ವಾರದಲ್ಲಿ 3 ದಿನ ಶಕ್ತಿಕೇಂದ್ರ ಭೇಟಿ ಕಡ್ಡಾಯ; ತಾಕೀತು
ಬೆಂಗಳೂರು: ವಾರದಲ್ಲಿ ಮೂರು ದಿನ ವಿಧಾನಸೌಧಕ್ಕೆ ಬಂದು ಕರ್ತವ್ಯ ನಿರ್ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟದ ಎಲ್ಲ ಸಚಿವರಿಗೆ ಸೂಚನೆ ನೀಡಿದ್ದಾರೆ. ಸಚಿವರು ವಿಧಾನಸೌಧಕ್ಕೆ ಬರುವುದಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಮಾತು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಆದೇಶ ನೀಡಿದ್ದಾರೆ. ಪ್ರವಾಸ ಹೊರತು ಪಡಿಸಿ ಉಳಿದ ಸಂದರ್ಭದಲ್ಲಿ ಸಚಿವರು ವಾರದ ಮೊದಲ ಮೂರು ದಿನ ಕಡ್ಡಾಯವಾಗಿ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ನಿಗದಿಗೊಳಿಸಿದ ಕೊಠಡಿಗೆ ಬಂದು ಕರ್ತವ್ಯ ನಿರ್ವಹಿಸಬೇಕು. ವಾರದಲ್ಲಿ ಎರಡು ದಿನ ಕ್ಷೇತ್ರ ಹಾಗೂ ಉಸ್ತುವಾರಿ ಜಿಲ್ಲೆಯಲ್ಲಿ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಸೂಚನೆ ನೀಡಿದ್ದಾರೆ. ಕಳೆದ ಎರಡು ಸಚಿವ ಸಂಪುಟ ಸಭೆಯಲ್ಲೂ ಈ ವಿಷಯ ಪ್ರಸ್ತಾಪಿಸಿರುವ ಸಿದ್ದರಾಮಯ್ಯ ಅಧಿಕೃತ ಸೂಚನೆ ನೀಡಿದ್ದಾರೆ. ಸಚಿವರು ನಿಯಮಿತವಾಗಿ ವಿಧಾನಸೌಧ, ವಿಧಾನಸೌಧಕ್ಕೆ ಬಾರದಿರುವ ಹಿನ್ನೆಲೆಯಲ್ಲಿ 'ಶಕ್ತಿಸೌಧ ಮರೆತ ಸಚಿವರು' ಎಂದು 'ಕನ್ನಡಪ್ರಭ' ವಿಶೇಷ ವರದಿ ಪ್ರಕಟಿಸಿತ್ತು.