ಕನ್ನಡ ಸವಾರಿ...
ಉರ್ದು, ಮರಾಠಿ, ತೆಲುಗು ಪ್ರಭಾವದಿಂದ ಕನ್ನಡ ಕಳೆಗುಂದಿದ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಈಶಾನ್ಯ ಸಾರಿಗೆ ಸಂಸ್ಥೆ ಹೊಸ ಕಳೆ ನೀಡುತ್ತಿದೆ. ಮೊದಲೆಲ್ಲ ಬಸ್ ಹತ್ತಿದರೆ ಹಿಂದಿ, ಉರ್ದು ಮಿಶ್ರಿತ ಕನ್ನಡದಲ್ಲಿಯೇ ವ್ಯವಹರಿಸಬೇಕಿತ್ತು. ಆದರೆ ಈಗ ಅದೆಲ್ಲವೂ ಬದಲಾಗಿದೆ. ಲಕಲಕ ಹೊಳೆಯುವ ಬಸ್ಗಳ ಗೋಡೆಗಳಲ್ಲಿ ಕನ್ನಡಕ್ಕೆ ಜ್ಞಾನಪೀಠ ತಂದು ಕೊಟ್ಟವರ ಫೋಟೋಗಳು ಮಿಂಚುತ್ತಿವೆ. ಜತೆಗೆ ಕನ್ನಡದ ನುಡಿಮುತ್ತುಗಳು ರಾರಾಜಿಸುತ್ತಿವೆ. ಹೀಗಾಗಿ ಬಸ್ಸಿನ ತುಂಬೆಲ್ಲಾ ಈಗ ಕನ್ನಡ ನುಡಿಗಟ್ಟುಗಳದ್ದೇ ನೋಟ. ಈ ಬೆಳವಣಿಗೆ ಬಸ್ನ ಒಳಗಾದರೆ ಬಸ್ಗಳು ನಿಲ್ಲುವ ನಿಲ್ದಾಣಗಳಲ್ಲಂತೂ ಕನ್ನಡ ಗ್ರಂಥಾಲಯವನ್ನೇ ಸ್ಥಾಪಿಸಲಾಗಿದೆ. ಪ್ರಯಾಣಿಕರಿಗೆ ವಿವಿಧ ಮೂಲಭೂತ ಸೌಕರ್ಯ ಒದಗಿಸುವುದರ ಜತೆಗೆ ಹೈ-ಕ ವ್ಯಾಪ್ತಿಯ ಗುಲ್ಬರ್ಗ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲಾ ಕೇಂದ್ರ ಬಸ್ ನಿಲ್ದಾಣಗಳಲ್ಲಿ ಗ್ರಂಥಾಲಯಗಳನ್ನು ಪ್ರಾರಂಭಿಸಲಾಗಿದೆ. ನಿಲ್ದಾಣಗಳಿಗೆ ಬಂದವರು ಬಸ್ಗಳನ್ನು ಕಾಯುವ ಪ್ರಯಾಣಿಕರಿಗೆ ಓದಿನ ಹುಚ್ಚು ಹಿಡಿಸಿದೆ. ಇದರ ಜತೆಗೆ ನಗರ, ಪಟ್ಟಣಗಳಲ್ಲಿ ಶುರು ಮಾಡಿರುವ ನಗರ ಸಾರಿಗೆ ಸೇವೆಯಂತೂ ಜನಮನ ಸೂರೆಗೊಂಡಿದೆ. ಗುಲ್ಬರ್ಗದ ನೃಪತುಂಗ ಹೆಸರಿನ ನಗರ ಸಾರಿಗೆ, ಸೇಡಂನ ರಾಷ್ಟ್ರಕೂಟ ನಗರ ಸಾರಿಗೆಗಳಂತೂ ಲಾಭದ ದಾರಿಯಲ್ಲಿವೆ. ಇದೇ ರೀತಿ ವಿಜಾಪುರ (ವಿಜಯಪುರ), ರಾಯಚೂರು (ರಾಯರಥ), ಹೊಸಪೇಟೆ (ವಿಜಯರಥ) ಗಳಲ್ಲಿಯೂ ಸಂಸ್ಥೆ ಐತಿಹಾಸಿಕ ಹೆಸರುಗಳೊಂದಿಗೆ ಆರಂಭಿಸಿರುವ ನಗರ ಸಾರಿಗೆ ಸೇವೆ ಅಲ್ಲಿಯೂ ಜನಮನ ಸೆಳೆದಿದೆ. ಪ್ರಯಾಣಿಕರು ಕನ್ನಡೀಕೃತ ನಮ್ಮ ಹೊಸ ಪ್ರಯೋಗಗಳಿಗೆ ಸ್ಪಂದಿಸುತ್ತಿದ್ದಾರೆ. ಪ್ರಯಾಣಿಕರ ಸಹಕಾರವೇ ನಮಗೆ ಶ್ರೀರಕ್ಷೆ ಎನ್ನುತ್ತಾರೆ ಎನ್ಇಕೆಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ.
