ಜಿ-20 ಶೃಂಗಸಭೆಯಲ್ಲಿ ಅಭಿವೃದ್ಧಿ, ಜಾಗತಿಕ ಅರ್ಥವ್ಯವಸ್ಥೆ, ಉದ್ಯೋಗ ಸೃಷ್ಟಿಯೇ ಗುರಿ
ಈ ವರ್ಷದ ಜಿ-20 ಶೃಂಗಸಭೆಯಲ್ಲಿ ನಾವು ನಾಲ್ಕು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದು ಅವು ಇಂತಿವೆ.
1. ಅಭಿವೃದ್ಧಿ ಮತ್ತು ಜಾಗತಿಕ ಅರ್ಥ ವ್ಯವಸ್ಥೆ
2. ಅಭಿವೃದ್ಧಿ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆ
3. ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಹೂಡಿಕೆ.
4. ಅಭಿವೃದ್ಧಿ ಮತ್ತು ವ್ಯಾಪಾರ
ಈ ನಾಲ್ಕು ಪ್ರಧಾನ ಅಂಶಗಳ ಅಡಿಯಲ್ಲಿ ಹಲವಾರು ಉಪ ಅಂಶಗಳಿದ್ದು ಇವುಗಳ ಬಗ್ಗೆ ಚರ್ಚೆ ನಡೆಯಲಿದೆ. ರಷ್ಯಾದ ನೇತೃತ್ವದಲ್ಲಿ ಈ ಬಾರಿಯ ಶೃಂಗಸಭೆಯಲ್ಲಿ ಇನ್ನೂ ಮೂರು ಪ್ರಧಾನ ವಿಷಯಗಳನ್ನು ಗುರುತಿಸಲಾಗಿದ್ದು. ಅವು ಇಂತಿವೆ: ಗುಣಮಟ್ಟದ ಉದ್ಯೋಗಗಳು ಮತ್ತು ಬಂಡವಾಳದ ಮೂಲಕ ಅಭಿವೃದ್ಧಿ, ನಂಬಿಕೆ ಮತ್ತು ಪಾರದರ್ಶಕತೆ ಮೂಲಕ ಅಭಿವೃದ್ಧಿ ಮತ್ತು ಪರಿಣಾಮಕಾರಿ ನಿಯಂತ್ರಣದ ಮೂಲಕ ಅಭಿವೃದ್ಧಿ.
ಜಾಗತಿಕ ಸನ್ನಿವೇಶದಲ್ಲಿ ನೋಡುವುದಾದರೆ ಭಾರತದಲ್ಲಿ ಅಭಿವೃದ್ಧಿ ದರದ ಅಂದಾಜಿನಲ್ಲಿ ಇಳಿಕೆ ಬಗ್ಗೆ ಕಳವಳ ವ್ಯಕ್ತವಾಗಿದೆ. ಕಳೆದ ಒಂದು ವರ್ಷದಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಯಿಂದ
ಮೂರು ಬಾರಿ ಜಾಗತಿಕ ಅರ್ಥ ವ್ಯವಸ್ಥೆ ಇಳಿಕೆಯಾಗಿರುವುದು ಆಸಕ್ತಿದಾಯಕವಾಗಿದೆ. ಇದು ಯೂರೋ ವಲಯದಲ್ಲಿನ ಆರ್ಥಿಕ ಕುಸಿತಕ್ಕೆ ಸಂಬಂಧಿಸಿದ ಅನಿಶ್ಚಿತತೆ ಈಗಲೂ ಮುಂದುವರಿದಿರುವುದರ ಪರಿಣಾಮವಾಗಿದೆ. ಜತೆಗೆ ಇದೀಗ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿರುವ ಮಾರುಕಟ್ಟೆಗಳ ಬಳಕೆ ಬೇಡಿಕೆಯಲ್ಲಿ ಇಳಿಮುಖವಾಗಿರುವುದರ ಪರಿಣಾಮವೂ ಆಗಿದೆ. ಉದಾಹರಣೆಗೆ ಐಎಂಎಫ್ನ ಅಂದಾಜನ್ನು ಏಪ್ರಿಲ್ನಲ್ಲಿ ಶೇ.3.3ರಿಂದ ಶೇ.3.1ಕ್ಕೆ ಇಳಿಸಿತ್ತು. ಮತ್ತು ಇದೇ ರೀತಿ ವಿಶ್ವ ಬ್ಯಾಂಕ್ ಸಹ ವಿಶ್ವ ಆರ್ಥಿಕ ಅಂದಾಜಿನಲ್ಲಿ ಇಳಿಕೆ ಮಾಡಿತ್ತು.
ನಾವು ವಿಶೇಷವಾಗಿ, ಕೆಲವು ಮುಂದುವರಿದ ರಾಷ್ಟ್ರಗಳು ಅನುಸರಿಸುತ್ತಿರುವ ಅಸಾಂಪ್ರದಾಯಿಕ ಆರ್ಥಿಕ ನೀತಿಗಳ ಪರಿಣಾಮಗಳ ಬಗ್ಗೆ ಚಿಂತಿತರಾಗಿದ್ದೇವೆ. ಅಸಾಂಪ್ರದಾಯಿಕ ಆರ್ಥಿಕ ನೀತಿಗಳ ವಾಪಸಾತಿ ಕುರಿತು ನಿಖರತೆ ಇರಬೇಕು ಎಂಬುದು ಭಾರತ ಒತ್ತು ನೀಡುತ್ತಿರುವ ಅಂಶಗಳ ಪೈಕಿ ಒಂದಾಗಿದೆ. ಈ ಅಸಾಂಪ್ರದಾಯಿಕ ಆರ್ಥಿಕ ನೀತಿಗಳು ಬಲಿಷ್ಠವಾಗಿ ಹೊರಹೊಮ್ಮುತ್ತಿರುವ ಆರ್ಥ ವ್ಯವಸ್ಥೆಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿವೆ. ಶೃಂಗಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ ಎಂಬ ನಿರೀಕ್ಷೆ ನಮ್ಮದಾಗಿದೆ.
ಇದರ ಜತೆಗೆ, ಜಾಗತಿಕ ಅರ್ಥ ವ್ಯವಸ್ಥೆಯ ಬೆಳವಣಿಗೆಗೆ ಪ್ರಚೋದನೆಯನ್ನು ನೀಡುವಂತಹ ಮೂಲ ಸೌಕರ್ಯ ಹೂಡಿಕೆ ಮುಂತಾದ ಕ್ಷೇತ್ರಗಳ ಬಗ್ಗೆ ಒಮ್ಮತ ಮೂಡದಿರುವುದು ಸಹ ಕಳವಳಕ್ಕೆ ಕಾರಣವಾಗಿದೆ. ಅಭಿವೃದ್ಧಿ ಎಂಬುದು ಸದಾಕಾಲ ಮುಂದುವರಿಯುತ್ತಿರಬೇಕು ಎನ್ನುವ ಬಗ್ಗೆ ಸಾಮಾನ್ಯತಃ ಒಪ್ಪಿಗೆ ಇದೆ. ಈ ನಿಟ್ಟಿನಲ್ಲಿ ಭಾರತ ತನ್ನದೇ ನೀತಿ ಸಂಬಂಧಿ ದಾಖಲೆಗಳ ಮೂಲಕ ತನ್ನ ಕಾಣಿಕೆ ನೀಡುತ್ತಿದೆ.
ತೆರಿಗೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಇದೀಗ ಹೊಸದಾಗಿ ಗಮನ ಹರಿಸಲಾಗುತ್ತಿದೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ)ಯು ಉತ್ಪಾದನೆ ಒಂದು ಕಡೆ ಮತ್ತು ಲಾಭ ಇನ್ನೊಂದೆಡೆ ಸಾಗಿ ಹೋಗುವುದರ ಆಧಾರದ ಮೇಲೆ ಯೋಜನೆಯೊಂದನ್ನು ತಯಾರಿಸಿದೆ. ರಾಷ್ಟ್ರಗಳ ನಡುವೆ ಹೆಚ್ಚಿನ ಆರ್ಥಿಕ ಏಕೀಕರಣ ಸಾಧಿಸುವ ಮೂಲಕ ತಮಗೆ ಬರಬೇಕಾದ ತೆರಿಗೆಗೆ ಸಂಬಂಧಿಸಿದಂತೆ ರಾಷ್ಟ್ರಗಳು ನಿರಾಶರಾಗದಂತೆ ಮಾಡಬೇಕು ಎಂಬ ಭಾರತದ ಅಭಿಪ್ರಾಯ ಎಲ್ಲೆಡೆ ಅನುರಣನವಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರ ಸಮ್ಮತಿ ಮೇರೆಗೆ ಹೊಸ ಮಾನದಂಡಗಳನ್ನು ರೂಪಿಸಬೇಕು ಎಂಬುದು ಭಾರತದ ಅಭಿಪ್ರಾಯವಾಗಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಬಲಿಷ್ಠ ಆರ್ಥಿಕ ಶಕ್ತಿಗಳಾಗಿ ರೂಪುಗೊಳ್ಳುತ್ತಿರುವ ಕೆಲವು ರಾಷ್ಟ್ರಗಳು ವ್ಯಾಪಾರ ಸಂಬಂಧಿ ಒಪ್ಪಂದಗಳಿಂದ ಹಿಂದೆ ಸರಿಯುವ ಪ್ರಯತ್ನ ಮಾಡುತ್ತಿರುವುದು ಭಾರತಕ್ಕೆ ತೀರಾ ಕಳವಳದ ವಿಷಯವಾಗಿದೆ. ಕಾರ್ಮಿಕರ ಚಲನವಲನಕ್ಕೆ ಸಂಬಂಧಿಸಿದಂತೆ ಮಾಡಿಕೊಳ್ಳಲಾದ ಒಪ್ಪಂದಗಳನ್ನು ಹಿಂದಕ್ಕೆ ಪಡೆಯುವ ಯತ್ನದಲ್ಲಿ ಈ ರಾಷ್ಟ್ರಗಳು ತೊಡಗಿವೆ. ಈ ಹಿಂದೆ ಮಾಡಿಕೊಂಡ ಒಪ್ಪಂದಗಳನ್ನು ಹಿಂದಕ್ಕೆ ಪಡೆಯಬಾರದು ಮತ್ತು ಸೇವೆಯ ಉದ್ದೇಶಕ್ಕಾಗಿ ಕಾರ್ಮಿಕರ ಚಲನವಲನಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಸರ್ಕಾರಗಳು ನೀಡಿದ ಅನುಮತಿಯನ್ನು ಈಗಿನ ಸರ್ಕಾರಗಳು ವಾಪಸ್ ಪಡೆಯಬಾರದು ಎಂಬುದು ಭಾರತದ ಸ್ಪಷ್ಟ ನಿಲುವು ಆಗಿದೆ.
ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹೂಡಿಕೆಗೆ ಸಂಬಂಧಿಸಿ ಹೇಳುವುದಾದರೆ ಭಾರತ ದಾಖಲೆಯನ್ನು ರೂಪುಗೊಳಿಸಿದೆ. ಬಂಡವಾಳ ಮಾರುಕಟ್ಟೆ, ವಿಶೇಷವಾಗಿ ಸ್ಥಾನೀಯ ಬಂಡವಾಳ ಮಾರುಕಟ್ಟೆಗಳ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಜತೆಗೆ ಬಹುಪಕ್ಷೀಯ ಅಭಿವೃದ್ಧಿ ಸಂಸ್ಥೆಗಳು, ಪ್ರಾಂತೀಯ ಅಭಿವೃದ್ಧಿ ಸಂಸ್ಥೆಗಳ ಸಂಪನ್ಮೂಲದ ತಳಹದಿಯನ್ನು ವಿಸ್ತರಿಸಬೇಕು. ಈ ಮೂಲಕ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತೀರಾ ಅಗತ್ಯ ಬಂಡವಾಳ ಒದಗುವಂತಾಗಬೇಕೆಂಬುದು ಭಾರತದ ಆಗ್ರಹವಾಗಿದೆ.
ಅಂಗಳದಲ್ಲಿ ನಿಂತು ಸ್ವಾಗತಿಸಿದ ಪುಟಿನ್
ಜಿ- 20 ಶೃಂಗಸಭೆ ನಡೆಯುವ ಕಾನ್ಸ್ಟಂಟಿನೋವಸ್ಕಿ ಅರಮನೆಯ ಅಂಗಳದಲ್ಲಿ ನಿಂತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಅತಿಥಿ ಸದಸ್ಯ ದೇಶಗಳ ನಾಯಕರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಎಲ್ಲ ದೇಶಗಳ ನಾಯಕರು ಬರುತ್ತಿದ್ದಂತೆ ಪುಟಿನ್ ಕಾರಿನ ಬಾಗಿಲ ಬಳಿ ಹೋಗಿ ತಾವೊಬ್ಬರೇ ಸ್ವಾಗತಿಸಿದರು. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಗಮಿಸಿದಾಗ ಪುಟಿನ್ ಪ್ರತಿಕ್ರಿಯೆ ಹೇಗಿರಬಹುದೆಂಬ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಒಬಾಮ ಅವರು ಆಗಮಿಸುತ್ತಿದ್ದಂತೆ ಪುಟಿನ್ ಎಲ್ಲರಂತೆ ತೀರಾ ಸಹಜವಾಗಿ ಬರಮಾಡಿಕೊಂಡರು. ಉಳಿದವರಿಗೆ ನೀಡಿದ ಸ್ವಾಗತನ್ನೇ ಒಬಾಮ ಅವರಿಗೂ ನೀಡಿದರು. ಅವರಿಬ್ಬರಲ್ಲಿ ಔಪಚಾರಿಕತೆ ಮೀರಿದ ಆತ್ಮೀಯತೆ ಇರಲಿಲ್ಲ.