ಕಬ್ಬಿಗೆ ಬೆಲೆ ಬರುತ್ತಾ...
ಕ.ಪ್ರ.ವಾರ್ತೆ, ಬೆಂಗಳೂರು, ಸೆ. 2-
ವಿಧಾನಸಭೆ ಚುನಾವಣೆಗೆ ಮುನ್ನ ಕಬ್ಬು ಬೆಳೆಗಾರರ ಬಗ್ಗೆ ಇನ್ನಿಲ್ಲದ ಕಾಳಜಿ ತೋರಿಸಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಬಳಿಕ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವುದಕ್ಕೆ ಮೀನಮೇಷ ಎಣಿಸುತ್ತಿದೆ.
ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಈಗಾಗಲೇ ಕಬ್ಬಿನ ಕಟಾವು ಹಂಗಾಮು ಆರಂಭಗೊಂಡಿದೆ. ಬೆಳಗಾವಿ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಮುಂದಿನ ತಿಂಗಳಾಂತ್ಯಕ್ಕೆ ಹಂಗಾಮು ಪ್ರಾರಂಭಗೊಳ್ಳಲಿದೆ. ಆದರೆ ಮುಂಗಡ ಬೆಲೆ ನಿಗದಿ ಮಾಡುವುದಿರಲಿ, ಸಮಿತಿ ಸಭೆ ಕರೆಯುವುದಕ್ಕೂ ಸರ್ಕಾರ ಮುಂದಾಗಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ಕಬ್ಬಿಗೆ ರಾಜ್ಯ ಸಲಹಾ ಬೆಲೆ (ಎಸ್ಎಪಿ ) ನಿಗದಿ ಮಾಡುವಂತೆ ಹಿಂದಿನ ಸರ್ಕಾರದ ಮೇಲೆ ಇನ್ನಿಲ್ಲದ ಒತ್ತಡ ಹೇರಿದ್ದರು. ಮಾತ್ರವಲ್ಲ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವುದಾಗಿ ಪಕ್ಷದ ಪ್ರಣಾಳಿಕೆಯಲ್ಲೂ ಭರವಸೆ ನೀಡಲಾಗಿತ್ತು. ಆದರೆ ಅಧಿಕಾರಕ್ಕೆ ಬಂದ ನಂತರ ರೈತರ ಕಣ್ಣೊರೆಸುವುದಕ್ಕೆ ಕಬ್ಬು ಖರೀದಿ ಸರಬರಾಜು ಮಂಡಳಿಯನ್ನು ಮಾತ್ರ ಸ್ಥಾಪಿಸಿ ಬೆಲೆ ನಿಗದಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮರೆತಿದೆ. ಖಾಸಗಿ ಸಕ್ಕರೆ ಕಾರ್ಖಾನೆಗಳು ಹಾಗೂ ಸರ್ಕಾರದಲ್ಲಿರುವ ಕೆಲ ಪ್ರಭಾವಿ ಶಾಸಕರು ಮುಂಗಡ ಬೆಲೆ ನಿಗದಿ ಮಾಡದಂತೆ ತೀವ್ರ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದ್ದು, ಇದಕ್ಕೆ ಮಣಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಆರೋಪಕ್ಕೆ ಪೂರಕವಾದ ಎಲ್ಲ ಬೆಳವಣಿಗೆಗಳು ಸರ್ಕಾರಿ ಮಟ್ಟದಲ್ಲಿ ನಡೆಯುತ್ತಿವೆ. ಕಬ್ಬು ಬೆಲೆ ನಿಗದಿಗೆ ಸಕ್ಕರೆ ಸಚಿವ ಪ್ರಕಾಶ್ ಬಾಬಣ್ಣ ಹುಕ್ಕೇರಿ ಅಧ್ಯಕ್ಷತೆಯಲ್ಲಿ ಈಗಾಗಲೇ ಒಂದು ಸಮಿತಿ ರಚಿಸಲಾಗಿದೆ.
ಕೃಷಿ ಸಚಿವ ಕೃಷ್ಣ ಬೈರೇಗೌಡ ಇದಕ್ಕೆ ಸಹ ಅಧ್ಯಕ್ಷರು. ರೈತ ಸಮುದಾಯದಿಂದ ಐವರು, ಕಾರ್ಖಾನೆ ಮಾಲೀಕರ ಕಡೆಯಿಂದ ಐವರು ಸದಸ್ಯರು, ಕೈಗಾರಿಕೆ, ಹಣಕಾಸು ಹಾಗೂ ಸಹಕಾರ ಇಲಾಖೆ ಕಾರ್ಯದರ್ಶಿಗಳು ಇದರ ಸದಸ್ಯರಾಗಿದ್ದಾರೆ. ಆದರೆ ಸಮಿತಿ ರಚನೆಗೊಂಡ ನಂತರ ಇದುವರೆಗೆ ಸಭೆ ನಡೆದಿಲ್ಲ. ಈ ಬಗ್ಗೆ ರೈತ ಸಮುದಾಯದಲ್ಲಿ ಅದರಲ್ಲೂ ವಿಶೇಷವಾಗಿ ಮಂಡ್ಯ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕಬ್ಬು ಬೆಲೆ ನಿಗದಿಯಲ್ಲಿ ಪ್ರಧಾನ ಪಾತ್ರ ವಹಿಸುವ ಸಕ್ಕರೆ ಆಯುಕ್ತರ ಹುದ್ದೆಗೆ ಸರ್ಕಾರ ಇದುವರೆಗೆ ಯಾರನ್ನೂ ನೇಮಕ ಮಾಡಿಲ್ಲ. ಈ ಹಿಂದೆ ಆಯುಕ್ತರಾಗಿದ್ದ ಸತ್ಯಮೂರ್ತಿ ಅವರನ್ನು ತುಮಕೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದ್ದು, ಕಳೆದ ಒಂದೂವರೆ ತಿಂಗಳಿಂದ ಆಯುಕ್ತರ ಹುದ್ದೆ ಖಾಲಿ ಇದೆ.
ಚುನಾವಣೆ ನೆಪ: ಈ ಬಗ್ಗೆ ರೈತಪರ ಸಂಘಟನೆ ಪ್ರತಿನಿಧಿಗಳು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆದರೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರಕ್ರಿಯೆ ಆರಂಭಿಸುವುದು ಸಾಧ್ಯವಿಲ್ಲ. ಚುನಾವಣೆ ಮುಕ್ತಾಯಗೊಳ್ಳುವವರೆಗೆ ತಾಳ್ಮೆ ವಹಿಸುವಂತೆ ಸಲಹೆ ನೀಡಿದ್ದರು. ಇಷ್ಟಾದರೂ ಮಂಡ್ಯದ ರೈತರು ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಸರ್ಕಾರಕ್ಕೆ ಸಿಹಿ ನೀಡಿದ್ದರು. ಆದರೆ ಸರ್ಕಾರ ಮಾತ್ರ ಕಬ್ಬು ಬೆಳೆಗಾರರಿಗೆ ಈ ಬಾರಿಯೂ ಕಹಿ ತಿನಿಸುವ ಎಲ್ಲ ಲಕ್ಷಣಗಳು ಕಾಣುತ್ತಿವೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಸಕ್ಕರೆ ಸಚಿವ ಪ್ರಕಾಶ್ ಹುಕ್ಕೇರಿ ಹಾಗೂ ಕೃಷಿ ಸಚಿವ ಕೃಷ್ಣ ಬೈರೇಗೌಡ ಇದುವರೆಗೆ ದಕ್ಷಿಣ ಕರ್ನಾಟಕದ ಕಬ್ಬು ಬೆಳೆಯುವ ಪ್ರದೇಶಗಳಿಗೆ ಭೇಟಿ ಮಾಡಿ ರೈತರ ಅಹವಾಲು ಕೇಳಿಲ್ಲ.
ಎರಡು ವರ್ಷದಿಂದ ಆಗಿಲ್ಲ: ಎಸ್ಎಪಿ ಜಾರಿಗೆ ಬದ್ಧ ಎನ್ನುವ ರಾಜ್ಯ ಸರ್ಕಾರ ಈ ವರ್ಷದ ಹಂಗಾಮಿನ ಮಾತಿರಲಿ ಕಳೆದ ಎರಡು ವರ್ಷದ ಬಾಕಿ ಬೆಲೆ ನಿಗದಿ ಮಾಡಿಲ್ಲ. ಕಳೆದ ವರ್ಷ ಟನ್ಗೆ ರು. 2400 ನಿಗದಿ ಮಾಡಲಾಗಿತ್ತು. ಸೋಮವಾರ ಮಂಡ್ಯದಲ್ಲಿ ರೈತರ ಜತೆ ಸಭೆ ನಡೆಸಿರುವ ಉಸ್ತುವಾರಿ ಸಚಿವ ಅಂಬರೀಷ್ ಈ ಬಾರಿಯೂ ರು. 2400 ಮುಂಗಡ ಬೆಲೆಯಾಗಿ ಪರಿಗಣಿಸುವುದಾಗಿ ಹೇಳಿದ್ದಾರೆ. ಇದು ರೈತ ಸಮುದಾಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಕಬ್ಬಿಗೆ ಬೆಲೆ ನಿಗದಿ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಇಚ್ಛಾಶಕ್ತಿ ಪ್ರದರ್ಶನ ಮಾಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವೇಗಕ್ಕೆ ಉಳಿದ ಸಚಿವರು ಸ್ಪಂದಿಸುತ್ತಿಲ್ಲವೇ ? ಎಂಬ ಅನುಮಾನ ಮೂಡುತ್ತಿದೆ. ಸಚಿವರು ಸೌಜನ್ಯಕ್ಕೂ ರೈತರನ್ನು ಮಾತನಾಡಿಸಿಲ್ಲ. ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಗಳಿಗೆ ಉದ್ದಿಮೆಯ ಪರಿಚಯವಿಲ್ಲದ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ನಿರ್ದೇಶಕರನ್ನಾಗಿ ನೇಮಕ ಮಾಡಲಾಗುತ್ತಿದೆ.
- ಕುರುಬೂರು ಶಾಂತ ಕುಮಾರ್, ರೈತ ಮುಖಂಡ
- ರಾಘವೇಂದ್ರ ಭಟ್