ರಾಮನಗರ ಬರ ಹಣ, ಶಿವಮೊಗ್ಗ ಝಣ ಝಣ
ಕ.ಪ್ರ.ವಾರ್ತೆ ರಾಮನಗರ ಸೆ. 7
ಬರ ಪರಿಹಾರ ನಿಧಿಗೆಂದು ರಾಮನಗರ ಜಿಲ್ಲೆಗೆ 2011-12ನೇ ಸಾಲಿನಲ್ಲಿ ಬಿಡುಗಡೆಯಾಗಿ ಬಳಕೆಯಾಗದ ಅರ್ಧಕ್ಕಿಂತ ಹೆಚ್ಚು ಮೊತ್ತವನ್ನು ಸರ್ಕಾರ ಶಿವಮೊಗ್ಗ ಜಿಲ್ಲೆಗೆ ವರ್ಗಾಯಿಸಿದೆ. ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ 2012-13ನೇ ಸಾಲಿನ ಪರಿಹಾರ ಮೊತ್ತವೂ ರೈತರಿಗೆ ತಲುಪಿಲ್ಲ.
ಬಹುತೇಕ ಮಳೆಯಾಶ್ರಿತ ಪ್ರದೇಶವಿರುವ ಜಿಲ್ಲೆಯಲ್ಲಿ ಸತತ ಎರಡು ವರ್ಷ ಕಾಡಿದ ಬರದಿಂದ ಕಂಗೆಟ್ಟಿರುವ ರೈತರಿಗೆ ಸರ್ಕಾರದಿಂದ ಬಿಡುಗಡೆಯಾದ ಪರಿಹಾರ ನಿಧಿ ತಲುಪಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಘಟಾನುಘಟಿ ಜನಪ್ರತಿನಿಧಿಗಳಿರುವ ಜಿಲ್ಲೆಯಲ್ಲಿ ರೈತರಿಗೆ ಸವಲತ್ತು ವಂಚನೆ ನಾಚಿಕೆಗೇಡಿನ ಸಂಗತಿಯೇ ಸರಿ.
2011-12ನೇ ಸಾಲಿನ ಬರ ಪರಿಹಾರ ವಿತರಿಸಲು ಜಿಲ್ಲೆಗೆ 9.43 ಕೋಟಿ ಬಿಡುಗಡೆಯಾಗಿತ್ತು. ಹಣ ಬಂದು ವರ್ಷ ಕಳೆದ ನಂತರ ಹಂಚಿಕೆ ಪ್ರಕ್ರಿಯೆ ನಡೆಯಿತು. ಕಡೆಗೆ, ಇಲ್ಲಿ ಹಂಚಿದ್ದು 3.97 ಕೋಟಿ ಮಾತ್ರ. ಉಳಿದ 5.50 ಕೋಟಿ ಹಣ ಸರ್ಕಾರಿ ಖಜಾನೆಯಲ್ಲೇ ಉಳಿಯಿತು.
ರಾಮನಗರ ಜಿಲ್ಲೆಗೆ ಹಂಚಿಕೆಯಾಗದೆ ಉಳಿದಿರುವ ಮೊತ್ತದ ಪೈಕಿ 3.50 ಕೋಟಿಯನ್ನು ಸರ್ಕಾರ ಶಿವಮೊಗ್ಗ ಜಿಲ್ಲೆಗೆ ವರ್ಗಾಯಿಸಿದೆ. ಇನ್ನುಳಿದ 2 ಕೋಟಿಯನ್ನು 2012-13ನೇ ಸಾಲಿನ ಬರ ಪರಿಹಾರ ನಿಧಿಗೆ ಹೊಂದಿಸಿಕೊಳ್ಳಲು ಆದೇಶಿಸಲಾಗಿದೆ.
ಕೊಟ್ಟಿದ್ದು ಕವಡೆ ಕಾಸು: 2011-12ನೇ ಸಾಲಿನ ಬರ ಪರಿಹಾರವಾಗಿ ಪ್ರತಿ ಗುಂಟೆಗೆ 10ರಂತೆ ಗರಿಷ್ಠ 250ರವರೆಗಷ್ಟೇ ಹಂಚಿಕೆ ಮಾಡಲಾಗಿದೆ. ಪ್ರಸ್ತುತ ಕೂಲಿ ಮೊತ್ತವೇ 300 ದಾಟಿರುವಾಗ ಅದಕ್ಕಿಂತಲೂ ಕಡಿಮೆ ಮೊತ್ತವೆನ್ನುವ ಕಾರಣಕ್ಕೆ ಅದೆಷ್ಟೋ ರೈತರು ಚೆಕ್ ನಗದೀಕರಿಸುವ ಗೋಜಿಗೂ ಹೋಗಿಲ್ಲ.
ಚೆಕ್ ನಗದೀಕರಿಸಿಕೊಳ್ಳಲು ಬ್ಯಾಂಕ್ ಖಾತೆ ತೆರೆಯಲೇಬೇಕು. 250 ಪರಿಹಾರ ಪಡೆದುಕೊಳ್ಳಲು 500 ಠೇವಣಿಯೊಂದಿಗೆ ಬ್ಯಾಂಕ್ ಖಾತೆ ಮಾಡಿಸಿಕೊಳ್ಳಬೇಕೆನ್ನುವ ಕಾರಣದಿಂದಲೂ ಬಹುತೇಕ ರೈತರು ಪರಿಹಾರ ಮೊತ್ತ ಪಡೆದಿಲ್ಲ.
ಜಿಲ್ಲೆಯಲ್ಲಿ ತೋಟಗಾರಿಕೆ ಮತ್ತು ಕೃಷಿಸಹಿತ ಒಟ್ಟಾರೆ ಭೂ ಮಾಲೀಕರಿರುವುದು 1.37 ಲಕ್ಷ ರೈತರು. ಇವರಲ್ಲಿ ಶೇ.25ರಷ್ಟು ಮಂದಿ ಭೂ ಒಡೆತನ ನಿಧನರಾದವರ ಹೆಸರಿನಲ್ಲೇ ಇದ್ದು, ಅವರ ಹೆಸರಿನ ಚೆಕ್ಗಳು ಉಪಯೋಗಕ್ಕೆ ಇಲ್ಲದಂತಾಗಿರುವುದು ಭಾರಿ ಮೊತ್ತ ಉಳಿಕೆಗೆ ಕಾರಣವಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ತಾಲೂಕು ಕಚೇರಿಗಳಲ್ಲಿ ಸಿದ್ಧಪಡಿಸಿದ ಚೆಕ್ಗಳು ರೈತರಿಗೆ ತಲುಪುವಷ್ಟರಲ್ಲಿ ಅವುಗಳ ವಾಯಿದೆ ಮುಗಿದಿತ್ತು. ಅದನ್ನು ಮತ್ತೆ ಕಚೇರಿಗೆ ತಲುಪಿಸಿ, ದಿನಾಂಕ ತಿದ್ದುಪಡಿ ಮಾಡಿಸಿಕೊಳ್ಳಲಾಗದೆ ಸಾಕಷ್ಟು ರೈತರು ಪರಿಹಾರ ಮೊತ್ತವನ್ನು ಪಡೆಯಲು ಮುಂದಾಗಿಲ್ಲ.
ಪ್ರಶ್ನಿಸದ ಶಾಸಕರು: ರಾಮನಗರ ಪುಟ್ಟ ಜಿಲ್ಲೆಯಾದರೂ ಇಲ್ಲಿನ ಶಾಸಕರು ರಾಜ್ಯ ರಾಜಕಾರಣದಲ್ಲಿ ಘಟಾನುಘಟಿಗಳಾಗಿದ್ದಾರೆ. ತಾಸುಗಟ್ಟಲೆ ಭಾಷಣ ಬಿಗಿದು ರೈತರ ಬಗ್ಗೆ ಕಾಳಜಿ ತೋರುವ ಇಲ್ಲಿನ ಶಾಸಕರು ಬರ ಪರಿಹಾರ ನಿಧಿಯು ರೈತರಿಗೆ ಎಷ್ಟರ ಮಟ್ಟಿಗೆ ತಲುಪಿದೆ ಎನ್ನುವುದನ್ನು ಈವರೆಗೂ ಪ್ರಶ್ನಿಸಿಲ್ಲ.
ಇಲ್ಲಿನ ಬಹುತೇಕ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು, ಸಂಸದರು ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲವೇ ಕಾರ್ಯದರ್ಶಿಗಳ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಹಾಜರಿರುವುದೇ ಇಲ್ಲ. ಇದು ಕೂಡ ಸ್ಥಳೀಯ ಅಧಿಕಾರಿಗಳ ಉದಾಸೀನತೆ, ಬೇಜವಾಬ್ದಾರಿಗೆ ಪ್ರೇರಣೆಯಾಗಿದೆ.
ನೀತಿ ಸಂಹಿತೆ ಕಾಟ
ರಾಮನಗರ ಜಿಲ್ಲೆಯ ರೈತರಿಗೆ 2012-13ನೇ ಸಾಲಿನ ಬಾಬ್ತು ಬರ ಪರಿಹಾರ ನಿಧಿ ಹಂಚಿಕೆಗಾಗಿ 10 ಕೋಟಿಯನ್ನು ಸರ್ಕಾರ 2012ರ ಅಂತ್ಯದಲ್ಲೇ ಬಿಡುಗಡೆ ಮಾಡಿದೆ. ಒಂದರ ಹಿಂದೊಂದು ಚುನಾವಣೆಯ ನೆಪವೊಡ್ಡಿ ಜಿಲ್ಲಾಡಳಿತವಿನ್ನೂ ಪರಿಹಾರ ಮೊತ್ತ ಹಂಚಿಕೆ ಮಾಡಿಲ್ಲ. ಈ ಅವಧಿಯ ಬರ ಪರಿಹಾರ ನಿಧಿಗೆ ಮಾನದಂಡಗಳನ್ನು ಕೊಂಚ ಬದಲಿಸಿಕೊಳ್ಳಲಾಗಿದೆ. ಪ್ರತಿ ರೈತರಿಗೆ ಕನಿಷ್ಠ್ಠ 500, ತೋಟಗಾರಿಕೆ ರೈತರಿಗೆ ಗರಿಷ್ಠ 4 ಸಾವಿರ ಮತ್ತು ಕೃಷಿ ರೈತರಿಗೆ ಗರಿಷ್ಠ 2 ಸಾವಿರ ವಿತರಿಸಲು ನಿರ್ಧರಿಸಲಾಗಿದೆ. ಪ್ರಸಕ್ತ ವರ್ಷ ಮೊದಲಿಗೆ ಪೌರ ಸಂಸ್ಥೆಗಳ ಚುನಾವಣೆ, ಅದಾದ ಮೇಲೆ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ಮತ್ತು ಈಚೆಗೆ ಲೋಕಸಭೆ ಉಪ ಚುನಾವಣೆಯು ಬರ ಪರಿಹಾರ ನಿಧಿ ಹಂಚಿಕೆಗೆ ಅಡ್ಡಗಾಲಾಗಿತ್ತು. ಈಗ ಎಲ್ಲ ಮುಗಿದಾದ ಮೇಲೂ ವಿಳಂಬ ಮಾತ್ರ ತಪ್ಪಿಲ್ಲ.
ಮಾಸಾಂತ್ಯದೊಳಗೆ ಹಂಚಿಕೆ
2011-12ನೇ ಸಾಲಿನಲ್ಲಿ ಬಳಕೆಯಾಗದೆ ಉಳಿದ ಬರ ಪರಿಹಾರ ನಿಧಿಯನ್ನು ಸರ್ಕಾರ ಶಿವಮೊಗ್ಗ ಜಿಲ್ಲೆಗೆ ವರ್ಗಾಯಿಸಿದೆ. 2012-13ನೇ ಸಾಲಿನ ಪರಿಹಾರ ನಿಧಿಯ ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಸೆಪ್ಟೆಂಬರ್ ಮಾಸಾಂತ್ಯದೊಳಗೆ ಪೂರ್ಣಗೊಳಿಸಲು ಎಲ್ಲ ತಹಸೀಲ್ದಾರ್ಗಳಿಗೆ ಸೂಚನೆ ನೀಡಲಾಗಿದೆ.
ಟಿ ವಿ.ಶ್ರೀರಾಮರೆಡ್ಡಿ, ಜಿಲ್ಲಾಧಿಕಾರಿ, ರಾಮನಗರ
ಮತ್ತೀಕೆರೆ ಜಯರಾಮ್