ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕನ್ನಡದ ನುಡಿಮುತ್ತು ಆಡಳಿತದಲ್ಲಿ ಪೋಣಿಸಿ

ಕರ್ನಾಟಕ ರಾಜ್ಯವಾಗಿ 60 ವರ್ಷಗಳು ಸಮೀಪಿಸುತ್ತ ಬಂದಿವೆ. ಆದರೂ ಸರ್ಕಾರದ ಒಳಗಿರುವ ಹಾಗೂ...

Mainashree
Updated On : 1 Nov 2013, 12:24 pm

5 ವರ್ಷಗಳಿಗೊಮ್ಮೆ ಅಧಿಕಾರಕ್ಕೆ ಬರುವ ಪಕ್ಷಗಳು ಕನ್ನಡ ಮಂತ್ರ ಪಠಿಸುತ್ತಲೇ ಬಂದಿವೆ. ಶೌರ್ಯದ ಮಾತುಗಳನ್ನು ಆಡುತ್ತಲೇ ಬಂದಿವೆ. ಆದರೆ, ಅವುಗಳಿಂದ ಇದುವರೆಗೂ ಕನ್ನಡದ ಕೆಲಸವಾಗದೇ ಇರುವುದು ವಿಪರ್ಯಾಸ

ಕರ್ನಾಟಕ ರಾಜ್ಯವಾಗಿ 60 ವರ್ಷಗಳು ಸಮೀಪಿಸುತ್ತ ಬಂದಿವೆ. ಆದರೂ ಸರ್ಕಾರದ ಒಳಗಿರುವ ಹಾಗೂ ಹೊರಗಿರುವರಿಬ್ಬರೂ ಕನ್ನಡ ಆಡಳಿತ ಭಾಷೆಯಾಗಬೇಕೆಂದು ಪಠಿಸುತ್ತಲೇ ಇದ್ದಾರೆ. ನಮಗೆ ಕನ್ನಡದ ಬಗ್ಗೆ ಇರಬೇಕಾದ ಸಹಜ ಅಭಿಮಾನ ಇದ್ದಿದ್ದರೆ ಈ ರೀತಿ ಪಠಿಸಬೇಕಾದ ಅವಶ್ಯಕತೆ ಇರಲಿಲ್ಲ.
ಕನ್ನಡ ಭಾಷೆ ಭಾರತದ ಭಾಷೆಗಳಲ್ಲಿಯೇ ಪುರಾತನವಾದದ್ದು. ಇದರ ಸಮೀಪದಲ್ಲಿ ತಮಿಳು ಭಾಷೆ ಇದೆ. ಮಿಕ್ಕುಳಿದ ಭಾಷೆಗಳು ನಂತರ ಬಂದಿವೆ. ಕನ್ನಡ ಭಾಷೆ ಜಗತ್ತಿನ ಪ್ರಾಚೀನ ಭಾಷೆಗಳಲ್ಲೊಂದು. ಜಗತ್ತಿನ 20 ಪ್ರಮುಖ ಭಾಷೆಗಳಲ್ಲಿ ಕನ್ನಡ ಭಾಷೆಯೂ ಒಂದು.
ಕರ್ನಾಟಕದಲ್ಲಿ ಕನ್ನಡ ರಕ್ಷಿಸಲು ಒಂದು ಕಾವಲು ಸಮಿತಿ ಇದೆ. ಮಹಾರಾಷ್ಟ್ರ, ಕೇರಳ ಹಾಗೂ ತಮಿಳುನಾಡುಗಳಲ್ಲಿ ಅಲ್ಲಿಯ ಮಾತೃ ಭಾಷೆಗಳನ್ನು ಕಾವಲು ಮಾಡಲು ಕಾವಲು ಸಮಿತಿಗಳು ಇಲ್ಲ. ಆದರೂ ಅಲ್ಲಿಯ ಆಡಳಿತದಲ್ಲಿ ಮಾತೃ ಭಾಷೆಯ ಆಡಳಿತ ಭಾಷೆಯಾಗಿದೆ. ಕರ್ನಾಟಕದಲ್ಲಿ ಮಾತ್ರ ನಾವು ಕನ್ನಡ ಆಡಳಿತ ಭಾಷೆಯಾಗಬೇಕು, ಶೈಕ್ಷಣಿಕ ಭಾಷೆಯಾಗಬೇಕು ಎಂದು ಪಠಿಸುತ್ತಲೇ ಇದ್ದೇವೆ.
1960ರಿಂದ ಇದುವರೆಗಿನ 50ಕ್ಕಿಂತಲೂ ಹೆಚ್ಚು ವರ್ಷಗಳಿಂದ ನಮ್ಮ ಸರ್ಕಾರಗಳು ಕನ್ನಡವನ್ನು ಆಡಳಿತ ಭಾಷೆ ಮಾಡಬೇಕೆಂದು 350 ಪರಿಪತ್ರ ಹೊರಡಿಸಿವೆ. ಅಲ್ಲಿಂದ ಇಲ್ಲಿಯವರೆಗೆ ಆ ಮಂತ್ರವನ್ನು ಪಠಿಸುವುದೇ ಆಗಿದೆ. 5 ವರ್ಷಗಳಿಗೊಮ್ಮೆ ಅಧಿಕಾರಕ್ಕೆ ಬರುವ ಪಕ್ಷಗಳು ಕನ್ನಡ ಮಂತ್ರ ಪಠಿಸುತ್ತಲೇ ಬಂದಿವೆ. ಶೌರ್ಯದ ಮಾತುಗಳನ್ನು ಆಡುತ್ತಲೇ ಬಂದಿವೆ. ಆದರೆ, ಅವುಗಳಿಂದ ಇದುವರೆಗೂ ಕನ್ನಡದ ಕೆಲಸವಾಗದೇ ಇರುವುದು ವಿಪರ್ಯಾಸ.
ಫ್ರಾನ್ಸ್, ಜರ್ಮನ್, ಥಾಯ್ಲೆಂಡ್, ರಷ್ಯಾಗಳಲ್ಲಿ ಅಲ್ಲಿನ ಭಾಷೆ ರಕ್ಷಿಸಲು ಯಾವುದೇ ಸಮಿತಿಗಳು ಇಲ್ಲ. ಆ ದೇಶದ ಜನತೆಯಲ್ಲಿ ತಮ್ಮ ಭಾಷೆಗಳ ಬಗ್ಗೆ ಇರುವ ಸಹಜ ಪ್ರೀತಿ ಅವುಗಳಿಗೆ ಬಹುದೊಡ್ಡ ರಕ್ಷಣೆ ಒದಗಿಸಿದೆ. ಭಾಷಾ ಪರಿಶುದ್ಧತೆ ಬಗ್ಗೆ ಫ್ರೆಂಚ್, ಜರ್ಮನಿ, ರಷ್ಯಾ ಹಾಗೂ ಥಾಯ್ಲೆಂಡ್ ಜನರು ಇರಿಸಿಕೊಂಡಿರುವ ಸಹಜ ಪ್ರೀತಿ ಅಲ್ಲಿಯ ಭಾಷೆಗಳನ್ನು ಬೆಳೆಸಿದೆ.
ಕನ್ನಡ ಭಾಷೆಯ ಬಗ್ಗೆ ಅಂಥ ಅಭಿಮಾನ ಇಲ್ಲಿಯ ಜನರಲ್ಲಿ ಇಲ್ಲ. ತಮ್ಮ ಭಾಷೆಯಲ್ಲಿ ಗ್ರಂಥ ರಚನೆ 7ನೇ ಶತಮಾನದಷ್ಟು ಹಿಂದೆ ನಡೆದಿತ್ತೆಂಬುದನ್ನು ಕನ್ನಡಿಗರು ಅರಿಯರು. ಅವರು ಮೋಹಗೊಂಡಿರುವ ಇಂಗ್ಲಿಷ್‌ನಲ್ಲಿ ಗ್ರಂಥರಚನೆ 14ನೇ ಶತಮಾನದಲ್ಲಿ ಆಗಿದೆ. 7ನೇ ಶತಮಾನದ 'ವಡ್ಡಾರಾಧನೆ' ಕನ್ನಡದ ಪ್ರಥಮ ಗ್ರಂಥ. 14ನೇ ಶತಮಾನದ 'ಕೆಂಟ್‌ಬೆರಿ ಟೇಲ್ಸ್‌' ಇಂಗ್ಲಿಷ್‌ನ ಪ್ರಥಮ ಗ್ರಂಥ. 'ಕವಿರಾಜಮಾರ್ಗ'ವು ಕನ್ನಡದ ಪ್ರಥಮ ಲಾಕ್ಷಣಿಕ ಗ್ರಂಥ. ಇಂಥ ಗ್ರಂಥ ಇನ್ನಾವ ಭಾಷೆಯಲ್ಲಿಯೂ ಇಲ್ಲ. ಕನ್ನಡ ಭಾಷೆಯ ಪದಗಳು 2ನೇ ಶತಮಾನದ ಗ್ರೀಕ್ ನಾಟಕದಲ್ಲಿ ಇವೆ ಎಂದು ಭಾಷಾ ಪಂಡಿತರಾದ ಫಾದರ್ ಹೆರಾಸ್, ಮಂಜೇಶ್ವರ ಗೋವಿಂದ ಪೈ ಮತ್ತು ಪ್ರೊ.ಬಿ.ಎ. ಸುಲ್ವಿಕೋರೆ ಹೇಳುತ್ತಾರೆ. ಅಷ್ಟೇ ಏಕೆ, ಕನ್ನಡಕ್ಕೆ ಕ್ರಿಸ್ತ ಪೂರ್ವದ ಇತಿಹಾಸ ಇದೆ.
ಇಂಗ್ಲಿಷ್ ಕಲಿಯದಿದ್ದರೆ ಆಕಾಶವೇ ತಲೆ ಮೇಲೆ ಬೀಳುತ್ತದೆಂಬ ಭಾವನೆ ಕನ್ನಡಿಗರಲ್ಲಿದೆ. ಈ ಭಾವನೆ ಜನರಲ್ಲಿ ಬೆಳೆಯಲು ಬುದ್ಧಿವಂತರೆನಿಸಿಕೊಂಡವರು ಹಾಗೂ ಸರ್ಕಾರಿ ಅಧಿಕಾರಿಗಳು ಕಾರಣ. ಮನುಷ್ಯ ಬದುಕಬೇಕಾದರೆ ಆಹಾರ ಸೇವಿಸಬೇಕಾಗುತ್ತದೆ. ಭಾಷೆ ಕೂಡ ಮನುಷ್ಯನಂತೆ ಇದೆ. ಪ್ರೀತಿ ಇದ್ದಾಗ ಮಾತ್ರ ದಾಂಪತ್ಯದ ಬೆಸುಗೆ ಗಟ್ಟಿಗೊಳ್ಳುತ್ತದೆ. ಅದೇ ರೀತಿ ಭಾಷೆಯ ಬಗ್ಗೆ ಪ್ರೀತಿ ಇದ್ದರೆ ಮಾತ್ರ ಆ ಭಾಷೆ ಉಳಿಯಲು ಹಾಗೂ ಬೆಳೆಯಲು ಸಾಧ್ಯ.

- ನಾಡೋಜ ಡಾ. ಪಾಟೀಲ ಪುಟ್ಟಪ್ಪ
ಹಿರಿಯ ಪತ್ರಕರ್ತ ಹಾಗೂ ಸಾಹಿತಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement