ಈ ರೀತಿ ಆಗಿರಲಿಲ್ಲ...
ಬೆಂಗಳೂರು: ಯಾವತ್ತೂ ಈ ರೀತಿ ಆಗಿರಲಿಲ್ಲ... ಬಸ್ ದುರಂತ ಕುರಿತು ಜಬ್ಬಾರ್ ಟ್ರಾವೆಲ್ಸ್ನ ಸಹ ಮಾಲೀಕ ಜಮೀಲ್ ಜಬ್ಬಾರ್ ಹೇಳಿದ್ದು ಹೀಗೆ. ಜಬ್ಬಾರ್ ಪ್ರಕಾರ, 'ಚಾಲಕ ಫೀರೋಜ್ 20 ವರ್ಷಗಳ ಅನುಭವ ಹೊಂದಿದ್ದಾನೆ. ವೋಲ್ವೊ ಬಸ್ ಚಲಾಯಿಸಲು ವಿಶೇಷ ತರಬೇತಿ ಪಡೆದಿದ್ದಾನೆ. ಸುಮಾರು 40 ವರ್ಷಗಳಿಂದ ಜಬ್ಬಾರ್ ಟ್ರಾವೆಲ್ಸ್ ಕಾರ್ಯ ನಿರ್ವಹಿಸುತ್ತಿದೆ. 2010ರಲ್ಲಿ ಪ್ರಭಾಕರ್ ರೆಡ್ಡಿ ಎಂಬುವವರ ಮಾಲೀಕತ್ವದ ಮಲ್ಟಿ ಆಕ್ಸಲ್ ಬಸ್ನ್ನು ನಮ್ಮ ಟ್ರಾವೆಲ್ಸ್ಗೆ ಅಟ್ಯಾಚ್ ಮಾಡಿಕೊಳ್ಳಲಾಗಿದೆ'. ಬಸ್ನ್ನು ಪ್ರತಿ 25 ಸಾವಿರ ಕಿಲೋ ಮೀಟರ್ಗಳಿಗೊಮ್ಮೆ ವೋಲ್ವೊ ಸಂಸ್ಥೆಯಲ್ಲಿ ಸರ್ವೀಸ್ಗೆ ಬಿಡಲಾಗುತ್ತದೆ. ವೋಲ್ವೊ ಸಿಬ್ಬಂದಿ ಸರ್ವೀಸಿಂಗ್ ಹೊಣೆ ಹೊತ್ತಿರುತ್ತಾರೆ. 2010ರಲ್ಲಿ ನೋಂದಣಿಯಾಗಿರುವ ಬಸ್ ಇದುವರೆಗೂ 6.50 ಲಕ್ಷ ಕಿಲೋ ಮೀಟರ್ ಸಂಚರಿಸಿದೆ. ವಾಹನಕ್ಕೆ ಹಾಗೂ ಸಂಚರಿಸುವ ಪ್ರಯಾಣಿಕರಿಗೂ ವಿಮೆ ಇದೆ. ಫಿಟ್ನೆಸ್ ಪ್ರಮಾಣಪತ್ರವನ್ನು ಪಡೆಯಲಾಗಿದೆ. ಅಂತಾರಾಜ್ಯ ಸಂಚಾರಕ್ಕೆ ಅನುಮತಿಯನ್ನು ಪಡೆದುಕೊಳ್ಳಲಾಗಿದೆ. ಹೀಗಾಗಿ ಬಸ್ನಲ್ಲಿ ಯಾವುದೇ ಲೋಪದೋಷವಿಲ್ಲ. ಸಣ್ಣ-ಪುಟ್ಟ ಅಪಘಾತಗಳು ಬಿಟ್ಟರೆ ಇಂತಹ ದೊಡ್ಡ ಪ್ರಮಾಣದ ಅಪಘಾತ ಯಾವತ್ತೂ ಸಂಭವಿಸಿರಲಿಲ್ಲ ಎಂಬುದು ಜಬ್ಬಾರ್ ಅಭಿಪ್ರಾಯ.