ಆರ್ಥಿಕ ಸಂಕಷ್ಟ, ಬಿಕ್ಕಟ್ಟಿಗೆ ಜಿ-20 ಆಶಾವಾದವೇ ಔಷಧ
ಯಾವತ್ತೂ ಸಂಕಷ್ಟ ಹಾಗೂ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಆಶಾವಾದವೊಂದೇ ನೆಮ್ಮದಿ, ಉತ್ಸಾಹವನ್ನು ಜೀವಂತವಾಗಿಡಲು ಸಾಧ್ಯ. ವಿಶ್ವದ ಅತ್ಯಂತ ಬಲಿಷ್ಠ...
-ಭಾರತ ಸೇರಿದಂತೆ ವಿಶ್ವದ ದೇಶಗಳಿಗೆ ಈಗ ಆರ್ಥಿಕ ಸಮಸ್ಯೆ. ವಿಶ್ವಬ್ಯಾಂಕ್, ಇಂಟರ್ನ್ಯಾಷನಲ್ ಮಾನೆಟರಿ ಫಂಡ್ ಸೇರಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರಮುಖರು ಭಾಗವಹಿಸುವ ಈ ಸಮ್ಮೇಳನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಆಶಯ ಹೊಂದಿದೆ.
ಸೇಂಟ್ ಪೀಟರ್ಸ್ಬರ್ಗ್ ಸೆ.4
ಯಾವತ್ತೂ ಸಂಕಷ್ಟ ಹಾಗೂ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಆಶಾವಾದವೊಂದೇ ನೆಮ್ಮದಿ, ಉತ್ಸಾಹವನ್ನು ಜೀವಂತವಾಗಿಡಲು ಸಾಧ್ಯ.
ವಿಶ್ವದ ಅತ್ಯಂತ ಬಲಿಷ್ಠ ಇಪ್ಪತ್ತು ದೇಶಗಳ ನಾಯಕರು ಒಂದೆಡೆ ಸೇರುವ ಮಹತ್ವದ ವೇದಿಕೆಯೆನಿಸಿರುವ ಜಿ-20 ಶೃಂಗಸಭೆ ಗುರುವಾರದಿಂದ ಎರಡು ದಿನಗಳ ಕಾಲ ರಷ್ಯಾದ ಸಾಂಸ್ಕೃತಿಕ ನಗರಿ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಈ ಮಾತು ನಿಜವೆಂದು ತೋರುತ್ತಿದೆ.
ಭಾರತ ಸೇರಿದಂತೆ ಜಗತ್ತಿನ ಶಕ್ತಿಶಾಲಿ ದೇಶಗಳು ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿವೆ. ಒಂದು ದೇಶದ ಹಣಕಾಸು ಅವಾಂತರಗಳು ಬೇರೆ ದೇಶಗಳ ಮೇಲೆ ಸಹ ಗಂಭೀರ ಪರಿಣಾಮವನ್ನು ಬೀರುತ್ತವೆ. ಒಂದು ದೇಶದ ಬಿಕ್ಕಟ್ಟನ್ನು ಬಿಡಿಯಾಗಿ ನೋಡದೇ ಇಡಿಯಾಗಿ ನೋಡುವ ಮಹತ್ತರ ಆಶಯವನ್ನು ಹೊಂದಿರುವ ಜಿ-20 ಶೃಂಗಸಭೆ, ಸಹಜವಾಗಿ ವಿಶ್ವದ ಗಮನವನ್ನು ಸೆಳೆದಿದೆ.
ವಿಶ್ವ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಮಹತ್ವದ ಶೃಂಗಸಭೆ ಯಾವ ಕ್ರಮಗಳನ್ನು ಸೂಚಿಸಬಹುದು, ಯಾವ ಘೋಷಣೆ ಹೊರ ಬೀಳಬಹುದು ಎಂಬ ಕಾತರವನ್ನು ಹುಟ್ಟುಹಾಕಿದೆ. ಈ ದೃಷ್ಟಿಯಿಂದ ಸೇಂಟ್ ಪೀಟರ್ಸ್ಬರ್ಗ್ ಶೃಂಗಸಭೆ ಭಾರತದ ಪಾಲಿಗೆ ಸಹ ವಿಶೇಷ ಹಾಗೂ ಮಹತ್ವದ್ದಾಗಿದೆ.
ಅಮೆರಿಕ, ಬ್ರಿಟನ್, ರಷ್ಯಾ, ಆಸ್ಟ್ರೇಲಿಯಾ, ಚೀನಾ, ಜಪಾನ್, ದಕ್ಷಿಣ ಆಫ್ರಿಕಾ, ಭಾರತ, ಯುರೋಪಿಯನ್ ಒಕ್ಕೂಟ, ಕೆನಡಾ ಸೇರಿದಂತೆ ವಿಶ್ವದ ಇಪ್ಪತ್ತು ದೇಶಗಳನ್ನೊಳಗೊಂಡ ಜಿ-20 ವೇದಿಕೆ ಅದೆಷ್ಟು ಬಲಶಾಲಿ ಅಂದರೆ, ಈ ದೇಶಗಳು ವಿಶ್ವದ ಶೇ.90ರಷ್ಟು ಆರ್ಥಿಕತೆಯನ್ನು ಒಳಗೊಂಡಿದೆ. ಜಗತ್ತಿನ ಮೂರನೇ ಎರಡರಷ್ಟು ಜನಸಂಖ್ಯೆ ಈ ದೇಶಗಳಲ್ಲಿವೆ. ಈ ಕಾರಣದಿಂದ ಜಿ-20 ಶೃಂಗಸಭೆ ಕೈಗೊಳ್ಳುವ ನಿರ್ಧಾರ ಇಡೀ ವಿಶ್ವ ಸಮುದಾಯದ ಮೇಲೆ ಆಗುತ್ತದೆ.
ಜಾಗತಿಕ ಆರ್ಥಿಕ ಪರಿಸ್ಥಿತಿಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸದಸ್ಯ ದೇಶಗಳ ನಡುವೆ ನೀತಿ-ನಿಯಮಗಳ ಸಮನ್ವಯ ಸಾಧಿಸುವುದು, ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ನಿರಂತರ ಕ್ರಮ ಕೈಗೊಳ್ಳುವುದು, ಹಣಕಾಸು ಬಿಕ್ಕಟ್ಟು ಸೃಷ್ಟಿಸುವ ಆರ್ಥಿಕ ಕ್ರಮಗಳನ್ನು ಕೈಬಿಡುವ ಚಿಂತನೆಯನ್ನು ಸದಾ ಜಾಗೃತಗೊಳಿಸುವುದು ಹಾಗೂ ಅಂತಾರಾಷ್ಟ್ರೀಯ ಆರ್ಥಿಕ ಅಪಾಯವನ್ನು ಕಾಲಕಾಲಕ್ಕೆ ಭದ್ರಪಡಿಸುತ್ತಾ ಆಧುನಿಕ ಜಗತ್ತಿನ ಅಗತ್ಯಗಳಿಗೆ ತೆರೆದುಕೊಳ್ಳುವ ಹೊರ ಮಾರ್ಗಗಳನ್ನು ಶೋಧಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಜಿ-20 ದೇಶಗಳ ನಾಯಕರು ಎಂಟನೇ ಬಾರಿಗೆ ಶೃಂಗಸಭೆ ಸೇರುತ್ತಿದ್ದಾರೆ.
