ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪರಪ್ಪನ ಅಗ್ರಹಾರ ಪಕ್ಕದಲ್ಲೇ ಸೈಕೋ ಸೆರೆ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಜೈಶಂಕರ ಅಲಿಯಾಸ್ ಸೈಕೋ ಶಂಕರನನ್ನು ಹೊಸೂರು ರಸ್ತೆ...

Mainashree
Updated On : 7 Sept 2013, 12:16 pm

ಕನ್ನಡಪ್ರಭ ವಾರ್ತೆ, ಬೆಂಗಳೂರು, ಸೆ.6-
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಜೈಶಂಕರ ಅಲಿಯಾಸ್ ಸೈಕೋ ಶಂಕರನನ್ನು ಹೊಸೂರು ರಸ್ತೆ ಕೂಡ್ಲು ಗೇಟ್ ಬಳಿ ಪೊಲೀಸರು ಬಂಧಿಸಿದ್ದಾರೆ.
ಈ ಮೂಲಕ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದ ಸೈಕೋ ಶಂಕರ ಪರಾರಿ ಪ್ರಕರಣಕ್ಕೆ ತೆರೆ ಬಿದ್ದಿದೆ. ಪೊಲೀಸರು ಗೌರಿ-ಗಣೇಶನ ಹಬ್ಬವನ್ನು ನೆಮ್ಮದಿಯಿಂದ ಆಚರಿಸುವಂತಾಗಿದೆ.
'ತಾಂತ್ರಿಕ, ಮಾನಸಿಕ ಹಾಗೂ ದೈಹಿಕ ಶ್ರಮ ಬಳಸಿ ಸೈಕೋ ಶಂಕರನನ್ನು ಬಂಧಿಸಿದ್ದೇವೆ' ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಹೇಳಿದ್ದಾರೆ.
ಪರಪ್ಪನ ಅಗ್ರಹಾರದ ಕೂಡ್ಲು ಗೇಟ್ ಸಮೀಪ ಜೈಶಂಕರ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಬಳಿಕ ಚಾಣಾಕ್ಷತನದಿಂದ ಬಲೆ ಬೀಸಿ, ಮತ್ತೊಂದು ಪ್ರದೇಶಕ್ಕೆ ಪರಾರಿಯಾಗಲು ನೆರವು ಒದಗಿಸುವ ನಾಟಕವಾಡಿ ಪೊಲೀಸರು ಜೈಶಂಕರನನ್ನು ಬಂಧಿಸಿದ್ದಾರೆ ಎಂದು ಅವರು ತಿಳಿಸಿದರು.

ಸಿಕ್ಕಿಬಿದ್ದಿದ್ದು ಹೇಗೆ?: ಜೈಶಂಕರ ದೂರವಾಣಿ ಮೂಲಕ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಪೊಲೀಸರು ಮೊದಲೇ ತಮ್ಮ ಬಲೆಗೆ ಕೆಡವಿಕೊಂಡಿದ್ದರು. ಹೀಗಾಗಿ ಆರೋಪಿ ಎಲ್ಲಿದ್ದಾನೆ ಎಂಬ ಮಾಹಿತಿ ಸಿಗುತ್ತಿತ್ತು. ಬೇರೆ ಪ್ರದೇಶಕ್ಕೆ ಪರಾರಿಯಾಗಲು ತನಗೆ ವಾಹನ ಬೇಕು ಎಂದು ಜೈಶಂಕರ ತಾನು ಸಂಪರ್ಕದಲ್ಲಿ ಇದ್ದವರನ್ನು ಕೇಳಿದ್ದ. ಆಗ ಮಧ್ಯೆ ಪ್ರವೇಶಿಸಿದ ಪೊಲೀಸರು ವಾಹನ ಒದಗಿಸುವ ನೆಪದಲ್ಲಿ ಕಾರ್ಯಾಚರಣೆ ನಡೆಸಿ ಜೈಶಂಕರ್‌ನನ್ನು ಬಂಧಿಸಿದರು ಎಂದು ಔರಾದ್ಕರ್ ಹೇಳಿದರು.
ಜೈಶಂಕರನ ಎರಡು ಪಾದಗಳಿಗೆ ಹಾಗೂ ಕೈಗಳಿಗೆ ಗಾಯಗಳಾಗಿವೆ. ಮೊಣಕಾಲುಗಳಲ್ಲಿ ಊತ ಬಂದಿದೆ. ಬೆನ್ನು ನೋವು ಕಾಣಿಸಿಕೊಂಡಿದೆ. ಹೀಗಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.
ಜೈಶಂಕರ ಪರಾರಿಯಾದ ದಿನದಿಂದ ಬಂಧನಕ್ಕೆ ಒಳಗಾಗುವವರೆಗೂ ಎಲ್ಲಿದ್ದ? ಪರಾರಿಯಾದ ಬಳಿಕ ಎಲ್ಲಿಗೆ ಹೋದ? ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಆಯುಕ್ತರು ತಿಳಿಸಿದರು. ಪ್ರಾಥಮಿಕ ವಿಚಾರಣೆ ವೇಳೆ ತಾನು ದೇವಸ್ಥಾನ, ಶಾಲೆ, ಆಶ್ರಮ ಮುಂತಾದ ಕಡೆ ಇದ್ದದ್ದಾಗಿ ಹೇಳುತ್ತಿದ್ದಾನೆ ಎಂದು ಮಾಹಿತಿ ನೀಡಿದರು.   
ಸೆ.1ರಂದು ನಸುಕಿನಲ್ಲಿ ನಕಲಿ ಕೀ ಬಳಸಿ ಜೈಲಿನಿಂದ ಪರಾರಿಯಾಗಿದ್ದ ಶಂಕರನನ್ನು ಬಂಧಿಸಲು ಜಂಟಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಐದು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಅಲ್ಲದೇ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ರಾಜ್ಯಗಳ ಗಡಿ ಭಾಗದಲ್ಲಿರುವ ಜಿಲ್ಲೆಗಳ ಎಸ್ಪಿಗಳು ಹಾಗೂ ತಮಿಳುನಾಡಿನ ಪೊಲೀಸ್ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಆತನ ಬಂಧನಕ್ಕೆ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿತ್ತು ಎಂದು ಔರಾದ್ಕರ್ ತಿಳಿಸಿದರು.

ಹಳೇ ತಂಡ: ಸವಾಲಾಗಿದ್ದ ಪ್ರಕರಣವನ್ನು ಭೇದಿಸಲು ಈ ಹಿಂದೆ ಜೈಶಂಕರನನ್ನು ಬಂಧಿಸಿದ್ದ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಿಂದ ನುರಿತ ಅಧಿಕಾರಿ, ಸಿಬ್ಬಂದಿಯನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿತ್ತು. ಬಿಜಾಪುರ, ಬಾಗಲಕೋಟೆ, ತುಮಕೂರು, ಬಳ್ಳಾರಿ ಸೇರಿದಂತೆ ಜೈಶಂಕರನನ್ನು ಬಂಧಿಸಿದ ಹತ್ತಿರದಿಂದ ನೋಡಿದ, ಆತನ ಬಗ್ಗೆ ತನಿಖೆ ನಡೆಸಿದ ಅಧಿಕಾರಿಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು.
ಅಲ್ಲದೇ, ಸಾರ್ವಜನಿಕರು ಜೈಶಂಕರನ ಗುರುತು ಹಿಡಿಯಲೆಂದು ವಿವಿಧ ಭಂಗಿಯ ಫೋಟೋ ಇರುವ 10 ಸಾವಿರ ಪೊಸ್ಟರ್‌ಗಳು, 75 ಸಾವಿರ ಕರಪತ್ರಗಳುಗಳನ್ನು ಕನ್ನಡ, ತಮಿಳು, ತೆಲುಗು, ಮರಾಠಿ, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಮುದ್ರಿಸಿ ಹಂಚಲಾಗಿತ್ತು. ಈತನ ಪತ್ತೆಗೆ ರಾಜ್ಯದ ಪ್ರಮುಖ ಟೋಲ್ ಕೇಂದ್ರಗಳು, ಲಾರಿ, ಟೆಂಪೋ, ಟ್ರಕ್ ಟರ್ಮಿನಲ್‌ಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ 'ಬೇಕಾಗಿದ್ದಾನೆ' ಎನ್ನುವ ಪೊಸ್ಟರ್‌ಗಳನ್ನು ಅಂಟಿಸಲಾಗಿತ್ತು.

ಪರಾರಿಯಾಗಿದ್ದು ಹೇಗೆ?:  ಸೆ.1ರ ಬೆಳಗಿನ ಜಾವ 2 ಗಂಟೆಯ ವೇಳೆ ಕಾರಾಗೃಹದ ಆಸ್ಪತ್ರೆಯ ನೆಲಮಹಡಿಯಲ್ಲಿರುವ ಬಿಗಿ ಭದ್ರತೆ ಸೆಲ್ಲರ್ ಸಂಖ್ಯೆ 26 ರಿಂದ ನಕಲಿ ಕೀ ಬಳಸಿ ಜೈಶಂಕರ ಹೊರ ಬಂದಿದ್ದಾನೆ. ನೆಲಮಹಡಿಯಿಂದ ಮೇಲೆ ಬಂದು ಆಸ್ಪತ್ರೆಯ ಸುತ್ತ ಇರುವ 15 ಅಡಿ ಗೋಡೆಯನ್ನು ಕಾಂಪೌಂಡ್ ಗೇಟ್ ಮೂಲಕ ಹತ್ತಿದ್ದಾನೆ.
ಅದೇ ಗೊಡೆಯಿಂದ ಸಂಪರ್ಕ ಕಲ್ಪಿಸುವ 20 ಅಡಿ ಎತ್ತರದ ಮತ್ತೊಂದು ಗೋಡೆವರೆಗೂ ಹೋಗಿದ್ದಾನೆ. ಬಳಿಕ 30 ಅಡಿ ಎತ್ತರದ ಗೋಡೆಯನ್ನು ಬ್ಯಾಗ್‌ಗಳ ಹಿಡಿಕೆ, 6 ಅಡಿ ಉದ್ದದ ಬಿಳಿ ಬಣ್ಣದ ಬೆಡ್‌ಶೀಟ್‌ನ್ನು ಹಗ್ಗವಾಗಿ ಮಾಡಿಕೊಂಡು ಮುಖ್ಯಗೋಡೆಗೆ ವಿದ್ಯುತ್ ಪ್ರವಹಿಸಲು ಹಾಕಿರುವ ಕಬ್ಬಿಣದ ರಾಡ್‌ಗಳಿಗೆ ಕೊಕ್ಕೆ ಹಾಕಿ ಹತ್ತಿದ್ದಾನೆ. ಅಲ್ಲಿಂದ ಕೆಳಗೆ ಇಳಿಯಲು ಅದೇ ಬ್ಯಾಗ್‌ನ ಹಿಡಿಕೆ, ಬೆಡ್‌ಶೀಟ್ ಬಳಸಿದ್ದಾನೆ ಎಂದು ಕಾರಾಗೃಹಗಳ ಎಡಿಜಿಪಿ ಗಗನ್‌ದೀಪ್ ತಿಳಿಸಿದ್ದಾರೆ.
ಜೈಶಂಕರನಿಗೆ ನಕಲಿ ಕೀ ಸಿಕ್ಕಿತ್ತಾ? ತಾನೇ ತಯಾರಿಸಿಕೊಂಡಿದ್ದನಾ? ಅಥವಾ ಕಾವಲಿಗಿದ್ದ ಸಿಬ್ಬಂದಿಯೇ ಬಿಟ್ಟು ಕಳುಹಿಸಿದರೇ ? ಎನ್ನುವುದರ ಬಗ್ಗೆ ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಪಟ್ನಾಯಕ್ ನೇತೃತ್ವದಲ್ಲಿ  ತನಿಖೆ ನಡೆಯುತ್ತಿದೆ ಎಂದು ಆಯುಕ್ತ ಔರಾದ್ಕರ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement