ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪ್ರಶಸ್ತಿ ವಂಚಿತ ವನಜಾಕ್ಷಿ ಮೇಡಂ

Rashmi Kasaragodu
Updated On : 6 Sept 2013, 12:18 pm

ಕನ್ನಡಪ್ರಭ ವಾರ್ತೆ, ಕೋಲಾರ, ಸೆ.5-
ಪ್ರಶಸ್ತಿಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಲಾಬಿ, ಭ್ರಷ್ಟಾಚಾರ ನಡೆಯುತ್ತಿರುವ ಈ ಕಾಲದಲ್ಲಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ಯಾವುದೇ ಪ್ರಶಸ್ತಿಗೆ ಹಂಬಲಿಸದೆ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅಹರ್ನಿಶಿ ಶ್ರಮಿಸುತ್ತಿರುವುದು ಪ್ರಶಂಸನೀಯ.ಆದರೆ, ಶಿಕ್ಷಣ ಇಲಾಖೆಯು ಇಂತಹ ಅಪರೂಪದ ಶಿಕ್ಷಕರನ್ನು ಗುರುತಿಸಿ ಬೆನ್ನು ತಟ್ಟುವ ಕೆಲಸ ಮಾಡದಿರುವುದು ವಿಷಾದವೂ ಹೌದು.
ಕೋಲಾರ ನಗರದವರೇ ಆದ ವನಜಾಕ್ಷಿ ಶಿಕ್ಷಕಿಯಾಗಿ ಕಳೆದ 32 ವರ್ಷಗಳಿಂದ ನಿಷ್ಟೆ, ಪ್ರಾಮಾಣಿಕತೆಯಿಂದ ಕಾಯಕ ಮಾಡುತ್ತಿದ್ದಾರೆ. ಪ್ರಸ್ತುತ ಕೋಲಾರ ನಗರದ ಗಲ್ ಪೇಟೆಯ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದಾರೆ.
ಚಿಕ್ಕ ವಯಸ್ಸಿನಿಂದಲೂ ಶಿಕ್ಷಕಿಯಾಗಬೇಕೆಂಬ ಆಸೆ ಹೊತ್ತಿದ್ದ ವನಜಾಕ್ಷಿಯವರು 1985ರಲ್ಲಿ ಶಿಕ್ಷಕಿಯಾಗಿ ನೇಮಕಗೊಂಡು ತಮ್ಮ ಮೊದಲ ಸೇವೆಯನ್ನು ಬಂಗಾರಪೇಟೆ ತಾಲೂಕಿನ ಪಲವಾರದಲ್ಲಿ ಆರಂಭಿಸಿ ನಂತರ ಕೋಲಾರ ತಾಲೂಕಿನ ಕೋಡಿಕಣ್ಣೂರು ಹಾಗೂ ಮಣಿಘಟ್ಟ ಗ್ರಾಮದಲ್ಲಿ ತಲಾ 10 ವರ್ಷ ಕೆಲಸ ಮಾಡಿ 2006ರಿಂದ ಗಲ್ ಪೇಟೆಯ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅತಿ ಹೆಚ್ಚು ದಲಿತರು, ಅಲ್ಪಸಂಖ್ಯಾತರು ಇರುವ ಪ್ರದೇಶದಲ್ಲಿ ಇರುವ ಸರ್ಕಾರಿ ಶಾಲೆಯ ಸುತ್ತ ಮುತ್ತಲು ಅನೇಕ ಖಾಸಗಿ ಶಾಲೆಗಳಿವೆಯಾದರೂ ಗಲ್ ಪೇಟೆಯ ಸರ್ಕಾರಿ ಶಾಲೆಗೆ ಬಡ ಕೂಲಿ ಕಾರ್ಮಿಕರ 123 ಮಕ್ಕಳು ಕಡ್ಡಾಯವಾಗಿ ಶಾಲೆಗೆ ಬರುತ್ತಿರುವುದಕ್ಕೆ ಮತ್ತು ಪ್ರತಿ ವರ್ಷ ಶೇಕಡ 70ಕ್ಕೂ ಹೆಚ್ಚು ಫಲಿತಾಂಶ ಬರುವುದಕ್ಕೆ ವನಜಾಕ್ಷಿ ಮೇಡಂ ಅವರ ಪರಿಶ್ರಮ, ಶಾಲೆ ಹಾಗೂ ಬಡ ಮಕ್ಕಳ ಮೇಲಿನ ಪ್ರೀತಿ, ಸಹದ್ಯೋಗಿಗಳ ಸಹಕಾರ, ಶಾಲಾ ಅಭಿವೃದ್ಧಿ ಸಮಿತಿಯ ಪ್ರೋತ್ಸಾಹ ಕಾರಣವಾಗಿದೆ.
2006ರಲ್ಲಿ ವನಜಾಕ್ಷಿಯವರು ಮುಖ್ಯ ಶಿಕ್ಷಕಿಯಾಗಿ ಶಾಲೆಗೆ ವರ್ಗಾವಣೆಯಾಗಿ ಬಂದಾಗ ಶಾಲೆಯನ್ನು ರಕ್ಷಣೆ ಮಾಡುವುದು, ಅಭಿವೃದ್ಧಿಪಡಿಸುವುದು ದೊಡ್ಡ ಸವಾಲು ಆಗಿತ್ತು. ಚಿಕ್ಕ ಕೊಠಡಿಗಳು, ಭದ್ರತೆಯ ಕೊರತೆ, ಮಕ್ಕಳ ಹಾಜರಾತಿ ಕುಂಠಿತ ಹಾಗೂ ಪೋಷಕರ ದಿವ್ಯ ನಿರ್ಲಕ್ಷ್ಯವನ್ನು ಕಂಡು ಹೇಗಪ್ಪ ಈ ಶಾಲೆಯನ್ನು ಸುಧಾರಿಸುವುದು ಎಂದು ಆತಂಕಕ್ಕೆ ಒಳಗಾಗಿದ್ದರು.
ಈ ಸಮಯದಲ್ಲಿ ಇವರಿಗೆ ಆತ್ಮಸ್ಥೈರ್ಯ ತುಂಬಿದ್ದು ಪತಿ ಪಿ. ಕೃಷ್ಣಮೂರ್ತಿ, ಮಕ್ಕಳು ಹಾಗೂ ಆಳಿಯಂದಿರು.
ಪತಿ ಆರ್ಚಕ ಹಾಗೂ ಎಲ್.ಐ.ಸಿ ಏಜೆಂಟ್ ಆಗಿದ್ದರು. ಕಳೆದ ಎರಡು ತಿಂಗಳ ಹಿಂದೆ ನಿಧನವಾಗಿದ್ದಾರೆ. ಮೂವರು ಹೆಣ್ಣು ಮಕ್ಕಳು ದೊಡ್ಡ ಓದಿನ ಮೂಲಕ ಸುರಕ್ಷಿತ ಮನೆಗಳಿಗೆ ಸೇರಿದ್ದಾರೆ. 2006ರಿಂದ ಇವರೆಗೆ ಶಾಲೆಯ ಅಭಿವೃದ್ಧಿ ಹೆಚ್ಚಿದ್ದರೆ ಇದಕ್ಕೆ ವನಜಾಕ್ಷಿಯವರಲ್ಲಿ ಶಾಲೆಯ ಅಭಿವೃದ್ಧಿ ಬಗ್ಗೆ ಇರುವ ಬದ್ಧತೆ, ಹಾಗೂ ಮನೆಯವರು ಕಾರಣವೆಂದು ಶಾಲಾ ಶಿಕ್ಷಕ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದೆ.
ಶಾಲೆ ಬಿಟ್ಟ ಮಕ್ಕಳನ್ನು ಹುಡುಕಿಕೊಂಡು ಹೋಗಿ ಶಾಲೆಗೆ ಕರೆತಂದು ಪಾಠ-ಪ್ರವಚನ ಹೇಳಿಕೊಟ್ಟಿರುವುದು, ಶಾಲೆಯನ್ನು ಮರೆತಿದ್ದ ಪೋಷಕರು ಪ್ರತಿ ತಿಂಗಳು ನಡೆಯುವ ಪೋಷಕರ ಸಭೆಗೆ ಕಡ್ಡಾಯವಾಗಿ ಬರುವಂತಹ ವಾತಾವಣ ಸೃಷ್ಟಿರುವುದು, ಮಕ್ಕಳಿಗೆ ಸರ್ಕಾರ ನೀಡುವ ವಿದ್ಯಾರ್ಥಿ ವೇತನ ಪಡೆಯಲು ಬರುವ ಪೋಷಕರು ಹೆಬ್ಬೆಟ್ಟು ಹಾಕುವುದನ್ನು ನಿಲ್ಲಿಸಿ ಸಹಿ ಮಾಡುವಷ್ಟು ಬುದ್ಧಿವಂತರಾಗಿರುವುದಕ್ಕೆ ವನಜಾಕ್ಷಿಯವರ ಪ್ರೇರಣೆ ಹಾಗೂ ಸಹಿ ಮಾಡದಿದ್ದರೆ ಹಣ ನೀಡುವುದಿಲ್ಲವೆಂಬ ಸೂಚನೆಯಿಂದಾಗಿ ಅನೇಕರು ಸಾಕ್ಷರತೆಯ ಪ್ರಜ್ಞೆ ಬೆಳೆಸಿಕೊಳ್ಳುವುದಕ್ಕೆ ಕಾರಣವಾಗಿದೆ.
ಶಾಲೆಯಲ್ಲಿ ಅಡುಗೆ ಕೋಣೆ ನಿರ್ಮಾಣಕ್ಕೆ ಸರ್ಕಾರ ನೀಡಿದ್ದ 60 ಸಾವಿರ ರು.ಸಾಕಾಗದೆ ಹೋದಾಗ ಪತಿ ಪಿ.ಕೃಷ್ಣಮೂರ್ತಿಯವನ್ನು ಕಾಡಿಬೇಡಿ ಹಣ ಪಡೆದು ಕೊರತೆ ನೀಗಿಸಿದ್ದಾರೆ, ಮಕ್ಕಳು ಬಿಸಿಲು, ಮಳೆ, ಗಾಳಿಯಲ್ಲಿ ನರಳದೆ ನೆಮ್ಮದಿಯಿಂದ ಊಟ ಮಾಡಲು ಅನುಕೂಲವಾಗುವಂತೆ ಸ್ವಂತ ಹಣದಲ್ಲಿ ಅಂದರೆ ಪತಿ ನೀಡಿದ ದೇಣಿಗೆ ಹಣದಿಂದ ಶೆಡಡ್ನಿರ್ಮಿಸಿ ಶಾಲೆಯನ್ನು ತಮ್ಮ ಸ್ವಂತ ಮನೆಯ ರೀತಿಯಲ್ಲಿ ಅಭಿವೃದ್ಧಿಪಡಿಸುತ್ತಿರುವುದು ಮೆಚ್ಚುಗೆಯ ವಿಷಯವಾಗಿದೆ.
ಆಳಿಯ ಹೆಚ್.ಎಸ್.ರುಪೇಶ್ ಎಂಬುವರು ಅತ್ತೆಯ ಮನವಿಗೆ ಸ್ಪಂಧಿಸಿ ಎರಡು ಕಂಪ್ಯೂಟರ್ಗ್‌ಳನ್ನು ದಾನವಾಗಿ ನೀಡಿದ್ದಾರೆ. ಶಾಲೆಯ ರಕ್ಷಣೆಗಾಗಿ ಗೇಟ್ ಅಳವಡಿಸಿದ್ದಾರೆ, ಶಾಲೆಯಲ್ಲಿ ನೀರಿನ ಸಮಸ್ಯೆ ಬಾರದಂತೆ ನೋಡಿಕೊಂಡಿದ್ದಾರೆ.
ಮಕ್ಕಳಿಗೆ ಸರ್ಕಾರ ನೀಡುವ ಬಿಸಿಯೂಟ ಹಾಗೂ ಕ್ಷೀರ ಭಾಗ್ಯದಿಂದ ಮಕ್ಕಳು ಸಂತೃಪ್ತರಾಗಿದ್ದಾರೆ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಬಡ ಮಕ್ಕಳು ಶಿಕ್ಷಣದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವುದಕ್ಕೆ ಅನುಕೂಲವಾಗಿದೆ.
ನನಗೆ ಬಡ ಮಕ್ಕಳು ಓದಿ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಬೇಕೆಂಬುದೇ ದೊಡ್‌ಡ ಆಸೆ, ಇಲಾಖೆಯಿಂದ ನೀಡುವ ಪ್ರಶಸ್ತಿಗಾಗಿ ಅರ್ಜಿ ಹಾಕಿ ಲಾಬಿ ಮಾಡುವ ಶಕ್ತಿ ಇಲ್ಲ, ಈ ಶಾಲೆಯನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕಾಗಿದೆ, ಅದಕ್ಕಾಗಿ ಸರ್ಕಾರ ನೀಡುವ ಸಹಕಾರದ ಜೊತೆಗೆ ದಾನಿಗಳ ನೆರವು ಅತಿ ಮುಖ್ಯ. ನನ್ನ ಪತಿ ಇದ್ದಾಗ ಶಾಲೆ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ಸಿಗುತ್ತಿತ್ತು, ಅವರು ಇಲ್ಲದಿರುವುದು ದೊಡ್ಡ ಕೊರತೆ ಕಾಣುವಂತಾಗಿದೆ. ಆಳಿಯ ರುಪೇಶ್ಹಾಗೂ ಇನ್ನಿತರರು ಸಹಾಯ ಮುಂದುವರೆಸುವ ವಿಶ್ವಾಸವಿದೆ ಎಂದು ವನಜಾಕ್ಷಿ 'ಕನ್ನಡಪ್ರಭ'ಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
ಇನ್ನು ಒಂದುವರೆ ವರ್ಷ ಸೇವೆಯ ಭಾಗ್ಯವಿದೆ, ಅಷ್ಟರಲ್ಲಿ ಶಾಲೆಯನ್ನು ಮಾದರಿಯಾಗಿ ರೂಪಿಸಬೇಕೆಂಬ ಆಸೆಯಿದೆ,ಇಲಾಖೆಯ ಅಧಿಕಾರಿಗಳು ಕೂಡಲೇ ಕಂಪ್ಯೂಟರ್ ಶಿಕ್ಷಕರೊಬ್ಬರನ್ನು ನೇಮಿಸಬೇಕು, 1ರಿಂದ 7ರವರೆಗೆ ತರಗತಿ ನಡೆಯುತ್ತಿದ್ದು ಈಗ ಇರುವ 7 ಮಂದಿ ಶಿಕ್ಷಕಿಯರು ಉತ್ತಮ ರೀತಿಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದಾರೆ, ದಾನಿಗಳು ಶಾಲೆಗೆ ಬೇಕಾದ ಇನ್ನಿತರ ಪರಿಕರಗಳನ್ನು ಒದಗಿಸಿದಲ್ಲಿ ಬಡ ಮಕ್ಕಳಿಗೆ ಅನುಕೂಲವಾಗುತ್ತದೆ, ನನಗೆ ಪ್ರಶಸ್ತಿಗಿಂತ ಶಾಲೆಯ ಅಭಿವೃದ್ಧಿಯೇ ದೊಡ್ಡ ಗೌರವ ಎಂದಿದ್ದಾರೆ.
ನಿಜ. ಅನೇಕ ಸ್ವಾಭಿಮಾನಿ ಹಾಗೂ ಆತ್ಮಗೌರವ ಹೊಂದಿರುವ ಶಿಕ್ಷಕರು ಪ್ರಶಸ್ತಿಗಾಗಿ ಆಸೆ ಪಡುವುದಿಲ್ಲ, ಅರ್ಜಿ ಹಾಕಿ ಲಾಬಿ ಮಾಡುವುದಿಲ್ಲ, ಲಂಚ ಕೊಡುವಷ್ಟು ಶಕ್ತಿ ಇರುವುದಿಲ್ಲ. ಆದರೆ, ಶಿಕ್ಷಕರ ಸಂಘದ ಮುಖಂಡರು, ಇಲಾಖೆಯ ಅಧಿಕಾರಿಗಳು ಸರ್ಕಾರಿ ಸೇವೆ ಎಂದರೆ ದೇವರ ಕೆಲಸವೆಂದು ಪ್ರಾಮಾಣಿಕವಾಗಿ ಮಾಡುವವರನ್ನು ಗುರುತಿಸಿ ಗೌರವಿಸುವಂತಾದರೆ ಇತರರಿಗೆ ಸ್ಫೂರ್ತಿ ದೊರಕಿದಂತಾಗುತ್ತದೆ.

- ಪಾ.ಶ್ರೀ. ಅನಂತರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement