ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪಿಎಂ ಹುದ್ದೆಗೆ ರಾಹುಲ್ ಬೆಸ್ಟ್

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ಹುದ್ದೆಗೆ ಅರ್ಹವ್ಯಕ್ತಿ ಎಂದು ...

Mainashree
Updated On : 8 Sept 2013, 2:49 am

- ಪ್ರಧಾನಮಂತ್ರಿಯವರ ವಿಶೇಷ ವಿಮಾನದಲ್ಲಿ
(ಸೇಂಟ್ ಪೀಟರ್ಸ್‌ಬರ್ಗ್‌ನಿಂದ ಹೊಸದಿಲ್ಲಿ ಮಾರ್ಗ) ಸೆ.7

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ಹುದ್ದೆಗೆ ಅರ್ಹವ್ಯಕ್ತಿ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದರು.
ರಷ್ಯಾದ ಸೇಂಟ್‌ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಂಡು ಶನಿವಾರ ಸ್ವದೇಶಕ್ಕೆ ಮರಳುವಾಗ ವಿಶೇಷ ವಿಮಾನದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, 2014ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದಿಂದ ಅರ್ಹ ಅಭ್ಯರ್ಥಿಯಾಗಿದ್ದಾರೆ. ಈ ಅಭಿಪ್ರಾಯವನ್ನು ನಾನು ಈ ಮೊದಲು ಹೇಳಿರುವುದಾಗಿ ಪ್ರಧಾನಿ ತಿಳಿಸಿದರು.
ರಾಹುಲ್ ಗಾಂಧಿ ಅವರ ನಾಯಕತ್ವದಡಿಯಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡುವುದು ಸಂತಸದ ಸಂಗತಿ ಎಂದು ಎರಡು ಅವಧಿಗೆ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಸಿಂಗ್ ಹೇಳಿದರು.
ಕಾಂಗ್ರೆಸ್‌ನ ಹಲವು ನಾಯಕರು ರಾಹುಲ್ ಗಾಂಧಿ ಅವರೇ 2014ರ ಲೋಕಸಭೆ ಚುನಾವಣೆಯ ನೇತೃತ್ವ ವಹಿಸಬೇಕೆಂಬ ಇಂಗಿತ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮೂರನೆ ಅವಧಿಗೂ ತಾವೇ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆಯಿದೆಯಾ ಎಂಬ ಪ್ರಶ್ನೆಗೆ ಪ್ರಧಾನಿ ಡಾ. ಸಿಂಗ್ ಉತ್ತರಿಸಿದರು.
2ಜಿ ಹಗರಣದ ಸಂದರ್ಭದಲ್ಲಿ ಹೇಳಿದಂತೆ ಕಲ್ಲಿದ್ದಲು ಹಗರಣದಲ್ಲೂ ತನಿಖೆಗೊಳಪಡಲು ಸಿದ್ಧ ಎಂದು ನೀವು ಹೇಳಬಾರದೇಕೆ ಎಂಬ ಪತ್ರಕರ್ತರ ಪ್ರಶ್ನೆಗೆ, ನನ್ನ ವರ್ತನೆ, ಕಾರ್ಯವೈಖರಿ ಬಗ್ಗೆ ವಿಮರ್ಶಿಸದಂತೆ ನಾನು ಯಾರನ್ನೂ ತಡೆದಿಲ್ಲ ಎಂದು ಹೇಳಿ ಜಾರಿಕೊಂಡರು.
ಪಾಕ್ ಪ್ರಧಾನಿ ಭೇಟಿ ತೀರ್ಮಾನವಿಲ್ಲ: ಇನ್ನು ಮೂರು ವಾರಗಳಲ್ಲಿ ವಿಶ್ವಸಂಸ್ಥೆಯ ಮಹಾಅಧಿವೇಶನದ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರನ್ನು ಭೇಟಿ ಮಾಡಬಾರದೆಂಬ ಅಭಿಪ್ರಾಯ ದೇಶವ್ಯಾಪಿ ದಟ್ಟವಾಗಿರುವ ಹಿನ್ನೆಲೆಯಲ್ಲಿ ತಮ್ಮ ನಿರ್ಧಾರವೇನು ಎಂಬ ಪ್ರಶ್ನೆಗೆ, 'ನಾವು ನಮ್ಮ ಸ್ನೇಹಿತರನ್ನು ಆರಿಸಿಕೊಳ್ಳಬಹುದೇ ಹೊರತು ನೆರೆಹೊರೆಯವರನ್ನಲ್ಲ ಎಂಬ ಮಾತನ್ನು ನಾನು ಹೇಳುತ್ತಾ ಬಂದಿದ್ದೇನೆ. ಸಾಮಾನ್ಯ ಪರಿಸ್ಥಿತಿಯಲ್ಲಾಗಿದ್ದರೆ ನಾನು ಪಾಕ್ ಪ್ರಧಾನಿಯನ್ನು ಭೇಟಿಯಾಗುತ್ತಿದ್ದೆ.    

