ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಡತ ಹುಡುಕುತ್ತೇವೆ

ಈಗಾಗಲೇ ಭಾರಿ ಸಂಖ್ಯೆಯ ಕಡತಗಳನ್ನು ಸಿಬಿಐಗೆ ನೀಡಿದ್ದೇವೆ, ನೀವೆಲ್ಲರೂ ಹೇಳಿರುವ ಹಾಗೆ ಕಲ್ಲಿದ್ದಲು ಕಡತಗಳು ನಾಪತ್ತೆಯಾಗಿದ್ದರೆ ಹುಡುಕುವ...

Mainashree
Updated On : 4 Sept 2013, 12:36 pm

ಪಿಟಿಐ ನವದೆಹಲಿ ಸೆ.3-
ಈಗಾಗಲೇ ಭಾರಿ ಸಂಖ್ಯೆಯ ಕಡತಗಳನ್ನು ಸಿಬಿಐಗೆ ನೀಡಿದ್ದೇವೆ, ನೀವೆಲ್ಲರೂ ಹೇಳಿರುವ ಹಾಗೆ ಕಲ್ಲಿದ್ದಲು ಕಡತಗಳು ನಾಪತ್ತೆಯಾಗಿದ್ದರೆ ಹುಡುಕುವ ಪ್ರಯತ್ನ ಮಾಡುತ್ತೇವೆ, ಒಂದು ವೇಳೆ ಫೈಲ್ಗಳು ಕಾಣೆಯಾಗಿದ್ದರೆ, ಇದಕ್ಕೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಖಂಡಿತ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಸರ್ಕಾರದ ಮೇಲೆ ಯಾವುದೇ ಸಂಶಯ ಬೇಡ...
ಇದು ಪ್ರಧಾನಿ ಮನಮೋಹನ್ ಸಿಂಗ್ ಅವರು ಕಲ್ಲಿದ್ದಲು ಹಗರಣದ ಫೈಲ್ಗಳ ನಾಪತ್ತೆ ಪ್ರಕರಣದ ಬಗ್ಗೆ ನೀಡಿದ ಹೇಳಿಕೆ.  ನಾನೇನು ಕಡತಗಳ ಕಾವಲುಗಾರನೇ ಎಂಬ ಪ್ರಶ್ನೆ ಕೇಳಿ ವಿಪಕ್ಷಗಳ ಕೋಪಕ್ಕೆ ತುತ್ತಾಗಿದ್ದ ಪ್ರಧಾನಿ ಮನಮೋಹನ್ ಸಿಂಗ್ ಕಡೆಗೂ ಸಂಸತ್ನಲ್ಲಿ ಈ ಹೇಳಿಕೆ ನೀಡಿದರು.
ರಷ್ಯಾದಲ್ಲಿ ನಡೆಯಲಿರುವ ಜಿ20 ಶೃಂಗ ಸಭೆಗೆ ತೆರಳುತ್ತಿರುವ ಪ್ರಧಾನಿ ಸಿಂಗ್ ಅವರಿಗೆ ಹೇಳಿಕೆ ನೀಡಲು ಉಳಿದದ್ದು ಇದೊಂದೇ ದಿನ. ಹೀಗಾಗಿ ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿದ ಪ್ರಧಾನಿ ಸಿಂಗ್ ಅವರು ಸಂಸತ್ನ ಎರಡೂ ಸದನಗಳಲ್ಲಿ ಹೇಳಿಕೆ ನೀಡಿದರು. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಏನನ್ನೂ ಮುಚ್ಚಿಡುವುದಿಲ್ಲ. ಅಲ್ಲದೆ ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಿಯೇ ಆಗುತ್ತದೆ. ನಾವು ಹುಡುಕುವುದೇ ಇಲ್ಲ, ತಪ್ಪಿತಸ್ಥರನ್ನು ಬಚಾವ್ ಮಾಡಲಾಗುತ್ತದೆ ಎಂಬ ನಕಾರಾತ್ಮಕ ಅಂತ್ಯಕ್ಕೆ ಬರಬೇಡಿ. ಈ ಬಗ್ಗೆ ಕೇಂದ್ರ ಸರ್ಕಾರ ಭರವಸೆ ನೀಡುತ್ತದೆ ಎಂದರು.
ಜೊತೆಗೆ ಕಲ್ಲಿದ್ದಲು ಹಗರಣದ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಹೇಳಿಕೆ ನೀಡಲು ಸಾಧ್ಯವಿಲ್ಲ. ಹೀಗಾಗಿ ನಾನಿಲ್ಲಿ ಕೇವಲ ಕಡತಗಳ ನಾಪತ್ತೆ ಪ್ರಕರಣದಲ್ಲಿನ ತಪ್ಪಿತಸ್ಥರ ಬಗ್ಗೆ ಮಾತನಾಡುತ್ತಿದ್ದೇನೆ. ಇಲ್ಲಿ ಯಾರ ಹಿತವನ್ನೂ ಕಾಯುತ್ತಿಲ್ಲ ಎಂದರು.

ಪ್ರತಿಪಕ್ಷಗಳ ಆಕ್ರೋಶ: ಪ್ರಧಾನಿ ಹೇಳಿಕೆಯಿಂದ ಅಸಂತೃಪ್ತರಾದ ಪ್ರತಿಪಕ್ಷ ಸದಸ್ಯರು, ನೇರವಾಗಿಯೇ ತರಾಟೆಗೆ ತೆಗೆದುಕೊಂಡರು. ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಮತ್ತು ಎಲ್.ಕೆ. ಆಡ್ವಾಣಿ ಅವರು ಮಾತನಾಡುವ ಬಗ್ಗೆ ಬೇಡಿಕೆ ಇಟ್ಟರು. ಆದರೆ ಸ್ಪೀಕರ್ ಮೀರಾಕುಮಾರ್ ಅವರು ಅವಕಾಶ ಕೊಡದ ಕಾರಣ ಗದ್ದಲವುಂಟಾಗಿ ಸದನವನ್ನು ಮುಂದೂಡಬೇಕಾಯಿತು. ಅಲ್ಲದೆ ಎರಡೂ ಸದನಗಳಲ್ಲಿ ಗದ್ದಲ ಹೆಚ್ಚಾಗಿದ್ದರಿಂದ ದಿನದ ಮಟ್ಟಿಗೆ ಮುಂದೂಡಲಾಯಿತು.

ಪ್ರತಿಪಕ್ಷ ನಾಯಕರನ್ನು ಭೋಜನಕ್ಕೆ ಕರೆದ ಪ್ರಧಾನಿ
ಕಲ್ಲಿದ್ದಲು ಕಡತಗಳ ನಾಪತ್ತೆ ಪ್ರಕರಣ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಸಿಟ್ಟುಗೊಂಡಿರುವ ಬಿಜೆಪಿ ನಾಯಕರನ್ನು ಸಮಾಧಾನಪಡಿಸುವ ಸಲುವಾಗಿ ಮಂಗಳವಾರ ರಾತ್ರಿ ಭೋಜನಕ್ಕೆ ಕರೆದಿದ್ದರು. ಎಲ್.ಕೆ. ಆಡ್ವಾಣಿ, ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಅವರಿಗೆ ಈ ಆಹ್ವಾನ ನೀಡಲಾಗಿತ್ತು. ಸರ್ಕಾರ ಮತ್ತು ಪ್ರಮುಖ ವಿಪಕ್ಷ ಬಿಜೆಪಿ ನಡುವೆ ಸೌಹಾರ್ದ ಮೂಡಿಸುವ ಸಂಬಂಧ ಈ ಭೋಜನ ಕೂಟ ಆಯೋಜಿಸಲಾಗಿತ್ತು ಎಂದು ಮೂಲಗಳು ಹೇಳಿವೆ.

ಕಡತಗಳ ನಾಪತ್ತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇದುವರೆಗೆ ಏಕೆ ಎಫ್ಐಆರ್ ದಾಖಲಿಸಿಲ್ಲ, ಯಾರೊಬ್ಬರ ಮೇಲೂ ತನಿಖೆ ಮಾಡಿಲ್ಲ? ಇಂಥ ಕ್ರಮಗಳು ಅನುಮಾನ ಹುಟ್ಟಿಸುತ್ತವೆ ಅಲ್ಲವೇ. ಕಡತ ನಾಪತ್ತೆಯಾಗಿದ್ದು ಹೇಗೆ ಎಂಬ ಬಗ್ಗೆ ನಮಗೆ ಮಾಹಿತಿ ಬೇಕೇಬೇಕು. ಸಂಸತ್ನಲ್ಲಿರುವ ನಮಗೆ ತಿಳಿಯುವ ಹಕ್ಕಿದೆ.
- ಸೀತಾರಾಂ ಯೆಚೂರಿ
ಸಿಪಿಎಂ ನಾಯಕ

ಕಡತಗಳ ನಾಪತ್ತೆ ಬಗ್ಗೆ ಸರ್ಕಾರದ ಮೇಲೆ ಅನುಮಾನ ಬೇಡ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇವೆ. ಕಡತಗಳನ್ನು ಹುಡುಕಿ ಸಿಬಿಐಗೆ ನೀಡುತ್ತೇವೆ. ತನಿಖೆಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡುತ್ತೇವೆ. ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ಇರುವುದರಿಂದ ಈ ಬಗ್ಗೆ ಹೆಚ್ಚು ಮಾತನಾಡುವುದು ಸರಿಯಲ್ಲ ಎನ್ನಿಸುತ್ತದೆ.
- ಪ್ರಧಾನಿ ಮನಮೋಹನ್ ಸಿಂಗ್

ಕಡತಗಳು ನಾಪತ್ತೆಯಾಗಿರುವುದು ಗಂಭೀರ ವಿಚಾರ. ಪ್ರಧಾನಮಂತ್ರಿಯವರು ಇದನ್ನು ಗಣನೆಗೆ ತೆಗೆದುಕೊಳ್ಳಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇಷ್ಟು ದಿನವಾದರೂ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಬಗ್ಗೆ ಸದನಕ್ಕೆ ಮಾಹಿತಿ ನೀಡಬೇಕು. ಸುಪ್ರೀಂಕೋರ್ಟ್ ಮಧ್ಯಪ್ರವೇಶಿದ್ದರೂ ಏಕೆ ಎಫ್ಐಆರ್ ದಾಖಲಾಗಿಲ್ಲ ಎಂಬುದೇ ಗೊತ್ತಾಗುತ್ತಿಲ್ಲ.
- ಮಾಯಾವತಿ
ಬಿಎಸ್ಪಿ ನಾಯಕಿ

2006 ರಿಂದ 2009ರ ವರೆಗೆ ಪ್ರಧಾನಿ ಅವರೇ ಕಲ್ಲಿದ್ದಲು ಸಚಿವಾಲಯದ ಹೊಣೆ ಹೊತ್ತಿದ್ದರು. ಈ ಅವಧಿಯಲ್ಲಿ ನಾಪತ್ತೆಯಾಗಿರುವ ಕಡತಗಳ ಬಗ್ಗೆ ಮಾಹಿತಿ ಬೇಕು. ಸರ್ಕಾರ ಕಲ್ಲಿದ್ದಲು ಬ್ಲಾಕ್ಗಳನ್ನು ಬೇಕಾದಂತೆ, ಸ್ವಜನಪಕ್ಷಪಾತದಿಂದ ಹಂಚಿಕೆ ಮಾಡಿದೆ. ಹೀಗಾಗಿಯೇ ಸಾಕ್ಷ್ಯ ನಾಶಪಡಿಸಲು ಕಡತಗಳನ್ನು ನಾಶಪಡಿಸಿದೆ.
- ಅರುಣ್ ಜೇಟ್ಲಿ
ರಾಜ್ಯಸಭೆ ವಿಪಕ್ಷ ನಾಯಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement