ಎಸ್ಸೈ ಪರೀಕ್ಷೆ; ಗರಿಗೆದರಿದ ನಿರೀಕ್ಷೆ
ಕ.ಪ್ರ. ವಾರ್ತೆ ಬೆಂಗಳೂರು , ಸೆ.5
ಎಂಟು ಸಾವಿರ ಪೊಲೀಸರ ನೇಮಕ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡುತ್ತಿದ್ದಂತೆ ಹಲವು ವರ್ಷಗಳಿಂದ ಪೇದೆಗಳಾಗಿ ಸೇವೆ ಸಲ್ಲಿಸಿ ಉನ್ನತ ಹುದ್ದೆಗೇರುವ ಕನಸು ಕಾಣುತ್ತಿದ್ದ ಪೇದೆಗಳ ಮುಖದಲ್ಲಿ ಮಂದಹಾಸ ಮೂಡಿದೆ.
ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿರುವವರು ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಸ್ಪರ್ಧಿಸಲು ನಿಗದಿಪಡಿಸಿರುವ ಸೇವಾವಧಿಯನ್ನು 8ರಿಂದ 5 ವರ್ಷಕ್ಕೆ ಇಳಿಸಿ ಎನ್ನುವ ಕೂಗು ಕಿರಿಯ ಪೊಲೀಸ್ ಸಿಬ್ಬಂದಿ ವಲಯದಲ್ಲಿ ಕೇಳಿ ಬರುತ್ತಿದೆ. ಸದ್ಯ ಇರುವ ನಿಯಮದಂತೆ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕನಿಷ್ಠ 8 ವರ್ಷ ಸೇವೆ ಸಲ್ಲಿಸಿದವರು ಮಾತ್ರ ಸೇವಾನಿರತ ಆದ್ಯತೆ ಮೂಲಕ ಎಸ್‌ಐ ಪರೀಕ್ಷೆ ಬರೆಯಲು ಅರ್ಹರಾಗುತ್ತಾರೆ. ಆದರೆ ಈಗಾಗಲೇ ಪದವಿ ಮುಗಿಸಿ 5 ವರ್ಷಗಳಿಂದ ಪೇದೆಯಾಗಿ ಸಲ್ಲಿಸುತ್ತಿರುವ ಸಾವಿರಾರು ಸಿಬ್ಬಂದಿ ಸಬ್‌ಇನ್ಸ್‌ಪೆಕ್ಟರ್ ಹುದ್ದೆ ಕನಸು ಕಾಣುತ್ತಿದ್ದಾರೆ. 5 ವರ್ಷ ಪೂರೈಸಿದ ತಮ್ಮನ್ನು ಎಸ್‌ಐ ಪರೀಕ್ಷೆ ಬರೆಯಲು ಅರ್ಹರನ್ನಾಗಿಸಿ ಎಂದು ಮನವಿ ಮಾಡಿದ್ದಾರೆ.
ಕಾನ್ಸ್‌ಟೇಬಲ್ ಹುದ್ದೆಗೆ ಆಯ್ಕೆಯಾದಾಗ ಭಾರತೀಯ ದಂಡ ಸಂಹಿತೆ (ಐಪಿಸಿ), ಕಾನೂನು ಪಠ್ಯ ಓದಿ, ತರಬೇತಿ ಪಡೆದಿರುವ ಪೇದೆಗಳನ್ನು ಮತ್ತಷ್ಟು ಉತ್ತಮ ಸಬ್ ಇನ್ಸ್‌ಪೆಕ್ಟರ್‌ಗಳನ್ನಾಗಿ ರೂಪಿಸಬಹುದು. ತಾಂತ್ರಿಕ ತರಬೇತಿ, ತನಿಖೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು ಎನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ.
ಸೇವಾನಿರತ ಆದ್ಯತೆಯನ್ನು 5 ವರ್ಷಕ್ಕೆ ಇಳಿಸುವುದರಿಂದ ಯಾರಿಗೂ ತೊಂದರೆ ಇಲ್ಲ. 8 ವರ್ಷ ಸೇವೆ ಸಲ್ಲಿಸಿದವರು ಎಸ್‌ಐ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇದರಿಂದ ಸ್ಪರ್ಧೆ ಇನ್ನಷ್ಟು ಹೆಚ್ಚಾಗಿ ಉತ್ತಮ ಅಭ್ಯರ್ಥಿಗಳು ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಆಯ್ಕೆಯಾಗುತ್ತಾರೆ ಎನ್ನುವುದು ಪೊಲೀಸ್ ವಲಯದ ಅನಿಸಿಕೆ.
ಒತ್ತಾಯಕ್ಕೆ ಕಾರಣ?: 2012ರ ಫೆಬ್ರವರಿಯಲ್ಲಿ ಕರ್ನಾಟಕ ಸಶಸ್ತ್ರ ಮೀಸಲು ಪಡೆಗೆ (ಕೆಎಸ್‌ಆರ್‌ಪಿ) ವಿಶೇಷ ಸಬ್ ಇನ್ಸ್‌ಪೆಕ್ಟರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. 5 ವರ್ಷ ಪೂರೈಸಿದ ಸಿಬ್ಬಂದಿಯನ್ನು ಆದ್ಯತೆ ಮೇರೆಗೆ ನೇಮಕ ಮಾಡಿಕೊಳ್ಳಲಾಗಿದೆ.
ಕೆಎಸ್‌ಆರ್‌ಪಿಯಲ್ಲಿ ಈ ಹಿಂದೆ ಕನಿಷ್ಠ 8 ವರ್ಷ ಸೇವೆ ಸಲ್ಲಿಸಿದವರನ್ನು ಮಾತ್ರ ನೇಮಕಕ್ಕೆ ಪರಿಗಣಿಸಲಾಗುತ್ತಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಠ ವರ್ಗ ಹಾಗೂ ಹಿಂದುಳಿದ ಅಭ್ಯರ್ಥಿಗಳು 40 ವರ್ಷ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಕನಿಷ್ಠ 8 ವರ್ಷ ಸೇವೆ ಸಲ್ಲಿಸಿ 35 ಒಳಗಿನವರಾಗಿರಬೇಕು ಎಂಬ ನಿಯಮವಿದೆ.
'ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ 5 ವರ್ಷ ಸೇವೆ ಪೂರೈಸಿದ್ದೇನೆ. ಸಬ್ ಇನ್ಸ್‌ಪೆಕ್ಟರ್ ಆಗಬೇಕು ಎಂಬ ಆಸೆ ಇದೆ. ಕೆಎಸ್‌ಆರ್‌ಪಿಯಲ್ಲಿ ನೇಮಕ ಮಾಡಿಕೊಂಡತೆ ಸಿವಿಲ್ ಪೊಲೀಸ್‌ನಲ್ಲೂ 5 ವರ್ಷ ಸೇವೆ ಸಲ್ಲಿಸಿದವರನ್ನು ಸೇವಾನಿರತ ಅಭ್ಯರ್ಥಿಯೆಂದು ಪರಿಗಣಿಸುವಂತೆ ನಿಯಮ ಮಾಡಬೇಕು. ಇದು ನನ್ನದೊಂದೆ ಮನವಿ ಅಲ್ಲ. ನನ್ನಂತಹ ಸಾವಿರಾರು ಪೇದೆಗಳು ಪದವಿ, ಸ್ನಾತಕೋತ್ತರ ಪದವಿ ಪಡೆದು ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆ ಕನಸು ಕಾಣುತ್ತಿದ್ದಾರೆ' ಎನ್ನುತ್ತಾರೆ ನಗರದ ಪೊಲೀಸ್ ಪೇದೆಯೊಬ್ಬರು.
ಬೇಡಿಕೆ ಏನು?
- ಕನಿಷ್ಠ ಸೇವೆ ಅವಧಿಯನ್ನು 5 ವರ್ಷಕ್ಕೆ ಇಳಿಸಬೇಕು.
- ಸೇವಾನಿರತರಿಗೆ ನಿಗದಿಪಡಿಸಿರುವ ಮೀಸಲನ್ನು ಶೇ.10 ರಿಂದ 15ಕ್ಕೆ ಹೆಚ್ಚಿಸಬೇಕು.
ಸದ್ಯದ ನಿಯಮ
- ಸೇವಾ ನಿರತ ಎಎಸ್‌ಐ, ಎಚ್‌ಸಿ ಹಾಗೂ ಪಿಸಿ ಕನಿಷ್ಠ 8 ವರ್ಷ ಸೇವೆ ಸಲ್ಲಿಸಿದ್ದರೆ ಮಾತ್ರ ಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹ
- ಮಂಜುನಾಥ ನಾಗಲೀಕರ್