ನನಗೆ ಅವರ ಬಗ್ಗೆ ಗೌರವವಿದೆ. ಎರಡು ದೇಶಗಳ ಸಂಬಂಧ ಹೇಗೆ ಸುಧಾರಿಸಬೇಕು ಎಂಬುದರ ಬಗ್ಗೆ ಅವರು ಈಗಾಗಲೇ ಸರಿಯಾದ ಮಾತನ್ನು ಹೇಳಿದ್ದಾರೆ' ಎಂದ ಪ್ರದಾನಿ, 'ಆದರೆ ವಸ್ತುಸ್ಥಿತಿ ಬಹಳ ಗಂಭೀರವಾಗಿದೆ. ಗಡಿಯಂಚಿನಲ್ಲಿ ಭಯೋತ್ಪಾದಕ ಚಟುವಟಿಕೆ ನಿಲ್ಲದಿದ್ದರೆ, ಮುಂಬೈ(26/11) ಘಟನೆಯ ಸೂತ್ರಧಾರಿಗಳನ್ನು ಒಪ್ಪಿಸದಿದ್ದರೆ, ಪಾಕ್ ಪ್ರಧಾನಿಯನ್ನು ಭೇಟಿ ಮಾಡಬೇಕೇ, ಬೇಡವೇ ಎಂಬ ಬಗ್ಗೆ ಅಂತಿಮ ತೀರ್ಮಾನ  ತೆಗೆದುಕೊಳ್ಳಲಾಗುವುದು' ಎಂದರು.
ಟಿಎಂಸಿ ಜತೆ ಮೈತ್ರಿಯ ಸುಳಿವು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳುವ ವಿಷಯದ ಬಗ್ಗೆ ಸಕಾರಾತ್ಮಕವಾಗಿ ಪ್ರಧಾನಿ ಉತ್ತರಿಸಿದರು.
'ರಾಜಕಾರಣದಲ್ಲಿ ಕಾಯಂ ಶತ್ರುಗಳಿಲ್ಲ, ಮಿತ್ರರೂ ಇದಲ್ಲದೆ ರಾಜಕಾರಣದಲ್ಲಿ ಒಂದು ವಾರ ಅತಿ ದೀರ್ಘ ಅವಧಿ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ನಾನು ಮೈತ್ರಿ ಸಾಧ್ಯತೆಯನ್ನು ತಳ್ಳಿ ಹಾಕುವುದಿಲ್ಲ. ಮಮತಾ ಅವರು ಒಂದು ಕಾಲದಲ್ಲಿ ಕಾಂಗ್ರೆಸ್‌ನ ಗೌರವಾನ್ವಿತ ಸದಸ್ಯೆ. ನಮ್ಮ ಸರ್ಕಾರದಲ್ಲಿ ತೃಣಮೂಲ ಕಾಂಗ್ರೆಸ್ ಇರಲು ನಾವು ಬಯಸುತ್ತೇವೆ. ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಸಮಾನ ಪಕ್ಷಗಳಾಗಿವೆ. ಜಾತ್ಯತೀತ ಶಕ್ತಿಗಳು ಪುನಃ ಒಟ್ಟಾಗಬೇಕಾದ ಅಗತ್ಯವಿದೆ' ಎಂದು ಡಾ. ಸಿಂಗ್ ಅಭಿಪ್ರಾಯಪಟ್ಟರು.
ಜಿ-20 ಶೃಂಗಸಭೆಯ ಸಾರ್ಥಕ್ಯ ಹಾಗೂ ಭಾರತದ ದೃಷ್ಟಿಯಿಂದ ಆದ ಪ್ರಯೋಜನದ ಬಗ್ಗೆ ವಿವರಿಸಿದ ಡಾ. ಸಿಂಗ್, 'ವಿಶ್ವದ ಆರ್ಥಿಕತೆ ಡೋಲಾಯಮಾನ ಸ್ಥಿತಿಯಲ್ಲಿರುವುದರಿಂದ, ಶಕ್ತಿಶಾಲಿ ಹಾಗೂ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳು ಸಂಘಟಿತವಾಗಿ ಪರಿಹಾರ ಕ್ರಮಕ್ಕೆ ಮುಂದಾಗಲು ಪಣತೊಟ್ಟಿರುವುದು ಸಕಾರಾತ್ಮಕ ಬೆಳವಣಿಗೆ. ಆರ್ಥಿಕತೆಯ ಬೆಳವಣಿಗೆ ಹಾಗೂ ಮುನ್ನಡೆಗೆ ಕೈಜೋಡಿಸಲು ಎಲ್ಲ ದೇಶಗಳು ಪುನರ್ ವಾಗ್ದಾನ ಮಾಡಿರುವುದು ಆಶಾದಾಯಕ ನಡೆಯಾಗಿದೆ' ಎಂದು ಹೇಳಿದರು.
ಮೂಲಸೌಕರ್ಯ ಅಭಿವೃದ್ಧಿಯನ್ನು ಒಂದು ಸರಕು ಎಂದು ಭಾವಿಸಬೇಕು. ಇದರಿಂದ ಆರ್ಥಿಕ ಬೆಳವಣಿಗೆಗೆ ಸಹಾಯಕವಾಗುತ್ತದೆ. ಅಲ್ಲದೆ ಅಭಿವೃದ್ಧಿ ಗತಿಯನ್ನು ಹೆಚ್ಚಿಸಲು ನೆರವಾಗುತ್ತದೆ ಎಂದು ಹಿಂದಿನ ಜಿ-20 ಶೃಂಗದಲ್ಲಿ ಭಾರತ ಪ್ರತಿಪಾದಿಸಿತ್ತು. ಈ ಅಂಶವನ್ನು ಈ ಸಲದ ಶೃಂಗಸಭೆಯಲ್ಲಿ ಘೋಷಿಸಲಾಗಿರುವ ಕ್ರಿಯಾಯೋಜನೆಯಲ್ಲಿ ಸೇರಿಸಲಾಗಿದೆ. ಜಾಗತಿಕ ಮೂಲಸೌಕರ್ಯಗೆ ಆರ್ಥಿಕ ವ್ಯವಸ್ಥೆ ಕಲ್ಪಿಸುವ ಬಗ್ಗೆ ವಿಶ್ವಬ್ಯಾಂಕಿನ ಅಧ್ಯಕ್ಷರೂ ಪ್ರಸ್ತಾಪಿಸಿದ್ದಾರೆ. ಇದು ಜಾರಿಗೆ ಬಂದರೆ ಭಾರತಕ್ಕೆ ಲಾಭವಾಗಲಿದೆ ಎಂದು ಡಾ. ಮನಮೋಹನ್ ಸಿಂಗ್ ಹೇಳಿದರು.

