ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆನೆ ದಾಳಿ ತಡೆಗೆ ತ್ವರಿತ ಕಾರ್ಯಪಡೆ ರಚನೆ

Rashmi Kasaragodu
Updated On : 3 Sept 2013, 11:33 am

ಕ.ಪ್ರ. ವಾರ್ತೆ, ಬೆಂಗಳೂರು, ಸೆ. 2-
ಕಾಡಿನಿಂದ ನಾಡಿಗೆ ಬಂದು ದಾಳಿ ಮಾಡುವ ಆನೆಗಳನ್ನು ತಕ್ಷಣ ಕಾಡಿಗೆ ಓಡಿಸುವ ಮತ್ತು ಅವಘಡಗಳನ್ನು ತಪ್ಪಿಸುವ ಸಲುವಾಗಿ ಮೈಸೂರು, ಹಾಸನ, ಚಾಮರಾಜನಗರ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತ್ವರಿತ ಕಾರ್ಯಪಡೆ ರಚಿಸುವುದಾಗಿ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಆನೆಗಳು ದಾಳಿ ಪ್ರಕರಣಗಳು ಹೆಚ್ಚುತ್ತಿದ್ದು, ಇದರಿಂದ ಜನರು ಭೀತಿಗೊಳಗಾಗುತ್ತಿದ್ದಾರೆ. ಅಲ್ಲದೆ, ಆನೆಗಳನ್ನು ಮರಳಿ ಕಾಡಿಗಟ್ಟುವ ಪ್ರಯತ್ನಗಳಲ್ಲಿ ಆನೆಗಳು ಸಾವನ್ನಪ್ಪುತ್ತಿವೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅದನ್ನು ತಡೆಯಲು ತ್ವರಿತ ಕಾರ್ಯಪಡೆ ರಚಿಸುವುದಾಗಿ ಸರ್ಕಾರ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ.
ಅರಣ್ಯ ಪ್ರದೇಶಗಳಲ್ಲಿ ಹೈಟೆನ್ಷನ್ ವಿದ್ಯುತ್ ತಂತಿಗಳನ್ನು ಭೂಮಿಯಿಂದ 20 ಅಡಿ ಎತ್ತರದಲ್ಲಿ ಅಳವಡಿಸುವಂತೆ ಚೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಹಾಗೂ ಬೆಸ್ಕಾಂಗಳಿಗೆ ನಿರ್ದೇಶನ ನೀಡಲಾಗಿದ್ದು, ಮುಂದಿನ ಆರು ತಿಂಗಳಲ್ಲಿ ಇದು ಜಾರಿಗೆ ಬರಲಿದೆ. ವಿದ್ಯುತ್ ಕಳ್ಳತನ ತಡೆಯಲು ಕೂಡ ಸಂಚಾರಿ ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಗುರುತಿಸಿರುವ ಆನೆ ಕಾರಿಡಾರ್‌ಗಳಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಮೂರು ತಿಂಗಳಲ್ಲಿ ರದ್ದುಗೊಳಿಸಲಾಗುವುದು. ಮೀಸಲು ಅರಣ್ಯ ಪ್ರದೇಶಗಳಿಂದ 100 ಮೀಟರ್ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡುವ ವಿವಾದದ ಕುರಿತು ಕೇಂದ್ರ ಸಚಿವ ಸಂಪುಟದ ಅಂತಿಮ ನಿರ್ಧಾರ ಹೊರಬರಬೇಕಿದೆ ಎಂದಿದೆ.

ತುರ್ತು ನೇಮಕ ಪ್ರಕ್ರಿಯೆ: ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದ್ದು, 2014ರ ಮಳೆಗಾಲಕ್ಕೆ ಮುನ್ನ ಆನೆಗಳು ನಾಡಿಗೆ ಬರದಂತೆ ತಡೆಯುವ ಕಂದಕಗಳನ್ನು ನಿರ್ಮಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.
    ಮೈಸೂರು ದಸರಾ ಉತ್ಸವದ ಜಂಬೂ ಸವಾರಿಗೆ ತರಬೇತಿ ಪಡೆದ 12ರಿಂದ 16 ಆನೆಗಳನ್ನು ತರಲಾಗುವುದು. ಆರು ವಾರಗಳಲ್ಲಿ ಆನೆಗಳು ತಮ್ಮ ಸ್ಥಾನಕ್ಕೆ ಮರಳಲಿವೆ. ಜಂಬೂ ಸವಾರಿ ಒಂದು ಸಾಂಪ್ರದಾಯಿಕ ಆಚರಣೆಯಾಗಿದ್ದು, ಆನೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ.ಅವುಗಳಿಗೆ ಪೌಷ್ಟಿಕ ಆಹಾರ ನೀಡಲಾಗುವುದು. ಅಗತ್ಯವಿದ್ದಷ್ಟು ವಿರಾಮ ಸಿಗಲಿದೆ. ಇದರಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗುವುದಿಲ್ಲ ಎಂದು ಸರ್ಕಾರ ಪ್ರಮಾಣಪತ್ರದಲ್ಲಿ ಸ್ಪಷ್ಟಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಪ್ರತಿವಾದ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮುಖ್ಯ ನ್ಯಾ.ಡಿ.ಎಚ್. ವಘೇಲ ಹಾಗೂ ನ್ಯಾ.ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ ತೀರ್ಪನ್ನು ಕಾಯ್ದಿರಿಸಿದೆ.

ವಿವಾದವೇನು?: 2008ರಲ್ಲಿ ಕಬಿನಿ ಹಿನ್ನೀರಿನಲ್ಲಿ ಮರಿ ಆನೆಯೊಂದು ಮುಳುಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆನೆಗಳ ಸಂರಕ್ಷಣೆ ಕುರಿತು ನ್ಯಾಯಪೀಠ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement