ಕ್ಷಿಪಣಿ ತಂದ ಗೊಂದಲ
ಸಿರಿಯಾ ಮೇಲೆ ದಾಳಿ ನಡೆಸಲು ಅಮೆರಿಕ ತುದಿಗಾಲಲ್ಲಿ ನಿಂತಿರುವಾಗಲೇ ಸಿರಿಯಾದತ್ತ ಎರಡು ಕ್ಷಿಪಣಿಗಳು ನುಗ್ಗಿ ಬಂದಿವೆ. ಮಂಗಳವಾರ ಮೆಡಿಟರೇನಿಯನ್ ಸಮುದ್ರ...
ಮಾಸ್ಕೋ/ಡಮಾಸ್ಕಸ್: ಸಿರಿಯಾ ಮೇಲೆ ದಾಳಿ ನಡೆಸಲು ಅಮೆರಿಕ ತುದಿಗಾಲಲ್ಲಿ ನಿಂತಿರುವಾಗಲೇ ಸಿರಿಯಾದತ್ತ ಎರಡು ಕ್ಷಿಪಣಿಗಳು ನುಗ್ಗಿ ಬಂದಿವೆ. ಮಂಗಳವಾರ ಮೆಡಿಟರೇನಿಯನ್ ಸಮುದ್ರದಿಂದ ಕ್ಷಿಪಣಿ ದಾಳಿ ನಡೆದಿದ್ದು, ಈ ಬಗ್ಗೆ ರಷ್ಯಾ ಅಲರ್ಟ್ ಘೋಷಿಸುತ್ತಿದ್ದಂತೆಯೇ ಸಿರಿಯಾದಲ್ಲಿ ತಲ್ಲಣ ಸೃಷ್ಟಿಯಾಯಿತು. ಅಮೆರಿಕ ಸಿರಿಯಾ ಮೇಲೆ ಯುದ್ಧ ಸಾರಿಯೇ ಬಿಟ್ಟಿತು ಎಂಬಂತೆ ರಷ್ಯಾ ಮಾಧ್ಯಮಗಳು ವರದಿ ಬಿತ್ತರಿಸತೊಡಗಿದವು. ಆದರೆ ಕೆಲವೇ ನಿಮಿಷಗಳಲ್ಲಿ ಇದು ಇಸ್ರೇಲ್ನಿಂದ ಬಂದ ಕ್ಷಿಪಣಿ ಎಂದು ಗೊತ್ತಾಗಿ ಸಿರಿಯಾ ಜನತೆ ನಿಟ್ಟುಸಿರು ಬಿಟ್ಟರು.
ಮಂಗಳವಾರ ಬೆಳಗ್ಗೆ 10.16 (ಮಾಸ್ಕೋ ಕಾಲಮಾನ)ರ ವೇಳೆಗೆ ಮೆಡಿಟರೇನಿಯನ್ ಸಮುದ್ರದ ಮಧ್ಯಭಾಗದಿಂದ ಸಿರಿಯಾದತ್ತ 2 ಕ್ಷಿಪಣಿಗಳು ನುಗ್ಗಿ ಬಂದವು. ಯುರೋಪ್, ಇರಾನ್ ಕಡೆಯಿಂದ ಬರುವ ಕ್ಷಿಪಣಿಗಳ ಪತ್ತೆಗಾಗಿ ಇರುವ ಮುನ್ನೆಚ್ಚರಿಕಾ ವ್ಯವಸ್ಥೆಯಿಂದ ಕ್ಷಿಪಣಿ ಬಂದಿದ್ದು ಗೊತ್ತಾಯಿತು.
ತಕ್ಷಣವೇ ಈ ವಿಷಯವನ್ನು ಸುದ್ದಿಮಾಧ್ಯಮಗಳು ಬಿತ್ತರಿಸತೊಡಗಿದವು.
ಇಸ್ರೇಲ್ ಸಮರಾಭ್ಯಾಸವಂತೆ: ಅಮೆರಿಕದ ಮೇಲೆ ಆರೋಪ ಬರುತ್ತಿದೆ ಎಂದು ಗೊತ್ತಾದೊಡನೆ ತಾನು ಯಾವುದೇ ಕ್ಷಿಪಣಿ ದಾಳಿ ನಡೆಸಿಲ್ಲ ಎಂದು ಅಮೆರಿಕ ಸ್ಪಷ್ಟನೆ ನೀಡಿತು. ಇದೇ ವೇಳೆ, ಕ್ಷಿಪಣಿ ನುಗ್ಗಿ ಬಂದಿದ್ದು ನಮ್ಮಿಂದ ಎಂದು ಹೇಳುವ ಮೂಲಕ ಇಸ್ರೇಲ್ ಪರಿಸ್ಥಿತಿಯನ್ನು ತಿಳಿಗೊಳಿಸಿತು. ತನ್ನ ಸೇನೆ ಹಾಗೂ ಅಮೆರಿಕದ ಸೇನೆ ಮೆಡಿಟರೇನಿಯನ್ ಸಮುದ್ರದಲ್ಲಿ ಸಮರಾಭ್ಯಾಸ ನಡೆಸುತ್ತಿತ್ತು. ಈ ವೇಳೆ ಕ್ಷಿಪಣಿ ಪ್ರಯೋಗ ನಡೆಸಿದ್ದು, ಅದು ಸಿರಿಯಾದತ್ತ ಚಿಮ್ಮಿತು ಎಂದು ಇಸ್ರೇಲ್ ಹೇಳಿತು. ಜತೆಗೆ, ರಷ್ಯಾ ಕೂಡ ತಾನು ತಪ್ಪಾಗಿ ತಿಳಿದುಕೊಂಡು ಅಲರ್ಟ್ ಘೋಷಿಸಿದ್ದು, ಸಿರಿಯಾವನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿತು.
ದಾಳಿ ನಡೆದರೆ ಪ್ರಾದೇಶಿಕ ಯುದ್ಧ: ಅಸದ್ ಎಚ್ಚರಿಕೆ: ನಮ್ಮ ದೇಶದ ಮೇಲೆ ಅಮೆರಿಕ ದಾಳಿ ನಡೆಸಿದರೆ ಎಲ್ಲರೂ ಪರಿಸ್ಥಿತಿಯ ನಿಯಂತ್ರಣ ಕಳೆದುಕೊಳ್ಳುತ್ತಾರೆ. ಅದು ಪ್ರಾದೇಶಿಕ ಯುದ್ಧಕ್ಕೆ ಕಾರಣವಾಗಬಹುದು ಎಂದು ಸಿರಿಯಾ ಸರ್ವಾಧಿಕಾರಿ ಬಷರ್-ಉಲ್- ಅಸದ್ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ, ನಾನು ನಮ್ಮ ನಾಗರಿಕರ ಮೇಲೆ ರಾಸಾಯನಿಕ ಅಸ್ತ್ರ ದಾಳಿ ನಡೆಸಿದ್ದೇನೆ ಎಂದು ಹೇಳುವ ಅಮೆರಿಕ, ಬ್ರಿಟನ್ ಮೊದಲು ಅದಕ್ಕೆ ಸೂಕ್ತ ಪುರಾವೆ ನೀಡಲಿ ಎಂದೂ ಸವಾಲೆಸೆದಿದ್ದಾರೆ.
ಶತಮಾನದ ದುರಂತ: 20 ಲಕ್ಷ ಮೀರಿದ ನಿರಾಶ್ರಿತರ ಸಂಖ್ಯೆ: ಸಿರಿಯಾ ಹಿಂಸಾಚಾರದಿಂದ ಹೆದರಿ ದೇಶ ಬಿಟ್ಟು ಹೋದವರ ಸಂಖ್ಯೆ 20 ಲಕ್ಷ ಮೀರಿದೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. ಪ್ರತಿ 15 ಸೆಕೆಂಡಿಗೆ ಹೊಸ ನಿರಾಶ್ರಿತ ಹುಟ್ಟಿಕೊಳ್ಳುತ್ತಿದ್ದಾನೆ. ಪ್ರತಿ ದಿನ 5 ಸಾವಿರ ಮಂದಿ ಲೆಬನಾನ್, ಟರ್ಕಿ, ಜೋರ್ಡಾನ್ಗೆ ತೆರಳುತ್ತಿದ್ದಾರೆ. 60 ಲಕ್ಷಕ್ಕೂ ಅಧಿಕ ಸಿರಿಯನ್ನರನ್ನು ಮನೆಯಿಂದ ಒತ್ತಾಯಪೂರ್ವಕವಾಗಿ ಹೊರದಬ್ಬಲಾಗಿದೆ. ಅವರಲ್ಲಿ 20 ಲಕ್ಷದಷ್ಟು ಮಂದಿ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂದಿರುವ ವಿಶ್ವಸಂಸ್ಥೆ ಇದನ್ನು 'ಶತಮಾನದ ದುರಂತ' ಎಂದು ಬಣ್ಣಿಸಿದೆ.
ಒಬಾಮಗೆ ಮಕೈನ್ ಬೆಂ'ಬಲ': ಸಿರಿಯಾ ವಿರುದ್ಧದ ದಾಳಿಗೆ ಕಾಂಗ್ರೆಸ್ ಒಪ್ಪಿಗೆ ಪಡೆಯುವ ಪ್ರಯತ್ನದಲ್ಲಿ ಸ್ವಲ್ಪ ಮಟ್ಟಿನ ಯಶಸ್ಸು ಎಂಬಂತೆ ಅಮೆರಿಕ ಅಧ್ಯಕ್ಷ ಒಬಾಮ ಅವರಿಗೆ ಉನ್ನತ ರಿಪಬ್ಲಿಕನ್ ಸೆನೇಟರ್ ಜಾನ್ ಮಕೈನ್ ಬೆಂಬಲ ಸೂಚಿಸಿದ್ದಾರೆ. ಸಿರಿಯಾ ಮೇಲಿನ ದಾಳಿಯನ್ನು ವಿರೋಧಿಸುವುದು ಭವಿಷ್ಯದ ದೃಷ್ಟಿಯಿಂದ ಮಹಾವಿಪತ್ತನ್ನು ಮೈಮೇಲೆ ಎಳೆದುಕೊಂಡಂತೆ ಎಂದಿರುವ ಮಕೈನ್, ಒಬಾಮಗೆ ತಾವು ಬೆಂಬಲ ಸೂಚಿಸುವುದಾಗಿ ಘೋಷಿಸಿದ್ದಾರೆ. ಇದೇ ವೇಳೆ, ಅಮೆರಿಕನ್ ಕಾಂಗ್ರೆಸ್ನಲ್ಲಿ ಸಿರಿಯಾ ಮೇಲಿನ ದಾಳಿ ನಿರ್ಣಯ ಮಂಡಿಸುವ ನಿರ್ಧಾರಕ್ಕೆ ಇಬ್ಬರು ಸೆನೇಟರ್ಗಳು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
24 ಪ್ರಯಾಣಿಕರ ತಲೆ ಕಡಿದ ಉಗ್ರರು: ಅಲ್ಖೈದಾ ಜತೆ ಸಂಪರ್ಕ ಹೊಂದಿರುವ ಉಗ್ರರು ಸಿರಿಯಾದಲ್ಲಿ ತಾಯಿ, 40 ದಿನಗಳ ಶಿಶು ಸೇರಿದಂತೆ 24 ಮಂದಿ ಪ್ರಯಾಣಿಕರ ಶಿರಚ್ಛೇದ ಮಾಡಿದೆ. ಭಯೋತ್ಪಾದನಾ ವಿರೋಧಿ ಕರ್ಡಿಷ್ ಸಂಘಟನೆಗೆ ಬೆಂಬಲ ಸೂಚಿಸಿದ್ದಕ್ಕಾಗಿ ಇವರನ್ನು ಹತ್ಯೆಗೈಯ್ಯಲಾಗಿದೆ. ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಡ್ಡ ಹಾಕಿದ ಉಗ್ರರು ಎಲ್ಲರನ್ನೂ ಬಸ್ನಿಂದ ಕೆಳಗಿಳಿಸಿ ತಲೆಗಳನ್ನು ಕಡಿದುಹಾಕಿದೆ. ನಂತರ ಬಸ್ಗೆ ಬೆಂಕಿ ಹಚ್ಚಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
'ಕ್ಯಾ'ಮೆರಾನ್?: ಭಾರತ ಪ್ರಶ್ನೆ
ಬ್ರಿಟನ್ ಸಂಸತ್ನಲ್ಲಿ ಸಿರಿಯಾ ಮೇಲಿನ ದಾಳಿಗೆ ಬೆಂಬಲ ಕೋರುವ ವೇಳೆ ಅಲ್ಲಿನ ಪ್ರಧಾನಿ ಕೆಮೆರಾನ್ ಅವರು ಭಾರತವೂ ಸಿರಿಯಾ ದಾಳಿಗೆ ಬೆಂಬಲ ವ್ಯಕ್ತಪಡಿಸಿದೆ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಕೆಮೆರಾನ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರ ಮಂಗಳವಾರ ಈ ಬಗ್ಗೆ ಸ್ಪಷ್ಟನೆ ಕೋರಿದೆ. ದೆಹಲಿ ಹಾಗೂ ಲಂಡನ್ನಲ್ಲಿನ ಹೈಕಮಿಷನ್ ಮೂಲಕ ಭಾರತ ವಿವರ ಕೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬ್ರಿಟನ್, ಕೆಮೆರಾನ್ ಅವರು ತಪ್ಪಾಗಿ ಭಾರತದ ಹೆಸರು ಪ್ರಸ್ತಾಪಿಸಿದ್ದರು ಎಂದಿದೆ. ಕಳೆದ ವಾರ ಹೌಸ್ ಆಫ್ ಕಾಮನ್ಸ್ನ ತುರ್ತು ಸಭೆ ಕರೆದಿದ್ದ ಕೆಮೆರಾನ್, ಸಿರಿಯಾ ಹಿಂಸಾಚಾರಕ್ಕೆ ಅಸದ್ ಕಾರಣ ಎಂಬುದನ್ನು ಆಸ್ಟ್ರೇಲಿಯಾ, ಕೆನಡಾ, ಟರ್ಕಿ, ಭಾರತದಂತಹ ದೇಶಗಳೂ ಒಪ್ಪಿಕೊಂಡಿವೆ ಎಂದಿದ್ದರು. ಆದರೆ, ಭಾರತ ಈವರೆಗೂ ಸಿರಿಯಾ ಹಿಂಸೆ ಬಗ್ಗೆ ಒಂದೇ ಒಂದು ಮಾತನ್ನು ಆಡಿರಲಿಲ್ಲ.
ಸಿರಿಯಾದಲ್ಲಿರುವ 25-30 ಭಾರತೀಯರೊಂದಿಗೆ ಡಮಾಸ್ಕಸ್ನಲ್ಲಿರುವ ನಮ್ಮ ಮಿಷನ್ ನಿರಂತರ ಸಂಪರ್ಕದಲ್ಲಿದೆ. ಅವರನ್ನು ಸಿರಿಯಾದಿಂದ ವಾಪಸಾಗಲು ಹೇಳಿದ್ದೇವೆ. ಜತೆಗೆ ಅಲ್ಲಿನ ಪರಿಸ್ಥಿತಿಯನ್ನು ನಾವು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ.
- ಸಲ್ಮಾನ್ ಖುರ್ಷಿದ್,
ವಿದೇಶಾಂಗ ಸಚಿವ