ಇಂದು ಮೇಯರ್ ಹುದ್ದೆಗೆ ಚುನಾವಣೆ
ಬೆಂಗಳೂರು: ಬಿಜೆಪಿಯ ಹಿರಿಯ ಸದಸ್ಯ ಕಟ್ಟೆ ಸತ್ಯನಾರಾಯಣ ಮೇಯರ್ ಹುದ್ದೆ ಅಲಂಕರಿಸುವುದು ಬಹುತೇಕ ಖಚಿತವಾಗಿದ್ದು, ಬುಧವಾರ ನಡೆಯುವ ಚುನಾವಣೆ ನಂತರ ಅಧಿಕೃತ ಘೋಷಣೆಯಾಗಲಿದೆ. ಬಿಜೆಪಿ ನಾಯಕರು ಪಾಲಿಕೆ ಸದಸ್ಯರ ಅಭಿಪ್ರಾಯ ಸಂಗ್ರಹದ ಶಾಸ್ತ್ರ ಮುಗಿಸಿದ್ದು, ಅಂತಿಮವಾಗಿ ಕಟ್ಟೆ ಸತ್ಯ ಅವರ ಹೆಸರನ್ನು ಅಖೈರುಗೊಳಿಸಿದ್ದಾರೆ. ಬುಧವಾರ ನಡೆವ ಚುನಾವಣೆಯಲ್ಲಿ ಸತ್ಯ ಅವರನ್ನೇ ಕಣಕ್ಕಿಳಿಸಿದ್ದಾರೆ.
ಅಲ್ಲದೆ, ಸಭೆಗೆ ತಪ್ಪದೇ ಹಾಜರಾಗಬೇಕು ಮತ್ತು ಸತ್ಯ ಅವರಿಗೇ ಮತ ಹಾಕಬೇಕೆಂದು ಬಿಜೆಪಿ ನಗರ ಘಟಕ ಸದಸ್ಯರಿಗೆ ವಿಪ್ ಕೂಡ ಜಾರಿ ಮಾಡಿದೆ. ಸದಸ್ಯರಿಂದ ವಿಪ್ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಮಾಜಿ ಉಪ ಮೇಯರ್ ಎಸ್. ಹರೀಶ್ ಅವರನ್ನು ಮುಖ್ಯ ಸಚೇತಕರನ್ನಾಗಿ ನಿಯೋಜಿಸಲಾಗಿದೆ.
ಇದೇ ರೀತಿ ಕಾಂಗ್ರೆಸ್ ಕೂಡ ಚುನಾವಣೆಗೆ ಸಿದ್ಧವಾಗಿದ್ದು, ಬ್ಯಾಟರಾಯನಪುರ ವಾರ್ಡ್ನ ಇಂದಿರಾ ಅವರನ್ನು ಉಪ ಮೇಯರ್ ಸ್ಥಾನಕ್ಕೆ ಕಣಕ್ಕಿಳಿಸಿ, ಆಡಳಿತದಲ್ಲಿ ಪಾಲು ಪಡೆಯಲು ಮುಂದಾಗಿದ್ದಾರೆ.
ಬಿಜೆಪಿಯಲ್ಲಿ ಏನಾಯಿತು?: ಮೇಯರ್ ಅಭ್ಯರ್ಥಿ ಆಯ್ಕೆ ಸಂಬಂಧ ಅಭಿಪ್ರಾಯ ಸಂಗ್ರಹಿಸಲು ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದರು. ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ, ಶಾಸಕರಾದ ವಿಜಯಕುಮಾರ್, ಡಾ.ಅಶ್ವತ್ಥ್ ನಾರಾಯಣ ನೇತೃತ್ವದಲ್ಲಿ ಬಿಜೆಪಿ ಮುಖಂಡರ ನೇತೃತ್ವದ ಸಭೆಯಲ್ಲಿ ಮೇಯರ್, ಉಪ ಮೇಯರ್, ಆಡಳಿತ ಪಕ್ಷ ನಾಯಕ ಸೇರಿದಂತೆ ಎಲ್ಲಾ ಸದಸ್ಯರು ಹಾಜರಿದ್ದರು.
ವಿಷಯ ಪ್ರಸ್ತಾಪಿಸಿದ ಮುಖಂಡರು, ಮೇಯರ್ ಅಭ್ಯರ್ಥಿ ಬಗ್ಗೆ ಅನಿಸಿಕೆಗಳನ್ನು ಹೇಳುವಂತೆ ಎಲ್ಲಾ ಸದಸ್ಯರನ್ನೂ ಕೇಳಿದರು. ಬಹುತೇಕರು ಕಟ್ಟೆ ಸತ್ಯನಾರಾಯಣ ಮೇಯರ್ ಆಗಲಿ ಎಂದು ಸಲಹೆ ನೀಡಿದರು. ಹಾಗೆಯೇ ನಂಜುಂಡಪ್ಪ ಪರ ಕೂಡ ಕೆಲವರು ವಕಾಲತ್ತು ವಹಿಸಿದರು. ಹೆಚ್ಚಿನವರು ಕಟ್ಟೆ ಸತ್ಯ ಪರ ಅಭಿಪ್ರಾಯ ವ್ಯಕ್ತಪಡಿಸಿದರು. ಇದೆಲ್ಲವನ್ನೂ ಕೇಳಿದ ಪಕ್ಷದ ನಾಯಕರು, ಸಭೆಯಲ್ಲಿ ಮೇಯರ್ ಅಭ್ಯರ್ಥಿ ಹೆಸರು ಪ್ರಕಟಿಸಲಿಲ್ಲ. ಮತ್ತೊಂದು ಬಾರಿ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದಷ್ಟೇ ಹೇಳಿದರು.
ನಾಯಕರು ಬುಧವಾರ ಮತ್ತೊಂದು ಸುತ್ತಿನ ಸಭೆ ನಡೆಸಿ ಕಟ್ಟೆ ಸತ್ಯ ಅವರನ್ನು ನಾಮಪತ್ರ ಸಲ್ಲಿಸುವಂತೆ ಸೂಚಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ಬುಧವಾರ ಬೆಳಗ್ಗೆ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದ್ದು, ಪ್ರಾದೇಶಿಕ ಆಯುಕ್ತ ಗೌರವಗುಪ್ತಾ ಹಾಗೂ ಕಚೇರಿ ಸಿಬ್ಬಂದಿ ಚುನಾವಣೆ ನಡೆಸಲಿದ್ದಾರೆ. ಬೆಳಗ್ಗೆ 9ಗಂಟೆಗೆ ನಾಮಪತ್ರಗಳ ಸಲ್ಲಿಕೆಯಾಗಲಿದ್ದು, ಮಧ್ಯಾಹ್ನ 1ಗಂಟೆಗೆ ಮತದಾನ ನಡೆಯಲಿದೆ. ಸಭೆಯಲ್ಲಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ನಡೆದು ಅಲ್ಲೇ ಘೋಷಣೆಯೂ ಆಗಲಿದೆ.
ಸದಸ್ಯ ಬಲ ಹೀಗಿದೆ?
ಬಿಬಿಎಂಪಿಯ ಒಟ್ಟು 198 ಸದಸ್ಯರ ಪೈಕಿ ಬಿಜೆಪಿ 112, ಕಾಂಗ್ರೆಸ್ 63, ಜೆಡಿಎಸ್ 13 ಮತ್ತು ಪಕ್ಷೇತರ 10 ಮಂದಿ ಸದಸ್ಯರಿದ್ದಾರೆ. ಇವರೊಂದಿಗೆ ಸಂಸದರು 5ಮಂದಿ, ರಾಜ್ಯಸಭಾ ಸದಸ್ಯರು 6, ವಿಧಾನಪರಿಷತ್ ಸದಸ್ಯರು 14 ಹಾಗೂ ಶಾಸಕರು 28 ಮಂದಿ ಇದ್ದಾರೆ. ಒಟ್ಟು 251ಮಂದಿ ಸದಸ್ಯರಾಗಲಿದ್ದು, ಇದರಲ್ಲಿ ಶೇ.50 ಮತ ಪಡೆದವರು ಮೇಯರ್, ಉಪ ಮೇಯರ್ ಆಗಿ ಆಯ್ಕೆಯಾಗುತ್ತಾರೆ. ಈ ಬಾರಿಯ ವಿಶೇಷವೆಂದರೆ, ಕಾಂಗ್ರೆಸ್ ಸದಸ್ಯರಾದ ಮುನಿರತ್ನ ಮತ್ತು ಬೈರತಿ ಬಸವರಾಜು ಶಾಸಕರಾಗಿದ್ದಾರೆ. ಆದರೆ ಇವರು ಶಾಸಕರಾಗಿ ಮತಚಲಾಯಿಸಬೇಕು ಇಲ್ಲವೇ ಪಾಲಿಕೆ ಸದಸ್ಯರಾಗಿ ಮತ ಚಲಾಯಿಸಬೇಕು. ಎರಡೂ ಹುದ್ದೆಗಳನ್ನಾಧರಿಸಿ ಎರಡು ಮತ ಚಲಾಯಿಸುವುದಕ್ಕೆ ಅವಕಾಶವಿಲ್ಲ ಎಂದು ಕೌನ್ಸಿಲ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಾಯಿ ಸಮಿತಿಗಳಿಗೆ ಗ್ರಹಣ!
ಪ್ರಾದೇಶಿಕ ಆಯುಕ್ತರು ಬುಧವಾರ ಮೇಯರ್, ಉಪ ಮೇಯರ್ ಚುನಾವಣೆಯನ್ನೇನೋ ನಡೆಸುತ್ತಾರೆ. ಆದರೆ, ವಿವಿಧ ಸ್ಥಾಯಿ ಸಮಿತಿಗಳ ಚುನಾವಣೆ ನಡೆಯುವ ಸಾಧ್ಯತೆ ತುಂಬಾ ಕ್ಷೀಣ. ಏಕೆಂದರೆ, ಸಮಿತಿಗಳಿಗೆ ಯಾರೆಲ್ಲಾ ಸದಸ್ಯರು ನಾಮಪತ್ರ ಸಲ್ಲಿಸಬೇಕೆನ್ನುವ ಬಗ್ಗೆ ಆಡಳಿತ ಪಕ್ಷ ಬಿಜೆಪಿ ಹಾಗೂ ಪ್ರತಿ ಪಕ್ಷ ಕಾಂಗ್ರೆಸ್ ಕೂಡ ಇನ್ನೂ ಚಿಂತನೆ ನಡೆಸಿಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ ನಿರ್ಧಾರ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗ ರೆಡ್ಡಿ ವಿದೇಶ ಪ್ರವಾಸದಲ್ಲಿದ್ದಾರೆ. ಹೀಗಾಗಿ ಸ್ಥಾಯಿ ಸಮಿತಿ ಚುನಾವಣೆ ಸದ್ಯಕ್ಕೆ ನಡೆಯಲಾರದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮೇಯರ್, ಉಪ ಮೇಯರ್ ಚುನಾವಣೆ ನಡೆಸುತ್ತೇವೆ. ಅದಕ್ಕೆ ತಕ್ಕ ಸಿದ್ಧತೆ ನಡೆದಿದೆ. ಆದರೆ, ಸ್ಥಾಯಿ ಸಮಿತಿಗಳ ಚುನಾವಣೆ ಮಾತ್ರ ಪರಿಸ್ಥಿತಿ ನೋಡಿ ನಿರ್ಧರಿಸುತ್ತೇವೆ. ಚುನಾವಣೆ ಮುಂದೂಡಲು ನನಗೆ ಅಧಿಕಾರವಿದೆ.
- ಗೌರವ್ಗುಪ್ತಾ, ಪ್ರಾದೇಶಿಕ ಆಯುಕ್ತ