ಫೇಸ್‌ಬುಕ್ ಲವ್: ಮಗ ಜೈಲಿಗೆ, ಅಪ್ಪ ಸಾವಿನ ಮನೆಗೆ
ಪುತ್ರನ ಫೇಸ್‌ಬುಕ್ ಪ್ರೇಮ ಪ್ರಕರಣಕ್ಕೆ ನತದೃಷ್ಟ ವೃದ್ಧ ತಂದೆ ಬಲಿಯಾಗಿದ್ದಾರೆ. ಕೊಡಗು ಜಿಲ್ಲೆಯ ಮೂರ್ನಾಡು ಗ್ರಾಮದ ಯುವಕ ದೇವಿಪ್ರಸಾದ್ ಬೆಂಗಳೂರಿನ...
ಕನ್ನಡಪ್ರಭ ವಾರ್ತೆ ಮಡಿಕೇರಿ ಸೆ.4
ಪುತ್ರನ ಫೇಸ್‌ಬುಕ್ ಪ್ರೇಮ ಪ್ರಕರಣಕ್ಕೆ ನತದೃಷ್ಟ ವೃದ್ಧ ತಂದೆ ಬಲಿಯಾಗಿದ್ದಾರೆ.
ಕೊಡಗು ಜಿಲ್ಲೆಯ ಮೂರ್ನಾಡು ಗ್ರಾಮದ ಯುವಕ ದೇವಿಪ್ರಸಾದ್ ಬೆಂಗಳೂರಿನ ಕಾಲೇಜ್ ವಿದ್ಯಾರ್ಥಿನಿ ರಮ್ಯಾಳನ್ನು ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡು, ಪ್ರೇಮಿಸಿ ಮೂರು ತಿಂಗಳ ಹಿಂದೆ ಮದುವೆಯಾಗಿದ್ದ. ಗಂಡ ಹೆಂಡತಿ ಅನ್ಯೋನ್ಯವಾಗಿದ್ದರು. ಆ.28ರಂದು ರಮ್ಯಾ ನಾಪತ್ತೆಯಾಗಿದ್ದಳು. ಸೆ.2ರಂದು ಮುಂಜಾನೆ 3 ಗಂಟೆ ವೇಳೆಗೆ ಮೂರ್ನಾಡಿನ ದೇವಿಪ್ರಸಾದ್ ಮನೆಗೆ ಏಕಾಏಕಿ ದಾಳಿ ನಡೆಸಿದ ಬೆಂಗಳೂರಿನ ಸಿದ್ದಾಪುರ ಠಾಣೆಯ ಪೊಲೀಸರು, ದೇವಿಪ್ರಸಾದ್‌ನನ್ನು ಬಂಧಿಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರ ಕಾರಿನ ಚಾಲಕನಾಗಿರುವ ರಮ್ಯಾಳ ತಂದೆ ಹಾಗೂ ಇತರರು ಪೊಲೀಸರ ಜತೆ ಸೇರಿ ದೇವಿಪ್ರಸಾದ್ ತಂದೆ 72 ವರ್ಷದ ಸೋಮಶೇಖರ್ ಮೇಲೆ ಇದೇ ಸಂದರ್ಭದಲ್ಲಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ.
ಇದರಿಂದ ತೀವ್ರ ಆಘಾತಕ್ಕೊಳಗಾಗಿದ್ದ ಸೋಮಶೇಖರ್ ಅವರು ಬುಧವಾರ ಮಡಿಕೇರಿ ಆಸ್ಪತ್ರೆಯಲ್ಲಿ ಮೃತಪಟ್ಟದ್ದಾರೆ.
ಮೂರು ತಿಂಗಳ ಹಿಂದೆ ಮದುವೆ: ಕಾರು ಚಾಲಕ ದೇವಿಪ್ರಸಾದ್‌ಗೆ 6 ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ರಮ್ಯಾ ಪರಿಚಯವಾಗಿದ್ದಳು. ಇವರ ಪರಿಚಯ ಪ್ರೇಮಕ್ಕೆ ತಿರುಗಿದ್ದು, ಮೂರು ತಿಂಗಳ ಹಿಂದೆ ದೇವಿಪ್ರಸಾದ್ ರಮ್ಯಾಳನ್ನು ಮೂರ್ನಾಡಿಗೆ ಕರೆತಂದು ಮದುವೆಯಾಗಿದ್ದ. ಈ ವಿವಾಹಕ್ಕೆ ರಮ್ಯಾ ಪೋಷಕರ ವಿರೋಧವಿತ್ತು.
ಹೀಗಾಗಿ ದೇವಿಪ್ರಸಾದ್ ಮತ್ತ ರಮ್ಯಾ ಮಡಿಕೇರಿಯ ಅಶ್ವಿನಿ ದೇವಾಲಯದಲ್ಲಿ ಸರಳವಾಗಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ರಮ್ಯಾ ತನ್ನ ಗಂಡನ ಮನೆಯವರೊಂದಿಗೆ ಮೂರ್ನಾಡಿನಲ್ಲೇ ನೆಲೆಸಿದ್ದಳು. ಮಾವ ಸೋಮಶೇಖರ್ ಮತ್ತು ಅತ್ತೆ ಸುನಂದಾ ಅವರೊಂದಿಗೂ ಅನ್ಯೋನ್ಯವಾಗಿಯೇ ಇದ್ದಳು.
ಭುಗಿಲೆದ್ದ ಜನರ ಆಕ್ರೋಶ: ಸೋಮಶೇಖರ್ ನಿಧನದಿಂದಾಗಿ ಮೂರ್ನಾಡಿನ ಜನ ಆಕ್ರೋಶಗೊಂಡಿದ್ದು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೂರ್ನಾಡಿನಲ್ಲಿ ನೆರೆಹೊರೆಯವರೊಂದಿಗೆ ಅತ್ಯಂತ ಅನ್ಯೋನ್ಯವಾಗಿದ್ದ ರಮ್ಯಾ ಮೂರ್ನಾಡಿನಲ್ಲಿ ಕಾರು ಚಾಲನೆ ಮಾಡುತ್ತಿದ್ದುದ ಮಾತ್ರವಲ್ಲದೆ ತಾನೇ ಬೈಕ್ ಓಡಿಸಿಕೊಂಡು ಮಡಿಕೇರಿಗೂ ಹೋಗುತ್ತಿದ್ದಳು ಎಂದು ಹೇಳುವ ಪ್ರತ್ಯಕ್ಷದರ್ಶಿಗಳು ಹೀಗಿರುವಾಗ ದೇವಿಪ್ರಸಾದ್ ತನ್ನನ್ನು ಅಪಹರಿಸಿದ್ದ ಎಂದು ಸುಳ್ಳು ಹೇಳುತ್ತಿರುವ ಹಿನ್ನಲೆಯೇನು ಎಂದು ಪ್ರಶ್ನಿಸಿದ್ದಾರೆ. ಮಡಿಕೇರಿ ಬಿಜೆಪಿ ಪ್ರಮುಖರೂ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಮ್ಯಾಳನ್ನು ಕೂಡಲೇ ಸ್ಥಳಕ್ಕೆ ಕರೆಯಿಸಿ ಎಂದು ಉದ್ರಿಕ್ತ ಜನ ಒತ್ತಾಯಿಸಿದರು.
ಮದುವೆ ಬಳಿಕ ಬಂದಿದ್ದ ರಮ್ಯಾ ಬಂಧುಗಳು!: ರಮ್ಯಾಳ ತಂದೆಯನ್ನು ಹೊರತು ಪಡಿಸಿ ಆಕೆಯ ತಾಯಿ, ದೊಡ್ಡಮ್ಮ, ಚಿಕ್ಕಮ್ಮ ಮತ್ತಿತರ ನೆಂಟರಿಷ್ಟರು ಬೆಂಗಳೂರಿನಿಂದ ಮೂರ್ನಾಡಿಗೆ ಆಗಾಗ್ಗೆ ಬಂದು ಆತಿಥ್ಯ ಪಡೆದು ಹೋಗಿದ್ದಾರೆ. ಜತೆಗೆ ಸೋಮಶೇಖರ್ ಕುಟುಂಬದೊಂದಿಗೆ ಅನ್ಯೋನ್ಯವಾಗಿದ್ದರು. ಈಗ ಏಕಾಏಕಿ ಈ ಬದಲಾವಣೆಯಾಗಿದ್ದು ಏಕೆಂಬ ಪ್ರಶ್ನೆ ಸ್ಥಳೀಯರಿಂದ ಕೇಳಿ ಬರುತ್ತಿತ್ತು.
ಅಂತ್ಯಕ್ರಿಯೆಲ್ಲಿ ಪಾಲ್ಗೊಳ್ಳಲು ಅನುಮತಿ: ಬೆಂಗಳೂರಿನ ಜೈಲಿನಲ್ಲಿರುವ ದೇವಿಪ್ರಸಾದ್‌ಗೆ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ನ್ಯಾಯಾಲಯ ಪೆರೋಲ್ ಮೇಲೆ ಅನುಮತಿ ನೀಡಿದೆ. ಆದರೆ, ರಮ್ಯಾ ಅಂತ್ಯಕ್ರಿಯೆ ಸ್ಥಳಕ್ಕೆ ಬರೋವರೆಗೂ ಸೋಮಶೇಖರ್‌ಗೆ ಅವಕಾಶ ನೀಡಲ್ಲ ಎಂದು ಉದ್ರಿಕ್ತರು ಸಂಜೆವರೆಗೂ ಪಟ್ಟು ಹಿಡಿದಿದ್ದರು. ಮಡಿಕೇರಿ ಡಿವೈಎಸ್ಪಿ ರಾಜೀವ್ ಮಾಂಗ್, ಗ್ರಾಮಾಂತರ ಠಾಣಾಧಿಕಾರಿ ಶ್ರೀಕಾಂತ್ ಸ್ಥಳದಲ್ಲಿದು ಬಂದೋಬಸ್ತ್ ಕಲ್ಪಿಸಿದ್ದರು. ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಕಾರು ಚಾಲಕನ ಪುತ್ರಿಯಾಗಿರುವ ರಮ್ಯಾಳನ್ನು ರಕ್ಷಿಸಲು ಕೆಲ ಪ್ರಭಾವಿಗಳು ಮುಂದಾಗಿದ್ದಾರೆ ಎಂದು ಮೂರ್ನಾಡು ಜನತೆ ಆರೋಪಿಸಿದೆ.
ಕುಸಿದ ಬಿದ್ದ ತಾಯಿ: ಮಗ ಜೈಲು ಸೇರಿದ ದುಖದಲ್ಲಿದ್ದ ಸುನಂದಾಗೆ ಪತಿ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ. ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದ ಪತಿಯ ಮೃತದೇಹ ನೋಡಲು ಬಂದ ಸುನಂದಾ ಆಸ್ಪತ್ರೆ ಆವರಣದಲ್ಲಿಯೇ ಆಘಾತದಿಂದ ಕುಸಿದು ಬಿದ್ದರು. ಕೂಡಲೇ ಸುನಂದ ಅವರನ್ನು ತುರ್ತು ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಪತಿಯ ಸಾವಿನಿಂದ ರೋದಿಸುತ್ತಿದ್ದ ಸುನಂದ ಮಗ ದೇವಿಪ್ರಸಾದ್‌ನನ್ನು ಜೈಲಿನಿಂದ ಬಿಡಿಸಿ ಆತನನ್ನು ಆರೋಪ ಮುಕ್ತಗೊಳಿಸಿ ಎಂದು ಗೋಗರೆಯುತ್ತಿದ್ದರು.
ರಮ್ಯಾ ತಂದೆ ವಿರುದ್ಧವೂ ಕೇಸ್: ರಮ್ಯಾ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಮೂರ್ನಾಡಿನ ದೇವಿಪ್ರಸಾದ್ ಎಂಬಾತನನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ದೇವಿಪ್ರಸಾದ್ ತಂದೆ ಸೋಮಶೇಖರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಮ್ಯಾ ತಂದೆ ವೇಣುಗೋಪಾಲ್ ಮತ್ತು 8 ಮಂದಿ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ದಕ್ಷಿಣ ವಲಯ ಪೊಲೀಸ್ ಮಹಾ ನಿರ್ದೇಶಕ ರಾಮಚಂದ್ರ ರಾವ್ ಹೇಳಿದ್ದಾರೆ. ಸೋಮಶೇಖರ್ ಸಾವಿನ ಬಗ್ಗೆಯೂ ವೈದ್ಯಕೀಯ ತನಿಖೆ ಕೈಗೊಳ್ಳಲಾಗುತ್ತದೆ. ಸೋಮಶೇಖರ್ ಸಾವಿನ ಬಗ್ಗೆ ಮರಣೋತ್ತರ ಪರೀಕ್ಷೆಯ ವರದಿ ಬಂದ ಮೇಲೆ ಮುಂದಿನ ಹಂತದ ಕ್ರಮಕೈಗೊಳ್ಳಲಾಗುವುದು. ಒಟ್ಟು ಪ್ರಕರಣದ ಕುರಿತು ಶೀಘ್ರವೇ ತನಿಖೆ ಕೈಗೊಳ್ಳಲಾಗುತ್ತದೆ ಎಂದರು.
8 ಮಂದಿ ವಿರುದ್ಧ ದೂರು
ರಮ್ಯಾ ತಂದೆ ವೇಣುಗೋಪಾಲ್, ಸಹೋದರರಾದ ಶಶಿ, ನವೀನ್ ಸೇರಿದಂತೆ 8 ಮಂದಿಯ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಳಗ್ಗಿನ ಜಾವ ಮೂರ್ನಾಡಿನಲ್ಲಿರುವ ದೇವಿಪ್ರಸಾದ್ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣದ ಬಗ್ಗೆಯೂ ತನಿಖೆ ಕೈಗೊಳ್ಳಲಾಗುತ್ತದೆ. ಮನೆಯಿಂದ ಹಣ, ಆಭರಣ ದರೋಡೆ ಮಾಡಲಾಗಿದೆ ಎಂದು ಸೋಮಶೇಖರ್ ಪತ್ನಿ ಸುನಂದಾ ದೂರು ನೀಡಿದ್ದಾರೆ.
- ಅನುಚೇತ್, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ದಿಢೀರ್ ನಾಪತ್ತೆಯಾದ ರಮ್ಯಾ!
ಆ.28ರಂದು ಮೂರ್ನಾಡಿನ ಮನೆಯಿಂದ ದಿಢೀರ್ ನಾಪತ್ತೆಯಾಗಿದ್ದ ರಮ್ಯಾ ತನ್ನ ಬಂಧುಗಳೊಂದಿಗೆ ಬೆಂಗಳೂರಿಗೆ ತೆರಳಿ, ಸಿದ್ದಾಪುರ ಠಾಣೆಯಲ್ಲಿ ತನ್ನನ್ನು ದೇವಿಪ್ರಸಾದ್ ಅಪಹರಿಸಿ ಗೃಹಬಂಧನದಲ್ಲಿರಿಸಿದ್ದ ಎಂದು ದೂರು ದಾಖಲಿಸಿದ್ದಳು. ಈ ದೂರಿನನ್ವಯ ಸೆ.2 ರಂದು ದೇವಿಪ್ರಸಾದ್ ಮನೆಗೆ ಏಕಾಏಕಿ ದಾಳಿ ನಡೆಸಿದ ಪೊಲೀಸರು ದೇವಿಪ್ರಸಾದ್‌ನನ್ನು ಬಂಧಿಸಿ ಕರೆದೊಯ್ದರು. ಮನೆಯಲ್ಲಿದ್ದ ಸೋಮಶೇಖರ್ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಗಂಭೀರ ಗಾಯಗಳಾದ ಸೋಮಶೇಖರ್‌ನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಬುಧವಾರ ಮುಂಜಾನೆ ಅಸುನೀಗಿದ್ದಾರೆ.