ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಿಎಂ ತವರಲ್ಲಿ 'ಕೈ' ತಪ್ಪಿದ ಪಾಲಿಕೆ ಗದ್ದುಗೆ

Rashmi Kasaragodu
Updated On : 6 Sept 2013, 12:29 pm

ಕ.ಪ್ರ.ವಾರ್ತೆ, ಮೈಸೂರು, ಸೆ. 5-
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ ಗದ್ದುಗೆ ಕೈತಪ್ಪಿದೆ.
ಒಟ್ಟು 65 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್- 22 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಜೆಡಿಎಸ್- 20, ಬಿಜೆಪಿ- 12, ಕೆಜೆಪಿ- 1, ಬಿಎಸ್ಸಾರ್- 1, ಎಸ್‌ಡಿಪಿಐ- 2, ಪಕ್ಷೇತರರು- 7 ಮಂದಿ ಆಯ್ಕೆಯಾಗಿದ್ದರು. ಇದಲ್ಲದೇ ಒಬ್ಬ ಸಂಸದರು (ಕಾಂಗ್ರೆಸ್), ನಾಲ್ವರು ವಿಧಾನಸಭಾ (ಮೂರು ಕಾಂಗ್ರೆಸ್, ಒಂದು ಜೆಡಿಎಸ್) ಹಾಗೂ ಐವರು ವಿಧಾನ ಪರಿಷತ್  ಸದಸ್ಯರಿಗೂ (ಮೂವರು ಜೆಡಿಎಸ್, ಇಬ್ಬರು ಬಿಜೆಪಿ) ಮತದಾನದ ಹಕ್ಕಿತ್ತು. ಇವರು ಸೇರಿದರೆ ಮತದಾರರ ಸಂಖ್ಯೆ 75. ಅಧಿಕಾರ ಗದ್ದುಗೆ ಹಿಡಿಯಲು ಈ ಪೈಕಿ ಅರ್ಧಕ್ಕಿಂತ ಹೆಚ್ಚು ಎಂದರೆ 38 ಮಂದಿ ಬೆಂಬಲ ಬೇಕಿತ್ತು.
ಆದರೆ ಯಾವುದೇ ಪಕ್ಷಕ್ಕೂ ಇಷ್ಟು ಸ್ಥಾನಗಳು ಇರಲಿಲ್ಲವಾದ್ದರಿಂದ ಯಾವುದಾದರೂ ಎರಡು ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು.
ಕಳೆದ ಅವಧಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿ ಮಾಡಿಕೊಂಡು, ಸರದಿಯ ಮೇರೆ ಮೇಯರ್- ಉಪ ಮೇಯರ್ ಸ್ಥಾನಗಳನ್ನು ಪಡೆಯುತ್ತಾ ಅಧಿಕಾರ ಅನುಭವಿಸಿದ್ದವು. ಆದರೆ ವಿಧಾನಸಭಾ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಜೆಡಿಎಸ್ ಅಧಿಕೃತ ಪ್ರತಿಪಕ್ಷವಾಗಿ ಹೊರಹೊಮ್ಮಿದೆ. ಅಲ್ಲದೇ ಹಳೆಯ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆಯೇ ಜಿದ್ದಾಜಿದ್ದಿ.
ಇತ್ತೀಚೆಗೆ ನಡೆದ ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪ ಚುನಾವಣೆಯಲ್ಲಿ ಎರಡೂ ಪಕ್ಷಗಳು ತೀವ್ರ ಹೋರಾಟ ನಡೆಸಿದ್ದವು. ಕಾಂಗ್ರೆಸ್ ಗೆದ್ದು ಬೀಗಿದರೆ ಜೆಡಿಎಸ್ ಬಿದ್ದು ತೀವ್ರ ಮಖಭಂಗ ಅನುಭವಿಸಿತ್ತು. ಹೀಗಾಗಿ ಎರಡೂ ಪಕ್ಷಗಳು ಮತ್ತೆ ಕೈಜೋಡಿಸುವುದು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆಸಕ್ತಿ ತೋರದ ಕಾಂಗ್ರೆಸ್: ತನ್ನ ಬಲದ ಜತೆಗೆ ಎಲ್ಲಾ ಪಕ್ಷೇತರರು, ಎಸ್‌ಡಿಪಿಐ, ಬಿಎಸ್ಸಾರ್ ಕಾಂಗ್ರೆಸ್ ಸೇರಿಸಿದರೂ ಗೆಲ್ಲಲಾಗುವುದಿಲ್ಲ ಎಂದು ತಿಳಿದಿದ್ದ ಕಾಂಗ್ರೆಸ್, ಆರಂಭದಿಂದಲೂ ಅಧಿಕಾರ ಹಿಡಿಯುವ ಬಗ್ಗೆ ಆಸಕ್ತಿ ತೋರಿಸಲಿಲ್ಲ. ಆದರೂ ಜಾತ್ಯತೀತ ಪಕ್ಷಗಳ ನಡುವೆ ಹೊಂದಾಣಿಕೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಅಭಿವೃದ್ಧಿ ದೃಷ್ಟಿಯಿಂದ, ಬಿಜೆಪಿಯಲ್ಲಿ ಉಪ ಮೇಯರ್ ಹುದ್ದೆಗೆ ಸೂಕ್ತ ಅಭ್ಯರ್ಥಿಗಳು ಇಲ್ಲದಿರುವುದರಿಂದ ಜೆಡಿಎಸ್ ತನ್ನ ಕಡೆಗೆ ಸಹಾಯಹಸ್ತ ಚಾಚಬಹುದು ಎಂದು ಕಾದು ಕುಳಿತಿತ್ತು.
ಜೆಡಿಎಸ್ ನಾಯಕರು ಅದಕ್ಕೆ ಆಸ್ಪದವನ್ನೇ ನೀಡಲಿಲ್ಲ. ಉಪ ಚುನಾವಣೆಯಲ್ಲಿ ಆದ ಸೋಲಿನಿಂದ ಕಂಗೆಡಲಿಲ್ಲ. ಹೇಗಾದರೂ ಮಾಡಿ, ತವರಿನಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರಿಗೆ ಮುಖಭಂಗ ಮಾಡಬೇಕು ಎಂದು ಎಣಿಸಿ, ಶತ್ರುವಿನ ಶತ್ರು ಮಿತ್ರ ಎಂಬಂತೆ ಬಿಜೆಪಿ ಜತೆಯೇ ಮಾತುಕತೆ ನಡೆಸಿತ್ತು. ಬಿಜೆಪಿ ಕೂಡ ಉಪ ಮೇಯರ್‌ಗೆ ಸೂಕ್ತ ಅಭ್ಯರ್ಥಿ ಇಲ್ಲದಿದ್ದರೂ ಮೇಯರ್ ಸ್ಥಾನಕ್ಕೆ ಪಟ್ಟು ಹಿಡಿಯದೇ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಗಾದಿಗೆ ತೃಪ್ತಿಪಟ್ಟುಕೊಂಡು, ಜೆಡಿಎಸ್‌ಗೆ ಸಾಥ್ ನೀಡಿತು. ಆ ಮೂಲಕ ಇದೇ ಮೊದಲ ಬಾರಿಗೆ ಮೈಸೂರು ಪಾಲಿಕೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದಿದೆ. ಮೇಯರ್ ಹಾಗೂ ಉಪ ಮೇಯರ್- ಎರಡೂ ಸ್ಥಾನಗಳು ಕ್ರಮವಾಗಿ ಜೆಡಿಎಸ್‌ನ ರಾಜೇಶ್ವರಿ ಹಾಗೂ ಶೈಲೇಂದ್ರ ಅವರ ಪಾಲಾಗಿವೆ. ಜೆಡಿಎಸ್‌ನ- 21 (ಒಬ್ಬ ಬಂಡಾಯ ಸೇರಿ) ಪಾಲಿಕೆ ಸದಸ್ಯರು, ಒಬ್ಬ ವಿಧಾನಸಭಾ (ಜಿ.ಟಿ. ದೇವೇಗೌಡ), ಇಬ್ಬರು ವಿಧಾನ ಪರಿಷತ್ ಸದಸ್ಯರು (ಸಂದೇಶ್ ನಾಗರಾಜ್ ಹಾಗೂ ಮರಿತಿಬ್ಬೇಗೌಡ), ಬಿಜೆಪಿಯ- 12 ಪಾಲಿಕೆ ಸದಸ್ಯರು, ಇಬ್ಬರು ವಿಧಾನ ಪರಿಷತ್ ಸದಸ್ಯರು (ಗೋ. ಮಧುಸೂದನ್ ಹಾಗೂ ಸಿದ್ದರಾಜು), ಕೆಜೆಪಿಯ ಒಬ್ಬ ಪಾಲಿಕೆ ಸದಸ್ಯ ಸೇರಿ 39 ಮಂದಿಯ ಬೆಂಬಲ ಸಿಕ್ಕಿದೆ. ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಕೆ.ವಿ. ನಾರಾಯಣಸ್ವಾಮಿ ಗೈರು ಹಾಜರಾಗದಿದ್ದಲ್ಲಿ ಈ ಬಲ 40ಕ್ಕೆ ಏರುತ್ತಿತ್ತು.
ಕಾಂಗ್ರೆಸ್‌ಗೆ 22 ಪಾಲಿಕೆ ಸದಸ್ಯರು, 3 ವಿಧಾನಸಭಾ ಸದಸ್ಯರು (ತನ್ವೀರ್‌ಸೇಠ್, ಎಂ.ಕೆ. ಸೋಮಶೇಖರ್ ಹಾಗೂ ವಾಸು), ನಾಲ್ವರು ಪಕ್ಷೇತರರು (ಬಿಎಸ್ಸಾರ್‌ನ ಸಮೀನಾ, ಎಸ್‌ಡಿಪಿಐನ ರೇಷ್ಮಾ ಜಬೀನ್, ಎಸ್‌ಡಿಪಿಐ ಬೆಂಬಲಿತ ಮಹದೇವ ಹಾಗೂ ಪಕ್ಷೇತರ ಆರ್.ನಾಗರಾಜು) ಬೆಂಬಲ ಸೇರಿ 29 ಸದಸ್ಯರ ಬೆಂಬಲ ಸಿಕ್ಕಿದೆ. ಸಂಸದ ಎಚ್. ವಿಶ್ವನಾಥ್ ಗೈರು ಹಾಜರಾಗದಿದ್ದಲ್ಲಿ ಈ ಬೆಂಬಲ 30ಕ್ಕೆ ಏರುತ್ತಿತ್ತು. ಐವರು ಪಕ್ಷೇತರರು ತಟಸ್ಥರಾಗಿದ್ದರು.
ಪಾಲಿಕೆಯಲ್ಲಿ ಕಮಲ ಅರಳುವುದು ಖಚಿತ: ಮೈಸೂರು ನಗರಪಾಲಿಕೆ ಕಳೆದ 30 ವರ್ಷಗಳಿಂದಲೂ ಅಸ್ತಿತ್ವದಲ್ಲಿದೆ. ಆದರೆ ಈವರೆಗೂ ಪಾಲಿಕೆಯಲ್ಲಿ ಕಮಲ ಅರಳಿಸಲು ಸಾಧ್ಯವಾಗಿಲ್ಲ. ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರ ಲಾಭ ಪಡೆದು, ಹೇಗಾದರೂ ಮಾಡಿ ಕಮಲ ಅರಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಎ. ರಾಮದಾಸ್ ಎರಡು ಹಂತದಲ್ಲಿ ಆಪರೇಷನ್ ಕಮಲ ನಡೆಸಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ತಲಾ 8, ನಾಲ್ವರು ಪಕ್ಷೇತರರನ್ನು ಸೆಳೆದರೂ ಸಾಧ್ಯವಾಗಲಿಲ್ಲ.
ಬಿಜೆಪಿಯ ಕೆ.ಗೋಪಾಲಸ್ವಾಮಿ ಅವರು 1984- 85ರಲ್ಲಿ ಉಪ ಮೇಯರ್ ಆಗಿದ್ದನ್ನು ಹೊರತುಪಡಿಸಿದರೆ ಆ ಪಕ್ಷದವರ್ಯಾರೂ ಮೇಯರ್- ಉಪ ಮೇಯರ್ ಆಗಲು ಸಾಧ್ಯವಾಗಿಲ್ಲ. ಕಳೆದ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನವರು ಮಾಡಿಕೊಂಡ ಎಡವಟ್ಟಿನಿಂದಾಗಿ 2009-10 ರಲ್ಲಿ ಎಂ.ಮರುಳೀಧರ ಜೆಟ್ಟಿ, ಸುನಂದ ಪಾಲನೇತ್ರ, 2010-11 ರಲ್ಲಿ ಶಿವಕುಮಾರ್ ಅವರು ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿದ್ದರು.
ಆದರೆ ಈಗ ಅಧಿಕೃತವಾಗಿಯೇ ಬಿಜೆಪಿಯವರು ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಲಿದ್ದಾರೆ. ಅಲ್ಲದೇ ಐದು ವರ್ಷಗಳ ಅವಧಿಯಲ್ಲಿ ಸರದಿಯ ಮೇರೆಗೆ ಮೇಯರ್ ಹಾಗೂ ಉಪ ಮೇಯರ್ ಹುದ್ದೆಗಳನ್ನು ಪಡೆಯಲಿದ್ದಾರೆ. ಯಾರಾಗುತ್ತಾರೆ ಬಿಜೆಪಿಯ ಪ್ರಥಮ ಮೇಯರ್ ಎಂಬುದು ಮುಂದಿನ ವರ್ಷದ ಮೀಸಲಾತಿಯನ್ನು ಅವಲವಂಬಿಸಿದೆ.

- ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement