ತಂದೆಯ ಸಾವನ್ನೂ ನುಂಗಿ ಕನ್ನಡಕ್ಕಾಗಿ ಹೋರಾಡಿದರು!
ರೇಲ್ವೆ ನೇಮಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕೆಂಬ ಹೋರಾಟ ತೀವ್ರತೆಯ ಪರಾಕಾಷ್ಠೆ ತಲುಪಿತ್ತು. ರೈಲುಗಳನ್ನು ತಡೆದು ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಹೋರಾಟದಲ್ಲಿ ಮಂಚೂಣಿಯಲ್ಲಿದ್ದ ಸಣ್ಣೀರಪ್ಪ ಅವರಿಗೆ ಅದೇ ದಿನ ತಂದೆ ಸಾವಿನ ಸುದ್ದಿಯೂ ಬಂತು. ಒಂದು ಕಡೆ ಕರುಳಿನ ಕೂಗು. ಮತ್ತೊಂದೆಡೆ ಕನ್ನಡದ ಕೂಗು. ಆಗ ಸಣ್ಣೀರಪ್ಪ ಯಾವುದನ್ನು ಆರಿಸಿಕೊಳ್ಳಬೇಕು?
ಇಂತಹ ಸಂದಿಗ್ಧತೆಯ ನಡುವೆಯೂ ಅವರು 6 ಕೋಟಿ ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯ ಸರಿಪಡಿಸುವ ಕನ್ನಡ ಕೂಗಿಗೇ ಆದ್ಯತೆ ನೀಡಿದರು. ತಂದೆ ಸಾವನ್ನೂ ನುಂಗಿಕೊಂಡು ಹೋರಾಟದ ಕಿಚ್ಚಿನಲ್ಲಿ ಒಂದಾಗಿ ಹೋದರು. ಹೀಗಾಗಿ ಸಣ್ಣೀರಪ್ಪ ಕರ್ನಾಟಕ ರಕ್ಷಣಾ ವೇದಿಕೆಯ ಆಧಾರಸ್ತಂಭಗಳಲ್ಲಿ ಒಂದಾದರು. ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ಆದೇಶ ಬಂತೆಂದರೆ ಸಾಕು, ಕ್ಷಣಾರ್ಧದಲ್ಲೇ ಎಲ್ಲ ಜಿಲ್ಲೆಗಳು, ತಾಲೂಕು ಸಂಘಟನೆಗಳನ್ನು ಸಂಪರ್ಕಿಸಿ ಹೋರಾಟಕ್ಕೆ ಸಹಸ್ರ, ಸಹಸ್ರ ಕಾರ್ಯಕರ್ತರನ್ನು ಸಿದ್ಧಪಡಿಸುತ್ತಾರೆ. ವಾಹನಗಳು, ವೇದಿಕೆ, ಮಾಧ್ಯಮಗಳು, ಊಟ, ಉಪಚಾರ ಎಲ್ಲವೂ ಸಜ್ಜು ಎನ್ನುತ್ತಾರೆ. ಅಷ್ಟರ ಮಟ್ಟಿಗೆ ಹೋರಾಟ ರೂಪಿಸುವ, ಕಾರ್ಯಕರ್ತರನ್ನು ಸಂಘಟಿಸುವ, ಕನ್ನಡಿಗರನ್ನು ಅಭಿಮಾನದಿಂದ ಸೆಳೆಯುವ ಕಲೆಗಾರಿಕೆ ಸಣ್ಣೀರಪ್ಪ ಅವರಿಗೆ ರಕ್ತಗತ.
ಕಾಲೇಜಿನಲ್ಲಿ ಕನ್ನಡ ಕಟ್ಟಾಳು: ಅಂದ ಹಾಗೆ ಬಿ.ಸಣ್ಣೀರಪ್ಪ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬಾಣಗಾರಹಳ್ಳಿಯವರು. ತಂದೆ ಬಂಡೀರಪ್ಪ, ತಾಯಿ ಆಲಮ್ಮ ಕೃಷಿಕರು. ವ್ಯಾಸಂಗಕ್ಕಾಗಿ ಬೆಂಗಳೂರಿನ ಬಂದ ಸಣ್ಣೀರಪ್ಪ ಶೇಷಾದ್ರಿಪುರಂ ಕಾಲೇಜಿಗೆ ಸೇರಿದರು. ಅವರಿಗೆ ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಭಾರಿ ಒಲವು. ಸಹಪಾಠಿ ದೇವರಾಜ್ ಮತ್ತು ಆಂಜನಪ್ಪ ಜತೆ ಸೇರಿ ಕಾಲೇಜಿನಲ್ಲಿ ಕನ್ನಡ ವಿದ್ಯಾರ್ಥಿ ಸಂಘ ಸ್ಥಾಪಿಸಿದರು. ಅಷ್ಟೇ ಅಲ್ಲ. ಕನ್ನಡ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು, ಸ್ಥಳೀಯ ಸಮಸ್ಯೆ ವಿರುದ್ಧ ಹೋರಾಟ ನಡೆಸಲು ಮುಂದಾದರು. ಈ ಮೂಲಕನಾರಾಯಣಗೌಡರ ಗಮನ ಸೆಳೆದರು.
- ಕನ್ನಡದ ಕಟ್ಟಾಳು ಈ ದೊಡ್ಡ ಮನಸ್ಸಿನ ಸಣ್ಣೀರಪ್ಪ