ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಉದ್ಘಾಟನೆಯಾಗಿ 7 ತಿಂಗಳಲ್ಲೆ ನೋಡಿರಣ್ಣ ಹೇಗಿದೆ..?

Mainashree
Updated On : 4 Sept 2013, 11:35 am

ಕ.ಪ್ರ.ವಾರ್ತೆ  ಬೆಂಗಳೂರು  ಸೆ. 3-
ನಿರ್ಮಿತಿ ಕೇಂದ್ರದ ಕಳಪೆ ಕಾಮಗಾರಿಯಿಂದಾಗಿ ಪ್ರೌಢಶಾಲಾ ಕಟ್ಟಡವೊಂದು ಉದ್ಘಾಟನೆಯಾದ ಏಳು ತಿಂಗಳುಗಳಲ್ಲೇ ಪೂರ್ತಿ ಸೋರಲಾರಂಭಿಸಿದೆ.
ಸ್ಥಳೀಯರೊಬ್ಬರು ದಾನವಾಗಿ ನೀಡಿದ ಭೂಮಿಯಲ್ಲಿ ಈ ಶಾಲಾ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಿದ್ದು, ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಂಡಿದ್ದ ನಿರ್ಮಿತಿ ಕೇಂದ್ರದ ಕಳಪೆ ಕಾಮಗಾರಿಯಿಂದಾಗಿ ಎಲ್ಲಾ ಪ್ರಯತ್ನ ನೀರಲ್ಲಿ ತೊಳೆದುಹೋಗಿದೆ.
ಪರಿಣಾಮ, ಸರ್ಕಾರದ ಅಂಗಸಂಸ್ಥೆಯಾದ ನಿರ್ಮಿತಿ ಕೇಂದ್ರದಿಂದಲೇ ಸರ್ಕಾರದ ಲಕ್ಷಾಂತರ ರುಪಾಯಿ ಮೊತ್ತದ ಹಣ ಪೋಲಾಗಿರುವುದು ಮಾತ್ರವಲ್ಲ, ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಆತಂಕದಲ್ಲೇ ಪಾಠ ಕಲಿಯುವಂತಾಗಿದೆ.
ಭೂಮಿ ನೀಡಿದ್ದ ದಾನಿಗಳು ಕಳಪೆ ಕಾಮಗಾರಿ ನಡೆಯುತ್ತಿರುವುದರ ಬಗ್ಗೆ ಶಾಲಾ ಕಟ್ಟಡ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲೇ ಎರಡು ಬಾರಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಜರುಗಿಸಲಾಗಿಲ್ಲ.
ಈಗ ಸೋರುತ್ತಿರುವ ಶಾಲೆಯಲ್ಲಿ ಮಕ್ಕಳು ಆತಂಕದಿಂದ ಪಾಠ ಕಲಿಯುವಂತಾಗಿರುವುದನ್ನು ನೋಡಿ ಬೇಸತ್ತಿರುವ ಅವರು, ಕಳಪೆ ಕಾಮಗಾರಿ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಚಿವರು ಮತ್ತು ಮುಖ್ಯಮಂತ್ರಿಗಳಲ್ಲದೇ ರಾಜ್ಯಪಾಲರಿಗೆ ಕೂಡ ದೂರು ಸಲ್ಲಿಸಿದ್ದಾರೆ. ಆದರೆ, ಯಾರೊಬ್ಬರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಎಲ್ಲಿಯ ಶಾಲೆ, ಏನಿದರ ಹಿನ್ನೆಲೆ?: ಹಾವೇರಿ ಜಿಲ್ಲಾ ರಾಣೆಬೆನ್ನೂರು ತಾಲೂಕು ಹೆಡಿಯಾಲ ಗ್ರಾಮದಲ್ಲಿ ನಿರ್ಮಿಸಲಾಗಿರುವ ಪುರದಾಳ ಶ್ರೀಮತಿ ಮಳಿಯಮ್ಮ ಬಸಪ್ಪ ಸರ್ಕಾರಿ ಪ್ರೌಢಶಾಲಾ ಕಟ್ಟಡವೇ ನಿರ್ಮಿತಿ ಕೇಂದ್ರದ ಈ ಕಳಪೆ ಕಾಮಗಾರಿಗೆ ಸಾಕ್ಷಿ. 5 ವರ್ಷಗಳ ಹಿಂದೆ ಈ ಪ್ರದೇಶಕ್ಕೆ ಮಂಜೂರಾಗಿದ್ದ ಪ್ರೌಢಶಾಲಾ ನಿರ್ಮಾಣಕ್ಕೆ ಅಗತ್ಯ ಭೂಮಿ ಸಿಗದ ಕಾರಣ ಬೇರೆ ಸ್ಥಳದಲ್ಲಿ ಶಾಲೆ ನಿರ್ಮಿಸುವ ವಿಚಾರ ಪ್ರಸ್ತಾಪದಲ್ಲಿತ್ತು.
ಆಗ ಸ್ಥಳೀಯರಾದ ಬಿ.ಬಿ. ಪುರದಾಳ ಮತ್ತು ಅವರ ಸೋದರ ಪಿ.ಬಿ. ಓಂಕಾರಪ್ಪ ಅವರು ಊರಿನ ಬಡಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ಬಯಕೆಯಿಂದ ಬ್ಯಾಂಕ್ನಲ್ಲಿ 7.1 ಲಕ್ಷ ಸಾಲ ಮಾಡಿ, 2.1 ಎಕರೆ ಭೂಮಿಯನ್ನು ಸೋದರ ಮಹೇಶ್ವರಪ್ಪ ಬಸಪ್ಪ ಪುರದಾಳ ಅವರ ಹೆಸರಿನಲ್ಲಿ ಖರೀದಿಸಿ, ಅದನ್ನು ಶಾಲಾ ಕಟ್ಟಡ ನಿರ್ಮಾಣಕ್ಕಾಗಿ 2008ರ ಆ. 26ರಂದು ರಾಜ್ಯಪಾಲರ ಹೆಸರಿನಲ್ಲಿ ದಾನವಾಗಿ ನೀಡಿದ್ದರು. ಹಾಗೆ ನಿರ್ಮಿಸಲಾಗುವ ಶಾಲಾ ಕಟ್ಟಡಕ್ಕೆ ಹಾಗೂ ಶಾಲೆಯ ಎಲ್ಲ ದಾಖಲಾತಿಗಳಲ್ಲಿ ತಮ್ಮ ತಂದೆ- ತಾಯಿ ಬಸಪ್ಪ ಮತ್ತು ಮಳಿಯಮ್ಮ ಅವರ ಹೆಸರನ್ನು ಇಡುವಂತೆ ಕೋರಿದ್ದರು. ಹಾಗೆ ದಾನವಾಗಿ ನೀಡಲಾದ ಸ್ಥಳದಲ್ಲಿ ಪ್ರೌಢಶಾಲಾ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರ 23 ಲಕ್ಷ ಅನುದಾನ ಕೂಡ ನೀಡಿತ್ತು. ಕಟ್ಟಡ ನಿರ್ಮಾಣ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. 2011ರ ಮಾ. 26ರಂದು ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದು, 2012ರ ಡಿ. 21ರಂದು ಪ್ರೌಢಶಾಲಾ ಕಟ್ಟಡ ಉದ್ಘಾಟನೆಯಾಗಿತ್ತು. ಆದರೆ, ಉದ್ಘಾಟನೆಯಾದ ಕೇವಲ ಏಳು ತಿಂಗಳಲ್ಲಿ ಪ್ರೌಢಶಾಲಾ ಕಟ್ಟಡದ ಐದೂ ಕೊಠಡಿಗಳು ಹಾಗೂ ವರಾಂಡಗಳನ್ನು ಒಳಗೊಂಡಂತೆ ಪೂರ್ತಿ ಕಟ್ಟಡ ಸೋರುತ್ತಿದೆ.

ಕಟ್ಟಡ ನಿರ್ಮಾಣ ವೇಳೆ ಒಮ್ಮೆ ಊರಿಗೆ ಹೋಗಿದ್ದಾಗ ಕಾಮಗಾರಿ ಕಳಪೆಯಾಗಿರುವುದು ಗಮನಕ್ಕೆ ಬಂದಿತ್ತು. ಆ ಬಗ್ಗೆ ಎರಡು ಬಾರಿ(2012ರ ಜೂ. 11 ಮತ್ತು ಆ. 30ರಂದು) ಹಾವೇರಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕಾಮಗಾರಿಯಲ್ಲಿನ ಅವ್ಯವಹಾರ ಹಾಗೂ ಕಳಪೆತನದ ಕುರಿತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಕೋರಿದ್ದೆ. ಅಂದು ಕ್ರಮ ಕೈಗೊಂಡಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಹಾಗೆಯೇ, ಈಗ ಮಕ್ಕಳು ಕಳಪೆ ನಿರ್ಮಾಣದ ಕಟ್ಟಡದಲ್ಲಿ ಕಲಿಯುತ್ತಿರುವುದು ಆತಂಕ ಮೂಡಿಸಿದೆ. ಈಗಲಾದರೂ ಸಂಬಂಧಿತರು ಆ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸುವಂತಾಗಬೇಕು ಎಂದು ರಾಜ್ಯಪಾಲರು, ಮುಖ್ಯಮಂತ್ರಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಚಿವರು, ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೂ ಪತ್ರ ಬರೆದು ಕೋರಲಾಗಿದೆ. ಆದರೆ, ಆ ಪತ್ರಕ್ಕೆ ಇದುವರೆಗೆ ಯಾರಿಂದಲೂ ಪ್ರತಿಕ್ರಿಯೆ ಬಂದಿಲ್ಲ.
-ಬಿ.ಬಿ. ಪುರದಾಳ, ರಾಜ್ಯ ನಿವೃತ್ತ ಸಹಾಯಕ ಆಯುಕ್ತ, ಬೆಂಗಳೂರು  

- ರವಿಕಾಂತ ಕುಂದಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement