ಸಾಮೂಹಿಕ ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ
ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪಿಗಳಿಗೆ ಬೆಂಗಳೂರಿನ ಐದನೇ ತ್ವರಿತ ನ್ಯಾಯಾಲಯ...
ಕನ್ನಡಪ್ರಭ ವಾರ್ತೆ ಬೆಂಗಳೂರು ಸೆ.6
ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪಿಗಳಿಗೆ ಬೆಂಗಳೂರಿನ ಐದನೇ ತ್ವರಿತ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 376 (2)(ಜಿ) ಅನ್ವಯ ಜೀವಾವಧಿ ಶಿಕ್ಷೆ, ಸೆಕ್ಷನ್ 323 ಅನ್ವಯ 1 ವರ್ಷ ಶಿಕ್ಷೆ, ಸೆಕ್ಷನ್ 324 ಅನ್ವಯ ಮೂರು ವರ್ಷ ಶಿಕ್ಷೆ, ಸೆಕ್ಷನ್ 366 ಅನ್ವಯ 10 ವರ್ಷ ಶಿಕ್ಷೆ ಹಾಗೂ ರು. 1 ಸಾವಿರ ದಂಡ, ಸೆಕ್ಷನ್ 427 ಅನ್ವಯ 2 ವರ್ಷಗಳ ಶಿಕ್ಷೆ, ಸೆಕ್ಷನ್ 506 (ಬಿ) ಅನ್ವಯ 7 ವರ್ಷ ಶಿಕ್ಷೆ, ಸೆಕ್ಷನ್ 397 ಅನ್ವಯ 7 ವರ್ಷಗಳ ಶಿಕ್ಷೆ ವಿಧಿಸಿ ನ್ಯಾಯಾಧೀಶ ಕೃಷ್ಣಮೂರ್ತಿ.ಬಿ ಸಂಗಣ್ಣನವರ್ ಶುಕ್ರವಾರ ಪ್ರಕಟಿಸಿದ್ದಾರೆ.
ರಾಮನಗರ ಜಿಲ್ಲೆ ಕೈಲಾಂಚ ಹೋಬಳಿ ಮೆಟ್ಟಾಕದೊಡ್ಡಿಯ ಶಿವಣ್ಣ (20), ಯಳಯಯ್ಯ (23), ಈರ (20), ದೊಡ್ಡೀರಯ್ಯ (19), ಮದ್ದೂರ (20) ಮತ್ತು ರಾಮ (21) ಶಿಕ್ಷೆಗೆ ಗುರಿಯಾದವರು.
ದೆಹಲಿ ಪ್ರಕರಣ ನಂತರ ಅತ್ಯಾಚಾರ ಆರೋಪಿಗಳ ವಿರುದ್ಧ ದೇಶದಲ್ಲೇ ಅತ್ಯಂತ ತ್ವರಿತವಾಗಿ ವಿಚಾರಣೆ ನಡೆಸಿ ಶಿಕ್ಷೆ ಪ್ರಕಟಿಸಿದ ಪ್ರಕರಣ ಇದಾಗಿದ್ದು, ನ್ಯಾಯಾಲಯ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲ್ಪಟ್ಟಿದೆ. ಈ ಪ್ರಕರಣದಲ್ಲಿ ಸಾರ್ವಜನಿಕರ ಅಭಿಯೋಜಕರಾಗಿ ಸಂಜೀವ್ ಕುಮಾರ್ ವೆಂಕಟರಮಣ ಭಟ್ಟ ವಾದ ಮಂಡಿಸಿದ್ದರು.
ಆರೋಪಿಗಳು ಇರುಳಿಗ ಸಮುದಾಯದವರಾಗಿದ್ದು ಶ್ರೀಗಂಧ ಕಳ್ಳ ಸಾಗಣೆ ಮಾಡುತ್ತಿದ್ದರು.
2012ರ ಅಕ್ಟೋಬರ್ 13ರಂದು ಜ್ಞಾನಭಾರತಿ ಆವರಣದಲ್ಲಿ ರಾತ್ರಿ ಪ್ರಿಯಕರನೊಂದಿಗೆ ಕಾರಿನಲ್ಲಿ ಮಾತನಾಡಿಕೊಂಡು ಕುಳಿತಿದ್ದಾಗ ಬಂದೆರಗಿದ 8 ಮಂದಿ ದುಷ್ಕರ್ಮಿಗಳು ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದರು.
ಪರಿಹಾರ ಕೊಡುವುದರಿಂದ ನೊಂದ ಯುವತಿಗೆ ಉಂಟಾಗಿರುವ ದೈಹಿಕ ಹಾಗೂ ಮಾನಸಿಕ ನೋವು ನಿವಾರಿಸಲು ಸಾಧ್ಯವಿಲ್ಲ. ಆದರೂ ಸೂಕ್ತ ಪರಿಹಾರ ನೀಡಬೇಕು ಎಂದು ತೀರ್ಪು ನೀಡುವ ಸಂದರ್ಭದಲ್ಲಿ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ನೊಂದವರಿಗೆ ಪರಿಹಾರ ನೀಡಲು ಆರೋಪಿಗಳಿಂದ ಸಾಧ್ಯವಾಗದಿದ್ದಲ್ಲಿ, ಐಪಿಸಿ ಸೆಕ್ಷನ್ 357 (3) ಅನ್ವಯ ಕರ್ನಾಟಕ ಅಪರಾಧಿಕ ಗಾಯ ಪರಿಹಾರ ಮಂಡಳಿಯಿಂದ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ನ್ಯಾಯಾಧೀಶರು ಸೂಚಿಸಿದರು.
'ಕಾನೂನು ವಿದ್ಯಾರ್ಥಿ ಮಾತ್ರವಲ್ಲ ಯಾವುದೇ ವ್ಯಕ್ತಿಯ ಮೇಲೆ ಇಂಥ ಕೃತ್ಯ ನಡೆದಾಗ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಇಂಥ ಕೃತ್ಯ ಎಸಗುವವರಿಗೆ ಕಠಿಣ ಸಂದೇಶ ರವಾನೆಯಾಗಬೇಕು' ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. 'ಆರೋಪಿಗಳು ಸಭ್ಯ ಸಮಾಜದ ವಿರುದ್ಧ ಮಾಡಿದ ಹೇಯ ಕೃತ್ಯ ಇದು. ಇವರು ಈ ಹಿಂದೆಯೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನುವ ಅಂಶವನ್ನು ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರ ಗಮನಕ್ಕೆ ತರಲಾಗಿತ್ತು. ಆರೋಪಿಗಳ ವಿರುದ್ಧ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು' ಎಂದು ಅಭಿಯೋಜಕ ಎಸ್.ವಿ.ಭಟ್ಟ ತಿಳಿಸಿದರು.
ಪ್ರಕರಣದ ಮೊದಲನೇ ಆರೋಪಿ ರಾಜಾ ಎಂಬಾತ ತಲೆಮರಿಸಿಕೊಂಡಿದ್ದಾನೆ. ತನಿಖಾಧಿಕಾರಿಗಳು ಆರೋಪ ಪಟ್ಟಿಯಲ್ಲಿ ಈ ವಿಷಯ ಉಲ್ಲೇಖಿಸಿದ್ದಾರೆ. ಮತ್ತೊಬ್ಬ ಆರೋಪಿ ಬಾಲಕನಾಗಿದ್ದು ಆತನನ್ನು ಬಾಲಾಪರಾಧಿ ನ್ಯಾಯ ಮಂಡಳಿ ಮುಂದೆ ವಿಚಾರಣೆಗೆ ಒಳಪಡಿಸಲಾಗಿದೆ.
31 ಸಾಕ್ಷಿ ವಿಚಾರಣೆ: ಸಮನ್ಸ್ ಜಾರಿ ಮಾಡಿದ ತಕ್ಷಣ ಸಾಕ್ಷಿದಾರರು ಸ್ವಯಂಪ್ರೇರಿತರಾಗಿ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ನುಡಿದಿದ್ದಾರೆ. ಒಟ್ಟು 31 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. 79 ದಾಖಲೆಗಳನ್ನು , 74 ಭೌತಿಕ ವಸ್ತುಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಘಟನೆಯಿಂದ ತೀವ್ರವಾಗಿ ನೊಂದಿದ್ದರೂ ಯುವತಿ ಪೊಲೀಸ್ ಹಾಗೂ ನ್ಯಾಯಾಲಯದ ವಿಚಾರಣೆ ವೇಳೆ ಘಟನೆಯನ್ನು ಯಥಾವತ್ತಾಗಿ ತಿಳಿಸಿದ್ದಳು. ಮಾತ್ರವಲ್ಲ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಎಂದು ಮನವಿ ಮಾಡಿದ್ದಳು.
ಮಾನವೀಯತೆ ಇಲ್ಲ: ಹೀನ ಕೃತ್ಯ ಮಾಡುವ ಬದಲು ತನ್ನನ್ನು ಬಿಟ್ಟು ಬಿಡಿ ಅಥವಾ ಕೊಲೆ ಮಾಡಿ ಎಂದು ಯುವತಿ ಅಂಗಲಾಚಿದರೂ ಅಪರಾಧಿಗಳು ಮಾನವೀಯತೆ ತೋರಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ನೀಡುವ ಈ ಶಿಕ್ಷೆ ಸಮಾಜಕ್ಕೆ ಮಾದರಿಯಾಗಬೇಕು. ಇಂತಹ ಅಪರಾಧ ಪ್ರಕರಣಗಳು ನಡೆದಾಗ ಎಲ್ಲರೂ ತಡೆಯಲು ಮುಂದಾಗಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನೇಪಾಳದಿಂದ ಶಿಕ್ಷಣ ಪಡೆಯಲು ಬಂದಿದ್ದ ಯುವತಿ ಬೆಂಗಳೂರಿನಲ್ಲಿ ಸುರಕ್ಷಿತವಾಗಿರುವ ಭಾವನೆ ಹೊಂದಿದ್ದಳು. ಆದರೆ ಹೇಯ ಕೃತ್ಯದಿಂದ ಈ ಪ್ರದೇಶ, ದೇಶಕ್ಕೆ ವಿಶ್ವಮಟ್ಟದಲ್ಲಿ ಕೆಟ್ಟ ಹೆಸರು ಬಂದಿದೆ. ಹೀಗಾಗಿ ಆಕೆ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಸ್ವದೇಶಕ್ಕೆ ಹಿಂದಿರುಗಿದ್ದಾಳೆ.
ಪ್ರತಿಕ್ರಿಯೆ ಇಲ್ಲ...
ಮಧ್ಯಾಹ್ನ 2 ಗಂಟೆಗೆ ನ್ಯಾಯಾಧೀಶರು ಆರೋಪಿಗಳ ವಿರುದ್ಧ ಶಿಕ್ಷೆ ಪ್ರಕಟಿಸುತ್ತಿದ್ದಂತೆ ಎಲ್ಲರೂ ಕೈಮುಗಿದು ನಿಂತಿದ್ದರು. ಇಂಗ್ಲಿಷ್‌ನಲ್ಲಿ ಶಿಕ್ಷೆ ಓದಿ ಮುಗಿಸಿದ ಬಳಿಕ ನ್ಯಾಯಾಧೀಶರು ಎಲ್ಲಾ ಆರೋಪಿಗಳನ್ನು ಉದ್ದೇಶಿಸಿ ನಿಮಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದರು. ಆದರೆ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ಪ್ರಕಟಿಸಿದರೂ ಆರೋಪಿಗಳ ಮುಖದಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
ಹೀನ ಕೃತ್ಯ ಮಾಡುವ ಬದಲು ತನ್ನನ್ನು ಬಿಟ್ಟು ಬಿಡಿ ಅಥವಾ ಕೊಲೆ ಮಾಡಿ ಎಂದು ಅಂಗಲಾಚಿದರೂ ಅಪರಾಧಿಗಳು ಮಾನವೀಯತೆ ತೋರಿಲ್ಲ. ಈ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ನೀಡುವ ಶಿಕ್ಷೆ ಸಮಾಜಕ್ಕೆ ಮಾದರಿಯಾಗಬೇಕು. ಇಂತಹ ಅಪರಾಧ ಪ್ರಕರಣಗಳನ್ನು ತಡೆಯಲು ಎಲ್ಲರೂ ಮುಂದಾಗಬೇಕು.
- ಕೃಷ್ಣಮೂರ್ತಿ.ಬಿ.ಸಂಗಣ್ಣನವರ್, ನ್ಯಾಯಾಧೀಶರು