ಸಾರಿಗೆ ಸಂಸ್ಥೆ ನಿರ್ವಾಹಕನದಾಫ್ನ ಕನ್ನಡ ಪ್ರೀತಿ
ಸಾರಿಗೆ ಸಂಸ್ಥೆಯ ಬಸ್ನಲ್ಲಿ ಟಿಕೆಟ್ ನೀಡುವ ನಿರ್ವಾಹಕರೊಬ್ಬರು ಕನ್ನಡದ ಉಳಿವಿಗಾಗಿ ಸಾಹಿತ್ಯ ಕ್ಷೇತ್ರದಲ್ಲಿಯೂ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಹೌದು. ಎಲ್ಲರೂ ಹುಬ್ಬೇರಿಸುವಂಥ ಕೆಲಸವನ್ನು ಬಿಜಾಪುರದ ಬಸ್ ನಿವಾರ್ಹಕ ಎಂ.ಎನ್. ನದಾಫ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಬಸ್ನಲ್ಲಿ ಟಿಕೆಟ್ ನೀಡುವ ಜಂಜಾಟದ ಮಧ್ಯೆಯೂ ಕನ್ನಡ ಉಳಿವಿಗಾಗಿ ಬಿಡುವು ಮಾಡಿಕೊಂಡು ನದಾಫ್ 'ಭಾವ ತರಂಗ', 'ಸುಮರ್ಪಿತ', 'ಚಿತ್ರದ ಗೊಂಬೆ', 'ಭಾವ ಸ್ಪಂದನ' ಹಾಗೂ 'ಅರಳದ ಹೂವು' ಎಂಬ 5 ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. 'ಭಾವಸ್ಪಂದನ' ಎಂಬ ಚುಟುಕುಗಳ ಕೃತಿ 2013ರಲ್ಲಿ ನಡೆದ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆಗೊಂಡು ಕೇಂದ್ರ ಸಾಹಿತ್ಯ ಪರಿಷತ್ ಪ್ರಕಟಿಸಿದೆ. ಮೂಲತಃ ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೊಂಡಗೂಳಿ ಗ್ರಾಮದವರಾದ ನದಾಫ್ 1980ರಲ್ಲಿ ಬಿಎಂಟಿಸಿಯಲ್ಲಿ ಬಸ್ ನಿರ್ವಾಹಕರಾಗಿ ಸೇವೆ ಆರಂಭಿಸಿದರು. 1998ರಿಂದ ಬಿಜಾಪುರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಭಾಗದಲ್ಲಿ ಬಸ್ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿರುವ ನದಾಫ್ ಕಥೆ, ಕವನ, ಚೌಪದಿ ಚುಟುಕು ಇವೇ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಕನ್ನಡ ಬೆಳವಣಿಗೆಗೆ ತಮ್ಮದೇ ಆದ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ನದಾಫ್ ಕನ್ನಡ ಮಾಧ್ಯಮದಲ್ಲಿ ಓದಿ ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.