ಕನ್ನಡದ 'ಆಟೋ ತೇರು'
ಕನ್ನಡ ರಾಜ್ಯೋತ್ಸವವೇ ಇರಲಿ ಅಥವಾ ಕನ್ನಡಪರ ಹೋರಾಟವೇ ಇರಲಿ ಹೊಟ್ಟೆಪಾಡಿಗಾಗಿ ಓಡಿಸುವ ಆಟೋ ನಿಲ್ಲಿಸಿ, ಕನ್ನಡಪರ ಹೋರಾಟಕ್ಕೆ ಮೀಸಲಿಟ್ಟಿರುವ ಆಟೋ ಏರಿ ಭಾಷೆ, ಜಲ, ನೆಲದ ಉಳಿವಿನ ಜಾಗೃತಿಗಾಗಿ ನಗರವೆಲ್ಲ ಸುತ್ತುತ್ತಾರೆ ಹುಬ್ಬಳ್ಳಿಯ ಶೇಖರಯ್ಯ ಮಠಪತಿ.
42 ವರ್ಷದ ಶೇಖರಯ್ಯ ಮಠಪತಿಯದ್ದು ಬಡ ಕುಟುಂಬ. ದಿನವಿಡಿ ಆಟೋ ಓಡಿಸಿ ಬಂದ ಹಣದಲ್ಲಿಯೇ ಪತ್ನಿ, ಮೂವರು ಮಕ್ಕಳ ಸಂಸಾರದ ನೌಕೆ ಸಾಗಬೇಕು. ಆದರೂ ಕನ್ನಡ ಭಾಷೆಯ ವಿಷಯ ಬಂದಾಗ ಈ ಕುಟುಂಬದಲ್ಲಿ ಅಭಿಮಾನದ ಸಿರಿವಂತಿಕೆ ಕಾಣುತ್ತದೆ. ರಾಜ್ಯೋತ್ಸವ ಅಥವಾ ಇನ್ನಾವುದೇ ಕನ್ನಡಪರ ಹೋರಾಟದ ಸಂದರ್ಭ ಇಡೀ ಕುಟುಂಬ ವರ್ಗ ಸೇರಿ ಆಟೋ ಸಿದ್ಧಗೊಳಿಸುತ್ತಾರೆ. ಮೇಲ್ಭಾಗ ಇರದ ಹಳದಿ ಮತ್ತು ಕೆಂಪು ಬಣ್ಣದ ಆಟೋಕ್ಕೆ 10 ಮೀಟರ್ ಅಗಲ ಹಾಗೂ 7 ಮೀಟರ್ ಉದ್ದದ ಬಾವುಟ ಕಟ್ಟಿ, ಆಟೋದ ಹಿಂಭಾಗದಲ್ಲಿ 8-10 ಅಡಿ ಎತ್ತರದ ತಾಯಿ ಭುವನೇಶ್ವರಿಯ ಭಾವಚಿತ್ರ ಲಗತ್ತಿಸಿ, ಇಡೀ ನಗರ ಸುತ್ತುತ್ತಾರೆ ಶೇಖರಯ್ಯ.
1993ರಿಂದ ಬಾಡಿಗೆ ಆಟೋ ಚಲಾಯಿಸುತ್ತಿದ್ದ ಶೇಖರಯ್ಯ, 1995ರಲ್ಲಿ ಸೆಕೆಂಡ್ ಹ್ಯಾಂಡ್ ಆಟೋ ಖರೀದಿಸಿದ್ದರು. 2007ರಲ್ಲಿ ಹೊಸ ಆಟೋ ಖರೀದಿಸಿದಾಗ ಹಳೇ ಆಟೋ ಮಾರಾಟ ಮಾಡದೆ ಕನ್ನಡಪರ ಹೋರಾಟ, ಆಚರಣೆಗಳಿಗೆ ಬಳಸಲು ನಿರ್ಧರಿಸಿದರು. ಅಂದಿನಿಂದ ಪ್ರತಿ ರಾಜ್ಯೋತ್ಸವದ ದಿನದಂದು ಈ ಆಟೋ ಹುಬ್ಬಳ್ಳಿಯ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಸಂಚರಿಸುತ್ತದೆ. ಸ್ವಂತ ಹಣ ಖರ್ಚು ಮಾಡಿ 30 ಕಿಮೀಗೂ ಹೆಚ್ಚು ಇವರ ಆಟೋ ಓಡಾಡುತ್ತದೆ.
ರಾಜ್ಯೋತ್ಸವ ಬಂತೆಂದರೆ ಮುಂಚಿನ ಮೂರ್ನಾಲ್ಕು ದಿನಗಳಿಂದ ಶೇಖರಯ್ಯ ಮಠಪತಿ ಅವರ ಹೊಟ್ಟೆಪಾಡಿಗಾಗಿ ಸಂಚರಿಸುವ ಆಟೋಕ್ಕೆ ಸಂಪೂರ್ಣ ವಿಶ್ರಾಂತಿ. ಈ ದಿನಗಳಲ್ಲಿ ಆಟೋ ಬಾಡಿಗೆ ಓಡಿಸದೇ ಕನ್ನಡಪರ ಹೋರಾಟ ಹಾಗೂ ಆಚರಣೆಗಳಿಗೆ ಮೀಸಲಿಟ್ಟಿರುವ ಮತ್ತೊಂದು ಆಟೋವನ್ನು ಸಿಂಗರಿಸುವ ಕೆಲಸದಲ್ಲಿ ಕುಟುಂಬದ ಜನರೊಂದಿಗೆ ತೊಡಗಿಸಿಕೊಳ್ಳುತ್ತಾರೆ. ರಾಜ್ಯೋತ್ಸವ ದಿನದಂದು ಕನ್ನಡ ಭಾಷೆ, ನೆಲ, ಜಲದ ರಕ್ಷಣೆಗಾಗಿ ಜನಜಾಗೃತಿ ಮೂಡಿಸಲು ಶೇಖರಯ್ಯ ಮಠಪತಿ ಮಾಡುವ ಪ್ರಯತ್ನ ಮನಗಂಡ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ 2007ರಂದು 'ಧೀಮಂತ ಪ್ರೋತ್ಸಾಹ' ಪ್ರಶಸ್ತಿ ನೀಡಿ ಗೌರವಿಸಿದೆ. ಕನ್ನಡದ ಮೇರು ನಟ ದಿ. ಡಾ. ರಾಜ್ಕುಮಾರ ಅವರ ಕಟ್ಟಾ ಅಭಿಮಾನಿಯಾಗಿರುವ ಶೇಖರಯ್ಯ ಅವರಿಗೆ ಡಾ. ರಾಜ್ ಅವರ ಚಲನಚಿತ್ರಗಳೇ ಕನ್ನಡದ ಬಗ್ಗೆ ಇಷ್ಟೊಂದು ಅಭಿಮಾನ, ಪ್ರೀತಿ ಬೆಳೆಯಲು ಕಾರಣವಂತೆ.
ಕರುನಾಡಿಗೆ 'ಚಿತ್ರ' ನಮನ
ಕನ್ನಡ ಭಾಷೆಯ ಪ್ರೀತಿ ಲಾಭ-ನಷ್ಟಕ್ಕಿಂತಲೂ ಮಿಗಿಲಾಗಿದೆ. ಈ ಮಾತಿಗೆ ಹಾವೇರಿ ಜಿಲ್ಲೆಯ ಹಿರೇಕೆರೂರಿನ ಕುಮಾರೇಶ್ವರ ಚಲನಚಿತ್ರ ಮಂದಿರದ ಶೆಟ್ಟರ್ ಪರಿವಾರವೇ ಅತ್ಯುತ್ತಮ ನಿದರ್ಶನ.
ನವೆಂಬರ್ನಲ್ಲಿ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸಲು ಸರ್ಕಾರ ಆದೇಶಿಸಿದರೂ ಲಾಭಕ್ಕಾಗಿ ಅನ್ಯ ಭಾಷಾ ಚಿತ್ರಗಳನ್ನು ಚಿತ್ರಮಂದಿರಗಳ ಮಾಲೀಕರು ಪ್ರದರ್ಶಿಸುತ್ತಾರೆ. ಅವರ ಮುಂದೆ ಶೆಟ್ಟರ್ ಪರಿವಾರದ್ದು ಲಾಭವನ್ನು ಮೀರಿದ ನೈಜ ಕನ್ನಡ ಸೇವೆ. ಕಳೆದ ಐದು ದಶಕಗಳಿಂದ ಕನ್ನಡ ಭಾಷಾ ಚಲನಚಿತ್ರಗಳನ್ನೇ ಪ್ರದರ್ಶಿಸುವ ಇವರು ಸದ್ದಿಲ್ಲದೆ ಕನ್ನಡಾಂಬೆಗೆ ವಂದಿಸುತ್ತಿದ್ದಾರೆ. ಬಸವಣ್ಣ ನಾಶಿಪುಡಿ ಎಂಬವರ ಮಾಲೀಕತ್ವದಲ್ಲಿದ್ದ ಕೃಷ್ಣ ಚಿತ್ರಮಂದಿರವನ್ನು 1966ರಲ್ಲಿ ಖರೀದಿಸಿದ ಶಿವಲಿಂಗಪ್ಪ ದುಂಡಪ್ಪ ಶೆಟ್ಟರ್ 'ಕುಮಾರೇಶ್ವರ' ಎಂದು ಮರುನಾಮಕರಣ ಮಾಡಿದರು. ಕನ್ನಡ ಭಾಷಾಭಿಮಾನಿಯಾಗಿದ್ದ ಶಿವಲಿಂಗಪ್ಪ ಕನ್ನಡಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ದೃಢ ನಿರ್ಧಾರದೊಂದಿಗೆ ಈ ಚಿತ್ರಮಂದಿರವನ್ನು ಕನ್ನಡ ಚಿತ್ರಗಳಿಗೆ ಮಾತ್ರ ಮೀಸಲಿಟ್ಟರು. ಇದೀಗ ಚಿತ್ರಮಂದಿರವನ್ನು ಶಿವಲಿಂಗಪ್ಪ ಅವರ ಪುತ್ರ ಶಂಭಣ್ಣ ನಡೆಸಿಕೊಂಡು ಹೊರಟಿದ್ದು, ಅವರೂ ಕನ್ನಡಾಭಿಮಾನ ಮೆರೆಯುತ್ತಿದ್ದಾರೆ.