ಪ್ರಧಾನ ಸುದ್ದಿ

ವಿಶ್ವ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಸಂಘಟಿತ ಸಂಕಲ್ಪ

ಜಾಗತಿಕ ಆರ್ಥಿಕ ವ್ಯವಸ್ಥೆಯನ್ನು ಸಂಘಟಿತರಾಗಿ ಬಲಪಡಿಸುವ ಅಗತ್ಯವಿರುವುದರಿಂದ ಸದಸ್ಯ ದೇಶಗಳು ಈ ನಿಟ್ಟಿನಲ್ಲಿ..

ಸೇಂಟ್ ಪೀಟರ್ಸ್‌ಬರ್ಗ್,  ಸೆ.6-
ಜಾಗತಿಕ ಆರ್ಥಿಕ ವ್ಯವಸ್ಥೆಯನ್ನು ಸಂಘಟಿತರಾಗಿ ಬಲಪಡಿಸುವ ಅಗತ್ಯವಿರುವುದರಿಂದ ಸದಸ್ಯ ದೇಶಗಳು ಈ ನಿಟ್ಟಿನಲ್ಲಿ ಸಕ್ರಿಯವಾಗಿ ಕೈಜೋಡಿಸುವ ಸಂಯುಕ್ತ ನಿರ್ಣಯದೊಂದಿಗೆ ವಿಶ್ವದ ಇಪ್ಪತ್ತು ಆರ್ಥಿಕ ಸಬಲ ದೇಶಗಳು ಎರಡು ದಿನಗಳ ಜಿ-20 ಶೃಂಗಸಭೆಯ ಕೊನೆಯ ದಿನವಾದ ಶುಕ್ರವಾರ ಸಂಕಲ್ಪ ಸ್ವೀಕರಿಸಿದವು.
ರಷ್ಯಾದ ಸಾಂಸ್ಕೃತಿಕ ನಗರಿಯಲ್ಲಿ ಕೊನೆಗೊಂಡ ಈ ಐತಿಹಾಸಿಕ ಶೃಂಗಸಭೆಯಲ್ಲಿ ಕೈಗೊಂಡ 26 ಪುಟಗಳ ಘೋಷಣೆಗಳಿಗೆ ಇಪ್ಪತ್ತು ದೇಶಗಳ ನಾಯಕರು ಎದ್ದುನಿಂತು ಸಹಮತ ವ್ಯಕ್ತಪಡಿಸಿದರು.
ಎಲ್ಲ ದೇಶಗಳು ಈಗಾಗಲೇ ಕೈಗೊಂಡಿರುವ ಹಣಕಾಸು ಸುಧಾರಣಾ ಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಿಕೊಂಡು ಹೋಗಬೇಕು ಹಾಗೂ ಎಲ್ಲ ರಂಗಗಳಲ್ಲಿ ಹೆಚ್ಚು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಬೇಕು. ಇವು ಸದ್ಯದ ತುರ್ತು ಅಗತ್ಯವಾಗಬೇಕು. ಇದರಿಂದ ಸದೃಢ, ಸುಸ್ಥಿರ ಹಾಗೂ ಸಂತುಲಿತ ಬೆಳವಣಿಗೆ ಹೊಂದಲು ಸಾಧ್ಯ. ಈ ದಿಸೆಯಲ್ಲಿ ಎಲ್ಲ ಸದಸ್ಯ ದೇಶಗಳು ಕಾರ್ಯಪ್ರವೃತ್ತರಾಗಬೇಕೆಂದು ಘೋಷಣೆಯನ್ನು ಸ್ವೀಕರಿಸಲಾಯಿತು.
ಆರ್ಥಿಕವಾಗಿ  ಪ್ರಬಲ ರಾಷ್ಟ್ರಗಳಾಗಿರುವ ನಾವು ತೆಗೆದುಕೊಳ್ಳುವ ಕ್ರಮಗಳಿಂದ ಇಡೀ ವಿಶ್ವದ ಮೇಲೆ ಅದರ ಪರಿಣಾಮವುಂಟಾಗುವುದರಿಂದ ಆರ್ಥಿಕ ಸುಧಾರಣೆ ಮತ್ತು ಬೆಳವಣಿಗೆಗೆ ಪ್ರಾಮುಖ್ಯ ನೀಡಬೇಕೆಂಬ ನಿರ್ಣಯ ಸ್ವೀಕರಿಸಿದ ಜಿ-20 ನಾಯಕರು, ಪರಸ್ಪರ ಸಹಕಾರ, ಕೊಡು - ಕೊಳ್ಳುವಿಕೆ, ನೇರ ಸಹಭಾಗಿತ್ವದಿಂದ ಇದನ್ನು ಆಚರಣೆಗೆ ತರಲು ನಿರ್ಧರಿಸಿದರು.
ಜಿ-20 ಶೃಂಗಸಭೆ ಆರಂಭಕ್ಕೆ ಮುನ್ನ ಸಿರಿಯಾ ವಿರುದ್ಧ ದಾಳಿ ನಡೆಸುವ ಅಮೆರಿಕದ ನಿರ್ಧಾರವೇ ಪ್ರಧಾನವಾಗಿ ಚರ್ಚೆಗೆ ಬರಬಹುದು ಎಂದು ನಿರೀಕ್ಷಿಸಲಾಗಿತ್ತಾದರೂ, ಅದರ ಹೊರತಾಗಿಯೂ ಶೃಂಗ ಕೆಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿರುವುದು ಗಮನಾರ್ಹ.
ಭಾರತದ ಕಳವಳ ಒಪ್ಪಿಕೊಂಡ ಜಿ20: ಹಣಕಾಸು ಹರಿವಿನ ಏರಿಳಿತದಲ್ಲಿನ ಹೆಚ್ಚಳ, ವಿನಿಮಯ ದರಗಳ ಅಡ್ಡಾದಿಡ್ಡಿ ಚಲನೆ ಉದಯೋನ್ಮುಖ ಮಾರುಕಟ್ಟೆಯ ಆರ್ಥಿಕ ಸ್ಥಿರತೆ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಭಾರತದ ಕಳವಳವನ್ನು ಜಿ20 ಒಪ್ಪಿಕೊಂಡಿದೆ. ಈ ಸವಾಲುಗಳನ್ನು ಎದುರಿಸಲು ದೃಢ ನೀತಿಯ ಅಗತ್ಯವನ್ನು ಸೇಂಟ್‌ಪೀಟರ್ಸ್‌ಬರ್ಗ್ ಘೋಷಣೆ ಒತ್ತಿ ಹೇಳಿದೆ.

ಪ್ರಧಾನಿ ಅಭಿಪ್ರಾಯಕ್ಕೆ ಬೆಂಬಲ
2008ರ ಆರ್ಥಿಕ ಹಿನ್ನಡೆಗೆ ಪ್ರತಿಯಾಗಿ ಕೆಲವು ದೇಶಗಳು ತೆಗೆದುಕೊಂಡಿದ್ದ  ಹಣಕಾಸು ಉತ್ತೇಜನಾ ನೀತಿಗಳನ್ನು ಹಂತಹಂತವಾಗಿ ಹಿಂತೆಗೆದುಕೊಳ್ಳುವುದು ಅಗತ್ಯ ಎಂದು ಪ್ರಧಾನಿ ಸಿಂಗ್ ಹೇಳಿದ್ದರು. ಈ ಅಭಿಪ್ರಾಯಕ್ಕೆ ಶೃಂಗದಲ್ಲೂ ಬೆಂಬಲ ವ್ಯಕ್ತವಾಗಿದೆ. ವಿಶ್ವ ಆರ್ಥಿಕತೆಯನ್ನು ಚೇತರಿಕೆಯ ಹಾದಿಗೆ ತರುವ ಹಾಗೂ ಹಣಕಾಸು ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಜಿ20 ನಡುವೆ ಆರಂಭವಾದ ಸಹಭಾಗಿತ್ವದ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಆಧುನಿಕ ಇತಿಹಾಸ ಎದುರಿಸುತ್ತಿರುವ ಅತಿದೊಡ್ಡ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಜಂಟಿ ಕಾರ್ಯಯೋಜನೆ ಮೇಲೆ ಮತ್ತಷ್ಟು ಗಮನ ಹರಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ವಿಶ್ವ ಆರ್ಥಿಕ ಚೇತರಿಕೆ, ಉನ್ನತಮಟ್ಟದ ಬೆಳವಣಿಗೆ ಮತ್ತು ಉತ್ತಮ ಉದ್ಯೋಗಗಳು ನಮ್ಮ ತುರ್ತು ಅಗತ್ಯವಾಗಿದೆ. ಇದರ ಜತೆಗೆ, ಇತರೆ ದೇಶಗಳಿಗೆ ಹಾನಿಯುಂಟು ಮಾಡುವ ತಪ್ಪು ನೀತಿಗಳನ್ನು ದೂರವಿಟ್ಟು ದೀರ್ಘಾವಧಿಯ ಬೆಳವಣಿಗೆಯನ್ನು ಬಲಪಡಿಸಬೇಕಿದೆ ಎಂದು ಸೇಂಟ್‌ಪೀಟರ್ಸ್‌ಬರ್ಗ್ ಘೋಷಣೆ ಹೇಳಿದೆ.

ಭ್ರಷ್ಟಾಚಾರ ನಿಯಂತ್ರಣ
ಭ್ರಷ್ಚಾಚಾರ ನಿವಾರಣೆ ನಿಟ್ಟಿನಲ್ಲಿ ಜಿ20 ಶೃಂಗವು ಮಾಹಿತಿ ವಿನಿಮಯ ಮತ್ತು ಅಂತಾರಾಷ್ಟ್ರೀಯ ಸಹಕಾರಕ್ಕೆ ಮನವಿ ಮಾಡಿದೆ. ಸುಸ್ಥಿರ ಆರ್ಥಿಕ ಬೆಳವಣಿಗೆ ಮತ್ತು ಬಡತನ ನಿರ್ಮೂಲನೆ ಮೇಲೆ ಭ್ರಷ್ಟಾಚಾರ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಒಪ್ಪಿಕೊಂಡಿರುವ ಶೃಂಗ ಭ್ರಷ್ಟಾಚಾರವು ಆರ್ಥಿಕ ಸ್ಥಿರತೆ ಮೇಲೂ ಪರಿಣಾಮ ಬೀರುತ್ತದೆ ಎಂದಿದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕಾಗಿ ಜಿ20 ದೇಶಗಳ ನಡುವೆ ಮತ್ತಷ್ಟು ಸಹಭಾಗಿತ್ವಕ್ಕಾಗಿ ನೀತಿನಿಯಮಗಳನ್ನು ಅಭಿವೃದ್ಧಿಪಡಿಸುವ ಮತ್ತು ಅವುಗಳನ್ನು ಬಲಪಡಿಸುವ ಕಾರ್ಯವನ್ನು ಮುಂದುವರಿಸಬೇಕು. ಈ ನಿಟ್ಟಿನಲ್ಲಿ ಜಿ20 ದೇಶಗಳ ಜಾಲವನ್ನೂ ಸ್ಥಾಪಿಸುವ, ಅಂತಾರಾಷ್ಟ್ರೀಯ ಸಹಭಾಗಿತ್ವಕ್ಕಾಗಿ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ದೇಶಗಳು ಪರಸ್ಪರ ಕಾನೂನು ಸಹಕಾರಕ್ಕೂ ಒಪ್ಪಿಗೆ ನೀಡುವುದಾಗಿ ಘೋಷಿಸಿವೆ.

ತೆರಿಗೆ ಕಳ್ಳತನಕ್ಕೆ ಕಡಿವಾಣ
ತೆರಿಗೆ ಕಳ್ಳತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಮನಮೋಹನ ಸಿಂಗ್ ಸೇರಿ ಜಿ 20 ದೇಶದ ನಾಯಕರು ಶಪಥ ಮಾಡಿದ್ದಾರೆ. ತೆರಿಗೆ ಕಳ್ಳತನವನ್ನು ನಿಯಂತ್ರಿಸಲು ಮತ್ತು ಪೈಪೋಟಿಯ ತೆರಿಗೆ ನೀತಿಗಳಿಗೆ ಸಂಬಂಧಿಸಿ ನಿಯಮಗಳ ಬದಲಾವಣೆಗೆ ಒಪ್ಪಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳು ಎಲ್ಲಿ ಲಾಭಗಳಿಸುತ್ತವೆಯೋ ಅಲ್ಲೇ ತೆರಿಗೆ ಪಾವತಿಸುವಂತಾಗಬೇಕು ಎಂದು ಘೋಷಣೆ ಹೇಳಿದೆ. ಚಲನಶೀಲ ಆದಾಯದ ಮೇಲೆ ತೆರಿಗೆ ವಿಧಿಸುವುದು ಪ್ರಮುಖ ಸವಾಲಾಗಿದೆ ಎನ್ನುವುದನ್ನು ಒಪ್ಪಿಕೊಂಡಿರುವ ಜಿ20 ದೇಶಗಳು, ತಮ್ಮ ದೇಶದ ಕಾನೂನುಗಳು ಯಾವ ರೀತಿ ಬಿಇಪಿಎಸ್(ಬೇಸ್ ಎರೋಷನ್ ಆ್ಯಂಡ್ ಪ್ರಾಫಿಟ್ ಶಿಫ್ಟಿಂಗ್)ಗೆ ಅವಕಾಶ ಮಾಡಿಕೊಡುತ್ತವೆ ಎನ್ನುವುದನ್ನು ಪರಿಶೀಲಿಸಬೇಕಿದೆ. ಅಲ್ಲದೆ, ಅಂತಾರಾಷ್ಟ್ರೀಯ ಮತ್ತು ದೇಶೀಯ ಕಾನೂನುಗಳು ಬಹುರಾಷ್ಟ್ರೀಯ ಸಂಸ್ಥೆಗಳಿಗೆ ತೆರಿಗೆ ತಪ್ಪಿಸಲು ಅವಕಾಶ ನೀಡದಂತೆ ನೋಡಿಕೊಳ್ಳಬೇಕಿದೆ ಎಂದಿವೆ.

ಇತರೆ ಪ್ರಮುಖ ಘೋಷಣೆಗಳು
ವಿಶ್ವ ಆರ್ಥಿಕತೆಯನ್ನು ಬಲಪಡಿಸಲು ನಾವು ಒಗ್ಗಟ್ಟಿನ ಕ್ರಮ ಕೈಗೊಳ್ಳಲು ಬದ್ಧರಾಗಿದ್ದೇವೆ.
ಬೆಳವಣಿಗೆಯನ್ನು ಬಲಪಡಿಸುವುದು ಹಾಗೂ ಉದ್ಯೋಗ ಸೃಷ್ಟಿ ನಮ್ಮ ಪ್ರಮುಖ ಆದ್ಯತೆಯಾಗಿದೆ. ಹೇರಳ ಉದ್ಯೋಗಾವಕಾಶದ, ಸುಸ್ಥಿರ, ದೃಢ ಮತ್ತು ಸಮತೋಲಿತ ಬೆಳವಣಿಗೆಯ ಹಾದಿಗೆ ಮರಳುವ ನಿಟ್ಟಿನಲ್ಲಿ ನಾವು ಖಚಿತ ತೀರ್ಮಾನ ತೆಗೆದುಕೊಳ್ಳಲು ಬದ್ಧವಾಗಿದ್ದೇವೆ.
ಮುಕ್ತ ಮತ್ತು ನಿಯಮಾಧಾರಿತ ವಿಶ್ವ ಆರ್ಥಿಕ ವ್ಯವಸ್ಥೆಯನ್ನು ಮರುಸ್ಥಾಪಿಸುವ ಜವಾಬ್ದಾರಿಯನ್ನು ಹಂಚಿಕೊಳ್ಳಲಿದ್ದೇವೆ. ವಿಶ್ವ ಆರ್ಥಿಕ ಸವಾಲುಗಳನ್ನು ಎದುರಿಸಲು ನಾವು ಸಹಭಾಗಿತ್ವದಲ್ಲಿ ಕೆಲಸ ಮಾಡಲು ಬದ್ಧವಾಗಿದ್ದೇವೆ.
ಹಣಕಾಸು ಸುಸ್ಥಿರತೆಯ ಭರವಸೆಯೊಂದಿಗೆ ದೃಢ ಆರ್ಥಿಕ ಚೇತರಿಕೆಗೆ ಸೇಂಟ್ ಪೀಟರ್ಸ್‌ಬರ್ಗ್ ಕಾರ್ಯ ಯೋಜನೆಗೆ ಒಪ್ಪಿದ್ದೇವೆ. ಇದು ಬಲಿಷ್ಠ, ಸುಸ್ಥಿರ ಮತ್ತು ಸಮತೋಲಿತ ಬೆಳವಣಿಗೆ ಸಾಧಿಸಲು ನೆರವು ನೀಡುತ್ತದೆ.

ಸಿರಿಯಾ ವಿವಾದ ಒಮ್ಮತ ವಿಫಲ
ರಾಸಾಯನಿಕ ಅಸ್ತ್ರಗಳ ದಾಳಿಯಿಂದ ತನ್ನ ಬಂಡುಕೋರರ ದಮನಕ್ಕೆ ಮುಂದಾಗಿ ವಿಶ್ವದೆಲ್ಲೆಡೆ ತಲ್ಲಣ ಮೂಡಿಸಿದ ಸಿರಿಯಾ ವಿರುದ್ಧ ಮಿಲಿಟರಿ ದಾಳಿ ಮಾಡಬೇಕೇ, ಬೇಡವೇ ಎಂಬ ಬಗ್ಗೆ ಜಾಗತಿಕ ನಾಯಕರು ಒಮ್ಮತದ ನಿರ್ಧಾರಕ್ಕೆ ಬರಲು ವಿಫಲರಾದರು.
ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನ ಹದಿನೆಂಟನೆ ಶತಮಾನದ ಐತಿಹಾಸಿಕ ಹಾಗೂ ಆಕರ್ಷಕ ಕಾನ್‌ಸ್ಟಂಟಿನೋವಸ್ಕಿ ಅರಮನೆಯಲ್ಲಿ ನಡೆಯುತ್ತಿರುವ ಎಂಟನೆ ಜಿ-20 ಶೃಂಗಸಭೆಯಲ್ಲಿ ನಿಗದಿತ ಕಾರ್ಯಕ್ರಮ ಸೂಚಿಯಲ್ಲಿ ಸಿರಿಯಾ ವಿಷಯ ಚರ್ಚೆಯಲ್ಲಿ ಇರದಿದ್ದರೂ, ಎಲ್ಲ ದೇಶ-ದೇಶಗಳ ನಾಯಕರ ಮನಸ್ಸಿನ ಮೇಲ್ಪದರದಲ್ಲಿ ಮಾತ್ರ ಈ ವಿಷಯವೇ ಕೆನೆಗಟ್ಟಿತ್ತು.
ಸಿರಿಯಾ ವಿರುದ್ಧ ದಾಳಿಗೆ ಸೆನೆಟ್ ಅನುಮತಿ ಪಡೆದಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಜಿ-20 ಶೃಂಗಸಭೆಯ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜಾಗತಿಕ ನಾಯಕರ ಬೆಂಬಲಕ್ಕೆ ಮುಂದಾಗಿದ್ದರು. ಆದರೆ ಒಬಾಮ ಅವರ ಈ ಕ್ರಮಕ್ಕೆ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಇದು ಅಮೆರಿಕದ ಪಾಲಿಗೆ ಆದ ತಾತ್ಕಾಲಿಕ ಹಿನ್ನಡೆ ಎಂದೇ ಭಾವಿಸಲಾಗಿದೆ.
ಅಮೆರಿಕದ ಕ್ರಮಕ್ಕೆ ಜಿ-20 ಶೃಂಗಸಭೆಯ ಆತಿಥೇಯ ದೇಶ ರಷ್ಯಾದ ಅಧ್ಯಕ್ಷ ಪುಟಿನ್ ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿರುವುದು ಗಮನಾರ್ಹ. ಜಿ-20 ಶೃಂಗಸಭೆಯ ಮೊದಲ ದಿನವಾದ ಗುರುವಾರದ ಕಲಾಪ ಮುಗಿದ ಬಳಿಕ ಎಲ್ಲ ದೇಶಗಳ ನಾಯಕರು ರಾತ್ರಿ ಭೋಜನಕೂಟಕ್ಕೆ ಸೇರಿದಾಗ ಸಿರಿಯಾ ವಿಷಯ ಪ್ರಧಾನವಾಗಿ ಚರ್ಚೆಗೆ ಬಂದಿತು.  
ಈ ಕೂಟದಲ್ಲಿ ಹಾಜರಿದ್ದ ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಶೃಂಗಸಭೆಯ ಪೂರ್ವಸಿದ್ಧತಾ ಪ್ರಕ್ರಿಯೆಯಲ್ಲಿ ಭಾರತದ ಪ್ರತಿನಿಧಿ ಮಾಂಟೆಕ್‌ಸಿಂಗ್ ಅಹ್ಲುವಾಲಿಯ ಪತ್ರಕರ್ತರಿಗೆ ವಿವರಗಳನ್ನು ನೀಡುತ್ತಾ, 'ಸಿರಿಯಾ ವಿರುದ್ಧ ಯಾವುದೇ ಕ್ರಮಕೈಗೊಳ್ಳುವದಿದ್ದರೂ ಅದು ವಿಶ್ವಸಂಸ್ಥೆ ರೂಪಿಸಿದ ಚೌಕಟ್ಟಿನೊಳಗೇ ಇರಬೇಕು ಎಂದು ಭಾರತದ ಪ್ರಧಾನಿ ಡಾ. ಮನಮೋಹನಸಿಂಗ್ ಹೇಳಿದ್ದಾರೆ' ಎಂದರು.
ಸಿರಿಯಾಕ್ಕೆ ಸಂಬಂಧಿಸಿದಂತೆ ಅಮೆರಿಕ ಹೆಚ್ಚು -ಕಮ್ಮಿ ಏಕಾಂಗಿಯಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ರಷ್ಯಾ ಪ್ರತಿಪಾದಿಸಿದ ನಿಲುವನ್ನು ಜಿ-20 ಶೃಂಗದಲ್ಲಿ ಭಾಗವಹಿಸಿದ ಉಳಿದ ದೇಶಗಳು ತಳೆದಿವೆ. ಫ್ರಾನ್ಸ್ ಮಾತ್ರ ಅಮೆರಿಕ ಬೆಂಬಲಕ್ಕೆ ನಿಂತ ಏಕೈಕ ದೇಶವಾಗಿದೆ. ಜಿ-20 ಶೃಂಗಸಭೆಯನ್ನು ತಮ್ಮ ಪರವಾಗಿ ಪರಿವರ್ತಿಸಿಕೊಳ್ಳುವ ಒಬಾಮ ಲೆಕ್ಕಾಚಾರ ಸದ್ಯಕ್ಕೆ ತಲೆಕೆಳಗಾಗಿದೆ.
ಸಿರಿಯಾ ಮೇಲೆ ದಾಳಿಯನ್ನು ತಾನೇಕೆ ಬೆಂಬಲಿಸುತ್ತಿಲ್ಲ ಎಂಬುದಕ್ಕೆ ಚೀನಾ ಪ್ರಬಲ ಕಾರಣಗಳನ್ನು ನೀಡಿದೆ. 'ಈಗ ಮಿಲಿಟರಿ ಕಾರ್ಯಾಚರಣೆಗೆ ಮುಂದಾದರೆ ಅದು ಜಾಗತಿಕ ಹಣಕಾಸು ಪರಿಸ್ಥಿತಿ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ತೈಲ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದು ಜಗತ್ತಿನ ಎಲ್ಲ ದೇಶಗಳ ಮೇಲೆ ದುಷ್ಪರಿಣಾಮ ಬೀರಲಿದೆ. ಆರ್ಥಿಕ ಸ್ಥಿತಿ ಈಗಾಗಲೇ ಡೋಲಾಯಮಾನವಾಗಿರುವ ಈ ದಿನಗಳಲ್ಲಿ ಇದು ಉತ್ತಮ ಕ್ರಮವೆನಿಸಿಕೊಳ್ಳುವುದಿಲ್ಲ' ಎಂದು ಹೇಳುವ ಮೂಲಕ ಚೀನಾದ ನಾಯಕರು ಅಮೆರಿಕದ ಆಸೆಗೆ ತಣ್ಣೀರೆರಚಿದ್ದಾರೆ.
ಒಂದು ವೇಳೆ ದಾಳಿ ಮಾಡುವುದಾದರೆ, ಅದಕ್ಕೆ ಸ್ಪಷ್ಟ ಕಾರಣಗಳನ್ನು ನೀಡಬೇಕು. ಅಲ್ಲದೇ ಸಿರಿಯಾ ರಾಸಾಯನಿಕ ಅಸ್ತ್ರಗಳನ್ನು ಬಳಸಿದೆಯೆಂಬುದನ್ನು ಸಾಬೀತುಪಡಿಸಬೇಕು ಎಂದು ಚೀನಾ ಹೇಳಿದೆ.
ಜಪಾನ್, ದಕ್ಷಿಣ ಕೊರಿಯಾ, ಬ್ರಿಟನ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ಉಳಿದ ದೇಶಗಳೂ ಅಮೆರಿಕದ ನಿರ್ಧಾರವನ್ನು ವಿರೋಧಿಸಿವೆ. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಬ್ರಿಟನ್, ಸಿರಿಯಾ ರಾಸಾಯನಿಕ ಅಸ್ತ್ರಗಳನ್ನು ಬಳಸಿರುವ ಬಗ್ಗೆ ಹೊಸ ಪುರಾವೆಗಳು ಸಿಕ್ಕಿವೆ ಎಂದು ಹೇಳಿವೆ.

- ವಿಶ್ವೇಶ್ವರ ಭಟ್
ಕನ್ನಡಪ್ರಭ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