ಹೋರಾಟವೇ ವಾಟಾಳ್ ಜೀವಾಳ
ಕನ್ನಡಕ್ಕಾಗಿ ಧ್ವನಿ ಎತ್ತಿದ್ದಕ್ಕೆ ಇವರಿಗೆ ಪೊಲೀಸರ ಬೂಟಿನೇಟು ಬಿತ್ತು. ಆದರೂ ಆ ಧ್ವನಿ ನಗರಸಭೆಯಿಂದ ಶಾಸನಸಭೆವರೆಗೂ ಮಾರ್ದನಿಸಿತು. ಅದಕ್ಕಾಗಿಯೇ ಶಾಸನಸಭೆಗೆ ಇವರು ಬೇಕೆನ್ನುವ ಕೂಗು ಕೇಳಿ ಬರುತ್ತಲೇ ಇದೆ. ಆಂದಹಾಗೆ ಬೂಟಿನೇಟು ಬಿದ್ದ ಆ ದಿನವೇ ಇವರಿಗೆ ಜನ್ಮ ದಿನ. ಅದೇ ರಾಜ್ಯದಲ್ಲಿ ಕನ್ನಡ ಚಳವಳಿ ಹುಟ್ಟಿಗೂ ಕಾರಣವಾಯಿತು. ಅಂದಿನಿಂದ ಕನ್ನಡ ಚಳವಳಿ ಎಂದರೆ ವಾಟಾಳ್ ಎನ್ನುವಂತಾಯಿತು.
ವಿನೂತನ ರೀತಿಯ ಚಳವಳಿಗೆ ಪ್ರತೀಕವಾದ ವಾಟಾಳ್ ನಾಗರಾಜ್, ಕನ್ನಡ ಚಳವಳಿಯನ್ನು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಸದೆ, ಇತರೆ ಪಕ್ಷಗಳೊಂದಿಗೆ ಕೈ ಜೋಡಿಸದೆ ಜೀವಿತ ಅವಧಿಯ 50 ವರ್ಷಗಳನ್ನು ಕನ್ನಡಕ್ಕಾಗಿಯೇ ಮೀಸಲಿಟ್ಟಿದ್ದಾರೆ. ಕನ್ನಡ ನಾಡು, ನುಡಿ ಸಂರಕ್ಷಣೆಗಾಗಿ ವಿಭಿನ್ನವಾಗಿ ಚಳವಳಿಗಳನ್ನು ನಡೆಸಿ ಯಶಸ್ವಿಯಾಗಿದ್ದಾರೆ. ಹೀಗೆ ಚಳವಳಿಗಳ ಮೂಲಕ ಕನ್ನಡಪರ ನೀತಿ, ನಿಯಮಗಳು ಅನುಷ್ಠಾನಗೊಳ್ಳುವಂತೆ ಮಾಡಿದ್ದಾರೆ. ತಾಳವಾಡಿ, ಬೆಳಗಾವಿ, ಕಾಸರಗೋಡು ಗಡಿ ಹೋರಾಟ ಹಾಗೂ ಕೃಷ್ಣ ನದಿ ವಿವಾದದಲ್ಲಿ ಚಳವಳಿಗಳನ್ನು ರೂಪಿಸಿ ನೆರೆ ರಾಜ್ಯಗಳ ಸರ್ಕಾರಗಳನ್ನೂ ಮುಜುಗರಕ್ಕೀಡು ಮಾಡಿದ್ದರು. ಹೀಗಾಗಿ ವಾಟಾಳ್ ಎಂದರೆ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಗೆ ಸಿಂಹಸ್ವಪ್ನ.
