ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕರ್ನಾಟಕದಲ್ಲಿ ಕನ್ನಡವೇ ಧರ್ಮವಾಗಲಿ: ಕಯ್ಯಾರ

Mainashree
Updated On : 31 Oct 2013, 11:15 am

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ,
ಕರ್ನಾಟಕದಲ್ಲಿ ಕನ್ನಡವೇ ಎಲ್ಲರ ಧರ್ಮವಾಗಲಿ. ಕನ್ನಡಕ್ಕೆ ಶ್ರದ್ಧೆಯಿಂದ ಕೆಲಸ ಮಾಡುವವರನ್ನು ಸದಾ ಕೊಂಡಾಡುತ್ತೇನೆ. ನಮ್ಮ ಧರ್ಮವನ್ನು ಹೇಗೆ ನಿತ್ಯ ಆಚರಿಸುತ್ತೇವೆಯೋ ಅದೇ ರೀತಿ ಕನ್ನಡವೇ ನಮ್ಮ ಧರ್ಮ ಎಂದು ಬದುಕಬೇಕು. ಈ ಮೂಲಕ ಕನ್ನಡ ರಾಜ್ಯಕ್ಕೆ ಒಳ್ಳೆಯದಾಗಲಿ. ಕನ್ನಡ ರಾಜ್ಯಕ್ಕಾಗಿ ಮಾಡುವ ಕೆಲಸ ಸ್ಮರಣೀಯ.
ಪ್ರತಿ ಗ್ರಾಮ, ತಾಲೂಕು, ಜಿಲ್ಲೆಯಲ್ಲಿ ಕನ್ನಡ ಪರ ಕೆಲಸಗಳಾಗಬೇಕು. ಆಗ ಅಖಂಡ ಕನ್ನಡ ರಾಜ್ಯ ಸ್ಥಾಪನೆ ಆಗುವುದು ಖಂಡಿತ. ಕನ್ನಡ ಕುರಿತು ಸಮೃದ್ಧವಾಗಿ ಚರ್ಚಿಸಬೇಕು. ಎಲ್ಲರೂ ಕನ್ನಡ ರಾಜ್ಯ ಆಗಬೇಕು ಎಂಬ ಹೋರಾಟ ನಡೆಸಬೇಕು. ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕು ಎನ್ನುವ ಕೂಗು ಬಹಳ ಕಾಲದಿಂದ ರೂಢಿಯಲ್ಲಿದೆ. ಇದಕ್ಕೆ ವಿರುದ್ಧವಾದ ಅಭಿಪ್ರಾಯ ಮಲೆಯಾಳಿಗಳದ್ದು. ಸೇರ್ಪಡೆಗೆ ನಮ್ಮ ಅಡ್ಡಿ ಇಲ್ಲ ಎಂದು ಮಲೆಯಾಳಿಗಳು ನನ್ನ ಬಳಿ ಹೇಳುತ್ತಾರೆ. ಆದರೆ ಬಹಿರಂಗವಾಗಿ ಸಭೆಗಳಲ್ಲಿ ಹೇಳುವುದಿಲ್ಲ. ಮಲೆಯಾಳಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸ ಇದೆ, ನಮ್ಮ ಹಾಗಲ್ಲ. ನಮಗೆ ವಿದ್ಯಾಭ್ಯಾಸ ಇದ್ದರೂ ನಮ್ಮ ಮನೆಯ ಕೆಲಸದವನಿಗೆ ಇರುವುದಿಲ್ಲ. ಕೇರಳದಲ್ಲಿ ಎಲ್ಲರಿಗೂ ವಿದ್ಯಾಭ್ಯಾಸ ಇದೆ. ಆದ್ದರಿಂದ ಅವರನ್ನು ಒಪ್ಪಿಸಬಹುದು. ಕರ್ನಾಟಕಕ್ಕೆ ಕಾಸರಗೋಡು ಸೇರಬೇಕು ಎನ್ನುವುದನ್ನು ನಿಶ್ಚಯ ಮಾಡಿ ಜಾರಿಗೆ ಬರುವವರೆಗೆ ಹೋರಾಡಬೇಕು. ನಾನು ಹುಟ್ಟಿದ್ದು ಕನ್ನಡ ನಾಡಿನಲ್ಲಿಯೇ ಎಂದು ಹೇಳಲು ಬಯಸುತ್ತೇನೆ. ಕಾಸರಗೋಡು ಕರ್ನಾಟಕಕ್ಕೆ ಸೇರದೇ ಇದ್ದರೂ ನಾನು, ನನ್ನ ಮನಸ್ಸು ಕರ್ನಾಟಕದಿಂದ ಪ್ರತ್ಯೇಕಗೊಂಡಿಲ್ಲ.  ನಾನು ಯುವಕನ ಹಾಗೆ ಮಾತನಾಡಬೇಕು ಎಂದು ಬಯಸುವುದು ನಿಮ್ಮ ಸದಭಿಪ್ರಾಯ. ಈಗ ನಾನು ಯುವಜನರ ವ್ಯಕ್ತಿತ್ವ ರೂಪಿಸುವ ಕುರಿತು ಮಾತನಾಡಬೇಕು. ನೀವು ಬುದ್ಧಿವಂತರ ಬಳಿ, ಯುವ ಮುಖಂಡರ ಬಳಿ ಕೇಳಿದರೆ ಮನಸ್ಸಿಗೆ ಒಪ್ಪುವ ಹಾಗೆ ಹೇಳುತ್ತಿದ್ದರು. ನನಗೆ ಯಾವುದು ಒಳ್ಳೆಯ ನೀತಿ, ಯಾವುದು ಕೆಟ್ಟದ್ದು ಎಂದು ಹೇಳಲು ಈ ವಯಸ್ಸಲ್ಲಿ ಸಾಧ್ಯ ಇಲ್ಲ. ಆದರೆ ಕರ್ನಾಟಕದ ಎಲ್ಲರಿಗೂ ಶುಭವಾಗಲಿ ಎಂದು ಮನಃಪೂರ್ವಕವಾಗಿ ಬೇಡಿಕೊಳ್ಳುತ್ತೇನೆ.
ಟಿ ಕಯ್ಯಾರ ಕಿಞ್ಞಣ್ಣ ರೈ, ಕವಿ, ಕರ್ನಾಟಕ ಏಕೀಕರಣ ಹೋರಾಟಗಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement