ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆರ್ಥಿಕ ಸಿರಿಯಾ ಮೇಲೆ ಶೃಂಗಸಭೆ ಕಣ್ಣು

ಸಿರಿಯಾ ಮೇಲೆ ಯುದ್ಧಕ್ಕೆ ಸನ್ನದ್ಧವಾಗಿರುವ ಅಮೆರಿಕ ಜಿ-20 ದೇಶಗಳ ಬೆಂಬಲ ಯಾಚಿಸುವ ಅವಕಾಶವಾಗಿ ಪರಿವರ್ತಿಸಿಕೊಳ್ಳುವರೆಂಬ ಸಂದೇಹದ ನಡುವೆ...

Mainashree
Updated On : 6 Sept 2013, 12:21 pm

ಅಧ್ಯಕ್ಷ ಒಬಾಮಾ ಲಾಬಿಗೆ ಸಿಗದ ನಿರೀಕ್ಷಿತ ಪ್ರತಿಕ್ರಿಯೆ

ಸೇಂಟ್ ಪೀಟರ್ಸ್‌ಬರ್ಗ್  ಸೆ.5
-
ಸಿರಿಯಾ ಮೇಲೆ ಯುದ್ಧಕ್ಕೆ ಸನ್ನದ್ಧವಾಗಿರುವ ಅಮೆರಿಕ ಜಿ-20 ದೇಶಗಳ ಬೆಂಬಲ ಯಾಚಿಸುವ ಅವಕಾಶವಾಗಿ ಪರಿವರ್ತಿಸಿಕೊಳ್ಳುವರೆಂಬ ಸಂದೇಹದ ನಡುವೆ ಜಾಗತಿಕ ಆರ್ಥಿಕ ವ್ಯವಸ್ಥೆಗೆ ಹೊಸ ಭಾಷ್ಯ ಬರೆಯಲು ಸೇಂಟ್‌ಪೀಟರ್ಸ್‌ಬರ್ಗ್ ಶೃಂಗಸಭೆ ಸಂಕಲ್ಪ ತೊಟ್ಟಿದೆ.
ಇಲ್ಲಿನ ಐತಿಹಾಸಿಕ ಕಾನ್‌ಸ್ಟಂಟಿನೋವ ಅರಮನೆಯಲ್ಲಿ ಆತಿಥೇಯ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಳಿದ ಹತ್ತೊಂಬತ್ತು ಸದಸ್ಯ ರಾಷ್ಟ್ರಗಳ ನಾಯಕರ ಸಮ್ಮುಖದಲ್ಲಿ ಶೃಂಗಸಭೆಗೆ ವಿಧ್ಯುಕ್ತ ಚಾಲನೆ ನೀಡಿದರು.
'ವಿಶ್ವದ ಹಣಕಾಸು ಸ್ಥಿತಿ ಅನಿಶ್ಚಿತತೆಯಿಂದ ಕೂಡಿದೆ. ಸದಸ್ಯ ದೇಶಗಳ ಪೈಕಿ ಒಂದು ದೇಶದಲ್ಲಿ ಆರ್ಥಿಕ ಪರಿಸ್ಥಿತಿ ವಿಷಮವಾದರೆ ಅದರ ಸರಣಿ ಪರಿಣಾಮ ಎಲ್ಲ ದೇಶಗಳ ಮೇಲೂ ಆಗುತ್ತದೆ. ಆದ್ದರಿಂದ ಜಿ20 ರಾಷ್ಟ್ರಗಳು ಇನ್ನೂ ನಿಕಟವಾಗಿ, ಹೆಚ್ಚಿನ ತಿಳಿವಳಿಕೆ, ವಿಶ್ವಾಸ, ಭರವಸೆಯಿಂದ ಪರಸ್ಪರ ಕಾರ್ಯನಿರ್ವಹಿಸುವ ಅಗತ್ಯವಿದೆ' ಎಂದು ಪುಟಿನ್ ಹೇಳಿದರು.
ಸಿಗದ ನಿರೀಕ್ಷಿತ ಪ್ರತಿಕ್ರಿಯೆ: ತನ್ನ ಅಜೆಂಡಾವನ್ನು ಜಗತ್ತಿನ ದೇಶಗಳ ಮೇಲೆ ಹೇರುವುದು ಹಾಗೂ ಅದನ್ನು ಎಲ್ಲ ದೇಶಗಳು ಒಪ್ಪಿಕೊಳ್ಳುವಂತೆ ಲಾಬಿ ಮಾಡುವುದು ಅಮೆರಿಕ ರೂಢಿಸಿಕೊಂಡು ಬಂದಿರುವ ಕಾರ್ಯತಂತ್ರ. ಇದು ಈ ಸಲದ ಜಿ-20 ಶೃಂಗಸಭೆಯನ್ನೂ ಬಿಟ್ಟಿಲ್ಲ.
ಜಾಗತಿಕ ಹಣಕಾಸು ಸಂಬಂಧಿ ವಿಷಯಗಳ ಕುರಿತು ವಿಶ್ವದ ಶೇ. 90ರಷ್ಟು ಜಿಡಿಪಿ ಹೊಂದಿರುವ 20 ದೇಶಗಳು ಚರ್ಚಿಸಲು ರೂಪುಗೊಂಡಿರುವ ವೇದಿಕೆ ಜಿ-20 ಶೃಂಗಸಭೆ. ಆದರೆ, ಅಮೆರಿಕದ ಕತೆಯೇ ಬೇರೆ. ಸಿರಿಯಾ ಮೇಲೆ ದಾಳಿ ನಡೆಸಲು ಇತರ ಎಲ್ಲ ಸದಸ್ಯ ದೇಶಗಳ ಬೆಂಬಲ ಪಡೆಯುವುದು ಅಮೆರಿಕದ ಹುನ್ನಾರ. ಹೀಗಾಗಿ ಜಿ-20 ಶೃಂಗಸಭೆಯ ಮೇಲೆ ಸಹ ಸಿರಿಯಾ ಯುದ್ಧ ಕಾರ್ಮೋಡ ಕವಿದರೆ ಅಚ್ಚರಿಯೇನಿಲ್ಲ.
ಸಿರಿಯಾ ಅಧ್ಯಕ್ಷ ಬಷರ್ ಅಸದ್ ಅವರ ಪ್ರಜಾತಂತ್ರ ವಿರೋಧಿ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ಕೊನೆಗಾಣಿಸಲು, ಆ ದೇಶದ ಮೇಲೆ ಯುದ್ಧ ಸಾರಲು ಅಮೆರಿಕ ಉತ್ಸುಕವಾಗಿದೆ. ಆದರೆ ಇದಕ್ಕೆ ಬ್ರಿಟನ್ ಹಾಗೂ ರಷ್ಯಾದಿಂದ ನಿರೀಕ್ಷಿತ ಬೆಂಬಲವಾಗಲಿ, ಪ್ರತಿಕ್ರಿಯೆಯಾಗಲಿ ಸಿಗಲಿಲ್ಲ. ಫ್ರಾನ್ಸ್ ಹೊರತುಪಡಿಸಿದರೆ ಉಳಿದ ದೇಶಗಳ ಪ್ರತಿಕ್ರಿಯೆ ತುಸು ನೀರಸವಾಗಿಯೇ ಇದೆ. ರಷ್ಯಾದ ಅಧ್ಯಕ್ಷ ಪುಟಿನ್ ಬಹಿರಂಗವಾಗಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಸಿರಿಯಾ ಮೇಲೆ ದಾಳಿಗೆ ವಿಶ್ವಸಂಸ್ಥೆಯ ಭದ್ರತಾಮಂಡಳಿ ಒಪ್ಪಿಗೆ ಸೂಚಿಸಿದರೆ, ಆಗ ಅಂಥ ಕ್ರಮವನ್ನು ಸಮ್ಮತಿಸಬಹುದೇ ಹೊರತು, ಅದಕ್ಕೆ ವ್ಯತಿರಿಕ್ತವಾಗಿ ಅಮೆರಿಕವೇನಾದರೂ ಏಕಪಕ್ಷೀಯ ನಿರ್ಧಾರಕ್ಕೆ ಮುಂದಾದರೆ ಅದನ್ನು ವಿರೋಧಿಸುವುದಾಗಿ ಪುಟಿನ್ ಸ್ಪಷ್ಟ ಮಾತುಗಳಲ್ಲಿ ಹೇಳಿರುವುದು ಅಮೆರಿಕಕ್ಕೆ ತುಸು ಹಿನ್ನಡೆಯಾಗಿದೆ.
ಇಷ್ಟಾಗಿಯೂ ಅಮೆರಿಕ ತನ್ನ ಧೋರಣೆಯನ್ನು ಸಡಿಲಿಸದೇ, ಸಿರಿಯಾ ಮೇಲೆ ದಾಳಿಗೆ ಮುಂದಾದರೆ ಅದನ್ನು ಆಕ್ರಮಣ ಎಂದು ಭಾವಿಸಬೇಕಾಗುತ್ತದೆ ಎಂದೂ ಪುಟಿನ್ ಹೇಳಿರುವುದು ಅಮೆರಿಕಕ್ಕೆ ಭಾರಿ ಕಸಿವಿಸಿಯನ್ನುಂಟು ಮಾಡಿದೆ.
ಬಷರ್ ಅಸದ್ ಅವರು ತಮ್ಮ ವಿರೋಧಿಗಳ ದಮನಕ್ಕೆ ರಾಸಾಯನಿಕ ಅಸ್ತ್ರಗಳನ್ನು ಬಳಸಿದ್ದಾರೆನ್ನಲಾದ ಸಂಗತಿ ಯಾವುದೇ ಸಂದೇಹಗಳಿಗೆ ಎಡೆಮಾಡಿಕೊಡದೇ ಸಾಬೀತಾಗಬೇಕು. ಆಗ ಮಾತ್ರ ಅಮೆರಿಕದ ವಾದವನ್ನು ಒಪ್ಪಬಹುದು ಎಂಬ ಕಠಿಣ ನಿಲುವನ್ನು ಪುಟಿನ್ ತಾಳಿದ್ದಾರೆ. ಈ ಮಧ್ಯೆ ಸಿರಿಯಾ ವಿರುದ್ಧ ದಾಳಿ ಮಾಡುವ ಪ್ರಸ್ತಾವವನ್ನು ಬೆಂಬಲಿಸುವ ಕರಡು ನಿರ್ಣಯಕ್ಕೆ ಅಮೆರಿಕದ ಸೆನೆಟ್‌ನ ವಿದೇಶ ವ್ಯವಹಾರಗಳ ಸಮಿತಿ ತನ್ನ ಅನುಮೋದನೆ ನೀಡಿದೆ. ಈ ನಿರ್ಧಾರ ಹೊರಬಿದ್ದ ಬಳಿಕವೇ ಪುಟಿನ್ ಹೀಗೆ ಹೇಳಿರುವುದು ರಷ್ಯಾ ನಿಲುವನ್ನು ಸಡಿಲಗೊಳಿಸಿಲ್ಲ ಎಂಬ ಸಂದೇಶ ನೀಡಿದಂತಾಗಿದೆ.
ಈ ಹಿನ್ನೆಲೆಯಲ್ಲಿ ಈ ಸಾಂಸ್ಕೃತಿಕ ಹಾಗೂ ಐತಿಹಾಸಿಕ ನಗರಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆ ಯಾವ ಹಾದಿ ಹಿಡಿಯಬಹುದು ಎಂಬ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಈ ಶೃಂಗಸಭೆಯ ಅಜೆಂಡಾದಲ್ಲಿ ಸಿರಿಯಾ ಪ್ರಸ್ತಾಪವೇ ಇಲ್ಲ. ಆದರೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮಾತ್ರ ಈ ಅವಕಾಶವನ್ನು ತಮ್ಮ ಪರವಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ.
ಮೂಕಪ್ರೇಕ್ಷಕರಾಗಿ ಕೂರಲ್ಲ: ಸಿರಿಯಾ ಅಧ್ಯಕ್ಷ ಬಷರ್ ಅಸದ್ ಅವರು ಬಂಡುಕೋರರ ಶಮನಕ್ಕೆ ರಾಸಾಯನಿಕ ಅಸ್ತ್ರಗಳನ್ನು ಬಳಸಿಲ್ಲ. ಹಾಗೆ ಹೇಳಲು ಯಾವ ಸಾಕ್ಷ್ಯಗಳಿವೆ? ಅಂಥ ಸಾಕ್ಷ್ಯ-ಪುರಾವೆಗಳು ಇದ್ದರೆ ಸಾಬೀತುಪಡಿಸಲಿ. ಆಗ ರಷ್ಯಾ ಸಹ ಸಿರಿಯಾ ವಿರುದ್ಧ ಕ್ರಮಕೈಗೊಳ್ಳುವ ಅಮೆರಿಕ ನಿರ್ಧಾರವನ್ನು ಬೆಂಬಲಿಸುತ್ತದೆ ಎಂದು ಸವಾಲು ಹಾಕುವ ಧಾಟಿಯಲ್ಲಿ ಪುಟಿನ್ ಹೇಳಿರುವುದರಿಂದ ಜಿ-20 ಶೃಂಗಸಭೆಯಲ್ಲಿ ಅಮೆರಿಕ-ರಷ್ಯಾ ಅಧ್ಯಕ್ಷರ ನಡೆ-ನುಡಿ ಗಮನ ಸೆಳೆದಿದೆ. ಆದರೆ, ಅಮೆರಿಕ ಸಹ ಇದಕ್ಕೆ ಈಗಾಗಲೇ ಪ್ರತಿಕ್ರಿಯೆ ನೀಡಿದೆ. ರಾಸಾಯನಿಕ ಅಸ್ತ್ರಗಳನ್ನು ಸಿರಿಯಾ ಬಳಸಿದೆಯೆಂಬುದರಲ್ಲಿ ಅನುಮಾನವೇ ಇಲ್ಲ. ಇಂಥ ಸಂದರ್ಭದಲ್ಲಿ ನಾವು ಮೂಕಪ್ರೇಕ್ಷಕರಾಗಿ ಕುಳಿತುಕೊಳ್ಳುವುದಿಲ್ಲ ಎಂದು ಅಮೆರಿಕ ವಿದೇಶಾಂಗ ಸಚಿವ ಜಾನ್‌ಕೆರ್ರಿ ಹೇಳಿರುವುದು ಗಮನಾರ್ಹ. ಈ ಅಂಶಗಳನ್ನು ಗಮನಿಸಿದರೆ, ಜಿ-20 ಶೃಂಗಸಭೆ ತನ್ನ ಮೂಲ ಆಶಯ ವಿಷಯಗಳಿಗೆ ಹೆಚ್ಚಿನ ಆದ್ಯತೆ, ಒತ್ತು ನೀಡದೇ ಸಿರಿಯಾ ವಿಷಯದಲ್ಲಿ ಅಮೆರಿಕದ ಕಾರ್ಯತಂತ್ರಕ್ಕೆ ಬೆಂಬಲ ಗಿಟ್ಟಿಸಿಕೊಳ್ಳುವ ಕಸರತ್ತಿನಲ್ಲಿ ಪರ್ಯಾವಸಾನಗೊಳ್ಳಬಹುದೇ ಎಂಬ ಗುಮಾನಿ ಹುಟ್ಟುಕೊಂಡಿದೆ.
'ದಿ ಸೇಂಟ್ ಪೀಟರ್ಸ್‌ಬರ್ಗ್ ಟೈಮ್ಸ್‌' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ರಷ್ಯಾದ ಅಂತಾರಾಷ್ಟ್ರೀಯ ವ್ಯವಹಾರಗಳ ಪರಿಣತ ಆಂಡ್ರ್ಯೂ ಕುಚಿನ್ಸ್, 'ಪುಟಿನ್‌ಗೆ ಬರಾಕ್ ಒಬಾಮ ಅವರನ್ನು ಕಂಡರೆ ಆಗುವುದಿಲ್ಲ. ಸಿರಿಯಾ ವಿಷಯವಾಗಿ ಇಬ್ಬರಲ್ಲೂ ಮೂಡಿರುವ ಪರ-ವಿರೋಧ ಭಾವ ಮೊದಲಲ್ಲ. ಬೇರೆ ವಿಷಯಗಳಲ್ಲೂ ಈ ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಇಬ್ಬರೂ ಪರಸ್ಪರರ ಬಗ್ಗೆ ಅಗೌರವವನ್ನು ಹೊಂದಿರುವುದು ಗುಟ್ಟಾಗಿ ಉಳಿದಿಲ್ಲ' ಎಂದು ಹೇಳಿರುವುದನ್ನು ಗಮನಿಸಿದರೆ, ಒಬಾಮ-ಪುಟಿನ್ ನಡುವೆ ಮಾತುಕತೆಯಾದರೂ ಅದು ಸೌಜನ್ಯಕ್ಕಷ್ಟೇ ಸೀಮಿತವಾಗಬಹುದು. ಶೃಂಗಸಭೆಗೆ ಆತಿಥ್ಯವನ್ನು ಏರ್ಪಡಿಸಿಯೂ, ಅಮೆರಿಕ ತಳೆದ ನಿರ್ಧಾರಗಳಿಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿರುವುದನ್ನು ನೋಡಿದರೆ, ಅವರಿಬ್ಬರ ಸಂಬಂಧಗಳಲ್ಲಿ ಗಣನೀಯ ಬದಲಾವಣೆಯಾಗಲಿ, ಸುಧಾರಣೆಯಾಗಲಿ ಆಗಲಿಕ್ಕಿಲ್ಲ.
ಒಬಾಮಾ ಹಾಗೂ ಪುಟಿನ್ ಜಿ-20 ಶೃಂಗಸಭೆ ಸಂದರ್ಭದಲ್ಲಿ ಪರಸ್ಪರ ಮುಖಾಮುಖಿಯಾಗಬಹುದು. ಆದರೆ ಮಾತುಕತೆ ನಡೆಸಲಿಕ್ಕಿಲ್ಲ ಎಂದು ರಷ್ಯಾದ ಪ್ರಮುಖ ಪತ್ರಿಕೆಗಳಲ್ಲಿ ವಿಶ್ಲೇಷಿಸಲಾಗಿದೆ. obama sees Putin but meeting unclear ಎಂದು ರಾಯಿಟರ್ ಸಹ ಹೇಳಿದೆ.
ಸ್ನೋಡೆನ್‌ನಿಂದ ಹಳಸಿತ್ತು ಸಂಬಂಧ: ಅಮೆರಿಕದ ಅನೇಕ ರಹಸ್ಯಗಳನ್ನು ಬಹಿರಂಗಗೊಳಿಸಿದ ಅಲ್ಲಿನ ಕಂಪ್ಯೂಟರ್ ಪರಿಣತ ಎಡ್ವರ್ಡ್ ಸ್ನೋಡೆನ್‌ಗೆ ರಷ್ಯಾ ಆಶ್ರಯ ನೀಡಿದಾಗ ಅಮೆರಿಕ ಅದನ್ನು ವಿರೋಧಿಸಿತ್ತು. ಆಗಲೇ ಎರಡೂ ನಾಯಕರ ಸಂಬಂಧ ಹಳಸಿದ ಬಗ್ಗೆ ಸೂಚನೆ ಸಿಕ್ಕಿತ್ತು.
ಜಿ-20 ಶೃಂಗಸಭೆಯ ಮುನ್ನಾದಿನ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪುಟಿನ್, 'ಸ್ನೋಡೆನ್ ಅಮೆರಿಕದಲ್ಲಿ ಅಪರಾಧವೆಸಗಿದ್ದಾನೋ ಇಲ್ಲವೋ ಎಂಬುದು ಮುಖ್ಯ ಅಲ್ಲ. ಆತನನ್ನು ತನಗೆ ಒಪ್ಪಿಸುವಂತೆ ಅಮೆರಿಕ ಹೇಳುತ್ತಿದೆ. ಆದರೆ ಅಪರಾಧಿಗಳನ್ನು ಒಪ್ಪಿಸುವಂಥ ನಿರ್ಣಯ ಅಮೆರಿಕ-ರಷ್ಯಾ ನಡುವೆ ಆಗಿಲ್ಲ. ಹಾಗೆಂದು ನಾವು ಸ್ನೋಡೆನ್‌ನನ್ನು ಬೆಂಬಲಿಸುತ್ತಿಲ್ಲ. ಉಭಯ ದೇಶಗಳ ನಡುವೆ ಅಂಥ ಅಪರಾಧಿಗಳನ್ನು ಒಪ್ಪಿಸುವ ನಿರ್ಣಯವಾಗಲಿ, ಒಡಂಬಡಿಕೆಯಾಗಲಿ ಆಗಿಲ್ಲದಿರುವುದರಿಂದ ಅವನನ್ನು ಒಪ್ಪಿಸುವುದಿಲ್ಲ ಎಂದು ಹೇಳಿದ್ದೇವೆ' ಎಂದು ಕಡ್ಡಿ ಮುರಿದಂತೆ ಹೇಳಿರುವುದು ಎರಡೂ ನಾಯಕರ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
ಜಿ-20 ವೇದಿಕೆಯಲ್ಲಿ ಹಣಕಾಸು ವಿಷಯಕ್ಕಿಂತ, ತನಗೆ ಬಿಸಿತುಪ್ಪವಾಗಿ ಪರಿಣಮಿಸಿರುವ ಸಿರಿಯಾ ದಾಳಿಯೇ ಮುಖ್ಯವಾಗಿದೆ. ಬ್ರಿಟನ್‌ನಂಥ ಮಿತ್ರ ದೇಶ ಸಹ ಅಮೆರಿಕಾದ ಬೆಂಬಲಕ್ಕೆ ನಿಂತಿಲ್ಲ. ಈ ನಡುವೆ ರಷ್ಯಾದ ಪ್ರಬಲ ವಿರೋಧ. ಭಾರತದ ನೀರಸ ಪ್ರತಿಕ್ರಿಯೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ, ಒಬಾಮ ಮನಸ್ಸಿನಲ್ಲಿ ಏನು ನಡೆಯುತ್ತಿದೆಯೆಂಬುದನ್ನು ತಿಳಿದುಕೊಳ್ಳಬಹುದು. ಅದು ಈ ಜಿ-20 ಶೃಂಗಸಭೆಗೆ ಮುನ್ನುಡಿಯಷ್ಟೇ ಅಲ್ಲ, ಹಣೆಬರಹವೂ ಆಗಬಹುದು.
 ಜಿ-20 ಶೃಂಗಸಭೆ ನಡೆಯುತ್ತಿರುವ ಸಂದರ್ಭ ಒಬಾಮ ಅವರಿಗೆ ವರದಾನವಾಗಿ ಪರಿಣಮಿಸಿದೆ. ವಿಶ್ವದ ಪ್ರಬಲ ರಾಷ್ಟ್ರಗಳ ಸಮ್ಮತಿ ಪಡೆದು ಸಿರಿಯಾ ವಿರುದ್ಧ ದಾಳಿ ಮಾಡುವ ನಿರ್ಧಾರ ಅವರದ್ದು. ಸಂಭವನೀಯ ಟೀಕೆ, ಪ್ರತಿರೋಧಕ್ಕೆ ಅಂಜಿ ಅವರು ಅಮೆರಿಕ ಸೆನೆಟ್‌ನ ಸಮ್ಮತಿ ಕೋರಲು ನಿರ್ಧರಿಸಿದ್ದು ಇದೇ ಕಾರಣಕ್ಕೆ. ಸಿರಿಯಾ ದಾಳಿಗೆ ಸಂಬಂಧಿಸಿ ಒಬಾಮ ಅತಿ ಜಾಗರೂಕವಾಗಿ ಹೆಜ್ಜೆ ಇಡುತ್ತಿದ್ದಾರೆ.
 ಆದರೆ ಜಿ-20 ದೇಶಗಳ ಪೈಕಿ ಒಬಾಮ ಅವರ ಪರ ಯಾವ ದೇಶವೂ ಒಕ್ಕೊರಲ ಬೆಂಬಲ ನೀಡಿಲ್ಲದಿರುವುದು ಗಮನಾರ್ಹ. ಭಾರತ ಹಾಗೂ ಇಂಡೋನೇಷಿಯಾ 'ದಾಳಿಗೆ ಪ್ರತಿದಾಳಿ ಉತ್ತರವಾಗಬಾರದು' ಎಂದು ಹೇಳಿವೆ. ರಷ್ಯಾ ತಳೆದ ನಿಲುವನ್ನೇ ಚೀನಾ ಸಹ ತಳೆಯಬಹುದು ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ಬ್ರೆಜಿಲ್ ಹಾಗೂ ಮೆಕ್ಸಿಕೋ ಸಹ ಒಬಾಮ ಅವರನ್ನು ಬೆಂಬಲಿಸುವ ಮೂಡಿನಲ್ಲಿ ಇಲ್ಲ. ಫ್ರಾನ್ಸ್ ಅಧ್ಯಕ್ಷ ಫ್ರಾಂಕೊಯಿಸ್ ಹಾಲಂಡ್ ಅವರು ಒಬಾಮ ಅವರ ಪರವಾಗಿ ಹೇಳಿಕೆ ನೀಡಿದ್ದಾರೆ. ಆದರೆ ಅವರ ದೇಶದಲ್ಲಿ ಈಗ ಆ ಬಗ್ಗೆ ಸಾಕಷ್ಟು ಪ್ರತಿರೋಧಗಳು ಕೇಳಿ ಬರುತ್ತಿರುವುದನ್ನು ಉಪೇಕ್ಷಿಸುವಂತಿಲ್ಲ.
 ಸಿರಿಯಾ ವಿರುದ್ಧ ದಾಳಿಗೆ ಮಿಲಿಟರಿ ನೆರವು ನೀಡುವುದಿಲ್ಲ. ಬೇಕಾದರೆ ರಾಜತಾಂತ್ರಿಕ ನೆರವು ನೀಡಬಹುದೆಂದು ಬ್ರಿಟನ್ ಪ್ರಧಾನಿ ಡೆವಿಡ್ ಕೆಮರೂನ್ ಹೇಳಿ ಮೆಲ್ಲಗೆ ಜಾರಿಕೊಂಡಿದ್ದಾರೆ. ದಕ್ಷಿಣಾ ಆಫ್ರಿಕಾ ಸಹ ನಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದೆ.  ಜಿ-20 ದೇಶಗಳ ಪೈಕಿ ಉಳಿದವುಗಳಾದ ಆಸ್ಟ್ರೇಲಿಯಾ, ಕೆನಡ, ದಕ್ಷಿಣ ಕೊರಿಯಾ, ಜಪಾನ್, ಜರ್ಮನಿ ಹಾಗೂ ಯುರೋಪಿಯನ್ ಒಕ್ಕೂಟ ಯಾವ ನಿಲುವು ತಳೆಯಬಹುದೆಂಬುದು ಸ್ಪಷ್ಟವಾಗಿಲ್ಲ.
 ಈ ಎಲ್ಲ ಸಂಗತಿಗಳನ್ನು ಗಮನಿಸಿದರೆ ಜಿ-20 ಶೃಂಗಸಭೆ ಉದ್ದೇಶಿತ ಕಾರ್ಯಸೂಚಿಯನ್ನು ಪಕ್ಕಕ್ಕೆ ಸರಿಸಿ, ಅಮೆರಿಕದ ಒತ್ತಡಕ್ಕೊಳಗಾಗಿ ಸಿರಿಯಾ ಚರ್ಚೆಗೆ ಸೀಮಿತವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ವಿಲಕ್ಷಣ ಕಾರಣಕ್ಕಾಗಿ ಪುಟಿನ್ ಸುದ್ದಿ

ಜಿ-20 ಶೃಂಗಸಭೆಗೆ ಸದಸ್ಯ ದೇಶಗಳ ನಾಯಕರು ಈ ಐತಿಹಾಸಿಕ ನಗರಿಗೆ ಬಂದಿಳಿಯುತ್ತಿರುವ ಸಂದರ್ಭದಲ್ಲಿಯೇ ಆತಿಥೇಯ ರಾಷ್ಟ್ರವಾದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿಲಕ್ಷಣ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಅಪ್ರಾಪ್ತ ವಯಸ್ಸಿನ ಮಕ್ಕಳಲ್ಲಿ ಸಲಿಂಗಕಾಮವನ್ನು ಪ್ರಚಾರ ಮಾಡುವುದನ್ನು ನಿಷೇಧಿಸುವ ಕಾನೂನು ಜಾರಿಗೊಳಿಸಿದ ಬಳಿಕ ಪುಟಿನ್ ಸಲಿಂಗಕಾಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 'ಪುಟಿನ್ ಮಾನವ ವಿರೋಧಿ', 'ಜೀವವಿರೋಧಿ' ಎಂಬ ಘೋಷಣಾ ಫಲಕಗಳನ್ನು ಹಿಡಿದು ಇಲ್ಲಿನ ಬೀದಿಗಳಲ್ಲಿ ಸಲಿಂಗಕಾಮಿಗಳು ಮೆರವಣಿಗೆ ನಡೆಸಿದರು. ಇತ್ತೀಚೆಗೆ ಸಲಿಂಗಕಾಮಿಗಳು ಏಕಾಏಕಿ ನಗರದ ಮ್ಯೂಸಿಯಂ ಮುಂದೆ, ಪುಟಿನ್ ಅವರನ್ನು ಬೆತ್ತಲೆ ಹೆಣ್ಣಿನಂತೆ ಚಿತ್ರಿಸಿ ಪ್ರತಿಮೆಯನ್ನು ಸ್ಥಾಪಿಸಿ ಅವರನ್ನು ಗೇಲಿ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಹಿಂದಿನ ವಾರ ಪೊಲೀಸರು, ಪುಟಿನ್ ಹಾಗೂ ಪ್ರಧಾನಿ ಮೆಡ್ವಡೆವ್ ಅವರ ಚಿತ್ರಗಳನ್ನು ತಮ್ಮ ಅಂಡರ್‌ವೇರ್‌ಗಳಲ್ಲಿಟ್ಟುಕೊಂಡು ಪ್ರದರ್ಶಿಸಿದ ಮಹಿಳೆಯರಿಂದ ಆ 'ಕಲಾಕೃತಿ'ಗಳನ್ನು ವಶಪಡಿಸಿಕೊಂಡಿದ್ದರು.
 ಚೊಣ್ಣ ಧರಿಸಿ ಬ್ರಾ ತೊಟ್ಟ ಮೆಡ್ವಡೆವ್‌ಗೆ ತಲೆಗೂದಲನ್ನು ಪುಟಿನ್ ಬಾಚುತ್ತಿರುವ ಚಿತ್ರ ಸಲಿಂಗಕಾಮಿಗಳ ಆಕ್ರೋಶ ಹಾಗೂ ಸೇಡಿನ ಸಂಕೇತವಾಗಿದೆ. ಇದೇ ಚಿತ್ರವನ್ನು ಕೆಲವು ಮಹಿಳೆಯರು ತಮ್ಮ ಒಳಉಡುಪುಗಳಲ್ಲಿ ಅಡಗಿಸಿಟ್ಟು ಸಾರ್ವಜನಿಕ ತಾಣಗಳಲ್ಲಿ, ಜನನಿಬಿಡ ಸ್ಥಳಗಳಲ್ಲಿ ಪ್ರದರ್ಶಿಸುತ್ತಿದ್ದರು. ಈ ಮಧ್ಯೆ, ರಷ್ಯಾದ ಸಲಿಂಗಕಾಮ ವಿರೋಧಿ ನೀತಿಯನ್ನು ಬ್ರಿಟನ್ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಅನೌಪಚಾರಿಕವಾಗಿ ಪ್ರಸ್ತಾಪಿಸುವುದಾಗಿ ಹೇಳಿದೆ.

ನೀತಿ ನಿರೂಪಣೆಗೆ ಹೆಚ್ಚಿನ ಗಮನ ಬೇಕು
ಹಣಕಾಸು ನೀತಿಗೆ ಸಂಬಂಧಿಸಿ ಜಿ20 ನೀತಿ ನಿರೂಪಣೆ ಪ್ರಕ್ರಿಯೆಯಲ್ಲಿನ ಸಮನ್ವಯತೆ ಕುರಿತು ಹೆಚ್ಚಿನ ಗಮನ ನೀಡುವ ಅಗತ್ಯ ಇದೆ ಎಂದು ಪ್ರಧಾನಿ ಮನಮೋಹನ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇದು ಸವಾಲಿನ ಕೆಲಸ ಎಂದೂ ಸಿಂಗ್ ತಿಳಿಸಿದ್ದಾರೆ.
ಜಿ 20 ಶೃಂಗದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಹೊಂದಿದ ದೇಶಗಳ ಅಸಾಂಪ್ರದಾಯಿಕ ಹಣಕಾಸು ನೀತಿಗಳ ಪರಿಣಾಮ ಈಗ ಅಭಿವೃದ್ಧಿ ಹೊಂದುತ್ತಿರುವ ಮತ್ತು ಉದಯೋನ್ಮುಖ ಅರ್ಥವ್ಯವಸ್ಥೆಗಳ ಮೇಲೆ ಆಗುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.
ಈ ನೀತಿಗಳನ್ನು ಆ ದೇಶಗಳ ಆಂತರಿಕ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಒಂದು ಭಾಗವಾಗಿ ತೆಗೆದುಕೊಳ್ಳಲಾಗಿದೆ. ಈ ನೀತಿಗಳು ಆ ದೇಶಗಳಿಗೆ ಒಂದಷ್ಟು ಯಶಸ್ಸು ತಂದುಕೊಟ್ಟಿದ್ದರೂ ಇದು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದಿದ್ದಾರೆ.
ಕೈಗಾರಿಕಾ ದೇಶಗಳು ಹಣಕಾಸು ನೀತಿಯನ್ನು ಸಡಿಲಗೊಳಿಸಿದಾಗ ಇತರೆ ದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹರಿದು ಬಂದಿದೆ. ಈಗ ಮಾರುಕಟ್ಟೆಯು ಚೇತರಿಕೆ ಕಾಣಲು ಆರಂಭವಾದಾಗ ಅಭಿವೃದ್ಧಿ ಹೊಂದುತ್ತಿರುವ ಹಾಗೂ ಉದಯೋನ್ಮಖ ಅರ್ಥವ್ಯವಸ್ಥೆಗಳಿಂದ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೊರಹೋಗುತ್ತಿದೆ. ಇದರ ನೇರಪರಿಣಾಮವಾಗಿ ಈ ದೇಶಗಳ ಕರೆನ್ಸಿ ಮೌಲ್ಯ ಪಾತಾಳಕ್ಕಿಳಿಯುತ್ತಿದ್ದು, ಅನೇಕ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಈ ನಡುವೆ, ವಿಶ್ವ ಆರ್ಥಿಕ ಬೆಳವಣಿಗೆಯನ್ನು ಪುನರ್‌ಸ್ಥಾಪಿಸುವಲ್ಲಿ ನಾವು ನಿರೀಕ್ಷಿತ ಯಸಸ್ಸು ಸಾಧಿಸುವಲ್ಲಿ ಯಾಕೆ ವಿಫಲವಾದೆವು ಎನ್ನುವ ಕುರಿತು ಈ ಶೃಂಗದಲ್ಲಿ ಗಂಭೀರವಾಗಿ ಚರ್ಚೆ ನಡೆಸಬೇಕಿದೆ ಎಂದು ಸಿಂಗ್ ಹೇಳಿದ್ದಾರೆ.

- ವಿಶ್ವೇಶ್ವರ ಭಟ್
ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement