ಡಾ. ರಾಧಾಕೃಷ್ಣನ್ ತತ್ವಶಾಸ್ತ್ರ ಕೇಂದ್ರ ಉದ್ಘಾಟನೆ
ಕ.ಪ್ರ.ವಾರ್ತೆ, ಮೈಸೂರು, ಸೆ. 5-
ಮಾಜಿ ರಾಷ್ಟ್ರಪತಿ ಡಾ.ಎಸ್. ರಾಧಾಕೃಷ್ಣನ್ ಅವರು ವಾಸವಿದ್ದ ಮನೆಯನ್ನು ನವೀಕರಣಗೊಳಿಸಿ ಡಾ.ಎಸ್. ರಾಧಾಕೃಷ್ಣನ್ ತತ್ವಶಾಸ್ತ್ರ ಮತ್ತು ಭಾರತೀಯ ಸಂಸ್ಕೃತಿ ಕೇಂದ್ರವನ್ನಾಗಿ ಪರಿವರ್ತಿಸಿ ಗುರುವಾರ ಲೋಕಾರ್ಪಣೆ ಮಾಡಲಾಯಿತು.
ರಾಧಾಕೃಷ್ಣನ್ ಅವರ ಮನೆ ನವೀಕರಣಕ್ಕೆ ದೇಣಿಗೆ ನೀಡಿದ್ದ ಬೆಂಗಳೂರಿನ ಪಿಇಎಸ್ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಪ್ರೊ.ಎಂ.ಆರ್. ದೊರೆಸ್ವಾಮಿ ಕೇಂದ್ರವನ್ನು ಉದ್ಘಾಟಿಸಿದರು. ವಿಶ್ರಾಂತ ಕುಲಪತಿ ಪ್ರೊ.ಎಂ. ಮಾದಯ್ಯ ಅವರು ಡಾ.ಎಸ್. ರಾಧಾಕೃಷ್ಣನ್ ಅವರ ಕೃತಿಗಳ ಪ್ರದರ್ಶನ ಉದ್ಘಾಟಿಸಿದರು. ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅವರು ಡಾ.ಎಸ್. ರಾಧಾಕೃಷ್ಣನ್ ಭಾವಚಿತ್ರ ಅನಾವರಣಗೊಳಿಸಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದೊರೆಸ್ವಾಮಿ ಅವರು, ತತ್ವಶಾಸ್ತ್ರ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು ಮಾಡಿ ರಾಷ್ಟ್ರಪತಿಯಾದ ರಾಧಾಕೃಷ್ಣನ್ ಅವರ ನಿವಾಸವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ನವೀಕರಣಕ್ಕೆ ಮುಂದಾದೆವು. ಮೈಸೂರು ವಿವಿ ಬಹಳ ಅಚ್ಚುಕಟ್ಟಾಗಿ ನವೀಕರಿಸಿ ಕೊಟ್ಟಿದೆ. ಈ ಮನೆಯನ್ನು ಕೇಂದ್ರವನ್ನಾಗಿ ಪರಿವರ್ತಿಸಿ ವಿದ್ಯಾರ್ಥಿಗಳು, ಅಧ್ಯಾಪಕರು ಸೇರಿದಂತೆ ಸಾರ್ವಜನಿಕರ ಉಪಯೋಗಕ್ಕೆ ಅರ್ಪಿಸಿರುವುದು ಸಂತೋಷದ ಸಂಗತಿ ಎಂದರು.
ಡಾ.ಎಸ್. ರಾಧಾಕೃಷ್ಣನ್ ಹಾಗೂ ಸ್ವಾಮಿ ವಿವೇಕಾನಂದರ ತತ್ವ, ವಿಚಾರಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಕೆಲಸ ಆಗಬೇಕು. ಅದಕ್ಕಾಗಿ ಮೈಸೂರು ವಿವಿ ಈ ಇಬ್ಬರ ಹೆಸರಿನಲ್ಲಿ ಕೋರ್ಸ್ ಆರಂಭಿಸಿದರೆ ನಮ್ಮ ಪಿಇಎಸ್ ವಿವಿ ಸಹಕಾರ ನೀಡಲಿದೆ. ವರ್ಷಕ್ಕೆ ಎರಡು ಬಾರಿ ಸಂಪನ್ಮೂಲ ವ್ಯಕ್ತಿಗಳಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಬೇಕು ಎಂದು ಸಲಹೆ ಮಾಡಿದರು.
ಭವನದ ವಿಶೇಷ: ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಒಬ್ಬ ತತ್ವಜ್ಞಾನಿಯಾಗಿದ್ದು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ 1918 ರಿಂದ 1921 ರವರೆಗೆ ಅಧ್ಯಾಪನಾ ವೃತ್ತಿ ಮಾಡಿದ್ದರು. ಆ ಸಂದರ್ಭದಲ್ಲಿ ನಗರದ ಸರಸ್ವತಿಪುರಂ ಬಳಿ ಇರುವ ಮನೆಯಲ್ಲಿ ವಾಸವಿದ್ದರು. ಈ ಕಟ್ಟಡವು ನೂರು ವರ್ಷಗಳಿಗೂ ಹಳೆಯದಾಗಿದ್ದರಿಂದ ಶಿಥಿಲವಾಗಿತ್ತು. ಈ ಬಗ್ಗೆ ಗಮನ ಹರಿಸಿದ್ದ ಬೆಂಗಳೂರಿನ ಪಿಇಎಸ್ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಪ್ರೊ.ಎಂ.ಆರ್. ದೊರೆಸ್ವಾಮಿ ಅವರು ಕಟ್ಟಡದ ನವೀಕರಣಕ್ಕೆ ಮುಂದಾಗಿ ದೇಣಿಗೆ ನೀಡಿದ್ದರು. ಅದರಂತೆ ಮೈಸೂರು ವಿವಿ ಕಟ್ಟಡದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ನವೀಕರಣಗೊಳಿಸಿದೆ.
ರಾಧಾಕೃಷ್ಣನ್ ಅವರ ಮನೆ ಸಾರ್ವಜನಿಕವಾಗಿ ಉಪಯೋಗವಾಗಲೆಂದು ತತ್ವಶಾಸ್ತ್ರ ಮತ್ತು ಭಾರತೀಯ ಸಂಸ್ಕೃತಿ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಇಲ್ಲಿ ಸುಸಜ್ಜಿತ ಗ್ರಂಥಾಲಯ ವ್ಯವಸ್ಥೆ ಮಾಡಲಾಗಿತ್ತು, ಸ್ವತಃ ರಾಧಾಕೃಷ್ಣನ್ ಅವರೇ ಬರೆದಿರುವ ದಿ ಫಿಲಾಸಫಿ ಆಫ್ ರಬೀಂದ್ರನಾಥ ಠ್ಯಾಗೋರ್, ಮ್ಯಾಕ್ ವಿಲಿಯಂ, ಲಂಡನ್, ದಿ ರಿಜಿಯನ್ ಆಫ್ ರಿಲಿಜಿಯನ್ ಇನ್ ಕಾಂಟೆಂಪ್ರರಿ ಫಿಲಾಸಫಿ, ಮೆಕ್ಮಿಲಿನ್ ಕೃತಿಗಳನ್ನು ಪ್ರದರ್ಶಿಸಲಾಗಿದೆ.
ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ, ವಿಶ್ರಾಂತ ಕುಲಪತಿ ಪ್ರೊ.ಎಂ. ಮಾದಯ್ಯ, ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ, ಮೈಸೂರು ವಿವಿ ಕುಲಸಚಿವರಾದ ಪ್ರೊ.ಸಿ. ಬಸವರಾಜು, ಪ್ರೊ.ಡಿ. ಶ್ರೀಜಯದೇವರಾಜೇ ಅರಸ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ. ಕೃಷ್ಣ, ಗ್ರಂಥಪಾಲಕ ಡಾ.ಸಿ.ಪಿ. ರಾಮಶೇಷ ಇದ್ದರು.