ವಿಷಾಹಾರ ಸೇವಿಸಿ 60ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
ಲಿಂಗಸ್ಗೂರು: ತಾಲೂಕಿನ ಹಾಲಬಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದ ವಿಷಾಹಾರ ಸೇವನೆಯಿಂದ 60ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡಿದ್ದು, 15 ಮಕ್ಕಳನ್ನು ಲಿಂಗಸ್ಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ ಘಟನೆ ಶುಕ್ರವಾರ ಜರುಗಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಸುಮಾರು 253 ಮಕ್ಕಳ ದಾಖಲಾತಿಯಿದೆ. ಶುಕ್ರವಾರ 1- 4ನೇ ತರಗತಿಯ ಸುಮಾರು 100ಕ್ಕೂ ಹೆಚ್ಚು ಮಕ್ಕಳು ಬಿಸಿಯೂಟ ಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದರು. ಅವರಲ್ಲಿ 60ಕ್ಕೂ ಹೆಚ್ಚು ಮಕ್ಕಳು ಬಿಸಿಯೂಟ ಸೇವಿಸುವಲ್ಲಿ ನಿರತರಾಗಿದ್ದರು. ಇದೇ ವೇಳೆ ಮಕ್ಕಳು ಅಸ್ವಸ್ಥಗೊಂಡ ಸುದ್ದಿ ತಿಳಿದು ಬಿಸಿಯೂಟ ನೀಡುವುದನ್ನು ಸ್ಥಗಿತಗೊಳಿಸಲಾಯಿತು.
ಸಾಂಬರ್ನಲ್ಲಿ ಹಲ್ಲಿ: ಕಾರಣ ತಿಳಿದಾಗ ಮಧ್ಯಾಹ್ನದ ಬಿಸಿಯೂಟ ಅಡುಗೆ ತಯಾರಿಸಿದ ಅಡುಗೆದಾರರ ನಿರ್ಲಕ್ಷ್ಯದಿಂದ ಸಾಂಬರ್ ಪಾತ್ರೆ ಮುಚ್ಚದೆ ಹಾಗೆಯೆ ಬಿಟ್ಟಿದ್ದಾರೆ. ಈ ಸಮಯದಲ್ಲಿ ಹಲ್ಲಿಯೊಂದು ಸಾಂಬರಿನಲ್ಲಿ ಬಿದ್ದಿರುವುದಾಗಿ ತಿಳಿದು ಬಂದಿತು. ಕೂಡಲೇ ಅಸ್ವಸ್ಥ ಮಕ್ಕಳನ್ನು ಲಿಂಗಸ್ಗೂರು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತರಲಾಯಿತು. ಆಸ್ಪತ್ರೆಗೆ ಕರೆ ತಂದ ಮಕ್ಕಳಲ್ಲಿ ಸುಮಾರು 45 ಮಕ್ಕಳು ಚಿಕಿತ್ಸೆ ಪಡೆದು ತಮ್ಮ ಗ್ರಾಮಕ್ಕೆ ತೆರಳಿದ್ದಾರೆ. ಇನ್ನುಳಿದ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆಂದು ಹಾಲಬಾವಿ ಮುಖ್ಯಗುರು ಹಾಜಿಬಾಬು ತಿಳಿಸಿದ್ದಾರೆ.