಕ್ಕಿಂತಲೂ ಹೆಚ್ಚಲಿದೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಆರ್‌ಬಿಐ ಗವರ್ನರ್ ಡಾ.ರಘುರಾಮ್ ರಾಜನ್ ಹೇಳಿದ್ದಾರೆ. ತ್ವರಿತ ಸಾಲದ ಮೇಲಿನ ಬಡ್ಡಿದರ ತಗ್ಗಿಸಿರುವುದರಿಂದ ಗೃಹ ಸಾಲದ ಮೇಲಿನ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳಬಹುದು ಎಂದು ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್‌ನ ಗಗನ್ ಬಂಗಾ ಅಭಿಪ್ರಾಯ ಪಟ್ಟಿದ್ದಾರೆ.

ಜಿಡಿಪಿ ಅಭಿವೃದ್ಧಿ ಶೇ.5
ಪ್ರಸಕ್ತ ಸಾಲಿನ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ)ದ ಅಭಿವೃದ್ಧಿ ಅಂದಾಜು ಪ್ರಮಾಣವನ್ನು ಶೇ.5.5ರಿಂದ ಶೇ.5ಕ್ಕೆ ತಗ್ಗಿಸಲಾಗಿದೆ. ದೇಶಿಯ ಮತ್ತು ವಿದೇಶಿಯ ಪರಿಣಾಮಗಳನ್ನು ಅನುಲಕ್ಷಿಸಿ ಜಿಡಿಪಿ ಅಂದಾಜು ತಗ್ಗಿಸಲಾಗಿದೆ. 2013-14ನೇ ಸಾಲಿನ ಪ್ರಥಮ ತ್ರೈಮಾಸಿಕದಲ್ಲಿ ಆರ್‌ಬಿಐ ಜಿಡಿಪಿ ಅಭಿವೃದ್ಧಿ ಪ್ರಮಾಣವನ್ನು ಶೇ.5.5 ಎಂದು ಅಂದಾಜಿಸಿತ್ತು. ಆದರೆ, ಮೊದಲ ತ್ರೈಮಾಸಿಕದಲ್ಲಿ ಅಭಿವೃದ್ಧಿ ದರ 4.4ರಷ್ಟು ದಾಖಲಾಗಿದೆ. ರಫ್ತು ಅಭಿವೃದ್ಧಿ ಸುಧಾರಿಸಿ, ಕೆಲವು ಸೇವಾ ವಲಯಗಳಲ್ಲಿ ಚೇತರಿಕೆ ಕಾಣುವುದರ ಜತೆಗೆ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ನಿರೀಕ್ಷಿಸಿರುವುದರಿಂದ ಪ್ರಸಕ್ತ ಸಾಲಿನ ದ್ವಿತೀಯಾರ್ಧದಲ್ಲಿ ಒಟ್ಟಾರೆ ಅಭಿವೃದ್ಧಿ ಪ್ರಮಾಣ ಸುಧಾರಿಸಲಿದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ. ಇತ್ತೀಚೆಗಷ್ಟೆ ವಿಶ್ವಬ್ಯಾಂಕ್ ಹಾಗೂ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಸಕ್ತ ವಿತ್ತೀಯ ವರ್ಷದ ಭಾರತದ ಜಿಡಿಪಿ ಅಭಿವೃದ್ಧಿ ದರದ ಅಂದಾಜನ್ನು ಕ್ರಮವಾಗಿ ಶೇ.4.7 ಮತ್ತು ಶೇ.3.75ಕ್ಕೆ ತಗ್ಗಿಸಿದ್ದವು.

- ಕನ್ನಡಪ್ರಭ ಪ್ರತಿನಿಧಿಯಿಂದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement