ಕಾಡಾನೆ ತುಳಿತಕ್ಕೆ ಬಾಲಕ ಸಾವು
ಕೆಲ ದಿನಗಳ ಹಿಂದೆ ಹೊಸೂರು ರಸ್ತೆಯ ಚಂದಾಪುರ, ಅತ್ತಿಬೆಲೆ ಸುತ್ತ-ಮುತ್ತ ಕಾಣಿಸಿಕೊಂಡಿದ್ದ ಕಾಡಾನೆಗಳ ಹಿಂಡು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದವು...
ಬೆಂಗಳೂರು/ರಾಮನಗರ: ಕೆಲ ದಿನಗಳ ಹಿಂದೆ ಹೊಸೂರು ರಸ್ತೆಯ ಚಂದಾಪುರ, ಅತ್ತಿಬೆಲೆ ಸುತ್ತ-ಮುತ್ತ ಕಾಣಿಸಿಕೊಂಡಿದ್ದ ಕಾಡಾನೆಗಳ ಹಿಂಡು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದವು. ಆ ನೆನಪು ಹಸಿಯಾಗಿರುವಾಗಲೇ ಮಾಗಡಿ ರಸ್ತೆ ದೊಡ್ಡಮಾರೇನಹಳ್ಳಿ ಬಳಿ ಕಾಣಿಸಿಕೊಂಡ ಒಂಟಿ ಸಲಗ ಬಾಲಕನನ್ನು ತುಳಿದು ಸಾಯಿಸಿದೆ.
ಬಾಲಕನನ್ನು ತಮಿಳುನಾಡು ಮೂಲದ ಸೀನಪ್ಪ ಹಾಗೂ ರತ್ನಮ್ಮ ದಂಪತಿ ಪುತ್ರ 12 ವರ್ಷದ ಕಾರ್ತಿಕ್ ಎಂದು ಗುರುತಿಸಲಾಗಿದೆ.
ಸಾವನದುರ್ಗದಿಂದ ತಪ್ಪಿಸಿಕೊಂಡು ಬಂದಿರಬಹುದು ಎನ್ನಲಾದ ಈ ಆನೆ ಭಾನುವಾರ ಬೆಳಗ್ಗೆ 7 ಗಂಟೆಗೆ ಚುಂಚನಕಟ್ಟೆ ಪ್ರದೇಶದ ಸಮೀಪ ಕಾಣಿಸಿಕೊಂಡಿದೆ. ಜನವಸತಿ ಕಡಿಮೆ ಇರುವ ಈ ಪ್ರದೇಶದಲ್ಲಿ ಕಾಣಿಸಿಕೊಂಡ ಆನೆಯನ್ನು ಸ್ಥಳೀಯ ಬಾಲಕರ ಗುಂಪು ಹತ್ತಿರದಿಂದ ನೋಡಲು ಹೋಗಿತ್ತು.
ಗದ್ದೆಯಂತಿದ್ದ ಪ್ರದೇಶದಲ್ಲಿ ಓಡಲು ಆಗದೆ 12 ವರ್ಷದ ಬಾಲಕ ಕಾರ್ತಿಕ್ ಕೆಳಗೆ ಬಿದ್ದಿದ್ದಾನೆ. ಜನರ ಕಿರುಚಾಟದಿಂದ ಕೆರಳಿದ ಆನೆ ಬಾಲಕನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿ ಕಾಲಿನಿಂದ ತುಳಿದು ಹಾಕಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಶಾಸಕ ಎಸ್.ಟಿ.ಸೋಮಶೇಖರ್ ಮೃತ ಬಾಲಕನ ಕುಟುಂಬಕ್ಕೆ ರು. 10 ಸಾವಿರ ವೈಯಕ್ತಿಕ ಪರಿಹಾರ ನೀಡಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು, ಸ್ಥಳೀಯ ಪೊಲೀಸರು ಆನೆಯನ್ನು ಓಡಿಸಲು ಹರಸಾಹಸ ಪಡಬೇಕಾಯಿತು. ಬೆಳಗ್ಗೆಯಿಂದಲೇ ಆನೆಯನ್ನು ಬನ್ನೇರುಘಟ್ಟ ಅಥವಾ ಸಾವನದುರ್ಗ ಅರಣ್ಯ ಪ್ರದೇಶಕ್ಕೆ ಓಡಿಸಲುಅರಣ್ಯಾಧಿಕಾರಿಗಳು ಪ್ರಯತ್ನ ನಡೆಸಿದರು.
ಸಾವನದುರ್ಗ ಅರಣ್ಯ ಪ್ರದೇಶದಲ್ಲಿ ಐದು ಆನೆಗಳಿವೆ. ಈ ಪೈಕಿ ಒಂದು ಆನೆ ಗುಂಪಿನಿಂದ ತಪ್ಪಿಸಿಕೊಂಡು ದೊಡ್ಡಮಾರೇನಹಳ್ಳಿ ಕಡೆ ಬಂದಿರಬಹುದು. ಕಾರ್ಯಾಚರಣೆ ನಡೆಸಿ ಒಂಟಿ ಸಲಗವನ್ನು ಮತ್ತೆ ಸಾವನದುರ್ಗ ಅರಣ್ಯಕ್ಕೆ ಓಡಿಸಿದ್ದೇವೆ. ಬಾಲಕನ ಕುಟುಂಬಕ್ಕೆ ನಿಯಮದಂತೆ ರು. 5 ಲಕ್ಷ ಪರಿಹಾರ ನೀಡಲಾಗುತ್ತದೆ.
- ಅಪ್ಪುರಾವ್,
ವಲಯ ಅರಣ್ಯಾಧಿಕಾರಿ