ಪ್ರಧಾನಿಗೇ ತಟ್ಟಿತು ಕೋಲ್‌ಬಿಸಿ
ಕಲ್ಲಿದ್ದಲು ಬ್ಲಾಕ್‌ಗಳ ಹಂಚಿಕೆ ಸಂಬಂಧ ಪ್ರಧಾನಿ ವಿಚಾರಣೆಗೆ 'ಸಿಬಿಐನಲ್ಲೇ ಸಿಗದ ಅನುಮತಿ' ವಿಚಾರ ಮಂಗಳವಾರ ಸಂಸತ್‌ನ ಉಭಯ ಸದನಗಳಲ್ಲಿ ಗದ್ದಲಕ್ಕೆ...
ನವದೆಹಲಿ: ಕಲ್ಲಿದ್ದಲು ಬ್ಲಾಕ್‌ಗಳ ಹಂಚಿಕೆ ಸಂಬಂಧ ಪ್ರಧಾನಿ ವಿಚಾರಣೆಗೆ 'ಸಿಬಿಐನಲ್ಲೇ ಸಿಗದ ಅನುಮತಿ' ವಿಚಾರ ಮಂಗಳವಾರ ಸಂಸತ್‌ನ ಉಭಯ ಸದನಗಳಲ್ಲಿ ಗದ್ದಲಕ್ಕೆ ಕಾರಣವಾಯಿತು. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
2006 ರಿಂದ 2009ರ ವರೆಗಿನ ಕಲ್ಲಿದ್ದಲು ಬ್ಲಾಕ್ ಹಂಚಿಕೆಗಳ ಸಂಬಂಧ ಪ್ರಧಾನಿ ಸಿಂಗ್ ಅವರ ವಿಚಾರಣೆ ನಡೆಸಬೇಕು, ಇದಕ್ಕಾಗಿ ಅನುಮತಿ ಕೊಡಿ ಎಂದು ಸಿಬಿಐನ ಹಿರಿಯ ಅಧಿಕಾರಿ ಕೆ.ಆರ್. ಚೌರಾಸಿಯಾ ಸಿಬಿಐ ಮುಖ್ಯಸ್ಥರಿಗೆ ಮನವಿ ಮಾಡಿದ್ದರು. ಆದರೆ ಸಿಬಿಐ ಮುಖ್ಯಸ್ಥರು ಇದಕ್ಕೆ ಅನುಮತಿ ನೀಡದೇ ಇದು ಸರಿಯಾದ ಸಮಯವಲ್ಲ ಬೇಡ ಎಂದು ಹೇಳಿದ್ದರು. ಹೀಗಾಗಿ ಪ್ರಧಾನಿ ವಿಚಾರಣೆ ನಡೆಯಲಿಲ್ಲ ಎಂದು ಚೌರಾಸಿಯಾ ಅವರು ಕೋರ್ಟ್‌ಗೆ ಸಲ್ಲಿಸಿರುವ ಪ್ರಗತಿವರದಿಯಲ್ಲಿ ಹೇಳಿದ್ದಾರೆ.
ಈ ವಿಚಾರ ಉಭಯ ಸದನಗಳಲ್ಲೂ ತೀವ್ರ ಗದ್ದಲವೆಬ್ಬಿಸಿತು. ಪ್ರಧಾನಿ ಸಿಂಗ್ ಅವರೇ ಸ್ವಯಂ ಪ್ರೇರಿತರಾಗಿ ಸಿಬಿಐ ಮುಂದೆ ಹಾಜರಾಗಬೇಕು, ಕಲ್ಲಿದ್ದಲು ಕಡತಗಳ ನಾಪತ್ತೆ ಪ್ರಕರಣದ ಬಗ್ಗೆ ಈ ಕೂಡಲೇ ಎಫ್‌ಐಆರ್ ದಾಖಲಿಸಬೇಕು ಎಂದು ಪ್ರತಿಪಕ್ಷಗಳ ಸದಸ್ಯರು ಒತ್ತಾಯಿಸಿದರು ಲೋಕಸಭೆಯಲ್ಲಿ ಸುಷ್ಮಾ ಸ್ವರಾಜ್, ರಾಜ್ಯಸಭೆಯಲ್ಲಿ ಅರುಣ್ ಜೇಟ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.
ಅನವಶ್ಯಕ ಫೈಲ್‌ಗಳೇ ಹೆಚ್ಚು
ಕಲ್ಲಿದ್ದಲು ಸಚಿವಾಲಯ ಸಿಬಿಐಗೆ ನೀಡಿರುವ ಹೆಚ್ಚಿನ ಫೈಲ್‌ಗಳು ಅನವಶ್ಯಕವಾಗಿವೆ ಎಂದು ಸಿಬಿಐ ಹೇಳಿದೆ. ಇಂಥ 12 ಫೈಲ್‌ಗಳನ್ನು ಕಲ್ಲಿದ್ದಲು ಸಚಿವಾಲಯ ನೀಡಿದೆ. ಇವುಗಳಲ್ಲಿ ಯಾವುದೇ ಮಾಹಿತಿ ಇಲ್ಲ. ಆದರೆ ಕಾಣೆಯಾಗಿರುವ ಫೈಲ್‌ಗಳು ಹೆಚ್ಚಿನ ಪ್ರಾಮುಖ್ಯತೆ ಪಡೆದಿವೆ ಎಂದು ಸಿಬಿಐ ಹೇಳಿದೆ.