ಈ ಶೃಂಗಸಭೆಯಲ್ಲಿ ಕೇವಲ ಇಪ್ಪತ್ತು ದೇಶಗಳ ಪ್ರಮುಖರಷ್ಟೇ ಅಲ್ಲ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಾದ ಇಂಟರ್ನ್ಯಾಷನಲ್ ಮಾನೆಟರಿ ಫಂಡ್ (ಐಎಂಎಫ್), ವಿಶ್ವಬ್ಯಾಂಕ್ (ವರ್ಲ್ಡ್ ಬ್ಯಾಂಕ್), ಆರ್ಥಿಕ ಸ್ಥಿರತಾ ಮಂಡಳಿ, ಆರ್ಥಿಕ ಸಹಕಾರ ಹಾಗೂ ಅಭಿವೃದ್ಧಿ ಸಂಸ್ಥೆ (ಓಇಸಿಡಿ) , ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯುಟಿಒ), ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಪ್ರಮುಖರು ಅಥವಾ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಹಣಕಾಸು ಸ್ಥಿರತೆ ನೆಲೆಸಲು ಪರಸ್ಪರ ಸಹಕಾರ, ನೆರವು ನೀಡುವುದು, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಕಾರ್ಯವೈಖರಿಯನ್ನು ಆಯಾ ದೇಶಗಳ ಅಗತ್ಯಕ್ಕೆ ತಕ್ಕಂತೆ ಸುಧಾರಿಸುವುದು, ಉಭಯ ದೇಶಗಳ ನಡುವಿನ ವಾಣಿಜ್ಯ ಸಂಬಂಧಕ್ಕೆ ತೊಡಕಾಗುವ ನಿಯಮಗಳನ್ನು ಹೊಡೆದು ಹಾಕುವುದು, ವಿತ್ತೀಯ ಶಿಸ್ತು ಹಾಗೂ ಬದ್ಧತೆ ಕಾಪಾಡಿಕೊಳ್ಳಲು ಕ್ರಮ ಜರುಗಿಸುವುದು, ಆರ್ಥಿಕ ಸಂಕಷ್ಟ ಎದುರಾದಾಗ ರಕ್ಷಣಾ ಕ್ರಮ ಜರುಗಿಸುವ, ನೆರವು ನೀಡುವ ಅಂತಾರಾಷ್ಟ್ರೀಯ ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸಿರುವುದು ಜಿ-20 ಶೃಂಗಸಭೆ ಸಾಧಿಸಿರುವ ಕೆಲವು ಮೈಲಿಗಲ್ಲುಗಳು. ಆದರೆ ಈ ಕ್ರಮಗಳು ದೋಷಮುಕ್ತವಾಗಿಲ್ಲ ಎಂಬುದನ್ನು ಕಾಲಕಾಲಕ್ಕೆ ಉದ್ಭವಿಸುತ್ತಿರುವ ಬಿಕ್ಕಟ್ಟುಗಳು ತೋರಿಸಿಕೊಟ್ಟಿವೆ. ಇವುಗಳಿಗೆ ಶಾಶ್ವತ ಪರಿಹಾರೋಪಾಯಗಳನ್ನು ಕಂಡುಹಿಡಿಯುವುದು ಜಿ-20 ದೇಶಗಳ ನಾಯಕರ ಮುಂದಿನ ಬಹುದೊಡ್ಡ ಸವಾಲು.
ವಿಶ್ವದ ಮುಂದುವರಿದ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಮಂದಗತಿಯ ಆರ್ಥಿಕ ಬೆಳವಣಿಗೆ ಮತ್ತುದೀರ್ಘಕಾಲೀನ ಬೆಳವಣಿಗೆಯನ್ನು ಸಂತೈಸುವ ಹೊಸ ಸಂಪನ್ಮೂಲಗಳ ಬಗ್ಗೆ ಚರ್ಚಿಸುವ ಅಗತ್ಯವಿದೆಯೆಂದು ಈಗಾಗಲೇ ಭಾರತ ಪ್ರಸ್ತಾಪಿಸಿದೆ. ಈ ಸಲದ ಶೃಂಗಸಭೆ ಈ ಅಂಶವನ್ನು ಚರ್ಚಿಸುವ ಸಾಧ್ಯತೆ ಉಜ್ವಲವಾಗಿದೆ.
ಸಾಮಾನ್ಯವಾಗಿ ಜಿ-20 ಶೃಂಗವು ಹಿಂದಿನ ವರ್ಷಗಳ ಆರ್ಥಿಕ ಅಪಾಯವನ್ನು ಚರ್ಚಿಸುವುದು ರೂಢಿ. ಆದರೆ ಈ ಸಲ ದೀರ್ಘಕಾಲೀನ ಬೆಳವಣಿಗೆಯ ಸಂಪನ್ಮೂಲಗಳು, ಅವುಗಳನ್ನು ಹೊಂದುವ ಹೊಸ ಹಾದಿ, ಬಿಕ್ಕಟ್ಟು ರಹಿತ, ಅಪಾಯಮುಕ್ತ ಆರ್ಥಿಕ ಸಂರಚನೆಯ ಕುರಿತು ನಾಯಕರು ತಲೆಕೆಡಿಸಿಕೊಳ್ಳಲಿದ್ದಾರೆ.
ಜಿ-20 ಶೃಂಗಸಭೆಗೆ ಪರದೆ ಸರಿಸುವ ಮುನ್ನ ಭಾರತದ ತನ್ನ ಮನದ ಇಂಗಿತವನ್ನು ಈಗಾಗಲೇ ವ್ಯಕ್ತಪಡಿಸಿದೆ. ಕಳೆದ ಎರಡು ವರ್ಷಗಳಲ್ಲಿ, ಭಾರತದ ಬೆಳವಣಿಗೆ ಗತಿ ತೀವ್ರವಾಗಿ ಕುಂಠಿತವಾಗಿದೆ. ಆರ್ಥಿಕ ಸುಧಾರಣಾ ಕ್ರಮಗಳು ಜಾರಿಯಲ್ಲಿದ್ದರೂ ಜಗತ್ತಿನ ಮುಂದುವರಿದ ದೇಶಗಳಲ್ಲಾಗುತ್ತಿರುವ ಸ್ಥಿತ್ಯಂತರಗಳಿಂದ ಅದರ ಪರಿಣಾಮ ಭಾರತದ ಮೇಲೂ ಆಗುತ್ತಿದೆ. ಸಂಕಷ್ಟದ ಪರಮಾವಧಿಯ ಈ ಸಮಯದಲ್ಲಿ ಜಾಗತಿಕ ಅರ್ಥ ವ್ಯವಸ್ಥೆಯ ನೆರವಿಗೆ ಸಮನ್ವಯಕಾರಕ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಭಾರತ ಪ್ರತಿಪಾದಿಸಿದೆ.
ಸರ್ಕಾರಗಳು ತಮ್ಮ ಬಜೆಟ್ ಕೊರತೆ ಹಾಗೂ ಸಾರ್ವಜನಿಕ ಸಾಲವನ್ನು ನಿಭಾಯಿಸುವ ನಿಟ್ಟಿನಲ್ಲಿ ಪಾರದರ್ಶಕತೆಗೆ ತೆರೆದುಕೊಳ್ಳದ ಹೊರತು ಬಂಡವಾಳದಾರರ, ವಿದೇಶಿ ಹೂಡಿಕೆದಾರರ ವಿಶ್ವಾಸವನ್ನು ಗಳಿಸಲು ಸಾಧ್ಯವಿಲ್ಲ. ಇದಕ್ಕೆ ವಿತ್ತೀಯ ಶಿಸ್ತಿನ ಪಾಲನೆ ಅತ್ಯವಶ್ಯ. ಇದು ವಿಶ್ವ ಹಣಕಾಸು ಸಂರಚನೆ ಭದ್ರವಾಗಲು ಸಹಾಯಕವಾಗುತ್ತದೆ. ಈ ಸಲದ ಶೃಂಗವು ಈ ಅಂಶಗಳ ಬಗ್ಗೆ ಗಮನಹರಿಸುವಂತೆ ಸದಸ್ಯ ರಾಷ್ಟ್ರಗಳಿಗೆ ಮಾರ್ಗದರ್ಶನ ನೀಡಲಿದೆ.
ಇನ್ನೊಂದು ಪ್ರಮುಖ ಸಂಗತಿಯೆಂದರೆ, ಜಿ-20 ಶೃಂಗಸಭೆಯ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಉತ್ತರದಾಯಿತ್ವ (Accountability) ದ ವರದಿಯನ್ನು ಸಿದ್ಧಪಡಿಸಲಾಗಿದೆ. ಸದಸ್ಯ ದೇಶಗಳು ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿದರೆ, ಪಾಲನೆಯಲ್ಲಿ ಅಶಿಸ್ತು ತೋರಿದರೆ, ಅವುಗಳನ್ನು ಹೊಣೆಗಾರರನ್ನಾಗಿ ಮಾಡುವ ಆತಿಥೇಯ ರಷ್ಯಾದ ಪ್ರಸ್ತಾವನೆಗೆ ಈಗಾಗಲೇ ಬೆಂಬಲ ವ್ಯಕ್ತವಾಗಿರುವುದು ಸಕಾರಾತ್ಮಕ ಬೆಳವಣಿಗೆಯೇ.
ಕಡಿಮೆ ಆದಾಯದ ದೇಶಗಳಿಗೆ ನೆರವಾಗುವ ಆಹಾರ ಭದ್ರತೆಯನ್ನು ಖಾತರಿಪಡಿಸುವ, ಆರ್ಥಿಕವಾಗಿ ಎಲ್ಲರನ್ನೂ ಒಳಗೊಳ್ಳುವ ಮೂಲಸೌಕರ್ಯಗಳನ್ನು ಕಲ್ಪಿಸುವ, ದೇಶೀಯ ಸಂಪನ್ಮೂಲಗಳನ್ನು ಕ್ರೋಡೀಕರಿಸುವ ಹಾಗೂ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವ ಆರ್ಥಿಕ ನೀಲನಕ್ಷೆಯನ್ನು ರೂಪಿಸುವ ಆಧುನಿಕ ಚಿಂತನೆಗಳಿಗೆ ತೆರೆದುಕೊಳ್ಳುವಂತೆ ಜಿ-20 ಶೃಂಗಸಭೆ ಹೊಸ ಆಶಯಗಳನ್ನು ಬಿತ್ತಿದೆ.
ಇವಲ್ಲದೆ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವಿಪರೀತ ಹೆಚ್ಚುತ್ತಿರುವ ಭ್ರಷ್ಟಾಚಾರ, ತೆರಿಗೆಗಳ್ಳತನ, ಹವಾಲ, ಅಕ್ರಮ ಹಣಸಾಗಾಟದ ಬಗ್ಗೆ ಸದಸ್ಯ ದೇಶಗಳನ್ನು ಎಚ್ಚರಿಸುವ ಪ್ರಸ್ತಾಪ ಶೃಂಗಸಭೆ ಮುಂದಿಟ್ಟಿದೆ. ಭಾರತವು ಈ ಎಲ್ಲ ಸುಧಾರಣಾ ಕ್ರಮಗಳನ್ನು ಬೆಂಬಲಿಸುವ ನಿರೀಕ್ಷೆಯಿದೆ. ಕಾರಣ ಇವೆಲ್ಲವುಗಳಬಿಸಿ, ಪ್ರತಿಕೂಲ ಪರಿಣಾಮವನ್ನು ಉಳಿದ ಸದಸ್ಯ ದೇಶಗಳಿಗಿಂತ ಭಾರತವೇ ಹೆಚ್ಚಾಗಿ ಅನುಭವಿಸುತ್ತಿದೆ. ಈ ವಿಷಯಗಳ ಬಗ್ಗೆ ಜಾಗತಿಕ ಒಮ್ಮತಾಭಿಪ್ರಾಯ ಮೂಡಿಸುವ ಇಂಗಿತವನ್ನು ಭಾರತ ವ್ಯಕ್ತಪಡಿಸಿದೆ.
2008ರಲ್ಲಿ ಕಂಡುಬಂದ ಜಾಗತಿಕ ಹಣಕಾಸು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪರಿಸ್ಥಿತಿಯ ತೀವ್ರತೆಯಿಂದ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಜನ್ಮತಾಳಿದ ಜಿ-20, ವಿಶ್ವದ ಆರ್ಥಿಕ ಸಹಯೋಗವನ್ನು ಕಲ್ಪಿಸುವ ನಿಟ್ಟಿನಲ್ಲಿ ಅತ್ಯಂತ ಪ್ರಭಾವಿ ಹಾಗೂ ಪರಿಣಾಮಕಾರಿ ವೇದಿಕೆಯಾಗಿ ರೂಪುಗೊಂಡಿದೆ. ಅಭಿವೃದ್ಧಿಹೊಂದಿದ ಜಿ-8 ದೇಶಗಳಲ್ಲದೇ, ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಸೇರಿಸಿಕೊಂಡು ಜಾಗತಿಕ ಮಟ್ಟದಲ್ಲಿ ಹಣಕಾಸು ನೀತಿ ರೂಪಿಸುವ ಶಕ್ತಿಶಾಲಿ ವೇದಿಕೆಯಾಗಿ ಮಾರ್ಪಟ್ಟಿದೆ. ಮೊದಲ ಮೂರು ವರ್ಷಗಳ ಕಾಲ ಬಿಕ್ಕಟ್ಟು ಪರಿಹಾರ ಮಾಡುವ ಆಪದ್ಬಾಂಧವನಾಗಿ ಕೆಲಸ ಮಾಡಿದ ಜಿ-20 ವೇದಿಕೆ, ಜಗತ್ತುಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳನ್ನು ಎದುರಿಸಿ ಸೂಕ್ತ ಪರಿಹಾರ ಸೂಚಿಸುವ ಸಮರ್ಥ ನಾಯಕನಾಗಿ ತನ್ನನ್ನು ಅಭಿವ್ಯಕ್ತಗೊಳಿಸಿಕೊಂಡಿದೆ. ಈ ಅಂಶವೇ ಜಿ-20 ಶೃಂಗಸಭೆಯ ಸಾರ್ಥಕ್ಯ ಹಾಗೂ ಪ್ರಸ್ತುತತೆಯನ್ನು ಮರುಸ್ಥಾಪಿಸಿದಂತಾಗಿದೆ.
ಹಿಂದಿನ ವರ್ಷ ಮೆಕ್ಸಿಕೋದ ಲಾಸ್ಕಾಬೋಸ್ನಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಯುರೋಝೋನ್ ಬಿಕ್ಕಟ್ಟಿನ ಬಗ್ಗೆ ವಿಸ್ತೃತ ಚರ್ಚೆಯಾಗಿತ್ತು. ಅದಾದ ಬಳಿಕ ಅಮೆರಿಕದ ಆರ್ಥಿಕತೆಯಲ್ಲಿ ಅಸಾಧಾರಣ ಬೆಳವಣಿಗೆ ಕಂಡುಬಂದಿದೆ. ವಿತ್ತೀಯ ಮುಗ್ಗಟ್ಟಿನಿಂದ ಪಾರಾಗುವ ಕ್ರಮಗಳ ಬಗ್ಗೆ ಹಿಂದಿನ ಶೃಂಗ ಸೂಚಿಸಿದ ಪರಿಹಾರೋಪಾಯಗಳು, ಭಾರತ ಸೇರಿದಂತೆ ಹಲವು ದೇಶಗಳಿಗೆ ಕೈದೀವಿಗೆಯಾಗಬೇಕಾಗಿದೆ. ಅಂಥ ಹಲವಾರು ಮಹತ್ವದ ಸಂಗತಿಗಳಿಗೆ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ನಡೆಯಲಿರುವ ಶೃಂಗ ಚಾಲನೆ ನೀಡಬೇಕಿದೆ.
ಸದೃಢ, ಸುಸ್ಥಿರ ಹಾಗೂ ಸಂತುಲಿತ ಬೆಳವಣಿಗೆಗೆ ಚೌಕಟ್ಟನ್ನು ನಿರ್ಮಿಸುವುದು, ಉದ್ಯೋಗ ಸೃಷ್ಟಿಸುವ ಹೊಸ ಕ್ರಮಗಳ ಬಗ್ಗೆ ಯೋಚಿಸುವುದು, ಆರ್ಥಿಕ ಶಿಸ್ತನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು, ಇಂಧನ ಸುಸ್ಥಿರತೆ, ಬಹುಶ್ರುತ ವಾಣಿಜ್ಯ ಚಟುವಟಿಕೆಗಳನ್ನು ವಿಸ್ತರಿಸುವುದು, ಭ್ರಷ್ಟಾಚಾರ ವಿರುದ್ಧ ಹೋರಾಡುವುದು ಸಹ ಜಿ-20 ಶೃಂಗಸಭೆಯ ಆಶಯಗಳಾಗಿವೆ.
ಜಿ-20 ಸಾಂಸ್ಥಿಕ ರೂಪ: ಜಿ-20 ವೇದಿಕೆಗೆ ಒಂದು ಸಾಂಸ್ಥಿಕ ರೂಪ ಇಲ್ಲ. ಇದಕ್ಕೆ ಶಾಶ್ವತವಾದ ಸಚಿವಾಲಯವಾಗಲಿ, ಪದಾಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ಇಲ್ಲ. ಇಪ್ಪತ್ತು ಸದಸ್ಯ ದೇಶಗಳ ಪೈಕಿ ಒಂದು ದೇಶ ಪ್ರತಿ ವರ್ಷ ಶೃಂಗಸಭೆಯನ್ನು ಏರ್ಪಡಿಸುತ್ತದೆ. ಮುಂದಿನ ವರ್ಷ ಮತ್ತೊಂದು ಸದಸ್ಯ ದೇಶದ ಪಾಳಿ. ಮೂರು ಸದಸ್ಯ ದೇಶಗಳು ಈ ಶೃಂಗವನ್ನು ಸಂಘಟಿಸುತ್ತವೆ. ಹಿಂದಿನ ವರ್ಷ, ಈ ವರ್ಷ ಮತ್ತು ಮುಂದಿನ ಸಲ ಶೃಂಗಸಭೆ ಏರ್ಪಡಿಸುವ ದೇಶಗಳು ರೂಪು-ರೇಷೆ ಸಿದ್ಧಪಡಿಸುತ್ತವೆ. ಹಿಂದಿನ ವರ್ಷ ಮೆಕ್ಸಿಕೋದ ಲಾಸ್ಕಾಬೋಸ್ ಶೃಂಗಸಭೆ ನಡೆಸಿತ್ತು. ಮುಂದಿನ ಪಾಳಿ ಆಸ್ಟ್ರೇಲಿಯಾದ್ದು. ಎಲ್ಲ ದೇಶಗಳ ಪ್ರತಿನಿಧಿಗಳು (ಶೆರ್ಪಾ) ಶೃಂಗಕ್ಕೆ ಮುನ್ನ ಸಭೆ ಸೇರಿ ಕಾರ್ಯಸೂಚಿ ಸಿದ್ಧಪಡಿಸುತ್ತಾರೆ.
ಜಿ-20 ದೇಶಗಳು
ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಯುರೋಪಿಯನ್ ಒಕ್ಕೂಟ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷಿಯಾ, ಇಟಲಿ, ಜಪಾನ್, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಟರ್ಕಿ, ಬ್ರಿಟನ್, ಅಮೆರಿಕ.
ಜಿ-20 ಹುಟ್ಟು, ಬೆಳವಣಿಗೆ
1990ರಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಆರ್ಥಿಕ ಬಿಕ್ಕಟ್ಟು ತಲೆದೋರಿದಾಗ ಅದು ಕೇವಲ ಆಯಾ ದೇಶಗಳ ಸಮಸ್ಯೆಯಾಗಿರದೇ, ಜಾಗತಿಕ ವಿದ್ಯಮಾನಗಳ ಮೇಲೆ ಪರಿಣಾಮ ಬೀರಿತು. 1999ರಲ್ಲಿ ಜರ್ಮನಿಯ ಬರ್ಲಿನ್ನಲ್ಲಿ ಪ್ರಮುಖ ದೇಶಗಳ ವಿತ್ತ ಸಚಿವರು ಹಾಗೂ ಸೆಂಟ್ರಲ್ ಬ್ಯಾಂಕ್ (ನಮ್ಮ ದೇಶದ ರಿಸರ್ವ್ ಬ್ಯಾಂಕ್ ಇದ್ದಂತೆ) ಗವರ್ನರ್ಗಳು ಸಭೆ ಸೇರಿ ಆರ್ಥಿಕ ಸ್ಥಿರತೆ ಕಾಪಾಡುವ ಬಗ್ಗೆ ಚರ್ಚೆ ನಡೆಸಿದರು. ಭಾರತವು 2002ರಲ್ಲಿ ಜಿ-20 ವಿತ್ತ ಸಚಿವರ ಹಾಗೂ ಸೆಂಟ್ರಲ್ ಬ್ಯಾಂಕ್ ಗವರ್ನರ್ಗಳ ಸಭೆಯನ್ನು ಏರ್ಪಡಿಸಿತು. ಈ ಸಭೆ ಶೃಂಗಸಭೆಯ ಸ್ವರೂಪವನ್ನು 2008ರಲ್ಲಿ ಪಡೆಯಿತು. ಮೊದಲ ಶೃಂಗಸಭೆ 2008ರ ನವೆಂಬರ್ನಲ್ಲಿ ಅಮೆರಿಕದ ಪಿಟ್ಸ್ಬರ್ಗ್ನಲ್ಲಿ ನಡೆಯಿತು.ಣ
ಜಿ-20 ಅಂದರೆ ಏನು?
ಆರ್ಥಿಕವಾಗಿ ಬಲಿಷ್ಠವಾಗಿರುವ ವಿಶ್ವದ ಇಪ್ಪತ್ತು ದೇಶಗಳು ಅಂತಾರಾಷ್ಟ್ರೀಯ ಹಣಕಾಸು ವಿಷಯವಾಗಿ ಕಾರ್ಯಸೂಚಿ ರೂಪಿಸಲು ಒಗ್ಗೂಡಿ ರಚಿಸಿಕೊಂಡಿರುವ ಒಂದು ವೇದಿಕೆ. ಗ್ರೂಪ್ ಆಫ್ ಟ್ವೆಂಟಿ ಸಂಕ್ಷಿಪ್ತವಾಗಿ ಜಿ-20 ಎಂದೇ ಪರಿಚಿತ.
ಜಿ-20 ಗಾತ್ರ
ವಿಶ್ವದ ಮೂರನೇ ಎರಡರಷ್ಟು ಜನಸಂಖ್ಯೆ ಈ ದೇಶಗಳಲ್ಲಿವೆ
ವಿಶ್ವದ ಶೇ.90 ಜಿಡಿಪಿಯನ್ನು ಈ ದೇಶಗಳು ಹೊಂದಿವೆ
ವಿಶ್ವದ ಶೇ.80 ವಾಣಿಜ್ಯ ವ್ಯವಹಾರಗಳು 20 ದೇಶಗಳಲ್ಲಾಗುತ್ತಿವೆ
-ವಿಶ್ವೇಶ್ವರ ಭಟ್
ಕನ್ನಡಪ್ರಭ