ಮಂಜುನಾಥ್ ಅಧಿಕಾರಕ್ಕೆ ಕತ್ತರಿ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ವರ್ಗದ ವಿರುದ್ಧ ದ್ವೇಷ ರಾಜಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ...
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ವರ್ಗದ ವಿರುದ್ಧ ದ್ವೇಷ ರಾಜಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಚಾಲನೆ ನೀಡಿದ್ದಾರೆ!
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಹಾಗೂ ದೇವೇಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ್ ಅಧಿಕಾರವನ್ನು ಸೋಮವಾರ ರಾತ್ರೋರಾತ್ರಿ ಮೊಟಕುಗೊಳಿಸಿ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಸಂಸ್ಥೆಯ ಆಡಳಿತಾಧಿಕಾರಿ ಸಿ.ಎಂ.ಈಶ್ವರ ಅವರ ಮೂಲಕ ಸಿದ್ದರಾಮಯ್ಯನವರು ಹೊರಡಿಸಿದ ಆದೇಶದ ಪ್ರಕಾರ ಜಯದೇವ ಆಸ್ಪತ್ರೆಗೆ ಡಾ.ಮಂಜುನಾಥ್ ಇನ್ನು ಮುಂದೆ ನಾಮಕೆವಾಸ್ತೆ ನಿರ್ದೇಶಕರು. ಅವರಲ್ಲಿ ನಿಹಿತವಾದ ಎಲ್ಲ ಅಧಿಕಾರಗಳನ್ನು ಕಿತ್ತುಕೊಳ್ಳಲಾಗಿದೆ. ಮಾತ್ರವಲ್ಲ ಆ ಅಧಿಕಾರವನ್ನು ನಿರ್ವಹಿಸುವುದಕ್ಕೆ ಹೃದ್ರೋಗಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಎನ್.ಎಂ.ಪ್ರಸಾದ್ ಅವರನ್ನು ಪದನಿಮಿತ್ತ ಅಪರ ಕಾರ್ಯದರ್ಶಿ ಎಂದು ನೇಮಕ ಮಾಡಲಾಗಿದೆ.
ಸಭೆ ಇಲ್ಲದೆ ಆದೇಶ: ಜಯದೇವ ಆಸ್ಪತ್ರೆ ಸ್ವಾಯತ್ತ ಸಂಸ್ಥೆ. ಇದಕ್ಕೆ ಸಂಬಂಧಿಸಿದ ಯಾವುದೇ ಆದೇಶ ಹೊರಡಿಸಬೇಕಿದ್ದರೂ ಆಡಳಿತ ಮಂಡಳಿ ಸಭೆ ನಡೆಸಬೇಕು. ಆದರೆ ಮಂಜುನಾಥ್ ಅವರ ಅಧಿಕಾರ ಮೊಟಕುಗೊಳಿಸುವ ಸಂದರ್ಭದಲ್ಲಿ ಯಾವುದೇ ಸಭೆ ನಡೆಸಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ಈ ಆದೇಶದ ಪ್ರಕಾರ ಡಾ.ಮಂಜುನಾಥ್ ಅವರು ಇನ್ನು ಮುಂದೆ ಸಾಮಾನ್ಯ ವೈದ್ಯನಂತೆ ಕರ್ತವ್ಯ ನಿರ್ವಹಿಸಬೇಕು. ನೇಮಕ ಪ್ರಕ್ರಿಯೆ, ಬಡ್ತಿ, ಸ್ಥಳ ನಿಯೋಜನೆ, ವರ್ಗಾವಣೆ, ಕೆಲಸ-ಕಾರ್ಯಗಳ ಹಂಚಿಕೆ, ವೇತನ, ಪಿಂಚಣಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳು, ಉಗ್ರಾಣ, ಹಣಕಾಸು ವ್ಯಹಾರಗಳ ಲೆಕ್ಕ ಪರಿಶೋಧನೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪಯೋಜನೆ ಅನುಷ್ಠಾನ ಸೇರಿದಂತೆ ನಿರ್ದೇಶಕರ ಬಳಿ ಇದ್ದ ಎಲ್ಲ ಅಧಿಕಾರಗಳನ್ನು ಪದನಿಮಿತ್ತ ಅಪರ ನಿರ್ದೇಶಕರಾದ ಡಾ.ಎನ್.ಎಂ.ಪ್ರಸಾದ್ ನಿರ್ವಹಿಸುವಂತೆ ಆದೇಶಿಸಲಾಗಿದೆ.
ಅಸಮಾಧಾನ: ಸರ್ಕಾರದ ಈ ನಿರ್ಧಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮಾತ್ರವಲ್ಲ ಕಾಂಗ್ರೆಸ್ನಲ್ಲೂ ಅಸಮಾಧಾನ ವ್ಯಕ್ತವಾಗಿದೆ. ಮಂಜುನಾಥ್ ದೇವೇಗೌಡರ ಅಳಿಯನಾದರೂ ಎಂದೂ ರಾಜಕೀಯವಾಗಿ ವರ್ತಿಸಿದವರಲ್ಲ. ಆದರೆ ಸಿದ್ದರಾಮಯ್ಯನವರು ಅವರ ವಿರುದ್ಧವೇ ದ್ವೇಷಾಸ್ತ್ರ ಪ್ರಯೋಗಿಸಿದ್ದು ತಪ್ಪು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮಂಜುನಾಥ್ ನಿರ್ದೇಶಕರಾದ ನಂತರ ಆಸ್ಪತ್ರೆಯಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿದ್ದರು. ಸಾಮಾನ್ಯವಾಗಿ ನಿರ್ದೇಶಕರಾದವರು ಚಿಕಿತ್ಸೆ, ಶಸ್ತ್ರಕ್ರಿಯೆ ನಡೆಸುವುದಿಲ್ಲ. ಆದರೆ ಈ ಎಲ್ಲ ಹಮ್ಮನ್ನು ಬಿಟ್ಟು ಅವರು ರೋಗಿಗಳ ಸೇವೆ ಮಾಡುತ್ತಿದ್ದರು.
ರಾಜೀನಾಮೆ ನಿರ್ಧಾರ
ಸರ್ಕಾರದ ಆದೇಶದಿಂದ ತೀವ್ರ ಬೇಸರಗೊಂಡಿರುವ ಮಂಜುನಾಥ್ ತಮ್ಮ ಹುದ್ದೆಗೆ ರಾಜಿನಾಮೆ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ. ತಮ್ಮ ಆಪ್ತರ ಬಳಿ ನಿರ್ಧಾರದ ಬಗ್ಗೆ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ತಮ್ಮ ದೂರವಾಣಿ ಸ್ವಿಚ್ ಆಫ್ ಮಾಡಿರುವ ಅವರು ಪ್ರತಿಕ್ರಿಯೆಗೆ ಸಿಕ್ಕಿಲ್ಲ.