ಗ್ರಾಮೀಣ ಮಕ್ಕಳಿಗೆ ಕ್ಷೀ(ಣ)ರ'ಭಾಗ್ಯ'
ಕ.ಪ್ರ.ವಾರ್ತೆ ಬೆಂಗಳೂರು ಸೆ. 7
ಸರ್ಕಾರದ ಮಹತ್ವದ ಯೋಜನೆಯಾದ 'ಕ್ಷೀರಭಾಗ್ಯ'ದ ಭಾಗ್ಯ ನಗರದ ಮಕ್ಕಳಿಗೆ ಹೊರತು ನಗರದ ಹೊರ ಜಿಲ್ಲೆಗಳಿಗಿದು 'ಕ್ಷೀಣಭಾಗ್ಯ'ವಾಗಿದೆ.
ಏಕೆಂದರೆ, ಸರ್ಕಾರದ ಅಡುಗೆ ಕೇಂದ್ರಗಳಲ್ಲಿರುವ ಶಾಲೆಗಳ ಮಕ್ಕಳಿಗೆ ಶೇ.100ರಷ್ಟು ಕ್ಷೀರಭಾಗ್ಯ ಯೋಜನೆ ಭಾಗ್ಯ ದೊರೆಯುತ್ತಿದ್ದರೆ, ಎನ್ಜಿಓಗಳು ರಾಮನಗರ, ದಕ್ಷಿಣ ಕನ್ನಡ, ಧಾರವಾಡ ಜಿಲ್ಲೆಗಳ ಗ್ರಾಮೀಣ ಶಾಲಾ ಮಕ್ಕಳಿಗೆ ನೀಡುತ್ತಿರುವ ಹಾಲು ಪೂರೈಕೆ 'ಕ್ಷೀಣಭಾಗ್ಯ' ಯೋಜನೆಯಾಗಿ ಪರಿಣಮಿಸಿದೆ.
ಸಾರ್ವಜನಿಕ ಶಿಕ್ಷಣಇಲಾಖೆ ಸಿದ್ಧಪಡಿಸಿರುವ ಕ್ಷೀರಭಾಗ್ಯ ಯೋಜನೆ ಶಾಲಾ ಮಕ್ಕಳಿಗೆ ಶಾಲಾ ವಿತರಿಸುವ ವಿವರದ ಪಟ್ಟಿಯಂತೆ ಆಗಸ್ಟ್ ಅಂತ್ಯದ ವೇಳೆಗೆ ರಾಜ್ಯದಲ್ಲಿರುವ 64,94,394 ಶಾಲಾ ಮಕ್ಕಳಿಗೆ ಎನ್ಜಿಒ ಮತ್ತು ಸರ್ಕಾರ ವಿತರಣೆ ಎರಡು ಸೇರಿ ಕ್ಷೀರಭಾಗ್ಯ ಪಡೆಯುಬೇಕಿತ್ತು. ಈ ಪೈಕಿ 60,51,063 ಮಕ್ಕಳ ಸಂಖ್ಯೆ ಹಾಲು ಪಡೆದುಕೊಳ್ಳುತ್ತಿದ್ದಾರೆ. 4,43,331 ಮಕ್ಕಳಿಗೆ ಹಾಲು ಪೂರೈಕೆ ಬಾಕಿ ಉಳಿದಿದೆ.
50,385 ಅಡುಗೆ ಮನೆ ಹೊಂದಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಸಂಪೂರ್ಣವಾಗಿ ಹಾಲು ಪೂರೈಕೆಯಾಗುತ್ತಿದ್ದರೆ, ಸರ್ಕಾರೇತರ ಸಂಸ್ಥೆಗಳು ಹಾಲು ಪೊರೈಸಬೇಕಾದ 5881 ಶಾಲೆಗಳ ಪೈಕಿ 3507 ಶಾಲೆಗಳಿಗೆ ಶೇ.100ರಷ್ಟು ಪೂರೈಕೆಯಾಗುತ್ತಿದ್ದು, ಉಳಿದ 2374 ಶಾಲೆಗಳಿಗೆ ಸಮರ್ಪಕವಾಗಿ ಹಾಲು ಪೂರೈಕೆಯಾಗುತ್ತಿಲ್ಲ.
ಕ್ಷೀಣ ಭಾಗ್ಯ: ಕ್ಷೀರಭಾಗ್ಯ ಯೋಜನೆ ಸಮರ್ಪಕವಾಗಿ ಜಾರಿ ಮಾಡಲು ಸರ್ಕಾರೇತರ ಸಂಘ ಸಂಸ್ಥೆಗಳನ್ನು ಸರ್ಕಾರ ಉಪಯೋಗಿಸಿಕೊಂಡಿದೆ. ಈ ಎನ್ಜಿಒಗಳು ಮಧ್ಯಾಹ್ನದ ಬಿಸಿಯೂಟದ ಜತೆಗೆ ಮಕ್ಕಳಿಗೆ ಹಾಲು ಸಹ ಪೂರೈಕೆ ಮಾಡುತ್ತವೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಎನ್ಜಿಒಗಳು ದೊರೆಯದೇ ಇರುವುದರಿಂದ ಅಂತಹ ಜಿಲ್ಲೆಯ ಮಕ್ಕಳು 'ಕ್ಷೀರಭಾಗ್ಯ'ದಿಂದ ವಂಚಿತರಾಗಿದ್ದಾರೆ.
ರಾಮನಗರದಲ್ಲಿ 20 ಶಾಲೆಗಳು, ದಕ್ಷಿಣ ಕನ್ನಡಜಿಲ್ಲೆಯಲ್ಲಿ 149 ಶಾಲೆಗಳು, ಧಾರವಾಡದಲ್ಲಿರುವ 1087 ಶಾಲೆಗಳಿಗೆ ಕ್ಷೀರಭಾಗ್ಯ ಇಲ್ಲವಾಗಿದೆ. ಕೆಲವು ಜಿಲ್ಲೆಗಳಲ್ಲಿ ಎನ್ಜಿಓಗಳು ಯಾವ ರೀತಿ ಹಾಲು ಪೂರೈಕೆ ಮಾಡುವುದು ಎಂದು ಗೊಂದಲದಲ್ಲಿರುವುದರಿಂದ ಈ ಸಮಸ್ಯೆ ತಲೆದೋರಿದೆ.
ಮೂಲ ಸೌಕರ್ಯದ ಕೊರತೆ: ಸರ್ಕಾರ ಇದೇ ಮೊದಲು ಕ್ಷೀರ ಭಾಗ್ಯ ಯೋಜನೆ ಜಾರಿಗೊಳಿಸಿರುವುದರಿಂದ ಕೆಲವೊಂದು ಎಡರು ತೊಡರುಗಳು ಉಂಟಾಗುವುದು ಸಾಮಾನ್ಯ. ಅಲ್ಲದೆ, ಸರ್ಕಾರ ಹಾಲನ್ನು ಟೆಟ್ರಾ ಪ್ಯಾಕ್ಗಳ ಮೂಲಕ ನೀಡುವ ಬಗ್ಗೆಯೂ ಚಿಂತಿಸಿತ್ತು. ಈ ಎಲ್ಲಾ ಗೊಂದಲದ ನಡುವೆ ಎನ್ಜಿಓಗಳು ಯಾವ ರೀತಿಯಲ್ಲಿ ಹಾಲಿನ ಪುಡಿ ಬಳಸಿ ಕಾಯಿಸುವುದು ಮತ್ತು ಸರಬರಾಜು ಹೇಗೆ ಮಾಡಬೇಕು ಎಂಬ ಬಗ್ಗೆ ಚಿಂತನೆ ಇತ್ತು. ಜತೆಗೆ ಹಾಲು ಕಾಯಿಸಲು ಬೇಕಾದ ಪಾತ್ರೆಗಳು ತೆಗೆದುಕೊಳ್ಳುವುದು ಸ್ವಲ್ಪ ತಡವಾದ್ದರಿಂದ ಬಹುತೇಕ ಕಡೆ ವಿತರಿಸುವುದು ತಡವಾಯಿತು ಎನ್ನುತ್ತಾರೆ ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್.
ಸರ್ಕಾರದ ಲೆಕ್ಕ: ಕರ್ನಾಟಕ 2013- 14ನೇ ಸಾಲಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ 18 ಗ್ರಾಂ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ 150 ಮಿಲಿ ಲೀಟರ್ ಹಾಲನ್ನು ವಾರದಲ್ಲಿ ನೀಡುವುದು ಕ್ಷೀರ ಭಾಗ್ಯವಾಗಿದೆ. ಒಟ್ಟಾರೆ 64,94,394 ಮಕ್ಕಳಿಗೆ ಈ ಹಾಲನ್ನು ನೀಡುವ ಗುರಿ ಇದೆ.
ಈ ಯೋಜನೆ ವೆಚ್ಚ
ಪದಾರ್ಥ ವಿವರ ಪರಿಣಾಮ ಮೊತ್ತ
ಹಾಲಿನ ಪುಡಿ 18 ಗ್ರಾಂ 4.05
ಸಕ್ಕರೆ 10 ಗ್ರಾಂ 0.32
ಇಂಧನ - 0.15
ಇತರೆ 0.12 0.12
ಒಟ್ಟು 4.64
ಅಡುಗೆಯವರಿಗೆ ನೀಡುವ ಗೌರವ ಸಂಭಾವನೆ 100
ಹಾಲಿನ ಪುಡಿ ನೀಡುವಲ್ಲಿ ಕೊಂಚ ವಿಳಂಬವಾದ ಹಿನ್ನೆಲೆಯಲ್ಲಿ ಕೆಲವು ಶಾಲಾ ಮಕ್ಕಳಿಗೆ ಹಾಲು ವಿತರಿಸುವುದು ತಡವಾಯಿತು. ಇದೀಗ ಎಲ್ಲಾ ಜಿಲ್ಲೆಗಳಿಗೆ ಸಮರ್ಪಕವಾಗಿ ಪುಡಿ ಪೂರೈಕೆ ಮಾಡುತ್ತಿರುವುದರಿಂದ ಮುಂದೆ ಈ ಸಮಸ್ಯೆ ಉಂಟಾಗುವುದಿಲ್ಲ.
- ಮೋಹಮದ್ ಮೋಸಿನ್, ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ
- ದೇವರಾಜ್ ಎಲ್