ಆರಂಭಿಕ ಹೋರಾಟ : 60ರ ದಶಕದಲ್ಲಿ ಯುವ ಹೋರಾಟಗಾರರಾಗಿದ್ದ ವಾಟಾಳ್ ಕನ್ನಡಿಗರಿಗೆ ಆದ್ಯತೆ ಸಿಗಬೇಕೆಂದು ಆಗ್ರಹಿಸುವ ಜತೆಗೆ, ಬೆಂಗಳೂರಿನಲ್ಲಿ ಅನ್ಯಭಾಷಾ ನಾಮಫಲಕಗಳನ್ನು ಕಿತ್ತೊಗೆಯುವ ಮೂಲಕ ಹೋರಾಟಕ್ಕೆ ಮುನ್ನುಡಿ ಬರೆದರು. ಕೆ.ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದ ಆ ಕಾಲದಲ್ಲಿ ವಾಟಾಳ್ ನೇತೃತ್ವದ ಮೆರವಣಿಗೆ ನಗರಾದ್ಯಂತ ನಡೆದು ಕಬ್ಬನ್‌ಪಾರ್ಕ್ ಮುಟ್ಟಿತ್ತು. ಅಂದಿನ ಪೊಲೀಸ್ ವರಿಷ್ಠ ಲೂಯಿಸ್ ಪ್ರತಿಭಟನಾಕಾರರ ಮೇಲೆ ಇಂಗ್ಲಿಷ್‌ನಲ್ಲಿಯೇ ಹರಿಹಾಯ್ದರು. ಮತ್ತಷ್ಟು ಆಕ್ರೋಶಗೊಂಡ ಹೋರಾಟಗಾರರು ಕನ್ನಡದಲ್ಲಿ ಮಾತನಾಡಿ ಎಂದು ಲೂಯಿಸ್‌ಗೆ ತಿರುಗೇಟು ನೀಡಿದರು. ಕುಪಿತಗೊಂಡ ಲೂಯಿಸ್ ವಾಟಾಳ್‌ಗೆ ಲಾಠಿ ಏಟು ಕೊಟ್ಟರು, ಬೂಟಿನಿಂದ ಒದ್ದರು. ಟೀಯರ್ ಗ್ಯಾಸ್ ಬಿಟ್ಟರು. ಅಂದಿನಿಂದ ಇಂದಿಗೂ ವಾಟಾಳ್ ಅವರ ಕನ್ನಡ ಕಳವಳಿ ನಿಂತಿಲ್ಲ. ಅದೇ ಅವರ ಜನ್ಮ ದಿನವೂ ಆಯಿತು.
2000ಕ್ಕೂ ಹೆಚ್ಚು ಬಾರಿ ಜೈಲು: ವಾಟಾಳ್ ನೇತೃತ್ವದಲ್ಲಿ ಸತತ ಚಳವಳಿಗಳು ನಡೆಯುತ್ತಲೇ ಇವೆ. 10 ಬಾರಿ ಬೆಂಗಳೂರು ಬಂದ್ ಆಗಿದ್ದವು. 2000ಕ್ಕೂ ಹೆಚ್ಚು ಬಾರಿ ಜೈಲು ವಾಸ ಅನುಭವಿಸಿದ್ದರು. ಒಂದು ಕಾಲದಲ್ಲಿ ಸೆಂಟರ್ ಹಾಗೂ ಹಲಸೂರು ಗೇಟ್ ಠಾಣೆಗಳ ಲಾಕಪ್ ವಾಟಾಳ್ ಅವರ ಅವಾಸ ಸ್ಥಾನವೇ ಆಗಿತ್ತು.
ನಂತರ ಮಹಾಜನ ಆಯೋಗ ರಚನೆ ವಿರೋಧಿಸಿ, ಗಡಿ ತಮಿಳುನಾಡಿನ ಭಾಗವಾದ ತಾಳವಾಡಿಯನ್ನು ರಾಜ್ಯಕ್ಕೆ ಸೇರಿಸಬೇಕೆಂದು ಒತ್ತಾಯಿಸಿಯೂ ಕನ್ನಡದ ದನಿ ಮೊಳಗಿದವು. ಆಗಲೇ ತಮಿಳುನಾಡಿನಲ್ಲಿ ಬಂಧನಕ್ಕೀಡಾಗಿದ್ದರು. ವಾಟಾಳ್ ವಿವಾಹಕ್ಕೆ ಆಗ 2 ದಿನಗಳು ಬಾಕಿ ಇದ್ದವು. ಇನ್ನೇನು ಮಾಡೋದು? ವಧುವನ್ನು ಜೈಲಿಗೆ ಕರೆದೋಯ್ದು, ಅಲ್ಲಿಯೇ ತಾಳಿ ಕಟ್ಟಿಸಲು ಸಿದ್ಧತೆ ನಡೆದಿತ್ತು. ಆದರೆ, ವಿವಾಹಕ್ಕೆ ಕೆಲವೇ ಗಂಟೆಗಳಿರುವಾಗ ವಾಟಾಳ್ ಬಿಡುಗಡೆಯಾದರು. ಹೀಗೆ ಕನ್ನಡ ಪ್ರಮುಖ ದನಿಯಾಗಿ ಬೆಳೆದ ವಾಟಾಳ್, 1964ರಲ್ಲಿ ಚಿಕ್ಕಪೇಟೆಯಿಂದ ಬೆಂಗಳೂರು ನಗರಸಭೆ ಸದಸ್ಯರಾಗಿ ಆಯ್ಕೆಯಾದರು. ಅಲ್ಲಿಯೂ ಕನ್ನಡ ಕಡ್ಡಾಯವಾಗಬೇಕೆಂಬ ಕೂಗು ಹೆಚ್ಚಾಯಿತು. ನಂತರ ವಾಟಾಳ್ ಬಂಧನ, ಲಾಠಿ ಹೊಡೆತ ಕಡಿಮೆಯಾಗಿತು. ಇವರ ಮೇಲಿನ ಕೇಸುಗಳು ರದ್ದಾಗಿ ವಾಟಾಳ್ ಅವರಿಗೆ ನ್ಯಾಯಾಲಯದ ರಕ್ಷಣೆ ಸಿಕ್ಕಿತು. ನಂತರ 1967ರಲ್ಲಿ ಚಿಕ್ಕಪೇಟೆಯಿಂದ ವಿಧಾನಸಭಾ ಕ್ಷೇತ್ರದಿಂದಲೂ ಚುನಾವಣೆಗೆ ಸ್ಪರ್ಧಿಸಿದರು.
ಅಚ್ಚರಿ ಎಂದರೆ ಚುನಾವಣಾ ಪ್ರಚಾರದ ವೇಳೆ ವಾಟಾಳ್ ಧರಿಸಿದ್ದ ಹಾರಗಳನ್ನು ಹರಾಜು ಹಾಕಿ, ಆ ಹಣದಲ್ಲೇ ವಾಟಾಳ್ ಚುನಾವಣೆ ವೆಚ್ಚವನ್ನೆಲ್ಲಾ ಮುಗಿಸಿ 10ಸಾವಿರ ಉಳಿಸಿದ್ದರು. ಹೀಗೆ ಅಭೂತಪೂರ್ವ ವಿಜಯದೊಂದಿಗೆ ವಿಧಾನಸಭೆ ಪ್ರವೇಶಿಸಿದರು. ಅಲ್ಲಿಂದ ಸದನದಲ್ಲೂ ಕನ್ನಡದ ಮಾರ್ದನಿ ಆರಂಭವಾಯಿತು. ಮೊದಲಿಗೆ ರಾಜ್ಯಪಾಲರ ಭಾಷಣ ಕನ್ನಡದಲ್ಲಿರಬೇಕೆಂದು ಹೋರಾಡಿ ಪ್ರಥಮ ಯಶಸ್ಸು ಸಾಧಿಸಿದರು. ಸದನದಲ್ಲಿ ಇಂಗ್ಲಿಷ್ ಕಡತಗಳನ್ನು ಹರಿದು ಹಾಕಿ ಕನ್ನಡ ಬಿಟ್ಟು ಉಳಿದ ಯಾವುದೇ ಭಾಷೆಗಳಿಗೂ ಅವಕಾಶವಿಲ್ಲ ಎಂದು ಕೂಗೇಳುವಂತೆ ಮಾಡಿದರು.
ಟೋಪಿ, ಕನ್ನಡಕ ಇಲ್ಲದ ವಾಟಾಳ್!
ಟೋಪಿ ಹಾಗೂ ಕನ್ನಡಕ ಇಲ್ಲದ ವಾಟಾಳ್ ನಾಗರಾಜ್ ಅವರನ್ನು ಹೆಚ್ಚು ಜನ ನೋಡಿರಲಾರರು. ಟೋಪಿ ಹಾಗೂ ಕನ್ನಡಕ ಇಲ್ಲದ ವಾಟಾಳ್ ನಾಗರಾಜ್ ಅವರ ಫೋಟೋ ನೋಡಿ. ಇದು ಹಲವು ದಶಕಗಳ ಹಿಂದೆ ಬೆಂಗಳೂರಿನಲ್ಲಿ ತೆಗೆದಿರುವುದು.