ಬಳ್ಳಾರಿ; ತೆಲುಗು ಕಿರಿಕಿರಿ
ಗಡಿ ಜಿಲ್ಲೆ ಎಂದ ಮಾತ್ರಕ್ಕೆ ಆ ಭಾಗದಲ್ಲಿ ದ್ವಿಭಾಷೆಗಳ ಪ್ರಭಾವ ಇದ್ದೇ ಇರುತ್ತದೆ. ಇದಕ್ಕೆ ಬಳ್ಳಾರಿ ಕೂಡ ಹೊರತಾಗಿಲ್ಲ. ಕೇವಲ ಆಡುಭಾಷೆಯಲ್ಲಿ ಮಾತ್ರ ತೆಲುಗು ಬಳಕೆಯಾಗದೆ ಜಿಲ್ಲೆಯ ಕೆಲವು ತಾಲೂಕುಗಳ ಸರ್ಕಾರಿ ಕಚೇರಿಗಳಲ್ಲಿ ತೆಲುಗು ಅನಧಿಕೃತ 'ಆಡಳಿತ ಭಾಷೆ'ಯಾಗಿದೆ. ಇಂಥ ಅನುಭವ ಸ್ಥಳೀಯ ಜನರಿಗೆ ಆಗದೆ ಇರಬಹುದು, ರಾಜ್ಯದ ಇತರ ಜಿಲ್ಲೆಗಳಿಂದ ಬರುವ ಕನ್ನಡಿಗರಿಗೆ ಕನ್ನಡ ಬದಲಾಗಿ ಅನ್ಯ ಭಾಷೆ ಬಳಕೆಯಾಗುತ್ತಿದೆ ಎಂಬ ಸೂಕ್ಷ್ಮ ಅರ್ಥವಾಗುತ್ತದೆ. ಈ ಬಗ್ಗೆ ಯಾರಾದರೂ ಮಾತನಾಡಿದರೆ ಭಾಷೆ ಗೊಂದಲ ಸೃಷ್ಟಿಸುತ್ತಾರೆ ಎನ್ನುತ್ತಾರೆ ಸ್ಥಳೀಯರು. ಈ ವಾಸ್ತವದಲ್ಲಿ ಕನ್ನಡದ ಪ್ರಭಾವ ಕಡಿಮೆಯಾಗುತ್ತಿದೆ. ಆದರೆ ಭಾಷೆಯ ವಿಷಯಕ್ಕೆ ಬಂದರೆ ಬಳ್ಳಾರಿಯಲ್ಲಿ ಗೊಂದಲ ಸೃಷ್ಟಿಯಾಗಿಲ್ಲ ಎಂಬುದು ಸಮಾಧಾನದ ಸಂಗತಿ. ಈ ಹಿಂದೆ ಬಳ್ಳಾರಿ ಆಂಧ್ರಪ್ರದೇಶಕ್ಕೆ ಸೇರಬೇಕು, ಕರ್ನಾಟಕಕ್ಕೆ ಸೇರಬೇಕೆಂಬ ಬಗ್ಗೆ ಚರ್ಚೆಗಳು ನಡೆದಿದ್ದವು. ಇದರಿಂದಾಗಿ ಬಳ್ಳಾರಿಯಲ್ಲಿ ಕನ್ನಡಿಗರೊಂದಿಗೆ ಮಾತೃ ಭಾಷೆ ತೆಲುಗು ಮಾತನಾಡುವವರು ಇದ್ದಾರೆ. ಇಲ್ಲಿ ತೆಲುಗು ಶಾಲೆಗಳಿವೆ. ಇನ್ನು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಕೆಲವು ಸಮುದಾಯದ ಜನತೆ ಈಗಲೂ ತೆಲುಗು ಭಾಷೆಯನ್ನು ಮೂಲ ಭಾಷೆಯನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಅವರ ಮಕ್ಕಳು ಓದುವುದು ಕನ್ನಡ ಮಾಧ್ಯಮ ಎಂಬುದು ನಿಟ್ಟುಸಿರು ಬಿಡುವ ಸಂಗತಿ. ಬಳ್ಳಾರಿ ಮಹಾನಗರ ಪಾಲಿಕೆ, ತಾಲೂಕು ಕಚೇರಿ ಸೇರಿದಂತೆ ಕೆಲವು ಸರ್ಕಾರಿ ಕಚೇರಿ, ಸಿರುಗುಪ್ಪ ತಾಲೂಕಿನ ಕೆಲವು ಕಚೇರಿ, ಹೊಸಪೇಟೆ ತಾಲೂಕಿನ ಕೆಲವು ಭಾಗ ಹಾಗೂ ಸರ್ಕಾರಿ ಕಚೇರಿಗಳಲ್ಲಿ ತೆಲುಗು ಮಾತನಾಡುವ ಸಿಬ್ಬಂದಿ ಇದ್ದಾರೆ. ಆದರೆ ಆಡಳಿತ ಭಾಷೆ ಕನ್ನಡವಾಗಿರುವುದರಿಂದ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಯಾವುದೇ ಧಕ್ಕೆಯಾಗಿಲ್ಲ. ರಾಜಕಾರಣಿಗಳು, ಕೆಲವು ಜನಪ್ರತಿನಿಧಿಗಳು ತೆಲುಗು ಮಾತನಾಡುತ್ತಿದ್ದರೂ ಮನೆಯಿಂದ ಹೊರ ಬಂದಾಗ ಮಾತ್ರ ಕನ್ನಡದಲ್ಲೇ ಮಾತನಾಡುತ್ತಾರೆ. ಅವರಿಂದ ಕನ್ನಡ ನಾಡು, ನುಡಿಗೆ ಧಕ್ಕೆ ಇಲ್ಲ.