ಕೇಳುವಿರಾ... ಗೋವಾಗೆ ಹೊರಟ ನಮ್ಮವರ ನೋವಾ?
ಗೋವಾಕ್ಕೆ ಹೊಂದಿಕೊಂಡಿರುವ ಕಾರವಾರ ಗಡಿ ಭಾಗದಲ್ಲಿ ಭಾಷಾ ಬಳಕೆ ದೃಷ್ಟಿಯಿಂದ ಕನ್ನಡದ ಪರಿಸ್ಥಿತಿ ಉತ್ತಮವಾಗಿದೆ. ಮರಾಠಿ ಶಾಲೆಗಳು ಮುಚ್ಚಿ ಕನ್ನಡದ ಶಾಲೆಗಳು ಆರಂಭವಾದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಿರುವಾಗಲೇ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಗಡಿ ಜನರು ಗೋವಾದತ್ತ ಹೆಜ್ಜೆ ಹಾಕುತ್ತಿರುವುದು ಹೆಚ್ಚುತ್ತಿದೆ. ಕಾರವಾರ, ಜೋಯಿಡಾ ಹಾಗೂ ಹಳಿಯಾಳವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಎಂಇಎಸ್ ಹಾಗೂ ಗೋವಾ ಕನ್ನಡ ಮಂಚ್ ಎಂಬ ಸಂಘಟನೆ ಹೆಸರಿನಲ್ಲಿ ಕೆಲವರು ಕಾರವಾರವನ್ನು ಗೋವಾಕ್ಕೆ ಸೇರಿಸಬೇಕೆಂಬ ಬಗ್ಗೆ ಚಿಕ್ಕಪುಟ್ಟ ವಿಫಲ ಪ್ರಯತ್ನಗಳು ನಡೆಸಿದ್ದರು. ಇದೀಗ ಅಂಥ ಕೆಲಸಗಳು ನಿಂತಿವೆ.
ಉದ್ಯೋಗಕ್ಕೆ ಗೋವಾ: ಈ ಪ್ರದೇಶದಲ್ಲಿ ಮರಾಠಿ ಶಾಲೆಗಳ ಪಾರುಪತ್ಯವೇ ಹೆಚ್ಚಾಗಿತ್ತು. ಆದರೆ, ಕರ್ನಾಟಕ ಏಕೀಕರಣವಾದ ನಂತರ ಕನ್ನಡ ಶಾಲೆಗಳು ತೆರೆದುಕೊಂಡವು. ಕನ್ನಡದಲ್ಲಿ ಕಲಿತರೆ ಉದ್ಯೋಗಾವಕಾಶ ಲಭಿಸುವ ಸಾಧ್ಯತೆ ಮನಗಂಡು ವಿದ್ಯಾರ್ಥಿಗಳೂ ಕನ್ನಡ ಶಾಲೆಗಳತ್ತ ಹೆಜ್ಜೆ ಹಾಕಿದರು. ಮರಾಠಿ ಶಾಲೆಗಳು ಮುಚ್ಚುವ ಮೂಲಕ ಕನ್ನಡದ ಕಹಳೆ ಮೊಳಗಿತ್ತು. ಕ್ರಮೇಣ ಆಂಗ್ಲ ಮಾಧ್ಯಮ ಶಾಲೆಗಳ ವ್ಯಾಮೋಹದಿಂದ ಪರಿಸ್ಥಿತಿ ಮತ್ತೆ ಬದಲಾಯಿತು. ಗಡಿಯಲ್ಲಿರುವ ಗೋವಾ ರಾಜ್ಯದ ಮಾಶೆಂ, ಪೈಂಗಿಣಿ, ಕಾಣಕೋಣಗಳಲ್ಲಿನ ಆಂಗ್ಲ ಶಾಲೆಗಳು ರಾಜ್ಯದ ಗಡಿ ಪ್ರದೇಶದ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾದವು. ಇದಕ್ಕಾಗಿ ಪ್ರತಿದಿನ ಶಾಲಾ ವಾಹನಗಳೂ ರಾಜ್ಯಕ್ಕೆ ಬರಲಾರಂಭಿಸಿದವು. ಇನ್ನು ಗೋವಾ ಉದ್ಯಮ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದರಿಂದ ಇಲ್ಲಿನ ಯುವಕರು ಉದ್ಯೋಗಕ್ಕಾಗಿ ಗೋವಾವನ್ನೇ ಅವಲಂಬಿಸುತ್ತಿದ್ದಾರೆ. ಕಾರವಾರ ತಾಲೂಕಿನ ಮಾಜಾಳಿ, ಗಾಬಿತವಾಡ, ಮುಡಗೇರಿ, ಸಾನಮುಡಗೇರಿ, ದೇವಬಾಗ, ದಂಡೆಬಾಗ, ಅಸ್ನೋಟಿ ಮತ್ತಿತರ ಊರುಗಳಿಂದ ಪ್ರತಿದಿನ ಗೋವಾದತ್ತ ಶಿಕ್ಷಣ, ಉದ್ಯೋಗ ಅರಸಿ ತೆರಳುತ್ತಿದ್ದಾರೆ. ವಾಸ್ತವ್ಯ ಕಾರವಾರದಲ್ಲೇ ಆದರೂ ಇವರ ಕಾರ್ಯಕ್ಷೇತ್ರವೆಲ್ಲ ಗೋವಾದಲ್ಲೇ.