ಕಾಸರಗೋಡು ಎಂದಾದೀತು ಕರುನಾಡ ಬೀಡು
ಮಲೆಯಾಳಿಯಲ್ಲೇ ವ್ಯವಹಾರ
ಕನ್ನಡ ನಾಡಿನ ದೇಹದಿಂದ ಕಿತ್ತು ಹೋದ ಅಂಗ ಕಾಸರಗೋಡು ಜಿಲ್ಲೆ ಕೇರಳಕ್ಕೆ ಕಸಿ ಕಟ್ಟಿ ಬೆಸೆದು ಹೋಗಿದೆ.
ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂಬ ಕೂಗು ಕ್ಷೀಣವಾಗಿದೆ. ಕೇರಳದಲ್ಲಿದ್ದುಕೊಂಡೇ ಕನ್ನಡಕ್ಕೆ, ಕನ್ನಡಿಗರಿಗೆ ಮಾನ್ಯತೆ ಸಿಗುವಲ್ಲಿ ಹೋರಾಟ ನಡೆಯುತ್ತಿದೆ. ಕನ್ನಡಪರ ಚಳವಳಿಗಾರರು, ಸಾಹಿತಿಗಳ ವಲಯ ಮಾತ್ರ ಸಾಂಸ್ಕೃತಿಕವಾಗಿ, ಭಾವನಾತ್ಮಕವಾಗಿ ಕರ್ನಾಟಕದೊಂದಿಗೆ ಸಂಬಂಧ ಬೆಸೆದುಕೊಂಡಿದೆ. ಸೇರ್ಪಡೆ ವಿಚಾರ ಅಲ್ಲಿ ಅಪ್ರಸ್ತುತ. ಜನಸಾಮಾನ್ಯರು ಕೇರಳದ ಉತ್ತಮ ಆಡಳಿತ ಮತ್ತು ಸೌಲಭ್ಯ, ಕಡಿಮೆ ತೆರಿಗೆಯಿಂದ ಸಂತೃಪ್ತಿಯಲ್ಲಿದ್ದಾರೆ. ಕನ್ನಡದ ಭಾವನೆಗಳಿಗೆ ಏಟು ಬಿದ್ದಾಗ ಮತ್ತೆ ಕರ್ನಾಟಕಕ್ಕೆ ಸೇರಿದ್ದರೆ ಚೆನ್ನಾಗಿತ್ತು ಎಂಬಷ್ಟಕ್ಕೆ ಹೋರಾಟ ಸೀಮಿತವಾಗಿದೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರ, ನೀರ್ಚಾಲು, ಪೆರ್ಲ, ಪೆರಡಾಲ ಈ ಪ್ರದೇಶಗಳಲ್ಲಿ ಕನ್ನಡ ರಾರಾಜಿಸುತ್ತಿದೆ. ಕನ್ನಡದಲ್ಲಿ ಮಾತನಾಡಿದರೆ ಶೇ.90ರಷ್ಟು ಮಂದಿ ಕನ್ನಡ ಅಥವಾ ತುಳುವಿನಲ್ಲಿ ಉತ್ತರಿಸುತ್ತಾರೆ. ಉಳಿದವರು ಮಲೆಯಾಳದಲ್ಲಿ ಉತ್ತರಿಸುತ್ತಾರೆ. ಅಲ್ಲಲ್ಲಿ ಬ್ಯಾನರ್ಗಳು, ದೇವಸ್ಥಾನಗಳ ಸ್ವಾಗತ ಕಮಾನುಗಳಲ್ಲಿ ಹೆಸರು ಶೇ.90ರಷ್ಟು ಕನ್ನಡದಲ್ಲಿಯೇ ಬರೆಯಲಾಗಿದೆ. ರಾಜಕೀಯ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮಲೆಯಾಳಿಗಳ ಕೈ ಮೇಲಾಗಿದೆ. ಕನ್ನಡ ಭಾಷಿಕರಿಗೆ ಉದ್ಯೋಗ ಸೇರಿ ಹತ್ತು ವರ್ಷದೊಳಗೆ ಮಲೆಯಾಳ ಕಲಿಯಬಹುದು ಎಂಬ ವಿನಾಯಿತಿ ನೀಡಲಾಗಿದೆ.
'ಕನ್ನಡಿಗರಿಗೆ ಕನ್ನಡದಲ್ಲಿ ಕಚೇರಿ ಮಾಹಿತಿ ನೀಡಬೇಕಿದ್ದರೂ ಹೊರಭಾಗದ ಮಲೆಯಾಳಿ ಅಧಿಕಾರಿಗಳಿಂದಾಗಿ ಮಲೆಯಾಳದಲ್ಲಿಯೇ ನೀಡುತ್ತಿದ್ದಾರೆ. ಇದರಿಂದ ಸರ್ಕಾರಿ ಸಾರ್ವಜನಿಕ ಸೇವಾ ಪರೀಕ್ಷೆಗಳನ್ನು ಬರೆಯಲು ಅಸಾಧ್ಯವಾಗಿ ಕನ್ನಡಿಗರಿಗೆ ಸರ್ಕಾರಿ ಹುದ್ದೆ ಸಿಗುವುದು ಕಷ್ಟವಾಗಿದೆ' ಎನ್ನುತ್ತಾರೆ ಕನ್ನಡಿಗ ಪತ್ರಕರ್ತ ಪುರುಷೋತ್ತಮ ಭಟ್.
ಅವಿರತ ವಿದ್ಯುತ್ ಸಿಗುತ್ತಿದೆ. ನೀರು ಸೌಲಭ್ಯ, ಪಡಿತರ ಚೆನ್ನಾಗಿದೆ. ಕಾಸರಗೋಡಲ್ಲಿ ಪೆಟ್ರೋಲ್ ಲೀಟರ್ಗೆ 74. ಮಂಗಳೂರಲ್ಲಿ 78.33! ಇಲ್ಲೂ ಕೇರಳದಲ್ಲಿದ್ದರೆ ಲಾಭ. 'ಇಲ್ಲಿ ಭಾಷೆಗಾಗಿ ಗಲಾಟೆಗಳು ನಡೆದೇ ಇಲ್ಲ. ಮಂಗಳೂರಲ್ಲಿ ತುಳು, ಕೊಂಕಣಿ, ಬ್ಯಾರಿ ಭಾಷಿಕರು ಇರುವಷ್ಟೇ ಸೌಹಾರ್ದ ಕಾಸರಗೋಡಲ್ಲಿ ಮಲೆಯಾಳಿಗಳ ಜತೆಯೂ ಇದೆ' ಎನ್ನುತ್ತಾರೆ ಸ್ಥಳೀಯ ನಿವಾಸಿ ಪರಮೇಶ್ವರ ರಾವ್.
ಮಂಗಳೂರೇ ರಾಜಧಾನಿ
ಕಾಸರಗೋಡಿನ ಎಲ್ಲ ಭಾಷಿಕರು ಪ್ರಮುಖ ವ್ಯಾಪಾರ, ವಹಿವಾಟು, ವಿಮಾನ ಯಾನ ಆಸ್ಪತ್ರೆ, ಉನ್ನತ, ವೃತ್ತಿಪರ ಶಿಕ್ಷಣಕ್ಕೆ ಮಂಗಳೂರನ್ನೇ ಆಶ್ರಯಿಸಿದ್ದಾರೆ. ಮಂಗಳೂರು ನಗರ ಪ್ರದೇಶದಲ್ಲಿ ಎಲ್ಲೆಡೆ ಮಲೆಯಾಳಿಗಳ ಕಲರವ ಕೇಳಿಬರುತ್ತಿದೆ. 'ಕನ್ನಡ ವಿಭಾಗದಲ್ಲಿ ಪಠ್ಯ ಪುಸ್ತಕ ಸಿಗುತ್ತಿದೆ. ಆದರೆ ಕನ್ನಡ ವಿಭಾಗಕ್ಕೆ ಅಧ್ಯಾಪಕರ ಕೊರತೆಯಾಗಿ ಮಲೆಯಾಳಿ ಅಧ್ಯಾಪಕರೇ ಪಾಠ ಮಾಡುವಂಥ ಪರಿಸ್ಥಿತಿಯೂ ಅಲ್ಲಲ್ಲಿ ಇದೆ. ನಮಗೆ ಕರ್ನಾಟಕಕ್ಕೆ ಸೇರಬೇಕೆಂಬ ಉತ್ಕಟ ಬಯಕೆ ಇದೆ. ಈಗಿನ ಸ್ಥಿತಿ ನೋಡುವಾಗ ಅಪ್ರಪಸ್ತುತ ಅನಿಸಬಹುದು' ಎನ್ನುತ್ತಾರೆ ಗಡಿನಾಡ ಕನ್ನಡ ಘಟಕ ಅಧ್ಯಕ್ಷ ಎಸ್.ವಿ.ಭಟ್.