ಸಿದ್ದು ಬೆನ್ನಿಗಿದ್ದೇವೆ, ತಪ್ಪು ಮಾಡಿದ್ರೆ ಪ್ರಶ್ನಿಸುತ್ತೇವೆ
ವಿಧಾನಸಭೆ ಚುನಾವಣೆಗೆ ಮುನ್ನ ಇದ್ದ ರಾಜಕೀಯ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ನಾನು ಸಿದ್ದರಾಮಯ್ಯ ಅವರೊಂದಿಗೆ...
ಕ.ಪ್ರ.ವಾರ್ತೆ, ಬೆಂಗಳೂರು, ಅ. 29-
ವಿಧಾನಸಭೆ ಚುನಾವಣೆಗೆ ಮುನ್ನ ಇದ್ದ ರಾಜಕೀಯ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ನಾನು ಸಿದ್ದರಾಮಯ್ಯ ಅವರೊಂದಿಗೆ ಸ್ಪರ್ಧೆಯಲ್ಲಿದ್ದುದು ನಿಜ. ಆದರೆ ಈಗ ಪ್ರತಿಸ್ಪರ್ಧಿಯಲ್ಲ. ಸರ್ಕಾರದ ಜತೆ ನಿಲ್ಲುವುದು ನನ್ನ ಕರ್ತವ್ಯ. ಆಡಳಿತ ನಡೆಸುವವರು ತಪ್ಪು ಹೆಜ್ಜೆಯಿಟ್ಟಾಗ ಧ್ವನಿ ಎತ್ತುವುದು ನನ್ನ ಜವಾಬ್ದಾರಿ.
-ಇದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ವ್ಯಾಖ್ಯಾನ. ಕೆಪಿಸಿಸಿ ಅಧ್ಯಕ್ಷರಾಗಿ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡಪ್ರಭಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಸಿದ್ದರಾಮಯ್ಯ ಅವರ ಜತೆ ನನಗೆ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದ್ದಾರೆ. ಸಂದರ್ಶನದ ಪೂರ್ಣಪಾಠ ಹೀಗಿದೆ....
ಪಕ್ಷ-ಸರ್ಕಾರ ಪರಸ್ಪರ ವಿರುದ್ಧ ದಿಕ್ಕಿಗೆ ಎಳೆಯುತ್ತಿದೆ ಎಂಬ ಭಾವನೆ ಇದೆ. ನಿಜಕ್ಕೂ ನಿಮ್ಮ ಮತ್ತು ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯವಿದೆಯೇ ?
ಸಿದ್ದರಾಮಯ್ಯ ಅವರ ಜತೆ ಭಿನ್ನಾಭಿಪ್ರಾಯವಿಲ್ಲ. ರಾಜ್ಯದಲ್ಲಿರುವುದು ಕಾಂಗ್ರೆಸ್ ಸರ್ಕಾರ. ಪಕ್ಷದ ಅಧ್ಯಕ್ಷನಾಗಿ ಸರ್ಕಾರವನ್ನು ಸಮರ್ಥಿಸುವುದು ಹಾಗೂ ಜತೆಗೆ ನಿಲ್ಲುವುದು ನನ್ನ ಕರ್ತವ್ಯ. ನಮ್ಮಿಬ್ಬರ ನಡುವೆ ಎಲ್ಲ ಸರಿ ಇಲ್ಲ ಎಂಬ ಭಾವನೆ ಮೂಡುವುದಕ್ಕೂ ಕಾರಣವಿದೆ. ಪಕ್ಷ ಅಧಿಕಾರಕ್ಕೆ ಬಂದಾಗ ಕೆಪಿಸಿಸಿ ಅಧ್ಯಕ್ಷರನ್ನೇ ಮುಖ್ಯಮಂತ್ರಿಯಾಗಿ ಮಾಡುವ ಸಂಪ್ರದಾಯ ಕಾಂಗ್ರೆಸ್ನಲ್ಲಿದೆ. ಚುನಾವಣೆಗೆ ಮೊದಲಿನ ರಾಜಕೀಯ ವಾತಾವರಣದಲ್ಲಿ ಆ ಸ್ಪರ್ಧೆ ಇದ್ದಿದ್ದು ನಿಜ. ಆದರೆ ನಾನು ಚುನಾವಣೆಯಲ್ಲಿ ಸೋತಿದ್ದರಿಂದ ಸಿದ್ದರಾಮಯ್ಯನವರನ್ನು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ಆದರೆ ಅವರು ಸಿಎಂ ಆದ ನಂತರವೂ ನಾನು ಅದೇ ಮನೋಭಾವ ತೋರುವುದು ಸಾಧ್ಯವಿಲ್ಲ. ಅದರ ಜತೆಗೆ ಪಕ್ಷದ ಅಧ್ಯಕ್ಷನಾಗಿ ನನಗೂ ಕೆಲ ಜವಾಬ್ದಾರಿ ಇದೆ. ಸರ್ಕಾರ ಹೆಜ್ಜೆ ತಪ್ಪಿದಾಗ ತಿಳಿ ಹೇಳುವುದು ನನ್ನ ಜವಾಬ್ದಾರಿಯೂ ಹೌದು.
- ನೀವು ಮುಖ್ಯಮಂತ್ರಿಯಾಗಬೇಕೆಂಬ ಕನಸು ಕಟ್ಟಿದ್ದು ತಡವಾಯಿತು. ಅದಕ್ಕೆ ಬೇಕಾದ ಸಿದ್ಧತೆ ಇರಲಿಲ್ಲ ಎಂಬ ಭಾವನೆ ನಿಮ್ಮನ್ನು ಕಾಡಿಲ್ಲವೇ ?
ಇಲ್ಲ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನನಗೆ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವ ಜವಾಬ್ದಾರಿಯನ್ನು ಮೊದಲು ವಹಿಸಿದ್ದರು. ಆವರ ಆದೇಶ ಪಾಲನೆಗೆ ನಾನು ಶ್ರಮಿಸಿದೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ನೇಮಕಗೊಂಡ ಸಂದರ್ಭದಲ್ಲಿ ಪಕ್ಷಕ್ಕೆ ರಾಜ್ಯದಲ್ಲಿ ಆಶಾದಾಯಕ ವಾತಾವರಣ ಇರಲಿಲ್ಲ. 12 ವರ್ಷಗಳಿಂದ ಪಕ್ಷದ ಪದಾಧಿಕಾರಿಗಳ ನೇಮಕವಾಗಿರಲಿಲ್ಲ. ಅದನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಹಿರಿಯ ಮತ್ತು ಕಿರಿಯ ನಾಯಕರನ್ನು ಸರಿದೂಗಿಸಿಕೊಂಡು ಹೋಗುವ ಜವಾಬ್ದಾರಿ ಇತ್ತು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸಿದೆ. ಇದೆಲ್ಲ ಆಗುವುದಕ್ಕೆ ಮೊದಲೇ ನನಗೆ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇದೆ. ನಾನೇ ಮುಂದಿನ ಮುಖ್ಯಮಂತ್ರಿ ಎಂದು ಕನಸು ಕಟ್ಟುವುದಕ್ಕೆ, ಹೇಳಿಕೆ ನೀಡುವುದಕ್ಕೆ ಸಾಧ್ಯವಿಲ್ಲ. ಪಕ್ಷ ಅಧಿಕಾರಕ್ಕೆ ಬಂದಾಗ ನಾನೇ 'ಸಹಜ ನ್ಯಾಯ' ಸಿದ್ಧಾಂತದಲ್ಲಿ ಮುಖ್ಯಮಂತ್ರಿಯಾಗಬಲ್ಲೆ ಎಂಬ ವಿಶ್ವಾಸವಿತ್ತು. ಹೀಗಾಗಿ ಸಿದ್ಧತೆ ಇರಲಿಲ್ಲ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ.
ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ತಂದ ನೀವು, ಲೋಕಸಭಾ ಚುನಾವಣೆಯಲ್ಲೂ ಪಕ್ಷದ ಸಾರಥಿಯಾಗಿ ಮುಂದುವರಿಯಬೇಕೆಂಬ ಇಚ್ಛೆ ಹೊಂದಿದ್ದೀರಾ ?
ನಾನೊಬ್ಬ ನಿಷ್ಠಾವಂತ ಕಾಂಗ್ರೆಸಿಗ. ಪಕ್ಷದ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಅದಕ್ಕೆ ಬದ್ಧ. ಲೋಕಸಭಾ ಚುನಾವಣೆಗೆ ನಾನು ಈಗಾಗಲೇ ಸಿದ್ಧತೆ ಆರಂಭಿಸಿದ್ದೇನೆ. ನಿಮ್ಮ ನಾಯಕತ್ವದಲ್ಲೇ ಚುನಾವಣೆ ನಡೆಯಲಿ ಎಂದು ಹೈಕಮಾಂಡ್ ಬಯಸಿದರೆ ನಿಷ್ಠೆಯಿಂದ ದುಡಿಯುತ್ತೇನೆ.
ಬಿಜೆಪಿಯ ಭ್ರಷ್ಟ ಆಡಳಿತವನ್ನು ಮುಂದಿಟ್ಟುಕೊಂಡು ವಿಧಾನಸಭೆ ಚುನಾವಣೆ ಎದುರಿಸಿದಿರಿ. ಲೋಕಸಭೆಗೆ ಏನು ಮಾನದಂಡ ?
ಕೇಂದ್ರದ ಯುಪಿಎ ಸರ್ಕಾರ ಹಲವಾರು ಸಾಧನೆಯನ್ನು ಮಾಡಿದೆ. ವಿಶ್ವದ ಬಲಾಢ್ಯ ದೇಶಗಳ ಹಣಕಾಸಿನ ಬುಡ ಅಲುಗಾಡುತ್ತಿದೆ. ಆದರೆ ಚೀನಾದ ನಂತರ ಭಾರತದ ಆರ್ಥಿಕತೆ ಹೆಚ್ಚು ಸಬಲವಾಗಿದೆ. ಇದು ಯುಪಿಎ ಸರ್ಕಾರದ ಸಾಧನೆ. ಆಹಾರ ಭದ್ರತಾ ಕಾಯಿದೆ, ಭೂಸುಧಾರಣಾ ಕಾಯಿದೆ, ಆರ್ಟಿಐ, ಆರ್ಟಿಇ, ನರೇಗಾದಂಥ ಕೊಡುಗೆಗಳು ಯುಪಿಎ ಸಾಧನೆಯಲ್ಲವೇ ? ಅದರ ಜತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ಜನಪ್ರಿಯ ಯೋಜನೆಗಳನ್ನು ನೀಡಿದೆ. ಇದೆಲ್ಲವನ್ನೂ ಜನರ ಮುಂದಿಡುತ್ತೇವೆ. ಅಭಿವೃದ್ಧಿಯೇ ನಮ್ಮ ಮಂತ್ರ. ಆದರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಾಡುತ್ತಿರುವುದು ವೈಯಕ್ತಿಕ ಟೀಕೆ ಮಾತ್ರ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹಿತಿಗಳ ಮಾತಿಗೆ ಮಣೆ ಹಾಕುತ್ತಾರೆಂಬ ಆರೋಪ ನಿಮ್ಮ ಗಮನಕ್ಕೆ ಬಂದಿದೆಯೇ ?
ಅಂಥ ಯಾವುದೇ ವಿದ್ಯಮಾನ ನನ್ನ ಗಮನಕ್ಕೆ ಬಂದಿಲ್ಲ. ಸಾಹಿತಿಗಳ ಮಾತಿಗೆ ಮಣೆ ಹಾಕಿ ಸಿಎಂ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುತ್ತಾರೆಯೋ, ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಸಾಹಿತಿಗಳು, ಪ್ರಜ್ಞಾವಂತರು ಮುಖ್ಯಮಂತ್ರಿಗಳಿಗೆ ಸಲಹೆ ನೀಡುವುದು ತಪ್ಪಲ್ಲ. ಪಾಲಿಸುವುದು ಅವರಿಗೆ ಬಿಟ್ಟಿದ್ದು. ಸಲಹೆ ನೀಡುವ ಅಧಿಕಾರ ಎಲ್ಲರಿಗೂ ಇದೆ. ಆದರೆ ಸರ್ಕಾರ ಇದೆ ರೀತಿ ನಿರ್ಧಾರ ತೆಗೆದುಕೊಳ್ಳಬೇಕೆಂದು 'ಡಿಕ್ಟೇಟ್' ಮಾಡುವಂತಿಲ್ಲ. ಸಿದ್ದರಾಮಯ್ಯನವರು ಇಂಥದಕ್ಕೆಲ್ಲ ಅವಕಾಶ ನೀಡುವುದಿಲ್ಲ ಎಂದು ನಾನು ನಂಬಿದ್ದೇನೆ. ಅವರೊಬ್ಬ ಅನುಭವಿ ಹಾಗೂ ಜವಾಬ್ದಾರಿಯುತ ರಾಜಕಾರಣಿ. ಜತೆಗೆ ಪಕ್ಷ ಹಾಗೂ ಪ್ರಜೆಗಳಿಗೆ ಜವಾಬುದಾರರು.
ಜ್ಞಾನಪೀಠಿಗಳ ಬಗ್ಗೆ ಮಾತನಾಡಲ್ಲ ...
ಸಚಿವರ ಮೌಲ್ಯಮಾಪನ ಮಾಡುವ ನನ್ನ ನಿರ್ಧಾರವನ್ನು ಖಂಡಿಸಿ ಸಾಹಿತಿಗಳು ಬಹಿರಂಗ ಪತ್ರ ಬರೆದಿರುವುದನ್ನು ನಾನು ಪತ್ರಿಕೆಯಲ್ಲಿ ಓದಿದ್ದೇನೆ. ಅವರೆಲ್ಲ ದೊಡ್ಡ ವ್ಯಕ್ತಿಗಳು. ಜ್ಞಾನಪೀಠ ಪ್ರಶಸ್ತಿ ಪಡೆದವರು. ಅಂಥವರ ಬಗ್ಗೆ ಮಾತನಾಡುವ ಯೋಗ್ಯತೆ ನನಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹೇಳಿದ್ದಾರೆ. ನಾವು ಐಐಎಂ ತಜ್ಞರಿಂದ ಮೌಲ್ಯಮಾಪನ ಮಾಡಿಸುತ್ತೇವೆ. ಅವರೇನು ಸ್ವರ್ಗದಿಂದ ಇಳಿದು ಬಂದಿದ್ದಾರೆಯೇ ? ಎಂದು ಸಾಹಿತಿಗಳು ಪ್ರಶ್ನಿಸಿದ್ದಾರೆ. ನಾವ್ಯಾಕೆ ಐಐಎಂನ ಸಹಕಾರ ಪಡೆಯಬೇಕು ? ನಮಗೂ ಸ್ವಲ್ಪ ಓದು-ಬರಹ ಇದೆ ಎಂದು ವ್ಯಂಗ್ಯವಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷನಾಗಿ ನಾನು ಯಾವ ಕೆಲಸ ಮಾಡಬೇಕು ಎಂಬುದನ್ನು ಹೈಕಮಾಂಡ್ ನನಗೆ ನಿರ್ದೇಶಿಸಿದೆ. ಹೀಗಾಗಿ ಸರ್ಕಾರದ ಆಡಳಿತಾತ್ಮಕ ವ್ಯವಹಾರದಲ್ಲಿ ನಾನು ತಲೆ ಹಾಕುವುದಿಲ್ಲ. ಆದರೆ ಪಕ್ಷ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಹೇಳುವ ಅಧಿಕಾರ ಕೆಪಿಸಿಸಿ ಅಧ್ಯಕ್ಷನಾಗಿ ನನಗೆ ಇದೆ. ಈ ನಿಟ್ಟಿನಲ್ಲಿ ಮೌಲ್ಯಮಾಪನ ಮಾಡುವ ನಿರ್ಧಾರವನ್ನು ಹೈಕಮಾಂಡ್ ಸೂಚನೆ ಪ್ರಕಾರ ತೆಗೆದುಕೊಳ್ಳಲಾಗಿದೆ ಎಂದರು.
- ರಾಘವೇಂದ್ರ ಭಟ್