ಪ್ರಧಾನಿ ಸಿಂಗ್ ಅವರು ರಾಹುಲ್ ಕೆಳಗೆ ಕೆಲಸ ಮಾಡುತ್ತಾರೆ ಎಂದರೆ ಅದು ಅವರಿಗೆ ಬಿಟ್ಟ ವಿಚಾರ. ಆದರೆ ದೇಶ ರಾಹುಲ್ ಗಾಂಧಿಯನ್ನು ಒಪ್ಪಿಕೊಳ್ಳಬೇಕಲ್ಲ? ಇತ್ತೀಚಿನ ಸಮೀಕ್ಷೆಗಳು ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪಿಕೊಂಡೇ ಇಲ್ಲವಲ್ಲ. ದೇಶಕ್ಕೆ ಬದಲಾವಣೆ ಬೇಕಿದೆ.
- ರವಿಶಂಕರ್ ಪ್ರಸಾದ್, ಬಿಜೆಪಿ ವಕ್ತಾರ

ನಾನು ತೆರೆದ ಪುಸ್ತಕದಂತೆ...
ಪಾರ್ಲಿಮೆಂಟ್ ಕಲಾಪದ ಹಾಗೂ ಆರ್ಥಿಕ ಹಿನ್ನಡೆಗೆ ನಾಯಕರನ್ನು ದೂಷಿಸಿದಿರಿ. ಆದರೆ ಪ್ರತಿಪಕ್ಷಗಳು ನಿಮ್ಮ ಬಗ್ಗೆ ಹಾಗೂ ಸರ್ಕಾರದ ಬಗ್ಗೆ ಎತ್ತಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದೀರಿ ಎಂದು ಭಾವಿಸಿದ್ದೀರಾ ಎಂಬ ಪ್ರಶ್ನೆಗೆ, 'ಪ್ರತಿಪಕ್ಷಗಳ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವ ಪ್ರಯತ್ನ ಮಾಡಿದ್ದೇನೆ. ಕಲ್ಲಿದ್ದಲು ಹಗರಣವಾಗಿರಬಹುದು, ಇನ್ನಿತರ ವಿಷಯಗಳಿರಬಹುದು, ಸಂಸತ್ತಿನಿಂದ ಯಾವುದೇ ಅಂಶವನ್ನು ಮುಚ್ಚಿಟ್ಟಿಲ್ಲ. ನಾನು ಎಷ್ಟು ಗಟ್ಟಿಯಾಗಿ ಹೇಳಬೇಕೋ, ಎಲ್ಲವನ್ನೂ ಹೇಳಿದ್ದೇನೆ. ಕಲ್ಲಿದ್ದಲು ಹಗರಣದ ಬಗ್ಗೆ ಹಿಂದಿನ ಸಂಸತ್ತಿನ ಅಧಿವೇಶನದಲ್ಲಿಯೇ ದೀರ್ಘವಾಗಿ ಹೇಳಿದ್ದೇನೆ. ನನಗೆ ನನ್ನ ಹೇಳಿಕೆಯನ್ನು ಓದಲು ಅಡ್ಡಿಪಡಿಸಿದರು. ಆದರೂ ನಾನು ಹೇಳಿಕೆ ಬಿಡುಗಡೆ ಮಾಡಿದ್ದೇನೆ. ಇದು ಸಾರ್ವಜನಿಕ ದಾಖಲೆ, ನಾನು ತೆರೆದ ಪುಸ್ತಕದಂತೆ' ಎಂದು ಡಾ. ಸಿಂಗ್ ಸುದೀರ್ಘವಾಗಿ ಉತ್ತರಿಸಿದರು.
ರಾಹುಲ್ ಗಾಂಧಿ ಜತೆ ಕೆಲಸ ಮಾಡುವುದು ಸಂತಸದ ವಿಚಾರ. ಹಿಂದೆಯೂ ಈ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ನನ್ನ ವರ್ತನೆ, ಕಾರ್ಯವೈಖರಿ ವಿಮರ್ಶೆ ಮಾಡಬಾರದೆಂದು ಯಾರನ್ನೂ ತಡೆದಿಲ್ಲ. ಆರ್ಥಿಕ ಬೆಳವಣಿಗೆ, ಮುನ್ನಡೆಗೆ ಎಲ್ಲ ದೇಶಗಳು ಕೈಜೋಡಿಸಲು ಪುನರ್ ವಾಗ್ದಾನ ಮಾಡಿರುವುದು ಆಶಾದಾಯಕ ಬೆಳವಣಿಗೆ.
-ಮನಮೋಹನ್ ಸಿಂಗ್


-ವಿಶ್ವೇಶ್ವರ ಭಟ್
ಕನ್ನಡಪ್ರಭ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement