ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕನ್ನಡ ಸಾಹಿತ್ಯಕ್ಕೆ ಆತಂಕವಿದೆಯಾ?

Mainashree
Updated On : 31 Oct 2013, 11:31 am

ಇಂಗ್ಲಿಷ್ ಭಾಷೆ ಚೆನ್ನಾಗಿ ಬರುತ್ತಿದ್ದರೆ ಅದರಲ್ಲೇ ಬರೆಯಬಹುದು. ಕನ್ನಡಿಗರು 6 ಕೋಟಿ. ಅದರಲ್ಲಿ ಸಾಹಿತ್ಯ ಓದುವವರು ಎಷ್ಟು ಶೇಕಡ? ಇಂಗ್ಲಿಷ್ ಗೊತ್ತಿರುವವರು 40 ಕೋಟಿ. ದೇಶದ ಗಡಿ ದಾಟಿದರೆ ಇದರ ದುಪ್ಪಟ್ಟು ಮುಪ್ಪಟ್ಟು. ಹಣ ಬಾಚಿದಷ್ಟೂ ಮುಗಿಯುವುದಿಲ್ಲ. ಬೂಕರ್, ನೊಬೆಲ್‌ನಂತಹ ಬಹುಮೊತ್ತದ ಪ್ರಶಸ್ತಿಗಳ ಬಳಿಗೆ ಹೋಗುವುದು ಸಲೀಸು. ಕನ್ನಡದಲ್ಲಿ ಯಾಕೆ ಬರೆಯಬೇಕು?
ಅರವಿಂದ ಅಡಿಗ ಈ ಪ್ರಶ್ನೆಯನ್ನು ಮನಸ್ಸಲ್ಲೇ ಕೇಳಿಕೊಂಡಿದ್ದಾರೋ ಇಲ್ಲವೋ ಸ್ಪಷ್ಟವಿಲ್ಲ. ಕನ್ನಡದಲ್ಲೇ ಹುಟ್ಟಿ ಬೆಳೆದ ಅವರು ಕನ್ನಡದಲ್ಲಂತೂ ಬರೆಯುವುದಿಲ್ಲ. ಕುವೆಂಪು ಅವರನ್ನು ಜೇಮ್ಸ್ ಕಸಿನ್ಸ್ ಕನ್ನಡದಲ್ಲಿ ಬರೆಯಲು ಪ್ರೇರೇಪಿಸಿದರು ಎಂಬುದು ಕಥೆ. ಈಗ ಯಾರಾದರೂ ಹಾಗೆ ಬುದ್ಧಿ ಹೇಳಿದರೆ ಅವರಿಗೆ ಹೊಡೆಯುತ್ತಾರೆ. ಯಾರಿಗೆ ಬೇಕ್ರಿ ನಿಮ್ಮ ಕವಿತಾ? ಎಂಬುದು ಬೇಂದ್ರೆ ಪ್ರಶ್ನೆ. ಬೇಕಿದ್ರೆ ರೊಟ್ಟಿ ತಾ, ಬೆಣ್ಣಿ ತಾ ಎಂಬ ಉತ್ತರವೂ ಅವರಲ್ಲೇ ಇದೆ. ಬೇಯುವ ಬದುಕು ಬರೀ ಬೇಂದ್ರೆಯವರದಲ್ಲ, ನಮ್ಮೆಲ್ಲರದೂ. ಆದ್ದರಿಂದ ಅಂದಿನ ಅವರ ಪ್ರಶ್ನೆ ಇಂದಿನ ನಮ್ಮದೂ.
ಕನ್ನಡದ ಓದುಗ ಕನ್ನಡ ಸಾಹಿತ್ಯದಿಂದ ಯಾಕೆ ಪರಾರಿಯಾಗುತ್ತಿದ್ದಾನೆ? ಹುಡುಕಿದರೆ ನೂರೆಂಟು ಕಾರಣ ಸಿಗಬಹುದು. ನವ್ಯ ಸಾಹಿತ್ಯದ ಜಟಿಲತೆಯಿಂದ ವಿದ್ಯುನ್ಮಾನ ಮಾಧ್ಯಮಗಳ ಕುಟಿಲತೆಯವರೆಗೆ, ಶಿಕ್ಷಕರ ಸೋಮಾರಿತನದಿಂದ ಹೆತ್ತವರ ವ್ಯಾಪಾರಿತನದವರೆಗೆ, ಜೊಳ್ಳುಗಳ ಹೆಚ್ಚಳದಿಂದ ಪೊಳ್ಳುಗಳ ಮೆರವಣಿಗೆವರೆಗೆ, ಎಡಪಂಥದ ಕೂಗಾಟದಿಂದ ಬಲಪಂಥದ ತೂಗಾಟದವರೆಗೆ. ಪ್ರತಿ ಕಾರಣಕ್ಕೂ ಬೇರೆ ಬೇರೆ ಪರಿಹಾರವೇ ಬೇಕಲ್ಲ! ಕಾರಣಗಳು ಹೆಚ್ಚಾದಷ್ಟೂ ಪರಿಹಾರಗಳೂ ಹೆಚ್ಚು.
ಕನ್ನಡದ ಭವಿಷ್ಯದ ಓದುಗರಿಗೆ ಎಂಥ ಸಾಹಿತ್ಯ ಬೇಕು ಎನ್ನುವ ಪ್ರಶ್ನೆಯೂ ಜಟಿಲವಾದದ್ದು. ಅದು ಓದುಗನ ವೈಯಕ್ತಿಕ ಅಭಿರುಚಿಯನ್ನಷ್ಟೇ ಆಧರಿಸಿರುವುದಲ್ಲ. ಅದು ಆತನ ಜೀವನಶೈಲಿಯನ್ನೂ ಆಧರಿಸಿದೆ. ಆಧುನಿಕ ಬದುಕು ಯಾರಿಗೂ ಸಮಯವಿಲ್ಲದಂತೆ ಮಾಡಿಬಿಟ್ಟಿದೆ. ಗೃಹಿಣಿಯರಿಗೆ ಸಮಯ ಖಾಲಿ ಇದೆ ಎನ್ನುವಂತಿಲ್ಲ. ಅವರೂ ಯಾವುದಾದರೊಂದು ಕೆಲಸ, ಟಿವಿ ಇತ್ಯಾದಿ ಹಚ್ಚಿಕೊಂಡು ಬಿಟ್ಟಿರುತ್ತಾರೆ. ಹಾಗಂತ ಕೃಷಿಕರು ಖಾಲಿ ಇದ್ದಾರೆಯೆ? ಆ ಜನಾಂಗವನ್ನೇ ಸರ್ಕಾರಗಳು ನಾಶ ಮಾಡುತ್ತಾ ಬರುತ್ತಿದ್ದು, ಹೋರಾಟ ಅನಿವಾರ್ಯವಾಗುವಂತೆ ಮಾಡಿವೆ.
ಆಧುನಿಕ ಕನ್ನಡ ಓದುಗ ಕಥೆ, ಕಾದಂಬರಿ, ವಿಮರ್ಶೆ, ಕವಿತೆಗಳನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದ್ದಾನೆ. ಅದರಿಂದೇನು ಉಪಯೋಗ? ಈ ಪ್ರಶ್ನೆಯನ್ನು ಎಲ್ಲರೂ ಇಂದು ಕೇಳುತ್ತಿದ್ದಾರೆ. ಆದ್ದರಿಂದ ಇದೇ ಉಪಯುಕ್ತತೆಯ ಮಾಪನವನ್ನೇ ಸಾಹಿತ್ಯಕ್ಕೂ ಅಳವಡಿಸಬೇಕಾಗಿದೆ. ಇದನ್ನು ಹೇಳಿದರೆ ವಿಮರ್ಶಕರಿಗೂ ಮೀಮಾಂಸಕರಿಗೂ ಸಿಟ್ಟು ಬರುತ್ತದೆ. ಆ ಸಿಟ್ಟನ್ನೂ ಅರ್ಥವಾಗುವಂತೆ ವ್ಯಕ್ತಮಾಡಲು ಅವರಿಗೆ ಬರುವುದಿಲ್ಲ. ಈ ನಿಟ್ಟಿನಲ್ಲಿ ಇಬ್ಬರು ಹಿರಿಯ ಸಾಹಿತಿಗಳ ಸಾಹಿತ್ಯ ನಮಗೆ ತೋರುಗಂಬ ಆಗಬಹುದು.
ಅವರು- ಪೂರ್ಣಚಂದ್ರ ತೇಜಸ್ವಿ ಮತ್ತು ನಾಗೇಶ ಹೆಗಡೆ. ತೇಜಸ್ವಿ ಪರಿಸರದ ಪ್ರಶ್ನೆಗಳನ್ನು ಎತ್ತಿಕೊಂಡು ಸರಳವಾದ ಭಾಷೆ, ಅಕರ್ಷಕವಾದ ಶೈಲಿಯಲ್ಲಿ ಕಥನ ಕ್ರಮದ ಮೂಲಕ ಓದುಗರಿಗೆ ಉಣಿಸಿದರು. ಇದು ಅವರ ಓದುಗ ಬಳಗವನ್ನೂ ವಿಸ್ತರಿಸಿತು. ಸಾಪ್ಟ್‌ವೇರ್ ಹುಡುಗರು ಕುವೆಂಪುವನ್ನು ಓದಿದವರಲ್ಲ, ಆದರೆ ಅವರಿಗೆ ತೇಜಸ್ವಿ ಗೊತ್ತು. ನಾಗೇಶ ಕೂಡ ಇದನ್ನೇ ವಿಜ್ಞಾನದ ವಿಚಾರದಲ್ಲಿ ಮಾಡಿದರು.
ನಮ್ಮ ಓದುಗನಿಗೆ ಆರೋಗ್ಯ, ಅಡುಗೆ, ಕಂಪ್ಯೂಟರ್, ಕಸೂತಿ, ವಿಜ್ಞಾನ ಎಲ್ಲದರ ಬಗ್ಗೆಯೂ ಓದು ಬೇಕು. ಆದರೆ ಅದು ರುಚಿಕಟ್ಟಾಗಿರಬೇಕು. ಬಳಸುವ ಭಾಷೆ, ತಿರುಳೂ ಸಂಪನ್ನವಾಗಿರಬೇಕು. ಓದುಗರ ನಾಡಿಮಿಡಿತ ಬಲ್ಲ, ಅವರನ್ನು ವಿಚಾರಪ್ರವಾಹದಲ್ಲಿ ಕೊಂಡೊಯ್ಯಬಲ್ಲ, ತಂತ್ರಜ್ಞಾನದ ಹೊಸ ನದಿಗಳ ಪಾರಂಗತರಾದ, ಕನ್ನಡ ನುಡಿಯ ದಿಗಂತಗಳನ್ನು ವಿಸ್ತರಿಸಬಲ್ಲ ಪ್ರಖರ ಪ್ರತಿಭೆಗಳಿಗಾಗಿ ಕನ್ನಡ ಕಾದಿದೆ. ನನಗಂತೂ ಈ ಬಗ್ಗೆ ಆಶಾವಾದವಿದೆ.
ಈಗ ಲೇಖನದ ಮೊದಲು ಎತ್ತಿದ ಪ್ರಶ್ನೆಗೆ ಬರುವುದಾದರೆ, ಯಾರಾದರೂ ಓದಬೇಕೆಂದು ನಾವು ಬರೆಯಬೇಕೆ ಎಂಬ ಮೂಲಭೂತ ಪ್ರಶ್ನೆ ಎದುರಾಗುತ್ತದೆ. ಉಪಯುಕ್ತತೆಯನ್ನು ಮೂಲವಾಗಿಟ್ಟುಕೊಂಡು ಬರೆಯುವ ಬರಹಗಳಿಗೆ ಈ ಪ್ರಶ್ನೆ ಬಾಧಿಸದು. ಯಾಕೆಂದರೆ ಅವುಗಳಿಗೆ ಓದುಗರಿದ್ದೇ ಇರುತ್ತಾರೆ. ಕಥೆ ಕವಿತೆಗಳಂಥ ಪ್ರಕಾರಗಳಿಗೆ ನಿಷ್ಠರಾಗಿದ್ದವರಿಗೆ ಮಾತ್ರ ಇದು ಕಾಡುವುದು. ಆದರೆ ಅವರೂ ಹೆದರಬೇಕಿಲ್ಲ. ನಮ್ಮಂಥ ನರಮನುಷ್ಯರಿರುವರೆಗೆ ನಮ್ಮ ಭಾವನೆಗಳನ್ನು ಹಂಚಿಕೊಳ್ಳುವವರೂ ಇರುತ್ತಾರೆ ಎಂಬ ಸಮಾಧಾನ. ಅದೇ ಎಲ್ಲ ಸಾಹಿತ್ಯದ ಉತ್ಪಾದನೆಯ ಹಿಂದಿನ ಮೂಲಧಾತು.


ಹರೀಶ್ ಎಲಿಮಲೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement