ಸೈನೈಡ್ ಮಲ್ಲಿಕಾಗೆ ಜೀವಾವಧಿ ಶಿಕ್ಷೆ
ಮಂಡ್ಯ: ಮಹಿಳೆಯರಿಗೆ ಸೈನೈಡ್ ನೀಡಿ ಕೊಂದು ಚಿನ್ನಾಭರಣ ದೋಚುತ್ತಿದ್ದ ಸೈನೈಡ್ ಮಲ್ಲಿಕಾ ಅಲಿಯಾಸ್ ಮಲ್ಲಿಕಾಗೆ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ರಾಮನಗರ ಜಿಲ್ಲೆ ಕಗ್ಗಲೀಪುರ ಹೋಬಳಿ ಲಕ್ಷ್ಮೀಪುರ ಗ್ರಾಮದ ಹನುಮಂತಪ್ಪ ಅವರ ಪತ್ನಿ ಮಲ್ಲಿಕಾ ವಿರುದ್ಧ ಆರು ವರ್ಷಗಳ ಹಿಂದೆ ಬೆಂಗಳೂರಿನ ಮಹಿಳೆಯೊಬ್ಬರಿಗೆ ಸೈನೈಡ್ ನೀಡಿ ಕೊಲೆ ಮಾಡಿ ಚಿನ್ನಾಭರಣ ದೋಚಿದ ಆರೋಪದಡಿ ವಿಚಾರಣೆ ನಡೆಸಿದ ನ್ಯಾಯಾಧೀಶ ಎ.ಎಸ್. ಬೆಳ್ಳುಂಕೆ ಅವರು ಮಂಗಳವಾರ ಶಿಕ್ಷೆ ವಿಧಿಸಿದ್ದಾರೆ. ಬೆಂಗಳೂರಿನ ಹೆಬ್ಬಾಳ ಸಮೀಪವಿರುವ ರಾಜೇಶ್ವರಿ ಬ್ಲಾಕ್ನ ನಿವಾಸಿಗಳಾದ ಮುನಿರಾಜು ಹಾಗೂ ಪಿಲ್ಲಮ್ಮ ಎಂಬವರು ದೇವಸ್ಥಾನ ಕಟ್ಟಿಸಲು ನಿರ್ಧರಿಸಿದ್ದರು. ಅವರಿಗೆ ಪರಿಚಯವಿದ್ದ ಸೈನೈಡ್ ಮಲ್ಲಿಕಾ ದೇವಸ್ಥಾನಕ್ಕೆ ಗೋಪುರ ಕಟ್ಟಿಸಿಕೊಡುವುದಾಗಿ ಹೇಳಿದ್ದಳು. ಜತೆಗೆ ಮದ್ದೂರು ಸಮೀಪವಿರುವ ವೈದ್ಯನಾಥಪುರದ ಗೋಪುರ ಚೆನ್ನಾಗಿದೆ. ಅದನ್ನು ನೋಡಿಕೊಂಡು ಬರೋಣವೆಂದು ಹೇಳಿ ಪಿಲ್ಲಮ್ಮ ಅವರೊಂದಿಗೆ 2007, ಡಿ.17ರಂದು ವೈದ್ಯನಾಥಪುರ ದೇವಸ್ಥಾನಕ್ಕೆ ಆಗಮಿಸಿದ್ದರು. ವೈದ್ಯನಾಥೇಶ್ವರ ದೇವಾಲಯ ಟ್ರಸ್ಟ್ನವರು ಪ್ರವಾಸಿಗರಿಗಾಗಿ ಕಟ್ಟಿಸಿರುವ ಭವನದ ಕೊಠಡಿ ಸಂಖ್ಯೆ 6ರಲ್ಲಿ ಇಬ್ಬರೂ ಉಳಿದುಕೊಂಡಿದ್ದರು. ಅಂದು ರಾತ್ರಿಯೇ ಮಲ್ಲಿಕಾ ತನ್ನ ಜತೆ ಬಂದಿದ್ದ ಪಿಲ್ಲಮ್ಮಳಿಗೆ ಸೈನೈಡ್ ನೀಡಿ ಕೊಲೆ ಮಾಡಿದ ಬಳಿಕ ಕೊಠಡಿಗೆ ಬೀಗ ಹಾಕಿಕೊಂಡು ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಳು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎ.ಎಸ್. ಬೆಳ್ಳುಂಕೆ ಅವರು ವಾದ ವಿವಾದ ಆಲಿಸಿ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಜೀವಾವಧಿ ಶಿಕ್ಷೆ, 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದರು.