ಎಲ್ಲೆಡೆ ಗಣೇಶನ ಝೇಂಕಾರ; ಇಲ್ಲಿ ಜೀವಂತ ಇಲಿಗೆ ಸಿಂಗಾರ!
ಕ.ಪ್ರ.ವಾರ್ತೆ, ಕೊಪ್ಪಳ, ಸೆ. 10-
ಜೀವನದಲ್ಲಿ ಯಾವುದೇ ವಿಘ್ನಗಳು ಬಾರದಿರಲಿ ಎಂದು ಪ್ರಥಮ ಪೂಜಿತ ವಿಘ್ನೇಶ್ವರನನ್ನು ಆರಾಧಿಸೋದನ್ನು ನಾವು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಆದರೆ, ಗಜಮುಖ ಗಣಪತಿಯ ವಾಹನವಾಗಿರುವ ಜೀವಂತ ಇಲಿಗೂ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಹಿಂದೆ ಮಣ್ಣಿನ ಇಲಿಗಳಿಗೆ ಪೂಜೆ ಮಾಡಲಾಗುತ್ತದೆ.
ಈ ವಿಶಿಷ್ಟ ಆಚರಣೆ ಕೊಪ್ಪಳದ ಭಾಗ್ಯನಗರದಲ್ಲಿ ನಡೆಯುತ್ತಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಮರುದಿನ ಭರ್ಜರಿಯಾಗಿ ಇಲಿ ಪೂಜೆ ಮಾಡುತ್ತಾರೆ. ಮಂಗಳವಾರ ಭಾಗ್ಯನಗರದಲ್ಲಿ ಬಹುತೇಕರು ಭಕ್ತಿಯಿಂದ ಇಲಿಗೆ ಪೂಜೆ ಸಲ್ಲಿಸಿದರು. ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳೇ ಹೆಚ್ಚಾಗಿರುವ ಭಾಗ್ಯನಗರದಲ್ಲಿ ಇಲಿ ಪೂಜೆಯ ದಿನ ಯಾವುದೇ ಮಗ್ಗಗಳ ಸದ್ದು ಕೇಳಿಸೋದಿಲ್ಲ. ಇದಕ್ಕೆ ಕಾರಣ, ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಮಾರನೇ ದಿನ ಗಣೇಶನ ವಾಹನ ಇಲಿಗೆ ಇಲ್ಲಿ ವಿಶೇಷವಾಗಿ ಪೂಜೆ ಮಾಡಲಾಗುತ್ತದೆ. ಆ ಮೂಲಕ ಇಲಿರಾಯನನ್ನು ತೃಪ್ತಗೊಳಿಸಲಾಗುತ್ತದೆ.
ನೇಕಾರರು ಸೇರಿದಂತೆ ಮನೆಯಲ್ಲಿ ಮಗ್ಗಗಳನ್ನು ಹೊಂದಿರುವ ಜನರು ಇಲಿವಾರ ಆಚರಣೆ ಮಾಡುತ್ತಾರೆ. ಗಣೇಶನ ಹಬ್ಬಕ್ಕಿಂತಲೂ ಇಲಿ ಹಬ್ಬವನ್ನು ಇಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುತ್ತಾರೆ. ಚಿತ್ರಗಾರ ಮನೆಯಿಂದ ಮಣ್ಣಿನಿಂದ ಮಾಡಿದ ಇಲಿ ಮೂರ್ತಿಯನ್ನು ತಂದು ಪೂಜೆ, ಪುನಸ್ಕಾರ ಮಾಡುತ್ತಾರಕೆ. ಈ ಬಾರಿ ಜೀವಂತ ಇಲಿಯನ್ನು ತಂದು ಅದಕ್ಕೆ ಪೂಜೆ ಮಾಡಿದ್ದು ವಿಶೇಷ. ಮನೆಯಲ್ಲಿ ಓಡಾಡುವ ಇಲಿಗಳು ಮಗ್ಗಳಗಳ ನೂಲನ್ನು ಹಾಗೂ ತಯಾರಾಗಿರುವ ಸೀರೆಗಳನ್ನು ಹಾಳು ಮಾಡದಿರಲಿ ಎಂದು ಇಲಿ ಪೂಜೆ ಮಾಡಲಾಗುತ್ತದೆ. ಈ ರೀತಿ ವರ್ಷಕ್ಕೊಮ್ಮೆ ಇಲಿರಾಯನಿಗೆ ಪೂಜೆ ಸಲ್ಲಿಸಿದರೆ ಇಲಿಗಳು ಕಾಟ ಕೊಡುವುದಿಲ್ಲ ಎಂಬ ನಂಬಿಕೆಯಿಂದ ಪೂಜೆ ಸಲ್ಲಿಸುತ್ತೇವೆ ಎನ್ನುತ್ತಾರೆ ಶಿವರಾಮ್ ಹಣಗಿ.
ಗಣೇಶನ ಹಬ್ಬಕ್ಕೆ ಯಾವ ರೀತಿಯಾಗಿ ಹಬ್ಬದ ತಯಾರಿ ಮಾಡಿಕೊಳ್ಳಲಾಗುತ್ತದೆಯೋ ಅದಕ್ಕಿಂತ ಒಂದು ಕೈ ಮೇಲು ಎಂಬಂತೆ ಇಲಿ ಹಬ್ಬ ಆಚರಣೆ ಮಾಡುತ್ತಾರೆ. ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸದವರೂ ಮಗ್ಗಗಳಿದ್ದರೆ ಕಡ್ಡಾಯವಾಗಿ ಇಲಿ ಪೂಜೆ ಮಾಡುತ್ತಾರೆ. ಇಲಿರಾಯನ ಪೂಜೆ ದಿನ ಕಡಬು, ಚಕ್ಕುಲಿ, ಉಂಡೆ, ಕರ್ಚಿಕಾಯಿ, ಸಂಡಿಗೆ, ಹಪ್ಪಳ, ಹೋಳಿಗೆ ಸೇರಿದಂತೆ ನಾನಾ ಬಗೆಯ ಖಾದ್ಯಗಳನ್ನು ಮಡಿಯುಡಿಯಿಂದ ತಯಾರಿಸಿ ಇಲಿರಾಯನಿಗೆ ನೈವೇದ್ಯ ಮಾಡಲಾಗುತ್ತದೆ. ನಮಗೆ ಯಾವುದೇ ರೀತಿಯಲ್ಲಿ ತೊಂದರೆ ಕೊಡಬೇಡ ಎಂದು ಇಲಿರಾಯನನ್ನು ಬೇಡಿಕೊಳ್ಳುತ್ತೇವೆ ಎನ್ನುತ್ತಾರೆ ಲಕ್ಷ್ಮವ್ವ.
ಪೂಜೆಗೆ ಸಹಕರಿಸಿದ ಇಲಿ!
ಸಾಮಾನ್ಯವಾಗಿ ಸ್ವಲ್ಪ ಸದ್ದಾದರೂ ಇಲಿ ಓಡಿ ಹೋಗುತ್ತದೆ. ಆದರೆ, ಸಾಕಿದ್ದ ಬಿಳಿ ಇಲಿ ಪೂಜೆಗೆ ಸಹಕರಿಸಿತು. ಆರತಿ ಬೆಳಗುತ್ತಿರುವುದನ್ನು ನೋಡುತ್ತಿದ್ದ ಇಲಿ ಕುಂಕುಮ, ಅರಿಸಿಣ, ವಿಭೂತಿ ಹಚ್ಚಿದರೂ ಸುಮ್ಮನೇ ಕುಳಿತಿತ್ತು. ಇಲಿರಾಯನಿಗೆ ಪೂಜೆ ಸಲ್ಲಿಸುವುದಕ್ಕೆ ಪ್ರಮುಖ ಕಾರಣ ನೇಕಾರರು ನೆಯ್ದು ಇಟ್ಟಿರುವ ಬಟ್ಟೆಯನ್ನು ಕಡಿಯದಿರಲಿ ಎನ್ನುವುದು. ಹೀಗೆ, ಪೂಜೆ ಸಲ್ಲಿಸುತ್ತಿರುವುದರಿಂದಲೇ ನೇಕಾರರ ಮನೆಯಲ್ಲಿನ ಬಟ್ಟೆಗಳನ್ನು ಇಲಿಗಳು ಕಡಿಯುವುದೇ ಇಲ್ಲ ಎನ್ನುವ ನಂಬಿಕೆಯೂ ನೇಕಾರರ ಜನರಲ್ಲಿ ಬೇರೂರಿದೆ.
- ಸೋಮರಡ್ಡಿ ಅಳವಂಡಿ