ಟ್ರಾವೆಲ್ಸ್ ವಿರುದ್ಧ ಆಕ್ರೋಶ
ಬೆಂಗಳೂರು: ಅಪಘಾತಕ್ಕೀಡಾಗಿರುವ ಬಸ್ನಲ್ಲಿ ಪ್ರಯಾಣಿಸಿದವರ ಟಿಕೆಟ್ನ ರಸೀದಿ ಕೇಳಲು ಬಂದ ಸ್ನೇಹಿತರು ಹಾಗೂ ಕುಟುಂಬ ಸದಸ್ಯರಿಗೆ ಸೂಕ್ತ ಉತ್ತರ ನೀಡದ ಟ್ರಾವೆಲ್ಸ್ ಸಿಬ್ಬಂದಿ ವಿರುದ್ಧ ಪ್ರಯಾಣಿಕರ ಸಂಬಂಧಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇಂಡಿವರ್ ಇನ್ನೋವೇಶನ್ಸ್ನ ಸಂಸ್ಥೆಯಿಂದ ಐವರು, ಶ್ರೀಕೃಷ್ಣ ಹೆಸರಿನ ಪ್ರಯಾಣಿಕರ ಪೋಷಕರು, ಕೋಟೆ ಬೀದಿ ವೆಂಕಟೇಶ್ ಸಂಬಂಧಿಗಳು, ಬಾಪೂಜಿ ನಗರ ಹಜ್ಮತ್ ಉಲ್ಲಾ ಸಂಬಂಧಿಕರು, ಗುರಪ್ಪನಪಾಳ್ಯ ಆಸೀಫ್ ಅಹ್ಮದ್ ಸಂಬಂಧಿಕರು ಹಾಗೂ ಸ್ನೇಹಿತರು ಮಾಹಿತಿ ಪಡೆಯಲು ಜಬ್ಬಾರ್ ಟ್ರಾವೆಲ್ಸ್ನ ಕಚೇರಿ ಬಳಿ ಬಂದಿದ್ದರು. ಕೆಲವೇ ಪ್ರಯಾಣಿಕರ ಹೆಸರು ಮತ್ತು ಫೋನ್ ನಂಬರ್ಗಳನ್ನು ಮಾತ್ರ ಹೊಂದಿದ್ದ ಟ್ರಾವೆಲ್ಸ್ ಸಿಬ್ಬಂದಿ ಅಪಘಾತ ಸ್ಥಳದಿಂದ ಯಾವುದೇ ಮಾಹಿತಿ ಪಡೆದುಕೊಂಡಿರಲಿಲ್ಲ. ಅಲ್ಲದೇ ಬದುಕಿದವರು, ಮೃತರು ಯಾರು ಎನ್ನುವ ಮಾಹಿತಿ ನೀಡಲಿಲ್ಲ. ಹೀಗಾಗಿ ಕುಟುಂಬ ಸದಸ್ಯರು, ಸ್ನೇಹಿತರುಆಕ್ರೋಶ ವ್ಯಕ್ತಪಡಿಸಿದರು. 'ಬುಕ್ಕಿಂಗ್ ವೇಳೆ ಪ್ರಯಾಣಿಕರ ಹೆಸರು ಹಾಗೂ ದೂರವಾಣಿ ಸಂಖ್ಯೆಯನ್ನು ಮಾತ್ರ ಪಡೆದುಕೊಂಡಿರುತ್ತೇವೆ. ಇನ್ನು ಬಹುತೇಕ ಪ್ರಯಾಣಿಕರ ಮೊಬೈಲ್ ಫೋನ್ಗಳು ನಾಶವಾಗಿರುವುದರಿಂದ ಅವರ ವಿಳಾಸ ಸೇರಿದಂತೆ ಹೆಚ್ಚಿನ ಮಾಹಿತಿ ನಮಗೆ ಲಭ್ಯವಾಗಿಲ್ಲ' ಎಂದು ಜಬ್ಬಾರ್ ಟ್ರಾವೆಲ್ಸ್ ಸಿಬ್ಬಂದಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ನೂರಾರು ಸಂಖ್ಯೆಯಲ್ಲಿ ಜನ: ಬಸ್ಗೆ ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿದು ಕುತೂಹಲಕ್ಕಾಗಿ ನೂರಾರು ಜನ ಆಗಮಿಸುತ್ತಿದ್ದರು. ಹೀಗಾಗಿ ಕಚೇರಿ ಬಳಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಕಲಾಸಿಪಾಳ್ಯ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.