ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಾವೇರಿ ಜಟಾಪಟಿ

ಲೋಕಸಭೆಯಲ್ಲಿ ಮತ್ತೆ ಕಾವೇರಿ ಪ್ರತಿಧ್ವನಿಸಿದೆ. ಕಾವೇರಿ ಕೊಳ್ಳದಲ್ಲಿ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ತನ್ನ ಅನುಮತಿ ಪಡೆಯಬೇಕು ಎಂದು...

Mainashree
Updated On : 4 Sept 2013, 10:50 am

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ಲೋಕಸಭೆಯಲ್ಲಿ ಮತ್ತೆ ಕಾವೇರಿ ಪ್ರತಿಧ್ವನಿಸಿದೆ. ಕಾವೇರಿ ಕೊಳ್ಳದಲ್ಲಿ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ತನ್ನ ಅನುಮತಿ ಪಡೆಯಬೇಕು ಎಂದು ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರಧಾನಿಗೆ ಪತ್ರ ಬರೆದ ವಿಚಾರ ಕರ್ನಾಟಕದ ಸಂಸದರನ್ನು ಕೆರಳಿಸಿತ್ತು. ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಅನಂತಕುಮಾರ್ ಅವರು, ಮೇಕೆದಾಟು ಸೇರಿದಂತೆ ಕಾವೇರಿ ಕೊಳ್ಳದಲ್ಲಿ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಹಕ್ಕು ಕರ್ನಾಟಕಕ್ಕೆ ಇದೆ ಎಂದು ಪ್ರತಿಪಾದಿಸಿದರು. ನೀರಾವರಿ ಯೋಜನೆಗಳ ವಿಷಯದಲ್ಲಿ ತಮಿಳುನಾಡು ವಿನಾಕಾರಣ ಮೂಗು ತೂರಿಸುವುದಕ್ಕೆ ನಿರ್ಬಂಧ ವಿಧಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಹಂತದಲ್ಲಿ ತಮಿಳುನಾಡಿನ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಅನಂತಕುಮಾರ್ ಅವರು ಮಾತನಾಡಲು ಅಡ್ಡಿಪಡಿಸಿ, ಘೋಷಣೆಗಳನ್ನು ಕೂಗಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕದ ಸಂಸದರು ತಮಿಳುನಾಡು ಸದಸ್ಯರ ವಿರುದ್ಧ ದನಿ ಎತ್ತಿದರು.
ತಮಿಳುನಾಡು ಸದಸ್ಯರ ವಿರೋಧದ ನಡುವೆಯೂ ಮಾತನಾಡಿದ ಅನಂತಕುಮಾರ್ ಅವರು, ಕಾವೇರಿ ಕೊಳ್ಳದಲ್ಲಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಹಕ್ಕು ಕರ್ನಾಟಕಕ್ಕೆ ಇದೆ. ಮೇಕೆದಾಟು ಯೋಜನೆಯು ಇದಕ್ಕೆ ಹೊರತಲ್ಲ. ನಮ್ಮ ಹಕ್ಕನ್ನು ಮೊಟಕುಗೊಳಿಸಲು ಯಾರಿಗೂ ಸಾಧ್ಯವಿಲ್ಲ ಎಂದರು. ನ್ಯಾಯಾಧಿಕರಣ ಆದೇಶದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ಈ ಆದೇಶ ಕರ್ನಾಟಕದ ಪಾಲಿಗೆ ಮರಣಶಾಸನವಾಗಿದೆ.  

 ಕರ್ನಾಟಕ ನ್ಯಾಯಾಧಿಕರಣದ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ ಎಂದು ವಿವರಿಸಿದರು. ಈ ಹಂತದಲ್ಲಿ ತಮಿಳುನಾಡಿನ ಕೆಲ ಸದಸ್ಯರು ಸ್ಪೀಕರ್ ಪೀಠದ ಮುಂದೆ ತೆರಳಿ ಮತ್ತೆ ಮತ್ತೆ ಘೋಷಣೆ ಕೂಗಿ ಅಡ್ಡಿಪಡಿಸಿದರು. ಕಾವೇರಿ, ಹೇಮಾವತಿ, ಕಬಿನಿ ಮತ್ತು ಅರ್ಕಾವತಿ ನದಿ ಪಾತ್ರದಲ್ಲಿನ ಯೋಜನೆಗಳನ್ನು ಅನುಷ್ಠಾನಗೊಳಿಸುವ ಹಕ್ಕು ನಮಗೆ ಇದೆ. ತಮಿಳುನಾಡು ತಕರಾರು ತೆಗೆಯಬಾರದು ಎಂದರು. ಈ ಹಂತದಲ್ಲೂ ತಮಿಳುನಾಡಿನ ಸದಸ್ಯರು ಸ್ಪೀಕರ್ ಮುಂದೆ ಘೋಷಣೆ ಮುಂದುವರಿಸಿ ಅಡ್ಡಿಪಡಿಸಲೆತ್ನಿಸಿದರು. ತಮಿಳುನಾಡು ಸರ್ಕಾರ ಕರ್ನಾಟಕದ ನೀರಾವರಿ ಯೋಜನೆಗಳ ಅನುಷ್ಠಾನ ಮಾಡಲು ಅಡ್ಡಿಪಡಿಸಬಾರದು.  ಕರ್ನಾಟಕದ ನೀರಾವರಿ ಯೋಜನೆಗಳ ಅನುಷ್ಠಾನ ವಿಷಯದಲ್ಲಿ ತಲೆ ತೂರಿಸದಂತೆ ತಮಿಳುನಾಡಿಗೆ ಕೇಂದ್ರ ಸರ್ಕಾರ ಸೂಚನೆ ನೀಡಬೇಕು ಎಂದು ಅನಂತಕುಮಾರ್ ಒತ್ತಾಯಿಸಿದರು. ಪ್ರಹ್ಲಾದ್ ಜೋಷಿ, ನವೀನ್ ಕುಮಾರ್ ಕಟೀಲು, ಶಿವರಾಮಗೌಡ, ಸುರೇಶ್ ಅಂಗಡಿ ಮತ್ತಿತರ ಸದಸ್ಯರು ಅನಂತಕುಮಾರ್ ಅವರನ್ನು ಬೆಂಬಲಿಸಿದರು.

ಅರ್ಕಾವತಿ, ಹೇಮಾವತಿಗೂ ಕೊಕ್ಕೆ
ಚೆನ್ನೈ:
ಪತ್ರದ ಮುಖೇನ ಯೋಜನೆಗಳಿಗೆ 'ಕೊಕ್ಕೆ' ಹಾಕುವ ಗೀಳನ್ನು ಸತತ ಎರಡನೇ ದಿನವೂ ಮುಂದುವರಿಸಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ  ಬುಧವಾರ ಪ್ರಧಾನಿ ಮನಮೋಹನ್ ಸಿಂಗ್‌ಗೆ 2ನೇ ಪತ್ರ ಬರೆದಿದ್ದಾರೆ.  ಮಂಗಳವಾರವಷ್ಟೇ ಮೆಕೆದಾಟು ಯೋಜನೆ ವಿರೋಧಿಸಿ ಪತ್ರ ಬರೆದಿದ್ದ ಅವರು, ಬುಧವಾರ ಅರ್ಕಾವತಿ ನದಿ ಪುನಶ್ಚೇತನ,  ಹೇಮಾವತಿ ಕಾಲುವೆ ಆಧುನೀಕರಣ ಯೋಜನೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ನ್ಯಾಯಾಧಿಕರಣದ ಅಂತಿಮ ತೀರ್ಪಿನಲ್ಲಿ ಕರ್ನಾಟಕದ ಯೋಜನೆಗಳ ಪ್ರಸ್ತಾಪ ಇಲ್ಲ. ಹೀಗಾಗಿ ಕರ್ನಾಟಕ ಕಾವೇರಿ ನದಿ ಕೊಳ್ಳದಲ್ಲಿ ಯಾವುದೇ ಯೋಜನೆ ಕೈಗೆತ್ತಿಕೊಳ್ಳಲೇಬಾರದು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement