ಮಹಾ ಏಟಿಗೆ ಬೆಳಗಾವಿ ಎದಿರೇಟು
ಗಡಿನಾಡು ಬೆಳಗಾವಿ ನೆಲ ಕನ್ನಡದ್ದು ನಿಜ. ಆದರೆ, ಒಂದು ಕಾಲಿದಲ್ಲಿ ಇಲ್ಲಿ ಕನ್ನಡ ಮಾತನಾಡಿದರೆ ಕಲ್ಲೇಟು ಬೀಳುತ್ತಿದ್ದವು. ಮರಾಠಿಗರ ಹಿಂಸಾಚಾರ, ದಬ್ಬಾಳಿಕೆಯಿಂದ ಕನ್ನಡಿಗರು ಸಂಪೂರ್ಣವಾಗಿ ನಲುಗಿ ಹೋಗಿದ್ದರು. ಕನ್ನಡ ಭಾಷೆ ಸೊರಗಿ ಹೋಗಿತ್ತು. ಗಡಿಭಾಗ ಅಭಿವೃದ್ಧಿಯಿಂದ ವಂಚಿತವಾಗಿತ್ತು. ಇದೀಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಕನ್ನಡಿಗರು ಯಾವುದೇ ಅಳಕು, ಅಂಜಿಕೆ ಇಲ್ಲದೇ ನಿರಾತಂಕವಾಗಿ ಓಡಾಡುತ್ತಾರೆ. ಎಲ್ಲೆಡೆ ಕನ್ನಡ ನಾಮಫಲಕ ರಾರಾಜಿಸುತ್ತಿವೆ. ಕನ್ನಡಿಗರು, ಕನ್ನಡ ಭಾಷೆಯ ಬೆಳವಣಿಗೆ ಜೊತೆಗೆ ಗಡಿಭಾಗದಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ. ಗಡಿಯಲ್ಲಿ ಕನ್ನಡದ ಜ್ಯೋತಿ ಬೆಳಗುತ್ತಿದೆ.
ಗಡಿ, ಭಾಷಾ ವಿವಾದವನ್ನೇ ತನ್ನ ರಾಜಕೀಯ ಬಂಡವಾಳಮಾಡಿಕೊಂಡು ತನ್ನ ಅಸ್ತಿತ್ವಕ್ಕೆ ಹೆಣಗಾಡುತ್ತಿರುವ ಎಂಇಎಸ್‌ನ ಬಂಡವಾಳ ಬಯಲಾಗಿದೆ. ಮರಾಠಿ ಭಾಷಿಕರೇ ಎಂಇಎಸ್‌ಗೆ ಛೀಮಾರಿ ಹಾಕಿದ್ದಾರೆ. ಅಭಿವೃದ್ಧಿಗೆ ಜೈ ಎನ್ನುವ ಮೂಲಕ ಕನ್ನಡ ಭಾಷೆಯನ್ನು ಒಪ್ಪಿಕೊಂಡಿದ್ದಾರೆ. ಕನ್ನಡ-ಮರಾಠಿ ಭಾಷಿಕರು ಅನ್ಯೋನ್ಯತೆ, ಸೌಹರ್ದತೆಯಿಂದ ಬಾಳ್ವೆ ನಡೆಸುತ್ತಿದ್ದಾರೆ. ಕೆಲವೊಂದು ಮರಾಠಿ ಭಾಷಿಕ ಗ್ರಾಮಗಳನ್ನು ಹೊರತುಪಡಿಸಿದರೆ, ಎಲ್ಲೆಡೆ ಈಗ ಸಂಪೂರ್ಣ ಕನ್ನಡಮಯವಾಗಿದೆ. ಕನ್ನಡಿಗರು, ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಕನ್ನಡ-ಮರಾಠಿ ಭಾಷಿಕರು ಅನ್ಯೋನ್ಯವಾಗಿ ಬಾಳ್ವೆ ನಡೆಸಿರುವುದನ್ನು ಸಹಿಸದ ಎಂಇಎಸ್ ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಮರಾಠಿಗರನ್ನು ಕನ್ನಡಿಗರ ಮೇಲೆ ಎತ್ತಿಕಟ್ಟಿ ಉಭಯ ಭಾಷಿಕರ ನಡುವೆ ಭಾಷಾ ವಿವಾದದ ವಿಷ ಬೀಜ ಬಿತ್ತುತ್ತಿದೆ. ತನ್ನ ಎಲ್ಲ ಹೋರಾಟಗಳಲ್ಲಿ ಮುಖಭಂಗ ಅನುಭವಿಸಿದ್ದರೂ ಎಂಇಎಸ್ ಗಡಿಯಲ್ಲಿ ಪುಂಡಾಟಿಕೆ ನಡೆಸುತ್ತಲೇ ಇದೆ.
ಇತ್ತೀಚಿನ ವರ್ಷಗಳಲ್ಲಿ ಗಡಿಭಾಗದ ಬಗ್ಗೆ ರಾಜ್ಯ ಸರ್ಕಾರ ಹೆಚ್ಚಿನ ಒಲುವು ತೋರಿಸಿ ಕನ್ನಡಪರ ಕಾರ್ಯಚಟುವಟಿಕೆಗಳಿಗೆ ಹಾಗೂ ಕನ್ನಡ ಭಾಷೆ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಿದೆ. ಮರಾಠಿಭಾಷಿಕರು ಕನ್ನಡವನ್ನು ಒಪ್ಪಿಕೊಂಡು ಅಭಿವೃದ್ಧಿ ಕಾರ್ಯಕ್ಕೆ ಜೈ ಎಂದಿದ್ದಾರೆ. ಐತಿಹಾಸಿಕ ವಿಶ್ವ ಕನ್ನಡ ಸಮ್ಮೇಳನದ ಗಡಿಯಲ್ಲಿ ಕನ್ನಡವನ್ನು ಗಟ್ಟಿಗೊಳಿಸುವ ಕಾರ್ಯವೂ ನಡೆದಿದೆ. ಬೆಳಗಾವಿಯ ಸುವರ್ಣ ವಿಧಾನಸೌಧ ಗಡಿನಾಡಿನ ಕನ್ನಡಿಗರ ಪ್ರತೀಕ. ಬೆಳಗಾವಿ ಸೇರಿದಂತೆ ಸಮಗ್ರ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಬೆಳಗಾವಿಯಲ್ಲಿ ಪ್ರತಿವರ್ಷ ವಿಧಾನಮಂಡಲದ ಅಧಿವೇಶನ ನಡೆಸಲು ಅನುಕೂಲವಾಗುವಂತೆ ಸುವರ್ಣ ವಿಧಾನಸೌಧ ಕಟ್ಟಡವನ್ನು ನಿರ್ಮಿಸಲಾಗಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಕೆಎಲ್‌ಇ ವಿಶ್ವವಿದ್ಯಾಲಯ ಭದ್ರವಾಗಿ ರೂಪಗೊಂಡಿವೆ.