ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಗಡಿಯಲ್ಲೂ ಪ್ರಭಾವಳಿ

Mainashree
Updated On : 31 Oct 2013, 11:22 am

ಯಾಹೋ ಪೊಹಣೆ (ಬರ್ರೀ, ಬೀಗರೆ), ಮನ್ಯಾಗೆಲ್ಲಾ ಬರ್(ಮನೆಯಲ್ಲಿ ಎಲ್ಲರೂ ಚೆನ್ನಾಗಿದಾರಾ), ಜರಾ ಬಸಾ ವೋ(ಸ್ವಲ್ಪ ಕುಳಿತುಕೊಳ್ರಿ).. ಇದು ಮರಾಠಿ ಮಿಶ್ರಿತ ಕನ್ನಡದ ಝಲಕ್. ಗುಲ್ಬರ್ಗಕ್ಕೆ ಅಂಟಿಕೊಂಡಿರುವ ಮಹಾರಾಷ್ಟ್ರದ ಗಡಿ ಗ್ರಾಮಗಳಲ್ಲಿ ಬರೋಬ್ಬರಿ ಶಂಬರ್ ಟಕ್ಕೆ (ನೂರಕ್ಕೆ ನೂರು) ಕನ್ನಡ- ಮರಾಠಿ ಭಾಷಾ ಸಂಗಮವಾಗಿದೆ. ಇದರಿಂದ ಕನ್ನಡ, ಮರಾಠಿ ಸಮ್ಮಿಳನವಾಗಿದೆ. ಗಡಿ ಭಾಗಗಳಾಗಿರುವ ಅಫಜಲ್ಪುರ, ಆಳಂದ ತಾಲೂಕಿನ ಗ್ರಾಮಗಳಲ್ಲಿ ವ್ಯವಹಾರ, ಲೆಕ್ಕಪತ್ರ ಎಲ್ಲವೂ ಮರಾಠಿ ಮಿಶ್ರಿತ ಕನ್ನಡದಲ್ಲಿಯೇ ನಡೆಯುತ್ತದೆ. ಪಕ್ಕದಲ್ಲೇ ಅಕ್ಕಲಕೋಟೆ, ಲಾತೂರು, ಸೊಲ್ಲಾಪುರ, ಉಮರ್ಗಾದಂಥ ತಾಲೂಕು, ಜಿಲ್ಲಾ ಕೇಂದ್ರಗಳಲ್ಲೂ ಇಂಥದೇ ಸ್ಥಿತಿ ಇದೆ. ರುಪಾಯಿ ಲೆಕ್ಕವಾಗಿರಲಿ, ಗಡಿಯಾರದ ಗಂಟೆ ಸಾರುವ ಕೆಲಸವೇ ಆಗಲಿ, ದಿನಸಿ ವಹಿವಾಟೇ ಇರಲಿ, ವಾರದ ಸಂತೆಯೇ ಬರಲಿ ಎಲ್ಲಾ ಕಡೆಯಲ್ಲೂ ಮರಾಠಿಯದ್ದೇ ಪ್ರಾಬಲ್ಯ. ಪನ್ನಾಸ(ಐವತ್ತು), ಶಂಬರ್(ನೂರು), ಹಜಾರ್(ಸಾವಿರ), ಲಾಖ್(ಲಕ್ಷ), ಕರೋಡ್(ಕೋಟಿ) ಹೀಗೆ ಕನ್ನಡಿಗರಂತೂ ತಮ್ಮ ನಿತ್ಯದ ವಹಿವಾಟಿಗೆ ಇವೇ ಅಂಕಿ- ಸಂಖ್ಯೆ ಸಾರುವ ಶಬ್ದಗಳನ್ನು ಬಳಸುತ್ತಾರೆ. ಅಫಜಲ್ಪುರ ತಾಲೂಕಿನ ಮಣ್ಣೂರ, ಮಾಶಾಳ, ಕರ್ಜಗಿ, ತೋಳನೂರ್, ಹೈದ್ರಾತಾಂಡಾ, ಶೇಷಗಿರಿವಾಡಿ, ಉಪ್ಪಾರಹಟ್ಟಿ, ರಾಮನಗರ, ಶಿವಬಾಳನಗರ, ಗೌಡಗಾಂವ್, ಆಳಂದ ತಾಲೂಕಿನ ಅಳಂಗಾ, ಖಸಗಿ, ದಿಗ್ಗಿ, ಗದಲೇಗಾಂವ್, ಶಿರೂರ್, ಹಿರೋಳ್ಳಿ ಸೇರಿದಂತೆ ಹತ್ತಾರು ಊರುಗಳಲ್ಲಿನ ಗೃಹಿಣಿಯರೂ ತಮ್ಮ ನಿತ್ಯದ ಅಡುಗೆ ಕೆಲಸ ಕಾರ್ಯಗಳಲ್ಲಿಯೂ ಮರಾಠಿ ಮೂಲದ ಶಬ್ದಗಳನ್ನೇ ಕನ್ನಡದ ಶಬ್ದಗಳು ಎಂಬಂತೆಯೇ ಬಳಸುತ್ತಾರೆ. ಬೋರೂಟಿ, ಹೈದ್ರಾ, ಎಲಿಗಾರ ಕರ್ಜಗಿ, ಮೈಂದರ್ಗಿ ಹೀಗೆ ಅನೇಕ ಮಹಾರಾಷ್ಟ್ರದ  ಊರುಗಳಲ್ಲಿ ಕನ್ನಡದ ರೊಟ್ಟಿ, ತೊಗರಿ ಬೇಳೆ, ಸಕ್ಕರೆ, ಬೆಲ್ಲದಂಥ ಶಬ್ದಗಳು ಹಾಗೆಯೇ ಬಳಸಲ್ಪಡುತ್ತವೆ. ಅಷ್ಟೇ ಯಾಕೆ ನೀರು ತುಂಬುವ ಕೊಡ ಎಂಬ ಶಬ್ದವೂ ಮರಾಠಿಗರು ಇಲ್ಲಿ ಧಾರಾಳವಾಗಿ ಬಳಸುತ್ತಾರೆ. ಅದರಲ್ಲೂ ರೈತರಂತೂ ಇಂಥ ಶಬ್ದಗಳ ವಿನಿಯಮಯದಲ್ಲಿ ಎತ್ತಿದ ಕೈ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement