ಅಸಾಂಪ್ರದಾಯಿಕ ನೀತಿ ಕೈಬಿಡಲು ಮನಮೋಹನ್ ಸಿಂಗ್ ಒತ್ತಾಯ
ಅಭಿವೃದ್ಧಿ ಹೊಂದಿದ ದೇಶಗಳು ಕಳೆದ ಕೆಲವು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಅಸಾಂಪ್ರದಾಯಿಕ ನೀತಿಗಳನ್ನು ಹಂತಹಂತವಾಗಿ ಕೈಬಿಡುವಂತೆ ಜಿ-20 ಶೃಂಗದಲ್ಲಿ...
ನವದೆಹಲಿ: ಅಭಿವೃದ್ಧಿ ಹೊಂದಿದ ದೇಶಗಳು ಕಳೆದ ಕೆಲವು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಅಸಾಂಪ್ರದಾಯಿಕ ನೀತಿಗಳನ್ನು ಹಂತಹಂತವಾಗಿ ಕೈಬಿಡುವಂತೆ ಜಿ-20 ಶೃಂಗದಲ್ಲಿ ಆಗ್ರಹಿಸುವುದಾಗಿ ಪ್ರಧಾನಿ ಮನಮೋಹನ ಸಿಂಗ್ ಹೇಳಿದ್ದಾರೆ.
ಅಭಿವೃದ್ಧಿ ಹೊಂದಿದ ದೇಶಗಳ ಈ ನೀತಿಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆ ಮೇಲೆ ಆಗುತ್ತಿರುವ ಈ ಹಾನಿ ತಪ್ಪಿಸಲು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ತಮ್ಮ ಈ ನೀತಿಗಳನ್ನು ಕೈಬಿಡುವಂತೆ ಒತ್ತಾಯಿಸಲಾಗುವುದು.
ಕೈಗಾರಿಕಾ ದೇಶಗಳು ಹಾಗೂ ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ದೇಶಗಳು ಅಮೆರಿಕದಂತಹ ಪ್ರಮುಖ ಆರ್ಥಿಕತೆಗಳ ನಡುವೆ ಸಮನ್ವಯತೆಗೆ ಉತ್ತೇಜಿಸಲು ಒಗ್ಗೂಡಬೇಕು. ಇದು ವಿಸ್ತೃತ ಮತ್ತು ಸುಸ್ಥಿರ ವಿಶ್ವ ಆರ್ಥಿಕ ಚೇತರಿಕೆ ಹಾಗೂ ಬೆಳವಣಿಗೆಗಾಗಿ ಅವಕಾಶ ನೀಡುವಂತಿರಬೇಕು ಎಂದು ಸಿಂಗ್ ತಿಳಿಸಿದ್ದಾರೆ.
ಇದೇ ವೇಳೆ, ಕೈಗಾರಿಕಾ ದೇಶಗಳಲ್ಲಿ ಬೆಳವಣಿಗೆಗೆ ಪೂರಕ ಲಕ್ಷಣಗಳು ಕಂಡುಬಂದಿವೆ. ಆದರೆ, ಬಂಡವಾಳ ಹಿಂತೆಗೆತ ಸಮಸ್ಯೆ ಎದುರಿಸುತ್ತಿರುವ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿ ಹಿನ್ನಡೆ ಗೋಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಅಸಾಂಪ್ರದಾಯಿಕ ನೀತಿಯನ್ನು ಕೈಬಿಡಬೇಕೆಂಬುವುದು ನಮ್ಮ ಆಗ್ರಹ ಎಂದಿದ್ದಾರೆ ಸಿಂಗ್.
ಅಲ್ಲದೆ, ವಿಶ್ವ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮಧ್ಯಮಾವಧಿಯಲ್ಲಿ ಸುಸ್ಥಿರ ಬೆಳವಣಿಗೆ ಕಾಯ್ದುಕೊಳ್ಳಲು ಉದ್ಯೋಗಸೃಷ್ಟಿ, ಮೂಲಸೌಕರ್ಯಗಳಲ್ಲಿ ಹೂಡಿಕೆಗೆ ಪ್ರೋತ್ಸಾಹ ನೀಡುವ ವಿಚಾರಗಳನ್ನು ಶೃಂಗದಲ್ಲಿ ಎತ್ತುವುದಾಗಿ ಸಿಂಗ್ ಮಾಹಿತಿ ನೀಡಿದ್ದಾರೆ.
ಸೇಂಟ್ಪೀಟರ್ಸ್ಬರ್ಗ್ಗೆ ಬಂದಿಳಿದ ಪ್ರಧಾನಿ
ರಷ್ಯಾದಲ್ಲಿ ನಡೆಯಲಿರುವ ಜಿ20 ಶೃಂಗದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮನಮೋಹನ ಸಿಂಗ್ ಅವರು ಬುಧವಾರ ಸಂಜೆ ಸೇಂಟ್ಪೀಟರ್ಸ್ ಬರ್ಗ್ನಲ್ಲಿ ಬಂದಿಳಿದರು. ಗುರುವಾರದಿಂದ ಆರಂಭವಾಗಲಿರುವ ಈ ಎಂಟನೇ ಶೃಂಗವು ಶುಕ್ರವಾರ ಮುಕ್ತಾಯ ಕಾಣಲಿದೆ. ಪ್ರಧಾನಿ ಸಿಂಗ್ ಶನಿವಾರ ಸಂಜೆ ಭಾರತಕ್ಕೆ ವಾಪಸಾಗಲಿದ್ದಾರೆ.