ನಿತ್ಯಾನಂದ ಆಶ್ರಮದಲ್ಲಿ ಅತ್ಯಾಚಾರ, ದೌರ್ಜನ್ಯದ ಆರೋಪ
ರಾಮನಗರ: ಬಿಡದಿಯ ನಿತ್ಯಾನಂದ ಆಶ್ರಮದಲ್ಲಿ ಸನ್ಯಾಸಿನಿ ಮೇಲೆ ಹೊರ ಗುತ್ತಿಗೆ ಸಿಬ್ಬಂದಿಯೊಬ್ಬ ಅತ್ಯಾಚಾರ ನಡೆಸಿದ್ದಾನೆಂದು ನಿತ್ಯಾನಂದ ಅನುಯಾಯಿಗಳು ಆರೋಪಿಸಿದ್ದರೆ, ತಮ್ಮ ಸಹೋದ್ಯೋಗಿಗಳನ್ನು ನಾಲ್ಕು ದಿನ ಕೊಠಡಿಯಲ್ಲಿ ಕೂಡಿಟ್ಟು ನಡೆಸಿದ ದೌರ್ಜನ್ಯ ಮುಚ್ಚಿ ಹಾಕಲು ಕಟ್ಟುಕತೆ ಹೆಣೆಯಲಾಗಿದೆ ಎಂದು ಹೊರ ಗುತ್ತಿಗೆ ಸಿಬ್ಬಂದಿ ಪ್ರತ್ಯಾರೋಪ ಮಾಡಿದ್ದಾರೆ.
ಆಶ್ರಮದಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ 5 ಸಿಬ್ಬಂದಿ ನಾಲ್ಕು ದಿನದಿಂದ ನಾಪತ್ತೆಯಾಗಿದ್ದರು. ಆ ಬಗ್ಗೆ ವಿಚಾರಣೆ ನಡೆಸಲಾಗಿ ಅವರೆಲ್ಲ ಧ್ಯಾನಮಗ್ನರಾಗಿದ್ದಾರೆ ಎಂದು ನಿತ್ಯಾ ಅನುಯಾಯಿಗಳು ಉತ್ತರಿಸಿದ್ದರು. ವಾಸ್ತವದಲ್ಲಿ ಅವರನ್ನು ವಿವಸ್ತ್ರಗೊಳಿಸಿ ಕೊಠಡಿಯಲ್ಲಿ ಕೂಡಿಟ್ಟು, ಥಳಿಸಲಾಗಿದೆ ಎನ್ನುವುದು ಸಹೋದ್ಯೋಗಿಗಳ ದೂರು.
ಈ ವಿಷಯವನ್ನು ಸಹೋದ್ಯೋಗಿ ರಂಜಿತ್ ಎಂಬುವರು ಶುಕ್ರವಾರ ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳು ಮತ್ತು ಸಂಘಟನೆಗಳಿಗೆ ಮುಟ್ಟಿಸಿದ್ದಾರೆ. ಇದರ ಬೆನ್ನಲ್ಲೇ ಹೊರ ಗುತ್ತಿಗೆ ಸಿಬ್ಬಂದಿಯು ತಮಿಳುನಾಡು ಮೂಲದ ಸನ್ಯಾಸಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಅವರನ್ನು ವಿಚಾರಣೆ ನಡೆಸಿದ್ದೇವಷ್ಟೇ ಎನ್ನುವ ಮಾಹಿತಿಯನ್ನು ನಿತ್ಯಾ ಅನುಯಾಯಿಗಳು ತೇಲಿ ಬಿಟ್ಟಿದ್ದಾರೆ.
ಎಲ್ಲವೂ ಗೊಂದಲ: ಐದು ಸಿಬ್ಬಂದಿ ಪೈಕಿ ಒಬ್ಬ ತಪ್ಪಿಸಿಕೊಂಡು ಹೊರ ಬಂದಿದ್ದು, ಒಳಗೆ ನಡೆದ ದೌರ್ಜನ್ಯ ಬಯಲಾಗಿದೆ ಎಂಬುದು ಸಹೋದ್ಯೋಗಿ ರಂಜಿತ್ ಹೇಳಿಕೆಯಾಗಿದೆ. ಆದರೆ, ಒಬ್ಬನನ್ನು ಪೊಲೀಸ್ ವಶಕ್ಕೆ ನೀಡಿರುತ್ತೇವೆ ಎಂದು ಧ್ಯಾನಪೀಠದ ಸಾರ್ವಜನಿಕ ಸಂಪರ್ಕಾಧಿಕಾರಿ ಬಹಿರಂಗಪಡಿಸಿದ್ದಾರೆ. ಆದರೆ, ತಮಗೆ ಯಾವುದೇ ದೂರು ಬಂದಿಲ್ಲ. ಯಾರನ್ನೂ ವಶಕ್ಕೆ ತೆಗೆದುಕೊಂಡಿಲ್ಲ ಎಂದು ಡಿವೈಎಸ್ಪಿ ರಾಮಲಿಂಗಪ್ಪ ತಿಳಿಸಿದ್ದಾರೆ. ಹಾಗಾಗಿ, ಈ ಮೂರು ಹೇಳಿಕೆಗಳಲ್ಲಿ ಒಂದಕ್ಕೊಂದು ಸಾಮ್ಯತೆಯೇ ಇಲ್ಲ. ಅತ್ಯಾಚಾರ ಯತ್ನ ನಡೆದು 4 ದಿನವಾದರೂ ದೂರು ನೀಡಿಲ್ಲ. ಅಷ್ಟಕ್ಕೂ ಆರೋಪಿಗಳನ್ನು ವಿಚಾರಣೆ ನಡೆಸಬೇಕಿರುವುದು ಪೊಲೀಸರೇ ಹೊರತು ನಿತ್ಯಾ ಅನುಯಾಯಿಗಳಲ್ಲ. ಹೀಗಾಗಿ ಸಾಕಷ್ಟು ಅನುಮಾನಕ್ಕೆಡೆ ಮಾಡಿರುವ ಪ್ರಕರಣದ ಸತ್ಯಾಸತ್ಯತೆ ಹೊರ ಬರಬೇಕಾದರೆ ಸೂಕ್ತ ತನಿಖೆ ಆಗಬೇಕಿದೆ.
ಗೃಹ ಸಚಿವರಿಗೆ ದೂರು: ತಮಿಳುನಾಡು ಮೂಲದ ಸನ್ಯಾಸಿನಿಯು ಆಶ್ರಮದ ಸಹವಾಸ ಸಾಕೆಂದು ಹೊರ ಹೋಗಲು ಹೊರ ಗುತ್ತಿಗೆ ಸಿಬ್ಬಂದಿಯ ನೆರವು ಕೇಳಿದ್ದರು. ಆಕೆಗೆ ಸಂಬಂಧಿಸಿದ ದಾಖಲೆಗಳನ್ನು ಒಪ್ಪಿಸಿ, ಹೊರ ಹೋಗಲು ನೆರವಾಗುತ್ತಿದ್ದಾರೆ ಎಂದು ಆರೋಪಿಸಿ ನಿತ್ಯಾ ಅನುಯಾಯಿಗಳು 5 ಸಿಬ್ಬಂದಿಯನ್ನು ಕೂಡಿ ಹಾಕಿ ದೌರ್ಜನ್ಯ ಎಸಗಿದ್ದಾರೆ ಎಂದು ರಂಜಿತ್ ಹೇಳಿದ್ದಾರೆ. ಈ ಪ್ರಕರಣ ಬಗ್ಗೆ ಗೃಹ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ನಮ್ಮ ಸಹೋದ್ಯೋಗಿ ನೀಡಿದ ದೂರನ್ನು ಬಿಡದಿ ಪೊಲೀಸರು ಸ್ವೀಕರಿಸಿಲ್ಲ. ಈ ಬಗ್ಗೆ ಉನ್ನತಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.