ತಾಲಿಬಾನಿಗಳಿಂದ ಸುಷ್ಮಿತಾ ಬ್ಯಾನರ್ಜಿ ಹತ್ಯೆ
'ಎಸ್ಕೇಪ್ ಫ್ರಂ ತಾಲಿಬಾನ್' ಎಂಬ ಬಾಲಿವುಡ್ ಸಿನಿಮಾ ನೋಡಿದವರಿಗೆ ಆಘಾತಕರ ಸುದ್ದಿಯಿದೆ. ಈ ಸಿನಿಮಾಕ್ಕೆ ಪ್ರೇರಣೆಯಾಗಿದ್ದ...
ಕಾಬೂಲ್: 'ಎಸ್ಕೇಪ್ ಫ್ರಂ ತಾಲಿಬಾನ್' ಎಂಬ ಬಾಲಿವುಡ್ ಸಿನಿಮಾ ನೋಡಿದವರಿಗೆ ಆಘಾತಕರ ಸುದ್ದಿಯಿದೆ. ಈ ಸಿನಿಮಾಕ್ಕೆ ಪ್ರೇರಣೆಯಾಗಿದ್ದ ಪುಸ್ತಕ 'ಕಾಬೂಲಿವಾಲರ್ ಬೆಂಗಾಲಿ ಬೋ'ನ (ಎ ಕಾಬೂಲಿವಾಲಾಸ್ ಬೆಂಗಾಲಿ ವೈಫ್) ಲೇಖಕಿ ಸುಷ್ಮಿತಾ ಬ್ಯಾನರ್ಜಿ (49) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಆಫ್ಘಾನಿಸ್ತಾನದ ಪಕ್ಟಿಕಾದಲ್ಲಿ ಅಪರಿಚಿತ ಉಗ್ರಗಾಮಿಗಳು ಈ ಹೀನ ಕೃತ್ಯವೆಸಗಿದ್ದಾರೆ. ಕೋಲ್ಕತಾ ಮೂಲದ ಸುಷ್ಮಿತಾ ಬ್ಯಾನರ್ಜಿ ಆಫ್ಘಾನಿಸ್ತಾನ ಮೂಲದ ಉದ್ಯಮಿ ಜಾನ್‌ಬಾಜ್ ಖಾನ್ ಎಂಬುವರನ್ನು ವಿವಾಹವಾಗಿದ್ದರು.
ಕೃತ್ಯ ಹೇಗಾಯಿತು?: ಪಕ್ಟಿಕಾ ರಾಜಧಾನಿ ಖರಾನಾದಲ್ಲಿದ್ದ ಬ್ಯಾನರ್ಜಿ ನಿವಾಸಕ್ಕೆ ನುಗ್ಗಿದ ಬಂದೂಕುಧಾರಿ ಉಗ್ರಗಾಮಿಗಳು ಪತಿ ಜಾನ್‌ಬಾಜ್ ಖಾನ್ ಮತ್ತು ಕುಟುಂಬದ ಇತರ ಸದಸ್ಯರನ್ನು ಕಟ್ಟಿಹಾಕಿದರು. ನಂತರ ಬ್ಯಾನರ್ಜಿ ಅವರನ್ನು ಉಗ್ರಗಾಮಿಗಳು ಮನೆಯಿಂದ ಹೊರಗೆ ಬರುವಂತೆ ಕರೆದರು. ಹೊರಗೆ ಬಂದ ಭಾರತೀಯ ಲೇಖಕಿ ಮೇಲೆ ಮನಬಂದಂತೆ ಗುಂಡು ಹಾರಿಸಿ ಹತ್ಯೆ ಮಾಡಿದರು. ಅವರ ಮೃತದೇಹವನ್ನು ಶಾಲೆಯೊಂದರ ಬಳಿ ಎಸೆದು ಪರಾರಿಯಾದರು. ಯಾವುದೇ ಸಂಘಟನೆ ಈ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ.